Search
  • Follow NativePlanet
Share
» »ಕರ್ನಾಟಕದಲ್ಲಿರುವ ಜನಪ್ರಿಯ ಕೋಟೆಗಳು

ಕರ್ನಾಟಕದಲ್ಲಿರುವ ಜನಪ್ರಿಯ ಕೋಟೆಗಳು

By Vijay

ಕೋಟೆಗಳು ಸಾಮಾನ್ಯವಾಗಿ ಪ್ರದೇಶದ ರಕ್ಷಣೆಯನ್ನು ಪರಿಣಾಮಾತ್ಮಕವಾಗಿ ಮಾಡಲು ತಂತ್ರಗಾರಿಕೆ, ದೂರುದ್ದೇಶದಿಂದ ಕೂಡಿರುವ ಆಯಾ ಪ್ರದೇಶಗಳನ್ನು ಆಳುತ್ತಿದ್ದ ಅಂದಿನ ರಾಜರುಗಳಿಂದ ನಿರ್ಮಿತವಾದ ದೊಡ್ಡ ರಚನೆಗಳು. ಇಂದಿನ ಕಾಲದ ಹಾಗೆ ಮುಂದುವರೆದ ವಿಜ್ಞಾನ, ಆಧುನಿಕ ನಿರ್ಮಾಣ ಉಪಕರಣಗಳು, ಸಾಮಗ್ರಿಗಳು ಆ ದಿನಗಳಲ್ಲಿ ಇಲ್ಲದಿದ್ದರೂ ಕೂಡ ಅತ್ಯಂತ ಸದೃಢವಾಗಿ ನಿರ್ಮಿಸಲ್ಪಟ್ಟಿರುವ ಈ ಕೋಟೆಗಳು ಅದೆಷ್ಟೊ ದಶಕಗಳು ಕಳೆದರೂ ಇಂದಿಗೂ ಠಿವಿಯಿಂದ ನಿಂತಿರುವುದು ನೋಡಿದರೆ ಇಂದಿನ ನಿರ್ಮಾಣ ಪದ್ಧತಿಗಳಿಗೆ ಸವಾಲೆಸೆಯುವಂತಿದೆ ಎಂದರೆ ತಪ್ಪಾಗಲಾರದು.

ಶತ್ರುಗಳ ಚಲನ ವಲನ ಹಾಗು ಆಕ್ರಮಣಗಳನ್ನು ತಡೆಯುವ ನಿಟ್ಟಿನಿಂದ ಕೋಟೆಗಳನ್ನು ದೊಡ್ಡ ದೊಡ್ಡ ಕಲ್ಲು ಚಪ್ಪಡಿಗಳಿಂದ ವಿಶಾಲವಾಗಿ ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿತ್ತು. ಇದರಿಂದ ಶತ್ರುಗಳು ನುಗ್ಗುವುದನ್ನು ಸುಲಭವಾಗಿ ಗಮನಿಸಬಹುದಾಗಿತ್ತು. ಅಷ್ಟೆ ಅಲ್ಲ ಶತ್ರುಗಳೂ ಕೂಡ ಎತ್ತರದಲ್ಲಿರುವ ಕೋಟೆಯನ್ನು ಪ್ರವೇಶಿಸಲು ಸಾಕಷ್ಟು ಕಷ್ಟಪಡಬೇಕಾಗಿತ್ತು. ಇಂತಹ ಕೌತುಕಮಯ ರಚನೆಗಳನ್ನು ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು. ಕರ್ನಾಟಕ ರಾಜ್ಯದಲ್ಲೂ ಕೂಡ ಬಹಳಷ್ಟು ಕೋಟೆಗಳಿವೆಯಾದರೂ ಕೆಲವು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿ ಬಹು ಜನಪ್ರಿಯವಾಗಿವೆ. ಪ್ರಸ್ತುತ ಈ ಲೇಖನವು ಕರ್ನಾಟಕದ ಅಂತಹ ಕೆಲವು ಜನಪ್ರಿಯ ಕೋಟೆಗಳ ಪರಿಚಯ ಮಾಡಿಸುತ್ತದೆ.

