ಯೋಗಕ್ಕೆ ಭಾರತದಲ್ಲಿ ಸುದೀರ್ಘ ಇತಿಹಾಸವಿದೆ. ಯೋಗವು ನಮ್ಮ ದೇಹವನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಸುವುದಲ್ಲದೆ, ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ. ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ ಹಾಗೂ ನಾವು ದಿನವಿಡೀ ಚೈತನ್ಯದಿಂದ ಕೂಡಿರಲು ಸಹಾಯ ಮಾಡುತ್ತದೆ. ಇಂದು ಅಂತರಾಷ್ಟ್ರೀಯ ಯೋಗ ದಿನ. ಹಾಗಾಗಿ ಕೆಲವು ವಿಶೇಷ ಯೋಗ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ. ಇವುಗಳು ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಮೀಪವಿರುವುದರಿಂದ ನಿಮಗೂ ಸಹಕಾರಿಯಾಗಲಿದೆ.
ಪ್ರಕೃತಿಯ ಜೊತೆಗೆ ಯೋಗ ತರಬೇತಿ
ಪ್ರಕೃತಿಯ ಜೊತೆಗೆ ಯೋಗ ತರಬೇತಿ ಯೋಗವು ಕ್ರಿ.ಪೂ. 1500 ರ ಸುಮಾರಿಗೆ ಭಾರತದಲ್ಲಿ ಹುಟ್ಟಿಕೊಂಡಿದ್ದು, ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಯೋಗದ ಇತಿಹಾಸವು ತುಂಬಾ ಹಳೆಯದು. ಭಾರತದಲ್ಲಿಯೂ ಕೆಲವು ಯೋಗ ತಾಣಗಳಿವೆ. ಈ ಶಾಂತಿಯುತ ಪರಿಸರದಲ್ಲಿ ನೈಸರ್ಗಿಕ ಸೌಂದರ್ಯದ ನಡುವೆ ಯೋಗ ತರಬೇತಿಯನ್ನು ಸಹ ಕೊಡಲಾಗುತ್ತದೆ. ನೀವೂ ಇಲ್ಲಿ ಪ್ರವಾಸದ ಜೊತೆ ಜೊತೆಗೆ ಯೋಗ ಸಹ ಮಾಡಬಹುದು. ಸುಂದರವಾದ ಪರಿಸರದ ನಡುವೆ ಯೋಗ ಮಾಡುವುದು ಬಹಳ ವಿಶ್ರಾಂತಿ ನೀಡುತ್ತದೆ ಮತ್ತು ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಅಷ್ಟಾಂಗ ಯೋಗಕ್ಕೆ ಹೆಸರುವಾಸಿ ಮೈಸೂರು
ಮೈಸೂರು ಅಷ್ಟಾಂಗ ಯೋಗಕ್ಕೆ ಹೆಸರುವಾಸಿಯಾಗಿದೆ, ಇದು ವಿಶ್ವದಾದ್ಯಂತ ಯೋಗಾಭ್ಯಾಸ ಮಾಡುವವರನ್ನು ಆಕರ್ಷಿಸುತ್ತದೆ. ಕೆ. ಪಟ್ಟಾಭಿ ಜೋಯಿಸ್ ಅವರು ಸ್ಥಾಪಿಸಿದ ಪ್ರತಿಷ್ಠಿತ ಅಷ್ಟಾಂಗ ಯೋಗ ಸಂಶೋಧನಾ ಸಂಸ್ಥೆಗೆ ನಗರವು ನೆಲೆಯಾಗಿದೆ. ಸಾಂಸ್ಕೃತಿಕ ಪರಂಪರೆಯಿಂದ ಸಮೃದ್ಧವಾಗಿರುವ ಐತಿಹಾಸಿಕ ನಗರ ಮೈಸೂರು ಸಾಂಪ್ರದಾಯಿಕ ಅಷ್ಟಾಂಗ ಅಭ್ಯಾಸಗಳನ್ನು ಆಳವಾಗಿ ಅಧ್ಯಯನ ಮಾಡಲು ಅವಕಾಶವನ್ನು ಒದಗಿಸುತ್ತದೆ.

ತಲುಪುವ ಮಾರ್ಗ
ಬೆಂಗಳೂರಿನಿಂದ ಮೈಸೂರು ಬಹಳ ಹತ್ತಿರದಲ್ಲಿದೆ. ಅಂದರೆ ಕೇವಲ 146 ಕಿಮೀ ದೂರದಲ್ಲಿದ್ದು, ಇಲ್ಲಿಗೆ ತೆರಳಲು ಹೆಚ್ಚು ಆದ್ಯತೆಯ ಮಾರ್ಗವೆಂದರೆ ರೈಲಿನಲ್ಲಿ. ಇದು ಸಮಯ ಮತ್ತು ವೆಚ್ಚ ಎರಡೂ ಕಡಿಮೆ ಮಾಡುತ್ತದೆ.
