ಕಡಿಮೆ ಸಮಯದಲ್ಲಿ ದೂರದ ಸ್ಥಳಕ್ಕೆ ಹೋಗಬೇಕಾದರೆ ನಮ್ಮ ಮೊದಲ ಆಯ್ಕೆ ಯಾವಾಗಲೂ ವಿಮಾನವೇ. ಇನ್ನು ನಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಮಾನ ಹಾರಾಟಕ್ಕೆ ವಿಮಾನ ನಿಲ್ದಾಣದ ರನ್‌ವೇ ಅಥವಾ ಏರ್‌ಸ್ಟ್ರಿಪ್ ಅಗತ್ಯವಿದೆ. ಭಾರತದಲ್ಲಿ ಒಂದಲ್ಲ ಹಲವಾರು ವಿಮಾನ ನಿಲ್ದಾಣಗಳಿದ್ದು, ಅಲ್ಲಿಂದ ಪ್ರಯಾಣಿಕರು ತಮ್ಮ ಗಮ್ಯಸ್ಥಾನಕ್ಕೆ ತೆರಳುತ್ತಾರೆ. ಎಲ್ಲಾ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾನ ನಿಲ್ದಾಣಗಳಿಂದ ತಮ್ಮ ವಿಮಾನಗಳನ್ನು ನಿರ್ವಹಿಸುತ್ತವೆ. ಆದರೆ ಕೆಲವು ವಿಮಾನ ನಿಲ್ದಾಣಗಳಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಎರಡೂ ತುಂಬಾ ಕಷ್ಟಕರವಾಗಿದೆ.
ಹೌದು, ಈ ರನ್ ವೇಗಳಲ್ಲಿ ವಿಮಾನ ಇಳಿಸುವುದು ಸುಲಭದ ಮಾತಲ್ಲ. ವಿಶೇಷವಾಗಿ ಟೇಬಲ್‌ಟಾಪ್ ರನ್‌ವೇಗಳಲ್ಲಿ. ಟೇಬಲ್‌ಟಾಪ್ ರನ್‌ವೇ ಒಂದು ರನ್‌ವೇ ಆಗಿದ್ದು ಅದು ಸಾಮಾನ್ಯವಾಗಿ ಪ್ರಸ್ಥಭೂಮಿ ಅಥವಾ ಬೆಟ್ಟದ ಮೇಲೆ ಇರುತ್ತದೆ. ಈ ರನ್‌ವೇಯ ಒಂದು ಅಥವಾ ಎರಡೂ ಬದಿಯಲ್ಲಿ ಆಳವಾದ ಕಂದಕವಿರುತ್ತದೆ. ಆದರೆ ಈ ಟೇಬಲ್‌ಟಾಪ್ ರನ್‌ವೇ ಅಪಾಯಕಾರಿ. ಜಗತ್ತಿನಾದ್ಯಂತ ಇಂತಹ ಹಲವು ಅಪಾಯಕಾರಿ ವಿಮಾನ ನಿಲ್ದಾಣಗಳ ರನ್‌ವೇಗಳಿವೆ.
ಆದರಿಂದು ನಾವು ಭಾರತದ ಕೆಲವು ವಿಮಾನ ನಿಲ್ದಾಣಗಳ ರನ್‌ವೇಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಇವನ್ನು ಸ್ವಲ್ಪ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಆದರೆ ಕಾಲಾನಂತರದಲ್ಲಿ ಈ ವಿಮಾನ ನಿಲ್ದಾಣಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಬೆಟ್ಟ ಗುಡ್ಡಗಳು ಮತ್ತು ಸಮುದ್ರಗಳ ಜೊತೆಗೆ ದಟ್ಟವಾದ ಕಾಡುಗಳ ನಡುವೆ ಇರುವ ಈ ವಿಮಾನ ನಿಲ್ದಾಣಗಳಿಂದ ನೀವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ಈ ಸ್ಥಳಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ನೀವು ತಿಳಿದಿರಲೇಬೇಕು.

ಶಿಮ್ಲಾ ವಿಮಾನ ನಿಲ್ದಾಣ
ದೇಶದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣಗಳಲ್ಲಿ ಶಿಮ್ಲಾ ವಿಮಾನ ನಿಲ್ದಾಣವೂ ಸೇರಿದೆ. ಇಲ್ಲಿ ಕಸ್ಸಮ್ಸ್ ಇಲಾಖೆ ಇಲ್ಲ. ರನ್‌ವೇ ಸುಸಜ್ಜಿತವಾಗಿದೆ, ಹಿಮಾಚಲ ಪ್ರದೇಶದ ಈ ವಿಮಾನ ನಿಲ್ದಾಣದ ರನ್‌ವೇ ತುಂಬಾ ಚಿಕ್ಕದಾಗಿದೆ, ಆದ್ದರಿಂದ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಎರಡೂ ತುಂಬಾ ಕಷ್ಟಕರವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಪೈಲಟ್‌ಗಳು ಇಲ್ಲಿ ಇಳಿಯುವುದು ತುಂಬಾ ಕಷ್ಟಕರವಾದಾಗ ವಿಮಾನವನ್ನೂ ಬೇರೆಡೆಗೆ ತಿರುಗಿಸಲಾಗುತ್ತದೆ.
