ಶಿಲ್ಪಾರಾಮಂ ಎನ್ನುವುದು ಮಾಧಪುರದಲ್ಲಿರುವ ಹೈಟೆಕ್ ಸಿಟಿಗೆ ಅತ್ಯಂತ ಸನಿಹದಲ್ಲಿರುವ ಒಂದು ಕುಶಲ ಕಲಾಗ್ರಾಮವಾಗಿದೆ. ಕೇವಲ ಆಂಧ್ರ ಪ್ರದೇಶದಲ್ಲಷ್ಟೇ ಅಲ್ಲದೆ ಇಡೀ ಭಾರತದಲ್ಲಿಯೇ ಕಲೆಗೆ ಮೀಸಲಾದ ಗ್ರಾಮವಾಗಿದ್ದು, ಹೈದರಬಾದಿನಿಂದ ಕೇವಲ 20 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಗ್ರಾಮವನ್ನು ಭಾರತದ ಸಾಂಪ್ರದಾಯಿಕವಾದ ಕರಕುಶಲ ಮತ್ತು ಕುಶಲ ಕಲೆಯನ್ನು ಕಾಪಾಡುವ ಸಲುವಾಗಿ ಸ್ಥಾಪಿಸಲಾಯಿತು. ಈ ಉದ್ದೇಶಕ್ಕಾಗಿ ಇಲ್ಲಿ ಸಾಂಪ್ರದಾಯಿಕವಾದ ದೇಶಿ ಉತ್ಸವಗಳನ್ನು ಪ್ರತಿ ವರ್ಷವು ನಡೆಸಿಕೊಂಡು ಬರಲಾಗುತ್ತಿದೆ.
1992 ರಲ್ಲಿ ಪ್ರಾರಂಭವಾದ ಈ ಗ್ರಾಮದಲ್ಲಿ ನಡೆಯುವ ಅತ್ಯುನ್ನತ ದರ್ಜೆಯ ದೇಶಿ ಉತ್ಸವಗಳು ದೇಶದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದೆ. ಈ ಉತ್ಸವಗಳು ಕೇವಲ ಭಾರತದ ಕರಕುಶಲ ಕಲೆಯನ್ನು ಪ್ರದರ್ಶಿಸುವುದಿಲ್ಲ. ಬದಲಿಗೆ ಪುರಾತನವಾದ ಮತ್ತು ಅಪರೂಪವಾದ ಕರಕುಶಲ ಕಲೆಗಳನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದೆ. ನೀವು ಇಲ್ಲಿ ಆಭರಣಗಳನ್ನು, ಕಸೂತಿ ಮಾಡಿದ ಬಟ್ಟೆಗಳು, ಕೈಯಿಂದ ಮಾಡಿದ ಪೀಠೋಪಕರಣಗಳನ್ನು ಮತ್ತು ಇನ್ನಿತರ ವಸ್ತುಗಳನ್ನು ಕೊಳ್ಳಬಹುದು. ಈ ಗ್ರಾಮವು ಕಣ್ಮನ ತಣಿಸುವ ಹಸಿರು ಹಾಸುಗಳಿಂದ ಕೂಡಿ ಮುದ ನೀಡುತ್ತವೆ.


Click it and Unblock the Notifications