ಮುಸಮ್ಮನ್ ಬುರ್ಜ್ ಅಥವಾ ಗೋಪುರವನ್ನು ಸಮನ್ ಬುರ್ಜ್ ಅಥವಾ ಶಾ ಬುರ್ಜ್ ಎಂದು ಸಹ ಕರೆಯುತ್ತಾರೆ. ಈ ಕಟ್ಟಡವು ಆಗ್ರಾ ಕೋಟೆಯಲ್ಲಿರುವ ಮೊಘಲ್ ಚಕ್ರವರ್ತಿ ಶಹ ಜಹಾನನ ದೀವಾನ್- ಇ- ಖಾಸ್‍ಗೆ ಸಮೀಪದಲ್ಲಿ ನೆಲೆಗೊಂಡಿದೆ. ಹದಿನೇಳನೆಯ ಶತಮಾನದಲ್ಲಿ ನಿರ್ಮಾಣಗೊಂಡ ಈ ಅಷ್ಟ ಭುಜಾಕೃತಿಯ ಗೋಪುರವನ್ನು ಶಹ ಜಹಾನನು ತನ್ನ ಪ್ರೀತಿ ಪಾತ್ರ ಮಡದಿಯಾದ ಮುಮ್ತಾಜ್ ಮಹಲಳ ನೆನಪಿಗಾಗಿ ನಿರ್ಮಿಸಿದನು ಎಂದು ತಿಳಿದುಬಂದಿದೆ. ಈ ಕಟ್ಟಡದ ಮೇಲಿನಿಂದ ಪ್ರವಾಸಿಗರು ತಾಜ್ ಮಹಲಿನ ನಯನ ಮನೋಹರವಾದ ನೋಟವನ್ನು ಸವಿಯಬಹುದು.
ಬಹು ಅಂತಸ್ತಿನ ಈ ಗೋಪುರವನ್ನು ಹಲವಾರು ಅಮೂಲ್ಯ ಹರಳುಗಳಿಂದ ಅಲಂಕರಿಸಲಾಗಿದೆ. ಈ ಗೋಪುರವನ್ನು ಅತ್ಯುತ್ತಮ ದರ್ಜೆಯ ಅಮೃತ ಶಿಲೆಗಳಿಂದ ನಿರ್ಮಿಸಲಾಗಿದೆ. ಇಲ್ಲಿ ಕೊರೆಯಲಾಗಿರುವ ಗವಾಕ್ಷಿಗಳ ಮೂಲಕ ರಾಜ ಮನೆತನದ ಸ್ತ್ರೀಯರು ಹೊರಗೆ ನಡೆಯುವ ಚಟುವಟಿಕೆಗಳನ್ನು, ಏಕಾಂತದಲ್ಲಿ ವೀಕ್ಷಿಸಿಬಹುದಾಗಿತ್ತು. ಈ ಹಜಾರದ ಛಾವಣಿಯಲ್ಲಿ ಅಮೃತ ಶಿಲೆಯಿಂದ ನಿರ್ಮಿಸಲಾಗಿರುವ ಗುಮ್ಮಟವನ್ನು ನಾವು ಕಾಣಬಹುದು. ಹಜಾರದ ಸುತ್ತಲೂ ಒಂದು ಚಾವಡಿಯಿದೆ. ಹಜಾರದ ಮಧ್ಯದಲ್ಲಿ ಅನುಪಮವಾದ ಕೆತ್ತನೆಗಳಿಂದ ಕೂಡಿದ ಒಂದು ನೀರಿನ ಚಿಲುಮೆಯಿದೆ.
ವಿಪರ್ಯಾಸದ ಸಂಗತಿಯೆಂದರೆ ಈ ಕಟ್ಟಡವು ಶಹ ಜಹಾನನ ಮಗನಾದ ರಾಜ ಕುಮಾರ ಔರಂಗಜೇಬನು, ಶಹ ಜಹಾನ್ ಮತ್ತು ಆತನ ಮಗಳಾದ ಜಹನಾರ ಬೇಗಂರವರನ್ನು ಬಂಧನದಲ್ಲಿಟ್ಟಾಗ ಅವರ ನಿವಾಸವಾಗಿತ್ತು.


Click it and Unblock the Notifications