ಕೇರಳದ ಯೋಗ ಕೇಂದ್ರಗಳು
ಕೇರಳವು ಯೋಗ ಮತ್ತು ಆಯುರ್ವೇದಕ್ಕೆ ಸ್ವರ್ಗವಾಗಿದೆ. ಕೋವಲಂ ಮತ್ತು ವರ್ಕಲಾವು ಜನಪ್ರಿಯ ಯೋಗ ಸ್ಥಳಗಳಾಗಿವೆ. ಯೋಗದ ಜೊತೆಗೆ ಧ್ಯಾನ ಮತ್ತು ಆಯುರ್ವೇದ ಚಿಕಿತ್ಸೆಗಳನ್ನು ಪಡೆಯಲು ಅನೇಕ ಕೇಂದ್ರಗಳಿವೆ. ಕೇರಳವು ಆಯುರ್ವೇದ ಔಷಧ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಇಲ್ಲಿನ ಹಚ್ಚ ಹಸಿರು ಮತ್ತು ಶಾಂತಿಯುತ ವಾತಾವರಣವಿರುವ ಸ್ಥಳದಲ್ಲಿ, ಯಾರು ಬೇಕಾದರೂ ಈ ಯೋಗವನ್ನು ಅಭ್ಯಾಸ ಮಾಡಬಹುದು. ನಗರದಲ್ಲಿ ಹಲವು ಯೋಗ ಕೇಂದ್ರಗಳಿದ್ದು, ಪ್ರವಾಸದ ಜೊತೆಗೆ ಯೋಗವನ್ನೂ ಕಲಿಯಬಹುದು. ಇಲ್ಲಿ ಅನೇಕ ಆಯುರ್ವೇದ ಸ್ಪಾಗಳೂ ಇವೆ. ಶಿವ ಋಷಿ ಯೋಗ, ಏಕಂ ಯೋಗ ಶಾಲೆ, ಋಷಿಕುಲ ಯೋಗಶಾಲೆ, ಪದ್ಮಕರ್ಮ ಯೋಗ, ಆರ್ಷ ಯೋಗ ವಿದ್ಯಾ ಪೀಠ, ಋಷಿಕೇಶ ಯೋಗಪೀಠಕ್ಕೆ ಜನರು ಹೆಚ್ಚು ಭೇಟಿ ನೀಡುತ್ತಾರೆ.

ತಲುಪುವ ಮಾರ್ಗ ಕೇರಳ ಮತ್ತು ಬೆಂಗಳೂರಿನ ನಡುವಿನ ಅಂತರವು ತುಂಬಾ ಲಾಂಗ್ ಇಲ್ಲ. ಬೆಂಗಳೂರಿನಿಂದ ಕೇವಲ ಒಂದು ಗಂಟೆಯಲ್ಲಿ ಕೊಚ್ಚಿ ತಲುಪಲು ವಿಮಾನವನ್ನು ತೆಗೆದುಕೊಳ್ಳಬಹುದು ಅಥವಾ ಬೆಂಗಳೂರಿನಿಂದ ಕೇರಳಕ್ಕೆ ಸುಮಾರು 7-8 ಗಂಟೆಯೊಳಗೆ ಕಾಲ ರೈಲು ಹತ್ತಬಹುದು.