ಲೇಹ್ ವಿಮಾನ ನಿಲ್ದಾಣ
ಕುಶೋಕ್ ಬಕುಲಾ ರಿಂಪೋಚಿ ವಿಮಾನ ನಿಲ್ದಾಣವು ಭಾರತದ ಲಡಾಖ್‌ನ ರಾಜಧಾನಿ ಲೇಹ್‌ನಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇದು ಟೇಬಲ್‌ಟಾಪ್ ರನ್‌ವೇ ಆಗಿದೆ. ಈ ವಿಮಾನ ನಿಲ್ದಾಣದ ಏರ್ ಸ್ಟ್ರಿಪ್ 3259 ಮೀಟರ್ ಎತ್ತರದಲ್ಲಿದೆ. ವಿಮಾನ ನಿಲ್ದಾಣದ ಸುತ್ತಲೂ ಪರ್ವತಗಳು ಮತ್ತು ಹಿಮವನ್ನು ಕಾಣಬಹುದು. ಲೇಹ್ ವಿಮಾನ ನಿಲ್ದಾಣವೂ ತುಂಬಾ ಅಪಾಯಕಾರಿ. ಈ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ತುಂಬಾ ಸವಾಲಿನ ಕೆಲಸ. ಇಲ್ಲಿ ಕೆಲ ಸಮಯ ಪೈಲಟ್ ಬಲವಾದ ಗಾಳಿ ಮತ್ತು ಕಡಿಮೆ ಆಮ್ಲಜನಕದಂತಹ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಕರ್ನಾಟಕದ ಮಂಗಳೂರು ವಿಮಾನ ನಿಲ್ದಾಣವೂ ಟೇಬಲ್ ಟಾಪ್ ರನ್ ವೇ ವಿಮಾನ ನಿಲ್ದಾಣವಾಗಿದೆ. ಮೇ 2010 ರಲ್ಲಿ ಇಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಏರ್ ಇಂಡಿಯಾ ವಿಮಾನವೊಂದು ಟೇಬಲ್ ಟಾಪ್ ರನ್ ವೇಯಿಂದ ಆಚೆ ಹೋಯಿತು. ವಿಮಾನ ಬೆಟ್ಟದಿಂದ ಕೆಳಗೆ ಬಿದ್ದ ನಂತರ ಬೆಂಕಿ ಹತ್ತಿಕೊಂಡಿತು. ಅಪಘಾತದಲ್ಲಿ 166 ಜನರಲ್ಲಿ 8 ಮಂದಿ ಮಾತ್ರ ಬದುಕುಳಿದರು. ಈ ಅಪಘಾತಕ್ಕೆ ಪೈಲಟ್ ಕಾರಣ ಎನ್ನಲಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಕೇವಲ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ, ಇದರ ರನ್‌ವೇ ಎರಡೂ ಬದಿಗಳಲ್ಲಿ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ರನ್‌ವೇ ಚಿಕ್ಕದಾಗಿರುವ ಕಾರಣ ಪೈಲಟ್ ತಕ್ಷಣ ಕ್ರಮ ಕೈಗೊಳ್ಳಬೇಕು. ಹಾಗೆಯೇ ಹವಾಮಾನದಲ್ಲಿನ ಬದಲಾವಣೆಯು ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಲ್ಲದು.
ಕೋಝಿಕ್ಕೋಡ್ ವಿಮಾನ ನಿಲ್ದಾಣ
ಕೋಝಿಕ್ಕೋಡ್ ವಿಮಾನ ನಿಲ್ದಾಣವು ಕೇರಳದಲ್ಲಿದೆ. ಈ ವಿಮಾನ ನಿಲ್ದಾಣದಲ್ಲಿಯೂ ಟೇಬಲ್ ಟಾಪ್ ರನ್ ವೇ ಇದೆ. ಇಲ್ಲಿಯೂ ಭಾರಿ ವಿಮಾನ ಅಪಘಾತ ಸಂಭವಿಸಿದೆ. ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇಯಿಂದ ಜಾರಿ ಬಿದ್ದಿತ್ತು. ಇದರಿಂದಾಗಿ ವಿಮಾನ ಎರಡು ಭಾಗಗಳಾಗಿ ಒಡೆಯಿತು. ಈ ವಿಮಾನ ದುಬೈನಿಂದ ಕ್ಯಾಲಿಕಟ್‌ಗೆ ಬರುತ್ತಿತ್ತು. ಈ ಅಪಘಾತದಲ್ಲಿ ಅಪಾರ ಸಂಖ್ಯೆಯ ಜನರು ಸಾವನ್ನಪ್ಪಿದ್ದರು.