ಮಿರ್ಜಾನ್ ಕೋಟೆ:

ಮಿರ್ಜಾನ್ ಕೋಟೆ:

ಉತ್ತರ ಕನ್ನಡದ ಪಶ್ಚಿಮ ಕರಾವಳಿ ತೀರದಲ್ಲಿ ಈ ಕೋಟೆಯನ್ನು ಕಾಣಬಹುದು. ಹಲವು ಕದನಗಳಿಗೆ ಸಾಕ್ಷಿಯಾಗಿ ನಿಂತಿರುವ ಈ ಕೋಟೆಯು ತನ್ನಲ್ಲಿನ ವಾಸ್ತುಶಿಲ್ಪಕ್ಕೂ ಕೂಡ ಹೆಸರುವಾಸಿಯಾಗಿದೆ. ಈ ಕೋಟೆಯು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದಿಂದ 11 ಕಿ.ಮೀ ದೂರದಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ 11 ರಿಂದ ಕೇವಲ ಅರ್ಧ ಕಿ.ಮೀ ಅಂತರದಲ್ಲಿ ನೆಲೆಸಿದೆ. ಗೇರುಸೊಪ್ಪದ ರಾಣಿ ಚೆನ್ನಭೈರದೇವಿಯಿಂದ 16 ನೆಯ ಶತಮಾನದಲ್ಲಿ ಈ ಕೋಟೆಯು ನಿರ್ಮಾಣವಾಗಿದೆ ಎನ್ನಲಾಗಿದೆ.

ಚಿತ್ರಕೃಪೆ: Ramnath Bhat

ಮುದ್ಗಲ್ ಕೋಟೆ:

ಮುದ್ಗಲ್ ಕೋಟೆ:

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಎಂಬಲ್ಲಿ ಈ ಕೋಟೆಯಿದೆ. ದೇವಗಿರಿಯ ಸೇವುಣ ಯಾದವರಿಗೆ ಸಂಬಂಧಿಸಿದ ಹಲವಾರು ಶಾಸನಗಳನ್ನು ಈ ಐತಿಹಾಸಿಕ ಪಟ್ಟಣದಲ್ಲಿ ಕಾಣಬಹುದು.

ಚಿತ್ರಕೃಪೆ: Manjunath Doddamani

ಸವದತ್ತಿ ಕೋಟೆ:

ಸವದತ್ತಿ ಕೋಟೆ:

8 ಕೊತ್ತಲಗಳುಳ್ಳ ಈ ಕೋಟೆಯು ಶಿರಸಂಗಿ ದೇಸಾಯಿಯಿಂದ 18 ನೆಯ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಕೋಟೆಯಲ್ಲಿ ಕಾಡಸಿದ್ಧೇಶ್ವರನ ದೇವಾಲಯವಿದ್ದು ಅದು ತನ್ನ ಅದ್ಭುತವಾದ ವಾಸ್ತುಶಿಲ್ಪದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಬೀದರ್ ಕೋಟೆ:

ಬೀದರ್ ಕೋಟೆ:

ಕರ್ನಾಟಕದ ಉತ್ತರದ ತುದಿಯಲ್ಲಿರುವ ಬೀದರ್ ಜಿಲ್ಲೆಯಲ್ಲಿ ಬಹುಮನಿ ಸುಲ್ತಾನರ ಈ ಕೋಟೆಯನ್ನು ಕಾಣಬಹುದು. ಬಹುಮನಿ ಸಾಮ್ರಾಜ್ಯದ ಅಲ್ಲಾ ಉದ್ ದಿನ್ ನು ತನ್ನ ರಾಜಧಾನಿಯನ್ನು ಗುಲಬರ್ಗಾದಿಂದ ಬೀದರಿಗೆ ಸ್ಥಳಾಂತರಗೊಳಿಸಿದ ನಂತರ 1427 ರಲ್ಲಿ ಈ ಕೋಟೆಯನ್ನು ನಿರ್ಮಿಸಿದನು.

ಚಿತ್ರಕೃಪೆ: Madhavi Kuram

ಬಳ್ಳಾರಿ ಕೋಟೆ:

ಬಳ್ಳಾರಿ ಕೋಟೆ:

ಬಳ್ಳಾರಿಯಲ್ಲಿರುವ ಬಳ್ಳಾರಿ ಎಂಬ ಗುಡ್ಡದ ಮೇಲೆ ಈ ಕೋಟೆಯನ್ನು ನಿರ್ಮಿಸಲಾಗಿದೆ. ಮೇಲ್ಕೋಟೆ, ತೆಳಕೋಟೆ ಎಂಬ ಎರಡು ವಿಭಾಗಗಳಲ್ಲಿ ಈ ಕೋಟೆಯನ್ನು ನಿರ್ಮಿಸಲಾಗಿದ್ದು ಮೇಲ್ಕೋಟೆಯು ಹಲವು ನೀರಿನ ಕೊಳಗಳು ಹಾಗು ಉತ್ತಮವಾದ ವಾಸ್ತುಶಿಲ್ಪವನ್ನು ಹೊಂದಿದ್ದರೆ ಕೆಳಭಾಗದ ಕೋಟೆಯು ಶಸ್ತ್ರಾಗಾರವನ್ನು ಹೊಂದಿದೆ. ವಿಶ್ವಪ್ರಸಿದ್ಧ ಪ್ರವಾಸಿ ಆಕರ್ಷಣೆಯಾದ ಹಂಪಿಯು ಇಲ್ಲಿಂದ ಕೇವಲ 30 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Marc Roberts

ಚಿತ್ರದುರ್ಗ ಕೋಟೆ:

ಚಿತ್ರದುರ್ಗ ಕೋಟೆ:

ಚಿತ್ರದುರ್ಗದ ಸಮತಟ್ಟಾದ ಬಟಾ ಬಯಲು ಪ್ರದೇಶಕ್ಕೆ ಎದುರಾಭಿಮುಖವಾಗಿ ನೆಲೆ ನಿಂತಿದೆ ಈ ಗಂಭೀರವಾದ ಕೋಟೆ. 17 ರಿಂದ 18 ನೆಯ ಶತಮಾನದವರೆಗೆ ಹಲವು ಸ್ತರಗಳಲ್ಲಿ ಈ ಕೋಟೆಯು ನಿರ್ಮಾಣಗೊಂಡಿದೆ. ರಾಷ್ಟ್ರಕೂಟರಿಂದ ಹಿಡಿದು ಚಾಲುಕ್ಯರು, ಹೊಯ್ಸಳರು, ಚಿತ್ರದುರ್ಗದ ನಾಯಕರು (ಪಾಳೆಗಾರರು) ಹೀಗೆ ಹಲವರು ಈ ಭವ್ಯ ಕೋಟೆಯನ್ನಾಳಿದ್ದಾರೆ. ಇವರುಗಳಲ್ಲಿ ಚಿತ್ರದುರ್ಗದ ಪಾಳೆಗಾರರು ಕೋಟೆಯ ಅಭಿವೃದ್ಧಿ ಹಾಗು ವಿಸ್ತರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ಗತ ವೈಭವವನ್ನು ಸಾರುವ ಒಂದು ಪ್ರಮುಖ ಐತಿಹಾಸಿಕ ಸ್ಮಾರಕವಾಗಿ ಈ ಕೋಟೆಯು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಪ್ರಸಿದ್ಧ ಏಳು ಸುತ್ತಿನ ಕೋಟೆಯು ಬೆಂಗಳೂರಿನಿಂದ 200 ಕಿ.ಮೀ ಗಳಷ್ಟು ದೂರವಿದ್ದು ಇದಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ದಾವಣಗೆರೆ. ಬೆಂಗಳೂರು ಅಥವಾ ಮೈಸೂರುಗಳಿಂದ ಅರಸಿಕೆರೆ ಮಾರ್ಗವಾಗಿ ಇಲ್ಲಿಗೆ ರೈಲು ಲಭ್ಯವಿದೆ.

ಚಿತ್ರಕೃಪೆ: Pavithrah

ರಾಯಚೂರು ಕೋಟೆ:

ರಾಯಚೂರು ಕೋಟೆ:

