ಭಾರತದ ಹೊಸ ಮುಖದಂತಿರುವ, ಸಿಲಿಕಾನ್ ಕಣಿವೆ ಎಂದು ಪ್ರಸಿದ್ಧಿ ಪಡೆದಿರುವ ಕರ್ನಾಟಕದ ರಾಜಧಾನಿ ನಗರ ಬೆಂಗಳೂರು ಇಂದು ಅತಿ ರಭಸವಾಗಿ ಅಭಿವೃದ್ದಿಗೊಳ್ಳುತ್ತಿದೆ. ಒಂದೆಡೆ ಆಧುನಿಕ ಜೀವನಶೈಲಿಯನ್ನು ಪ್ರತಿನಿಧಿಸುವ ಮಾಲುಗಳು, ಶಾಪಿಂಗ್ ತಾಣಗಳು, ಉಪಹಾರಗೃಹಗಳು, ಚಿತ್ರಮಂದಿರಗಳು ಗರಿಗೆದಿಯುತ್ತಿದ್ದರೆ ಇನ್ನೊಂದೆಡೆ ಸಾಂಪ್ರದಾಯಿಕತೆಯು ನೆಲೆಯೂರಿರುವುದನ್ನು ಕಾಣಬಹುದು.
ಬಹುಶಃ ನೀವು ಕೇಳಿರದ ಕರ್ನಾಟಕದ ಪ್ರಾಚೀನ ಶಿವ ದೇವಾಲಯಗಳು
ಹೌದು ಆಧುನಿಕತೆ ಹಾಗೂ ಹಳತುಗಳು ಒಂದಕ್ಕೊಂದು ತಳುಕು ಹಾಕಿಕೊಂಡಿರುವುದನ್ನು ಬೆಂಗಳೂರಿನಲ್ಲಿ ಕಾಣಬಹುದು. ಇದು ಒಂದು ರೀತಿಯಲ್ಲಿ ವಿಶಿಷ್ಟವಾದ ಅನುಭವನ್ನೆ ನೀಡುತ್ತದೆ ಎಂದರೂ ತಪ್ಪಲ್ಲ. ಸಾಕಷ್ಟು ಜನ ಬೆಂಗಳೂರಿಗರು ಆಧುನಿಕತೆಯೊಂದಿಗೆ ಹೊಂದಿಕೊಂಡಿದ್ದರೂ ಆಚಾರ-ವಿಚಾರಗಳಲ್ಲಿ ಸಾಂಪ್ರದಾಯಿಕತೆಯನ್ನೂ ಸಹ ಪಾಲಿಸುತ್ತಾರೆ.
ಹಾಗಾಗಿಯೆ ಬೆಂಗಳೂರಿನಲ್ಲಿ ದಿನಂಪ್ರತಿ ಒಂದಿಲ್ಲ ಒಂದು ಬಡಾವಣೆಗಳಲ್ಲಿ, ಓಣಿಗಳಲ್ಲಿ, ಬೀದಿಗಳಲ್ಲಿ ದೇವಾಲಯ ಉತ್ಸವಗಳು ನಡೆದೆ ಇರುತ್ತವೆ. ಏಕೆಂದರೆ ಇಲ್ಲಿರುವ ದೇವಾಲಯಗಳ ಸಂಖ್ಯೆಗಳೂ ಅಪಾರವೆ ಅಲ್ಲವೆ? ಅಷ್ಟಾಗ್ಯೂ ಕೆಲವು ಪ್ರಮುಖವಾದಂತಹ, ಪುರಾತಣ ದೇವಾಲಯಗಳು ಇಂದಿಗೂ ಬೆಂಗಳೂರಿನ ಗುರುತರವಾದ ಕ್ಷೇತ್ರಗಳಾಗಿವೆ.

ಚಿತ್ರಕೃಪೆ: Pavithrah
ಅಂತಹ ದೇವಾಲಯಗಳ ಪೈಕಿ ಬೆಂಗಳೂರಿನ ಗವಿಪುರಂ ಬಡಾವಣೆಯಲ್ಲಿರುವ ಗವಿ ಗಂಗಾಧರೇಶ್ವರನ ದೇವಾಲಯವೂ ಸಹ ಒಂದು. ಇದು ಬೆಂಗಳೂರಿನ ಕೆಂಪೇಗೌಡ ನಗರದ ಗವಿಪುರಂ ಬಡಾವಣೆಯಲ್ಲಿದ್ದು ದಿನನಿತ್ಯ ಸಾಕಷ್ಟು ಭಕ್ತಾದಿಗಳನ್ನು ಸೆಳೆಯುತ್ತದೆ. ಬೆಂಗಳೂರು ನಗರದ ನಿರ್ಮಾತೃ ಎನ್ನಲಾಗುವ ಕೆಂಪೇಗೌಡರಿಂದ 16 ನೇಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ.

