Bijli Mahadev: ಹಿಮಾಚಲ ಪ್ರದೇಶದ ಕುಲು ಸುಂದರವಾದ ಪ್ರವಾಸಿ ತಾಣ ಮಾತ್ರವಲ್ಲದೆ, ಪ್ರಮುಖ ಧಾರ್ಮಿಕ ಸ್ಥಳವೂ ಆಗಿದೆ. ಈ ಸುಂದರವಾದ ಸ್ಥಳದಲ್ಲಿ ಒಂದು ದೇವಾಲಯವಿದೆ. ಅಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಬಡಿಯುತ್ತದೆ. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವನ್ನು ʼಬಿಜ್ಲಿ ಮಹಾದೇವ್ ದೇವಾಲಯʼ ಎಂದು ಕರೆಯಲಾಗುತ್ತದೆ. ಶಿವನ ನೆಚ್ಚಿನ ತಿಂಗಳು ಜುಲೈ 22, 2024 ರಿಂದ ಪ್ರಾರಂಭವಾಗಲಿರುವುದರಿಂದ ನಾವು ದೇವಾದಿ ದೇವ ಶಿವನ ಈ ದೇವಾಲಯದ ಮೇಲೆ ಸಿಡಿಲು ಬೀಳುವುದಕ್ಕೆ ಸಂಬಂಧಿಸಿದ ಪೌರಾಣಿಕ ಕಥೆಯನ್ನು ಈ ಸಂದರ್ಭದಲ್ಲಿ ತಿಳಿಯೋಣ.
ಈ ನಿಗೂಢ ದೇವಾಲಯ ಎಲ್ಲಿದೆ?
ಕುಲು ಜಿಲ್ಲೆಯಲ್ಲಿರುವ ಈ ವಿಶಿಷ್ಟ ಮತ್ತು ನಿಗೂಢ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 2.4 ಕಿಮೀ ಎತ್ತರದಲ್ಲಿರುವ ಹಿಮಾಲಯ ಕಣಿವೆಯ ಸುಂದರ ಗ್ರಾಮವಾದ ಕಾಶ್ವರಿಯಲ್ಲಿ ನೆಲೆಗೊಂಡಿದೆ. ಇಲ್ಲಿರುವ ಶಿವ ದೇವಾಲಯಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ಸಿಡಿಲು ಬಡಿಯುತ್ತದೆ ಎಂದು ಹೇಳಲಾಗುತ್ತದೆ. ಸಿಡಿಲು ಬಡಿದ ನಂತರ, ಶಿವಲಿಂಗವು ಅನೇಕ ತುಂಡುಗಳಾಗಿ ಒಡೆಯುತ್ತದೆ, ಇದನ್ನು ದೇವಾಲಯದ ಅರ್ಚಕರು ಪುರಾತನ ವಿಧಾನವನ್ನು ಬಳಸಿ ಮಾಡಿದ ವಿಶೇಷ ಪೇಸ್ಟ್‌ನೊಂದಿಗೆ ಸೇರಿಸುತ್ತಾರೆ. ಮಹಾದೇವನ ಕೃಪೆಯಿಂದ ಈ ವಿಶೇಷವಾದ ಪೇಸ್ಟ್ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಶಿವಲಿಂಗವು ಮೊದಲಿನಂತೆಯೇ ಆಗುತ್ತದೆ ಎಂದು ಹೇಳಲಾಗುತ್ತದೆ.

ತುಂಡಾಗುತ್ತದೆ ಶಿವಲಿಂಗ
ಪ್ರತಿ 12 ವರ್ಷಗಳಿಗೊಮ್ಮೆ, ದೇವಾಲಯದ ಒಳಗಿರುವ ಶಿವಲಿಂಗಕ್ಕೆ ನಿಗೂಢವಾಗಿ ಸಿಡಿಲು ಬಡಿಯುತ್ತದೆ ಎಂದು ಹೇಳಲಾಗುತ್ತದೆ. ಈ ಸಿಡಿಲು ಶಿವಲಿಂಗಕ್ಕೆ ಮಾತ್ರ ತಗಲುತ್ತದೆ. ಇದರಿಂದ ದೇವಸ್ಥಾನಕ್ಕಾಗಲಿ ಯಾವುದೇ ಪ್ರಾಣ, ಆಸ್ತಿಪಾಸ್ತಿಗೆ ಹಾನಿಯಾಗುವುದಿಲ್ಲ. ಆದರೆ ಈ ಸಿಡಿಲಿನ ಘಟನೆಯಿಂದಾಗಿ ಶಿವಲಿಂಗವು ತುಂಡಾಗುತ್ತದೆ. ಈ ರಹಸ್ಯವನ್ನು ಇನ್ನೂ ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಶಿವನು ಈ ಸ್ಥಳದ ನಿವಾಸಿಗಳನ್ನು ಎಲ್ಲಾ ತೊಂದರೆಗಳಿಂದ ರಕ್ಷಿಸಲು ಬಯಸುತ್ತಾನೆ ಎಂದು ನಂಬಲಾಗಿದೆ, ಆದ್ದರಿಂದ ಸಿಡಿಲು ನೇರವಾಗಿ ಶಿವಲಿಂಗವನ್ನು ಹೊಡೆಯುತ್ತದೆ.
ಮಕ್ಕನ್ ಮಹಾದೇವ್ ಹೆಸರು ಬರಲು ಕಾರಣ
ಈ ಮೊದಲೇ ಹೇಲಿದ ಹಾಗೆ ದೇವಾಲಯದ ಅರ್ಚಕರು ಸಿಡಿಲಿನ ಹೊಡೆತಕ್ಕೆ ತುಂಡಾಗಿರುವ ಶಿವಲಿಂಗಗಳನ್ನು ಸಂಗ್ರಹಿಸಿ ನಂತರ ಪುರಾತನವಾದ ವಿಧಾನವನ್ನು ಬಳಸಿಕೊಂಡು ಅವುಗಳನ್ನು ಸೇರಿಸುತ್ತಾರೆ. ಕೆಲವು ಧಾನ್ಯಗಳು, ಬೇಳೆ ಹಿಟ್ಟು ಮತ್ತು ನೈಸರ್ಗಿಕ ಬೆಣ್ಣೆಯಿಂದ ಮಾಡಿದ ವಿಶೇಷ ಪೇಸ್ಟ್‌ನಿಂದ ಈ ತುಂಡುಗಳನ್ನು ಒಟ್ಟಿಗೆ ಸೇರಿಸಲಾಗುತ್ತದೆ. ಈ ಕಾರಣಕ್ಕಾಗಿ ಶಿವನನ್ನು ಮಕ್ಕನ್ ಮಹಾದೇವ್ ಎಂದೂ ಕರೆಯುತ್ತಾರೆ. ಕೆಲವು ತಿಂಗಳ ನಂತರ ಶಿವಲಿಂಗವು ಮೊದಲಿನಂತೆಯೇ ಕಾಣಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಹೇಗೆ ಸಂಭವಿಸುತ್ತದೆ ಎಂಬುದು ಕೂಡ ನಿಗೂಢವಾಗಿದೆ.

ದಂತಕಥೆಯ ಪ್ರಕಾರ...
ಇಡೀ ಕುಲು ಕಣಿವೆಯು ಶಿವನು ಕೊಂದ ದೈತ್ಯ ಹೆಬ್ಬಾವಿನ ರೂಪವೆಂದು ಪರಿಗಣಿಸಲಾಗಿದೆ ಎಂಬ ನಂಬಿಕೆಯನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ದಂತಕಥೆಯ ಪ್ರಕಾರ, ಬಹಳ ಹಿಂದೆ ಕುಲಂತ ಎಂಬ ರಾಕ್ಷಸ ವಾಸಿಸುತ್ತಿದ್ದ. ರಾಕ್ಷಸ ಹೆಬ್ಬಾವಿನ ರೂಪದಲ್ಲಿದ್ದ. ಬಿಯಾಸ್ ನದಿಯ ಹರಿವನ್ನು ನಿಲ್ಲಿಸುವ ಮೂಲಕ ಕಣಿವೆಯನ್ನು ಮುಳುಗಿಸಲು ಆ ರಾಕ್ಷಸ ಬಯಸಿದನು. ಇದರಿಂದ ಇಲ್ಲಿ ವಾಸಿಸುವ ಎಲ್ಲಾ ಮಾನವರು ಮತ್ತು ಪ್ರಾಣಿಗಳು ನೀರಿನಲ್ಲಿ ಮುಳುಗಿ ಸಾಯುವ ಪರಿಸ್ಥಿತಿ ಎದುರಾಯಿತು.