ವಿಶಿಷ್ಟ ಯೋಗ ತಾಣ ಪಾಂಡಿಚೇರಿ
ಪಾಂಡಿಚೇರಿಯು ಭಾರತದ ಅತ್ಯುತ್ತಮ ಯೋಗ ತಾಣಗಳಲ್ಲಿ ಒಂದಾಗಿದೆ. ತಮಿಳುನಾಡಿನ ಈ ನಗರವು ಯೋಗ ಪ್ರಿಯರಿಗೆ ಶಾಂತ ಮತ್ತು ಆಹ್ಲಾದಕರ ವಾತಾವರಣ ಹಾಗೂ ಮಾನಸಿಕ ಶಾಂತಿಯನ್ನು ನೀಡುತ್ತದೆ. ಪಾಂಡಿಚೇರಿಯ ಆಶ್ರಮಗಳು ಯೋಗ ಮತ್ತು ಧ್ಯಾನಕ್ಕೆ ಬಹಳ ಪ್ರಸಿದ್ಧವಾಗಿವೆ. ಇಲ್ಲಿ ಅನೇಕ ಯೋಗ ಸ್ಥಳಗಳಿದ್ದು, ಯೋಗ ತಂತ್ರಗಳು, ಆಸನಗಳು, ವ್ಯಾಯಾಮಗಳು ಮತ್ತು ಪ್ರಾಣಾಯಾಮ ಇತ್ಯಾದಿಗಳನ್ನು ಕಲಿಯಬಹುದು. ಇಲ್ಲಿಗೆ ಹೋದಾಗ ತಿರುಮುಲರ್ ಯೋಗ ಕೇಂದ್ರ, ಚಂದ್ರು ಆಶ್ರಮ, ಆನಂದಂ ಯೋಗ ಕೇಂದ್ರ, ಸಪ್ತಾಂಗ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ಸಮೃದ್ಧ ಜೀವನ ಯೋಗ ಕೇಂದ್ರಕ್ಕೊಮ್ಮೆ ಭೇಟಿ ನೀಡಬಹುದು.
ತಲುಪುವ ಮಾರ್ಗ
ರಸ್ತೆ ಮಾರ್ಗವಾದರೆ ಬೆಂಗಳೂರು ಮತ್ತು ಪಾಂಡಿಚೇರಿ ನಡುವಿನ ಅಂತರ 311 ಕಿ.ಮೀ. ರಸ್ತೆಯ ಮೂಲಕ ಸುಮಾರು 6-7 ಗಂಟೆಗಳಲ್ಲಿ ಪಾಂಡಿಚೇರಿಗೆ ಕ್ರಮಿಸಬಹುದು. ಅದಕ್ಕಾಗಿಯೇ ಬೆಂಗಳೂರಿನಿಂದ ಪಾಂಡಿಚೇರಿಗೆ ಹೆಚ್ಚು ಆದ್ಯತೆಯ ಮಾರ್ಗವೆಂದರೆ ರಸ್ತೆಯ ಮೂಲಕ. ಆದ್ದರಿಂದ ಕಾರಿನಲ್ಲಿ ಅಥವಾ ಬಸ್ಸಿನಲ್ಲಿ ನೀವು ಹೋಗಹುದು.

ಗೋವಾದಲ್ಲಿ ಯೋಗದ ಜೊತೆಗೆ ವಿಶ್ರಾಂತಿ
ಗೋವಾ ನೈಸರ್ಗಿಕ ಸೌಂದರ್ಯ, ಬೀಚ್‌ಗಳು ಪಾರ್ಟಿಗಳಿಗೆ ಮಾತ್ರವಲ್ಲದೆ ಯೋಗಕ್ಕೂ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಯೋಗ ಕೇಂದ್ರಗಳಿವೆ. ನೀವಿಲ್ಲಿ ಯೋಗದ ಜೊತೆಗೆ ವಿಶ್ರಾಂತಿ ಪಡೆಯಬಹುದು. ಇಲ್ಲಿ ಅಂಜುನಾ ಮತ್ತು ಪಲೋಲೆಮ್ ಬೀಚ್‌ನಲ್ಲಿ ಅನೇಕ ಯೋಗ ತರಬೇತಿ ಕೇಂದ್ರಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತದೆ. ಗೋವಾದಲ್ಲಿ ಕೆಲವು ಪ್ರಸಿದ್ಧ ಯೋಗ ಕೇಂದ್ರಗಳಿದ್ದು, ಅವುಗಳೆಂದರೆ, ತ್ರಿಮೂರ್ತಿ ಯೋಗ ಕೇಂದ್ರ, ಲೋಟಸ್ ನೇಚರ್ ಕೇರ್, ಬಿದಿರಿನ ಯೋಗ ರಿಟ್ರೀಟ್, ಸತ್ಸಂಗ ರಿಟ್ರೀಟ್, ಹಿಮಾಲಯ ಯೋಗ ರಿಟ್ರೀಟ್, ಪರ್ಪಲ್ ವ್ಯಾಲಿ ಯೋಗ ರಿಟ್ರೀಟ್ ಹೆಚ್ಚು ಖ್ಯಾತಿ ಪಡೆದಿವೆ.
ತಲುಪುವ ಮಾರ್ಗ
ಗೋವಾ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಬೆಂಗಳೂರಿನಿಂದ ಪ್ರಯಾಣವನ್ನು ಮಾಡಲು ಹಲವು ಮಾರ್ಗಗಳಿವೆ. ಅಗ್ಗದ ದರದಲ್ಲಿ ನೇರ ವಿಮಾನಗಳು, ರೈಲುