ತಮಿಳುನಾಡಿನ ತೇಣಿ ಜಿಲ್ಲೆಯಿಂದ 70 ಕಿ.ಮೀ. ದೂರದಲ್ಲಿರುವ ಗಿರಿಶ್ರೇಣಿಯೇ ಮೇಘಮಲೈ. ಸಮುದ್ರ ಮಟ್ಟಕ್ಕಿಂತ 1500 ಮೀಟರ್ ಎತ್ತರದಲ್ಲಿರುವ ಈ ಬೆಟ್ಟ ಅದ್ಭುತ ಪ್ರಕೃತಿ ಸೌಂದರ್ಯವನ್ನು ಹೊಂದಿದೆ. ದಟ್ಟ ಅರಣ್ಯ ಸಿರಿಯನ್ನು ಒಳಗೊಂಡಿರುವ ಈ ಬೆಟ್ಟದ ಸುತ್ತಲು ಮೇಘಮಲೈ ವೈಲ್ಡ್‍ಲೈಫ್ ಸೆಂಚುರಿ ಹಾಗೂ ಪೆರಿಯಾ ವೈಲ್ಡ್‍ಲೈಫ್ ಸೆಂಚುರಿ ಇರುವುದನ್ನು ನೋಡಬಹುದು. ಚಾರಣ ಮಾಡಲು ಹಾಗೂ ಪಕ್ಷಿಗಳ ವೀಕ್ಷಣೆಗೆ ಇದೊಂದು ಸುಂದರ ತಾಣ.
ಈ ಪ್ರದೇಶದಲ್ಲಿ ಕಾಫಿ, ಟೀ ಹಾಗೂ ಏಲಕ್ಕಿಯನ್ನು ಬೆಳೆಯುತ್ತಾರೆ. ವುಡ್‍ಬ್ರೈರ್ ಎಂಬ ಟೀ ತೋಟ ಸುಮಾರು 6000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಅಲ್ಲದೆ ಏಷ್ಯಾದಲ್ಲಿಯೇ ಅತಿದೊಡ್ಡ ಟೀ ಫ್ಯಾಕ್ಟರಿ ಇಲ್ಲಿರುವುದನ್ನು ನೋಡಬಹುದು. ಈ ಗಿರಿಧಾಮದಲ್ಲಿ ಆನೆಗಳು ಓಡಾಡುವುದು ಸಾಮಾನ್ಯ. ಇದರೊಟ್ಟಿಗೆ ಹುಲಿ, ಚಿರತೆ, ಕರಡಿ, ವಿವಿಧ ಬಗೆಯ ಜಿಂಕೆ ಸೇರಿದಂತೆ ಅನೇಕ ಅನೇಕ ಪ್ರಾಣಿಗಳಿವೆ.

PC: wikipedia.org
ಅಲ್ಲಿಗೆ ಹೋಗುವುದು
ತೇಣಿಯ ಚಿನ್ನಮನುರ್ ಮೂಲಕ ಮೇಘಮಲೈಗೆ ಬಂದರೆ ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಾ ಬರಬಹುದು. ಮೇಘಮಲೈನಿಂದ ತೇಣಿಗೆ 76 ಕಿ.ಮೀ. ದೂರವಾದರೆ ಮದುರೈನಿಂದ 120 ಕಿ.ಮೀ. ದೂರ. ತೇಣಿ ಹಾಗೂ ಮದುರೈನಿಂದ ಮೇಘಮಲೈಗೆ ಅನೇಕ ಬಸ್‍ವ್ಯವಸ್ಥೆಗಳಿವೆ.
ಮದುರೈ ಏರ್‍ಪೋರ್ಟ್ ಹಾಗೂ ರೈಲ್ವೇ ಸ್ಟೇಷನ್‍ಸಹ ಹತ್ತಿರದಲ್ಲೇ ಇದೆ. ರಸ್ತೆ ಮಾರ್ಗದಲ್ಲಿ ಬಹಳ ಘಟ್ಟಗಳ ತಿರುವು ಇರುವುದರಿಂದ ಸ್ವಲ್ಪ ಭಯವನ್ನುಂಟುಮಾಡುತ್ತದೆ. ಬೆಂಗಳೂರಿನಿಂದ ಮೇಘಮಲೈಗೆ ಬರುವುದಾದರೆ ಕೊಡೈ ರಸ್ತೆ ಮಾರ್ಗದಲ್ಲಿ ಬಂದರೆ 501 ಕಿ.ಮೀ. ಆಗುತ್ತದೆ. ತೆಕ್ಕಡಿಯ ಮೇಲೆ ಬಂದರೆ 578 ಕಿ.ಮೀ. ಆಗುವುದು.

PC: wikipedia.org
ವಸತಿ ವ್ಯವಸ್ಥೆ
ಇಲ್ಲಿ ಬಹಳ ನಿಯಮಿತವಾದ ವಸತಿ ವ್ಯವಸ್ಥೆ ಇದೆ. ಬಸ್ ನಿಲ್ದಾಣದ ಬಳಿ ಕೆಲವು ಹೋಟೆಲ್ ರೂಮ್‍ಗಳಿವೆ. ಇಲ್ಲಿ ಬರುವ ಮೊದಲೇ ಬುಕ್ ಮಾಡಿ ಬರಬೇಕಾಗುತ್ತದೆ. ಇಲ್ಲವಾದಲ್ಲಿ ವಸತಿ ವ್ಯವಸ್ಥೆ ಆಗುವುದು ಸ್ವಲ್ಪ ಕಷ್ಟ ಎಂದೇ ಹೇಳಬಹುದು.
ಸೂಕ್ತ ಸಮಯ
ಇಲ್ಲಿ ಬರಲು ಸೂಕ್ತ ಸಮಯ ಎಂದರೆ ಚಳಿಗಾಲ. ತಿಂಗಳ ಲೆಕ್ಕದಲ್ಲಿ ಬರುವುದಾದರೆ ಅಕ್ಟೋಬರ್‍ನಿಂದ ಮೇ ತಿಂಗಳ ಒಳಗೆ ಬರಬೇಕು. ಬೇಸಿಗೆಯಲ್ಲಿ ಸಾಮಾನ್ಯವಾಗಿ ಹೆಚ್ಚು ಬಿಸಿ ಇರುತ್ತದೆ. ಹಾಗಾಗಿ ಈ ಸಮಯವನ್ನು ಆದಷ್ಟು ತಿರಸ್ಕರಿಸುವುದು ಒಳ್ಳೆಯದು.

PC: wikipedia.org
ಮೇಘಮಲೈ ವನ್ಯಜೀವಿ ಅಭಯಾರಣ್ಯ
600 ಎಕರೆ ವಿಸ್ತೀರ್ಣದಲ್ಲಿ ಇರುವ ಈ ಅಭಯಾರಣ್ಯ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. ಕಾಫಿ, ಟೀ ತೋಟಗಳು ಹೆಚ್ಚಾಗಿದೆ. ಹಸಿರು ಸಿರಿಯಿಂದಲೇ ತುಂಬಿರುವ ಈ ಜಾಗ ರಜೆಯ ಸುಂದರ ನೆನಪುಗಳಾಗಿ ಇರುತ್ತವೆ.
ಮೇಘಮಲೈ ಜಲಪಾತ
ಈ ಜಲಪಾತವು ಪ್ರವಾಸಿಗರ ಮನಸೂರೆಗೊಳಿಸುತ್ತದೆ. 190 ಅಡಿ ಎತ್ತರದಿಂದ ದುಮುಕುತ್ತದೆ. ತನ್ನ ಹತ್ತಿರದ ಜಾಗಕ್ಕೆ ಮಂಜಿನ ಹನಿಯಂತೆ ನೀರು ಸಿಡಿಯುತ್ತದೆ. ಅದರ ಸ್ಪರ್ಶವೇ ಸುಮಧುರ.

PC: wikipedia.org
ವೆಲ್ಲಿಮಲೈ
ಇದು ಮೇಘಮಲೈನ ಹೃದಯ (ಮಧ್ಯ) ಭಾಗದಲ್ಲಿದೆ. ಇಲ್ಲಿಯ ಸುಂದರ ಪರಿಸರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶಾಲವಾಗಿ ಹರಡಿರುವ ಟೀ ತೋಟಗಳು ನೋಡುಗರ ಕಣ್ಮನ ಸೆಳೆಯುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಯಾವುದೇ ಕಡಿವಾಣ ಇಲ್ಲದೆ ಹೆಚ್ಚು ಸಮಯ ಓಡಾಡಿಕೊಂಡು ಇರಲು ಇದೊಂದು ಭವ್ಯ ತಾಣ.


Click it and Unblock the Notifications

