ದೊಡ್ಡ ಪರ್ವತವಾಗಿ ಮಾರ್ಪಟ್ಟ ರಾಕ್ಷಸ!
ಕುಲಂತನ ಈ ಆಲೋಚನೆಯಿಂದ ಶಿವನು ತುಂಬಾ ಚಿಂತಿತನಾದನು. ಆಗ ಶಿವನು ಕುಲಂತನನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಂಡನು. ಒಂದು ದಿನ ಬಾಲದಲ್ಲಿ ಬೆಂಕಿಯಿದೆ ಎಂದು ಶಿವನು ರಾಕ್ಷಸನ ಕಿವಿಯಲ್ಲಿ ಪಿಸುಗುಟ್ಟಿದನು. ಇದನ್ನು ಕೇಳಿ ಕುಲಂತನು ಹಿಂದೆ ತಿರುಗಿದ ಕೂಡಲೇ ಶಿವನು ಅವನ ತಲೆಗೆ ತ್ರಿಶೂಲದಿಂದ ಹೊಡೆದು ಕೊಂದನು. ಈ ರೀತಿಯಾಗಿ ಕುಲಂತನನ್ನು ಕೊಲ್ಲಲಾಯಿತು. ಆದರೆ ಅವನು ಸತ್ತ ತಕ್ಷಣ ಅವನ ದೇಹವು ದೊಡ್ಡ ಪರ್ವತವಾಗಿ ಮಾರ್ಪಟ್ಟಿತು. ಕುಲಂತ್ ಎಂಬ ರಾಕ್ಷಸನ ಹೆಸರೇ ಇಂದು ಕುಲು ಎಂದು ಬದಲಾಗಿದೆ ಎಂದು ನಂಬಲಾಗಿದೆ.
ಕುಲಂತ್ ಎಂಬ ರಾಕ್ಷಸನನ್ನು ಕೊಂದ ನಂತರ, ಶಿವನು ದೇವರಾಜ ಇಂದ್ರನಿಗೆ 12 ವರ್ಷಗಳಿಗೊಮ್ಮೆ ಈ ಸ್ಥಳಕ್ಕೆ ಸಿಡಿಲು ಹೊಡೆಯುವಂತೆ ಕೇಳಿದನು. ಇದರಿಂದ ಕುಲಂತನ ಆತ್ಮವು ಯಾವಾಗಲೂ ಭಯದಲ್ಲಿರುತ್ತದೆ. ಇದರ ನಂತರ, ಮಹಾದೇವ ಶಿವನು ಇಲ್ಲಿ ಶಿವಲಿಂಗದ ರೂಪದಲ್ಲಿ ಸ್ಥಾಪಿಸಲ್ಪಟ್ಟನು. ಅಂದಿನಿಂದ ಪ್ರತಿ 12 ನೇ ವರ್ಷಕ್ಕೆ, ಇಂದ್ರನು ಸಿಡಿಲು ಮಿಂಚು ಹರಿಸುತ್ತಾನೆ. ಇದರಿಂದಾಗಿ ಶಿವಲಿಂಗವು ಒಡೆಯುತ್ತದೆ ಎಂದು ಹೇಳಲಾಗುತ್ತದೆ.


Click it and Unblock the Notifications

