ಲೆಂಗ್‌ಪುಯಿ ವಿಮಾನ ನಿಲ್ದಾಣ
ಲೆಂಗ್‌ಪುಯಿ ವಿಮಾನ ನಿಲ್ದಾಣವು ಮಿಜೋರಾಂ ರಾಜ್ಯದಲ್ಲಿದೆ. ವಿಮಾನ ನಿಲ್ದಾಣವನ್ನು ಎರಡನೇ ಮಹಾಯುದ್ಧದ ಮೊದಲು ನಿರ್ಮಿಸಲಾಯಿತು. ಈ ವಿಮಾನ ನಿಲ್ದಾಣವನ್ನು ಮಿತ್ರರಾಷ್ಟ್ರಗಳ ಪಡೆಗಳು ನಿರ್ಮಿಸಿವೆ. ಈ ರನ್‌ವೇ ಕೆಳಗೆ ನೀರಿನ ಹೊಳೆಗಳು ಹರಿಯುತ್ತವೆ. ಅಷ್ಟೇ ಅಲ್ಲ, ವಿಮಾನ ನಿಲ್ದಾಣವು ಮಳೆಗಾಲದಲ್ಲಿ ಸಾಕಷ್ಟು ಅಪಾಯಕಾರಿಯಾಗಿದೆ. ಇದು ಟೇಬಲ್ ಟಾಪ್ ವಿಮಾನ ನಿಲ್ದಾಣವೂ ಆಗಿದೆ. ಈ ವಿಮಾನ ನಿಲ್ದಾಣದ ರನ್‌ವೇಯನ್ನು ಪ್ರಸ್ಥಭೂಮಿಯ ಮೇಲೆ ನಿರ್ಮಿಸಲಾಗಿದೆ. ರನ್‌ವೇ ಗಾತ್ರ 2500 ಮೀಟರ್. ಎರಡೂ ಕಡೆ ಕಣಿವೆಗಳಿವೆ.
ಲಕ್ಷದ್ವೀಪ ವಿಮಾನ ನಿಲ್ದಾಣ
ಲಕ್ಷದ್ವೀಪ ವಿಮಾನ ನಿಲ್ದಾಣ ತುಂಬಾ ಸುಂದರವಾಗಿ ಕಾಣುತ್ತದೆ. ಸುಂದರವಾಗಿ ಕಾಣುವುದರ ಜೊತೆಗೆ ಅಪಾಯಕಾರಿಯೂ ಹೌದು. ಈ ವಿಮಾನ ನಿಲ್ದಾಣವನ್ನು ಸಮುದ್ರದ ಮಧ್ಯದಲ್ಲಿ ನಿರ್ಮಿಸಲಾಗಿದೆ. ಹಾರುವಾಗ ವಿಮಾನದ ನೋಟವು ತುಂಬಾ ಸುಂದರವಾಗಿ ಕಾಣುತ್ತದೆ.

ಗಗ್ಗಲ್ ವಿಮಾನ ನಿಲ್ದಾಣ
ದೇಶದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣದ ರನ್‌ವೇಗಳಲ್ಲಿ ಗಗ್ಗಲ್ ವಿಮಾನ ನಿಲ್ದಾಣದ ರನ್‌ವೇ ಕೂಡ ಸೇರಿದೆ. ಗಗ್ಗಲ್ ವಿಮಾನ ನಿಲ್ದಾಣವು ಹಿಮಾಚಲ ಪ್ರದೇಶದ ಕಂಗ್ರಾದಲ್ಲಿದೆ. ಈ ವಿಮಾನ ನಿಲ್ದಾಣವನ್ನು 1200 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇದರ ರನ್ ವೇ 2492 ಅಡಿ ಎತ್ತರದಲ್ಲಿದೆ. ಈ ರನ್ ವೇಯಲ್ಲಿ ವಿಮಾನವನ್ನು ಇಳಿಸುವಾಗ ಪೈಲಟ್ ಬಹಳ ಜಾಗರೂಕರಾಗಿರಬೇಕು.


Click it and Unblock the Notifications

















