Search
  • Follow NativePlanet
Share
» »ಛಿನ್ನಮಸ್ತಿಕಾ ದೇವಾಲಯ: ಈ ದೇವಿಯ ಸ್ವಾರಸ್ಯಕರ ಕಥೆ ಓದಲೇಬೇಕು..

ಛಿನ್ನಮಸ್ತಿಕಾ ದೇವಾಲಯ: ಈ ದೇವಿಯ ಸ್ವಾರಸ್ಯಕರ ಕಥೆ ಓದಲೇಬೇಕು..

ಭಾರತವು ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಪದ್ಧತಿಗಳ ನಾಡು. ಇಲ್ಲಿ ಅನೇಕ ಅಸಾಮಾನ್ಯ ಘಟನೆಗಳು ನಡೆಯುವುದನ್ನು ನಾವು ನೋಡಿದ್ದೇವೆ, ನೋಡುತ್ತಿದ್ದೇವೆ. ಅದರಲ್ಲೂ ಭಾರತದ ದೇವಾಲಯಗಳ ಬಗ್ಗೆ ಮಾತನಾಡುವುದಾದರೆ ಇಲ್ಲಿನ ದೇವಾಲಯಗಳ ಇತಿಹಾಸವು ಅದ್ಭುತವಾಗಿದೆ. ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈಗಾಗಲೇ ನವರಾತ್ರಿ ಆಚರಣೆ ಮುಗಿದಿದ್ದು, ಎಲ್ಲೆಲ್ಲೂ ದೇವಿಯ ದರ್ಶನಕ್ಕೆ ಜನಸಾಗರ ಹರಿದು ಬಂದಿರುವುದನ್ನು ನೋಡಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಛಿನ್ನಮಸ್ತಿಕಾ ದೇವಿಯ ದೇವಾಲಯದ ಬಗ್ಗೆ ತಿಳಿಯೋಣ.

ಈ ದೇವಿಯ ದೇವಾಲಯವು ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 80 ಕಿಮೀ ದೂರದಲ್ಲಿರುವ ರಾಜ್ರಪ್ಪದಲ್ಲಿ ನೆಲೆಗೊಂಡಿದೆ. ವಿಶೇಷವಾಗಿ ಈ ದೇವಾಲಯದಲ್ಲಿ ತಲೆ ಭಾಗ ಅಂದರೆ ರುಂಡ ಇಲ್ಲದ ದೇವಿಯನ್ನು ಪೂಜಿಸಲಾಗುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ. ಹಾಗಾಗಿಯೇ ಪ್ರತಿ ವರ್ಷವೂ ಸಹಸ್ರಾರು ಭಕ್ತರು ಇಲ್ಲಿಗೆ ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಈ ದೇವಿಯ ದೇವಾಲಯವು 51 ಶಕ್ತಿಪೀಠಗಳಲ್ಲಿ ಎರಡನೇ ದೊಡ್ಡ ಶಕ್ತಿಪೀಠವಾಗಿದೆ.

6000 ವರ್ಷಗಳಷ್ಟು ಹಳೆಯದಾದ ದೇವಾಲಯ

6000 ವರ್ಷಗಳಷ್ಟು ಹಳೆಯದಾದ ದೇವಾಲಯ

ಈ ದೇವಾಲಯವು 6000 ವರ್ಷಗಳಷ್ಟು ಹಳೆಯದಾಗಿದೆ ಎಂದು ಹೇಳಲಾಗುತ್ತದೆ. ದೇವಾಲಯವು ಛಿನ್ನಮಸ್ತಿಕಾ ದೇವಿಯಿಂದ ಹೆಸರುವಾಸಿಯಾಗಿದೆ. ಇಲ್ಲಿ ದೇವಿಯನ್ನು ಪ್ರೀತಿಯ ದೇವರು ಕಾಮದೇವ ಮತ್ತು ಪ್ರೀತಿಯ ದೇವತೆಯಾದ ರತಿ ಇವರಿಬ್ಬರ ಮೇಲೆ ಬೆತ್ತಲೆ ರೂಪದಲ್ಲಿ ನಿಂತಿರುವಂತೆ ಚಿತ್ರಿಸಲಾಗಿದೆ. ಅಂದಹಾಗೆ ಈ ದೇವಾಲಯವು ತಾಂತ್ರಿಕ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.

ದೇವಿಯ ತಲೆ ಭಾಗ ತುಂಡಾಗಿರುವುದೇಕೆ?

ದೇವಿಯ ತಲೆ ಭಾಗ ತುಂಡಾಗಿರುವುದೇಕೆ?

ಈ ದೇವಾಲಯದ ಬಗ್ಗೆ ಅನೇಕ ಐತಿಹ್ಯಗಳಿವೆ. ಛಿನ್ನಮಸ್ತಿಕಾ ದೇವಿಯು ತನ್ನ ತುಂಡರಿಸಿದ ತಲೆಯನ್ನು ತನ್ನ ಕೈಯ್ಯಲ್ಲಿ ಹಿಡಿದುಕೊಂಡಿರುವುದೇಕೆ ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡುತ್ತದೆ. ಆದರೆ ಇದರ ಹಿಂದೆಯೂ ಒಂದು ಸ್ವಾರಸ್ಯಕರ ಕಥೆಯಿದೆ. ಮೂಲಗಳ ಪ್ರಕಾರ, ಒಮ್ಮೆ ದೇವತೆ ತನ್ನ ಸ್ನೇಹಿತರೊಂದಿಗೆ ಗಂಗಾನದಿಯಲ್ಲಿ ಸ್ನಾನ ಮಾಡಲು ಹೋದಳು. ಸ್ವಲ್ಪ ಸಮಯದ ನಂತರ ಆಕೆಯ ಇಬ್ಬರು ಸ್ನೇಹಿತರು ಹಸಿವಿನಿಂದ ಕಂಗಾಲಾದರು. ಗೆಳೆಯರಿಬ್ಬರಿಗೂ ಹಸಿವು ಎಷ್ಟಿತ್ತೆಂದರೆ ಇಬ್ಬರ ಮೈಬಣ್ಣವೂ ಕಪ್ಪಾಯಿತು.

ಆ ಸಮಯದಲ್ಲಿ ದೇವಿಯು ತನ್ನ ತಾಯಿಗೆ ಆಹಾರವನ್ನು ಕೇಳಿದಳು. ಆಗ ತಾಯಿ ಸ್ವಲ್ಪ ತಾಳ್ಮೆಯಿಂದ ಇರಲು ಹೇಳಿದಳು. ಆದರೆ ದೇವಿಯೂ ಹಸಿವಿನಿಂದ ಬಳಲುತ್ತಿದ್ದಳು. ಈ ಸಮಯದಲ್ಲಿ ಗೆಳೆಯರ ಸ್ಥಿತಿ ನೋಡಿದ ದೇವಿಯು ತನ್ನ ತಲೆಯನ್ನು ತಾನೇ ಕತ್ತರಿಸಿಕೊಂಡಳು. ದೇವಿಯು ತನ್ನ ತಲೆಯನ್ನು ಕತ್ತರಿಸಿದಾಗ, ಆ ತಲೆ ಅವಳ ಎಡಗೈಯಲ್ಲಿ ಬಿದ್ದಿತು. ತಲೆಯಿಂದ ಮೂರು ರಕ್ತದ ಹೊಳೆಗಳು ಹರಿಯತೊಡಗಿದವು. ದೇವಿಯು ತನ್ನ ಸ್ನೇಹಿತರಿಗೆ ಎರಡು ರಕ್ತದ ಹೊಳೆಗಳನ್ನು ಕೊಟ್ಟಳು ಮತ್ತು ಉಳಿದ ಹೊಳೆಯಿಂದ ದೇವಿಯು ರಕ್ತವನ್ನು ಕುಡಿಯಲು ಪ್ರಾರಂಭಿಸಿದಳು. ಇದೇ ಚಿತ್ರಣವನ್ನೇ ದೇವಾಲಯದಲ್ಲಿ ಚಿತ್ರಿಸಲಾಗಿದೆ.

ಛಿನ್ನಮಸ್ತಿಕಾ ದೇವಿಯನ್ನು ಏಕೆ ಪೂಜಿಸುತ್ತಾರೆ?

ಛಿನ್ನಮಸ್ತಿಕಾ ದೇವಿಯನ್ನು ಏಕೆ ಪೂಜಿಸುತ್ತಾರೆ?

ಶತ್ರುಗಳ ವಿರುದ್ಧ ಜಯವನ್ನು ಸಾಧಿಸಲು ಛಿನ್ನಮಸ್ತಿಕಾ ದೇವಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಈ ತಾಯಿಯು ಬಹಳ ಉಗ್ರ. ಆದ್ದರಿಂದ, ತಂತ್ರ-ಮಂತ್ರದ ಚಟುವಟಿಕೆಗಳಲ್ಲಿಯೂ ದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಭಕ್ತರು ದೇವಿ ಬಳಿ ತ್ಯಾಗ ಮತ್ತು ತಂತ್ರ ಸಾಧನಾ ಅರ್ಪಿಸುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.

ದೇವಾಲಯದ ಒಳಗೆ ಹೇಗಿದೆ?

ದೇವಾಲಯದ ಒಳಗೆ ಹೇಗಿದೆ?

ದೇವಾಲಯದ ಒಳಗಿರುವ ಛಿನ್ನಮಸ್ತಿಕಾ ದೇವಿಯ ವಿಗ್ರಹವು ಅದ್ಭುತವಾಗಿದೆ. ದೇವಿಯ ಪ್ರತಿಮೆಯನ್ನು ಕಮಲದ ಹೂವಿನ ಮೇಲೆ ಸ್ಥಾಪಿಸಲಾಗಿದೆ. ದೇವಿಗೆ ಮೂರು ಕಣ್ಣುಗಳಿವೆ. ಬಲಗೈಯಲ್ಲಿ ಖಡ್ಗ ಮತ್ತು ಎಡಗೈಯಲ್ಲಿ ದೇವಿಯು ತನ್ನ ಕತ್ತರಿಸಿದ ತಲೆಯನ್ನು ಹಿಡಿದಿದ್ದಾಳೆ. ಹಾಗೆಯೇ ದೇವಿಯ ಪಾದಗಳ ಕೆಳಗೆ, ಕಾಮದೇವ ಮತ್ತು ರತಿ ಮಲಗುವ ಭಂಗಿಯಲ್ಲಿ ಇದ್ದಾರೆ. ದೇವತೆಯ ಕೂದಲು ಚದುರಿಹೋಗಿದೆ. ಜೊತೆಗೆ ದೇವಿಯು ಸರ್ಪ ಮಾಲೆ ಮತ್ತು ಮುಂಡ ಮಾಲೆ ಧರಿಸಿದ್ದಾಳೆ. ದೇವಿ ತನ್ನ ದೈವಿಕ ಮತ್ತು ದೈತ್ಯಾಕಾರದ ರೂಪದಲ್ಲಿ ಆಭರಣಗಳಿಂದ ಅಲಂಕರಿಸಲ್ಪಟ್ಟಿದ್ದು, ನಗ್ನ ರೂಪಲ್ಲಿ ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿದ್ದಾಳೆ.

ಛಿನ್ನಮಸ್ತಿಕಾ ದೇವಸ್ಥಾನಕ್ಕೆ ಏಕೆ ಭೇಟಿ ನೀಡಬೇಕು?

ಛಿನ್ನಮಸ್ತಿಕಾ ದೇವಸ್ಥಾನಕ್ಕೆ ಏಕೆ ಭೇಟಿ ನೀಡಬೇಕು?

ದೇವಸ್ಥಾನದಲ್ಲಿ ದೇವತೆಯ ದರ್ಶನದ ಜೊತೆಗೆ, ನೀವು ರಾಜ್ರಪ್ಪ ನಗರದ ಸೌಂದರ್ಯವನ್ನು ವೀಕ್ಷಿಸಬಹುದು. ಇಲ್ಲಿ ರಾಜ್ರಪ್ಪ ಜಲಪಾತವು ನೋಡಲು ಬಹಳ ಸುಂದರವಾಗಿದ್ದು, ಇದು ನಗರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಅಷ್ಟೇ ಅಲ್ಲ, ದೇವಾಲಯದ ಸುತ್ತಮುತ್ತಲಿನ ಭೈರವಿ ಮತ್ತು ದಾಮೋದರ್ ನದಿಗಳ ಸಂಗಮವನ್ನು ಸಹ ನೀವು ಆನಂದಿಸಬಹುದು.

ಛಿನ್ನಮಸ್ತಿಕಾ ದೇವಸ್ಥಾನವನ್ನು ತಲುಪುವುದು ಹೇಗೆ ?

ಛಿನ್ನಮಸ್ತಿಕಾ ದೇವಸ್ಥಾನವನ್ನು ತಲುಪುವುದು ಹೇಗೆ ?

ವಿಮಾನ: ಛಿನ್ನಮಸ್ತಿಕಾ ದೇವಸ್ಥಾನಕ್ಕೆ ಹತ್ತಿರದ ವಿಮಾನ ನಿಲ್ದಾಣವು ರಾಂಚಿಯಲ್ಲಿ ಸುಮಾರು 70 ಕಿ.ಮೀ ದೂರದಲ್ಲಿದೆ. ರಾಂಚಿ ತಲುಪಿದ ನಂತರ, ನೀವು ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು ಅಥವಾ ರಾಜ್ರಪ್ಪಕ್ಕೆ ಬಸ್ ಹಿಡಿಯಬಹುದು. ರಾಜ್ರಪ್ಪದಲ್ಲಿ ದೇವಾಲಯವು ನೆಲೆಗೊಂಡಿದೆ.

ರೈಲು: ರಾಜ್ರಪ್ಪವನ್ನು ರೈಲಿನಲ್ಲಿ ತಲುಪಲು ಉತ್ತಮ ಮಾರ್ಗವೆಂದರೆ ರಾಮಗಢ್ ರೈಲು ನಿಲ್ದಾಣ. ರಾಮಗಢ್ ರೈಲು ನಿಲ್ದಾಣ ದೇವಸ್ಥಾನದಿಂದ ಸುಮಾರು 28 ಕಿ.ಮೀ ದೂರದಲ್ಲಿದೆ. ನಿಲ್ದಾಣದಿಂದ, ನೀವು ರಾಜ್ರಪ್ಪಗೆ ನೇರವಾಗಿ ಬಸ್ ಅಥವಾ ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ರಸ್ತೆ: ಛಿನ್ನಮಸ್ತಿಕಾ ದೇವಸ್ಥಾನವನ್ನು ಬಸ್ ಮೂಲಕ ಅಥವಾ ನಿಮ್ಮ ಸ್ವಂತ ವಾಹನದ ಮೂಲಕವೂ ಸುಲಭವಾಗಿ ತಲುಪಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+