ಗ್ರೀನ್ ಪಾರ್ಕ್ ಡಿಮಪುರದಲ್ಲಿ ಒಂದು ದಿನದ ಕಿರು ವಿಹಾರಕ್ಕಾಗಿ ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿನ ಪರಿಸರದಲ್ಲಿ ಸಮೃದ್ಧವಾದ ಹಸಿರು ತುಂಬಿ ತುಳುಕುತ್ತಿದೆ. ಇಲ್ಲಿ ನಿಮ್ಮ ಕುಟುಂಬ ಸದಸ್ಯರು ಮತ್ತು ಮಿತ್ರರ ಜೊತೆ ನೀವು ಕಾಲ ಕಳೆಯಬಹುದು. ಹೆಸರಿಗೆ ತಕ್ಕಂತೆ ಇಲ್ಲಿ ಹಸಿರು ಹಾಸಿ ಹೊದ್ದಿರುವುದನ್ನು ನೀವು ಕಂಡು ಪುಳಕವನ್ನು ಅನುಭವಿಸಬಹುದು.
ಈ ಗ್ರೀನ್ ಪಾರ್ಕ್ ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುವ ಒಂದು ತೋಟಗಾರಿಕ ನರ್ಸರಿಯ ಆವರಣದಲ್ಲಿ ನೆಲೆಗೊಂಡಿದೆ. ಈ ಉದ್ಯಾನವನದ ಒಳಗೆ ನಿಮಗಾಗಿ ಹಲವಾರು ಮನೋರಂಜನಾ ಅವಕಾಶಗಳು ಇವೆ. ಇದರ ಒಳಗೆ ಇರುವ ಕೆರೆಯಲ್ಲಿ ನೀವು ದೋಣಿಯಾನ ಮಾಡಬಹುದು. ಇಲ್ಲಿ ನಿಮ್ಮ ಮನೆಯಿಂದ ತಂದ ತಿಂಡಿಗಳನ್ನು ಬೇಕಾದರು ತಿನ್ನಬಹುದು,ಇಲ್ಲವಾದಲ್ಲಿ ಇಲ್ಲಿನ ಉಪಾಹಾರ ಗೃಹದಲ್ಲಿ ದೊರೆಯುವ ರುಚಿಕರ ತಿಂಡಿಯನ್ನು ಬೇಕಾದರು ಸವಿಯಬಹುದು.
ಈ ಪಾರ್ಕ್ ಶುಕ್ರವಾರ, ಶನಿವಾರ ಮತ್ತು ಭಾನುವಾರ ಹಾಗು ರಾಷ್ಟ್ರೀಯ ರಜಾದಿನಗಳಲ್ಲಿ ತೆರೆದಿರುತ್ತದೆ. ಇಲ್ಲಿ ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅದು ನಿಮ್ಮ ಕೈಗೆಟುಕುವ ದರದಲ್ಲಿರುತ್ತದೆ. ಸಾರ್ವಜನಿಕರಿಗಾಗಿ ತೆರೆದಿಲಾಗದ ದಿನಗಳಲ್ಲಿ, ಈ ಪಾರ್ಕ್ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಬಾಡಿಗೆಗೆ ದೊರೆಯುತ್ತದೆ.