ಚಿತ್ರಕೃಪೆ: Pavithrah
ಭಾರತದಲ್ಲಿ ಕಂಡುಬರುವ ಏಕಶಿಲೆಯಲ್ಲಿ ಕೆತ್ತನೆಯ ಕಲಾತ್ಮಕತೆಗೆ ಸಾಕ್ಷಿಯಾಗಿರುವ ಶಿವನಿಗೆ ಮುಡಿಪಾದ ಈ ದೇವಾಲಯವು ಸಾಕಷ್ಟು ವಿಶೇಷವಾದ ರೀತಿಯಲ್ಲಿ ನಿರ್ಮಿತವಾಗಿದೆ. ನಿಜ ಹೇಳಬೇಕೆಂದರೆ ಗುಹೆಯಲ್ಲಿ ಕೆತ್ತಲಾದ ಈ ದೇವಾಲಯ ಹಳೆಯ ಕಾಲದ ಶಿಲ್ಪಿಗಳು ಯಾವ ಆಧುನಿಕತೆಯೂ ಇಲ್ಲದೆ ಯಾವ ರೀತಿಯಲ್ಲಿ ತಂತ್ರಗಾರಿಕೆ ನೈಪುಣ್ಯತೆಯನ್ನು ಹೊಂದಿದ್ದರೆಂದು ಸಾರುತ್ತದೆ.

ಹಿಂಬದಿಯ ಪ್ರವೇಶ ದ್ವಾರ, ಚಿತ್ರಕೃಪೆ: Pavithrah
ವರ್ಷದಲ್ಲಿ ಎರಡು ಬಾರಿ ಇಲ್ಲಿ ವಿಸ್ಮಯ ನಡೆಯುತ್ತದೆ. ಆ ಒಂದು ವಿಸ್ಮಯದಿಂದಾಗಿಯೆ ಈ ದೇವಾಲಯ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಈ ವಿಸ್ಮಯವು ಜನವರಿ ತಿಂಗಳ ಮಕರ ಸಂಕ್ರಾಂತಿ ಸಂದರ್ಭದಲ್ಲೊಂದು ಸಾರಿ ನಡೆದರೆ ನವಂಬರ್ ಕನೆಯ ವಾರದಲ್ಲಿ ಮತ್ತೊಂದು ಬಾರಿ ನಡೆಯುತ್ತದೆ.
ತುಮಕೂರು ಬಳಿಯಿರುವ ಶಿವಗಂಗೆಗೆ ಏಕೆ ಭೇಟಿ ನೀಡಬೇಕು?
ಆ ವಿಸ್ಮಯವೆಂದರೆ ಸೂರ್ಯನ ಕಿರಣಗಳು ಸಂಜೆಯ ಸಮಯದಲ್ಲಿ ನಂದಿ ವಿಗ್ರಹದ ಕೊಂಬುಗಳ ಮಧ್ಯದಿಂದ ನುಸುಳುತ್ತ ಶಿವಲಿಂಗದ ಮೇಲೆ ನೇರವಾಗಿ ಬೀಳುವುದು ಹಾಗೂ ಶಿವಲಿಂಗವನ್ನು ಪ್ರಕಾಶಿತಗೊಳಿಸುವುದಾಗಿದೆ. ಇದನ್ನು ನೋಡಲೆಂದು ಈ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆಯುತ್ತಾರೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಜನರಲ್ಲಿರುವ ಮತ್ತೊಂದು ನಂಬಿಕೆ ಎಂದರೆ ಈ ಗಂಗಾಧರೇಶ್ವರನನ್ನು ಭಕ್ತಿಯಿಂದ ಪೂಜಿಸಿದರೆ ಕಣ್ಣು ದೋಷಗಳಿಂದ ಬಳಲುತ್ತಿರುವವರು ದೋಷಮುಕ್ತರಾಗುತ್ತಾರೆನ್ನುವುದು.


Click it and Unblock the Notifications
