ಕೃಷ್ಣಾ ಹಾಗು ತುಂಗಭದ್ರಾ ನದಿಗಳ ಮಧ್ಯೆ ನೆಲೆಸಿರುವ ರಾಯಚೂರು ಬೆಂಗಳೂರಿನಿಂದ 415 ಕಿ.ಮೀ ದೂರವಿದ್ದು ಇಲ್ಲಿ ಐತಿಹಾಸಿಕ ಪ್ರಸಿದ್ಧ ರಾಯಚೂರು ಕೋಟೆಯನ್ನು ಕಾಣಬಹುದಾಗಿದೆ. ಕಾಕತೀಯ ರಾಜ ರುದ್ರನಿಂದ ಈ ಕೋಟೆಯು 1284 ರಲ್ಲಿ ನಿರ್ಮಿಸಲ್ಪಟ್ಟಿದೆ. ಕಾಕತೀಯರು, ವಿಜಯನಗರ, ಬಹುಮನಿ ಹೀಗೆ ಹಲವು ಸಾಮ್ರಾಜ್ಯಗಳಡಿಯಲ್ಲಿ ಈ ಕೋಟೆಯು ಒಳಪಟ್ಟಿತ್ತು.

ಚಿತ್ರಕೃಪೆ: Tanzeelahad

ಗುಲಬರ್ಗಾ ಕೋಟೆ:

ಗುಲಬರ್ಗಾ ಕೋಟೆ:

ಉತ್ತರ ಕರ್ನಾಟಕದ ಗುಲಬರ್ಗಾ ಜಿಲ್ಲೆಯ ಗುಲಬರ್ಗಾ ನಗರದಲ್ಲಿರುವ ಈ ಕೋಟೆಯು 1347 ರಲ್ಲಿ ಬಹಮನಿ ಸಾಮ್ರಾಜ್ಯದ ಅಲ್ಲಾವುದ್ದಿನ್ ಬಹಮನಿಯಿಂದ ನಿರ್ಮಿಸಲ್ಪಟ್ಟಿದೆ. ಈ ಕೋಟೆಯಲ್ಲಿ ಅದ್ಭುತವಾದ ಪರ್ಷಿಯನ್ ಶೈಲಿಯ ವಾಸ್ತುಶಿಲ್ಪವನ್ನು ಕಾಣಬಹುದು.

ಚಿತ್ರಕೃಪೆ: Shashank stark

ಬಸವಕಲ್ಯಾಣ ಕೋಟೆ:

ಬಸವಕಲ್ಯಾಣ ಕೋಟೆ:

ಬೀದರ್ ಜಿಲ್ಲೆಯಲ್ಲಿನ ಬಸವಣ್ಣನವರ ಕರ್ಮಭೂಮಿ ಎಂದೆ ಪ್ರಸಿದ್ಧವಾದ ಬಸವಕಲ್ಯಾಣ ಪಟ್ಟಣದಲ್ಲಿದೆ ಈ ಕೋಟೆ. 10 ನೆಯ ಶತಮಾನದಲ್ಲಿ ನಿರ್ಮಿತವಾದ ಈ ಕೋಟೆಯು ರಕ್ಷಣಾತ್ಮಕ ತಂತ್ರಗಾರಿಕೆಯಿಂದ ಕೂಡಿದೆ. ಬಸವಕಲ್ಯಾಣವು ಗುಲಬರ್ಗಾದಿಂದ 90 ಕಿ.ಮೀ ದೂರವಿದ್ದು ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

ಕಿತ್ತೂರು ಕೋಟೆ:

ಕಿತ್ತೂರು ಕೋಟೆ:

ವೀರ ರಾಣಿ ಚೆನ್ನಮ್ಮ ಆಳಿದ ಕಿತ್ತೂರು ಕೋಟೆಯು ಕುಂದಾ ನಗರಿ ಬೆಳಗಾವಿಯಿಂದ 50 ಕಿ.ಮೀ ದೂರದಲ್ಲಿದೆ. ಇಲ್ಲಿ ನಾಥಪಂಥಿ ಮಠ, ಕಲ್ಮೇಶ್ವರ, ಮಾರುತಿ, ಬಸವಣ್ಣ ಹಾಗು ದ್ಯಾಮವ್ವನ ದೇವಾಲಯಗಳನ್ನು ಕಾಣಬಹುದು. ಪ್ರಸ್ತುತ ಇವುಗಳನ್ನು ನವೀಕರಣಗೊಳಿಸಲಾಗಿದ್ದು ಪ್ರವಾಸಿ ಆಕರ್ಷಣೆಗಳಾಗಿ ಗಮನ ಸೆಳೆಯುತ್ತವೆ. ಸಾಂದರ್ಭಿಕ ಚಿತ್ರ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+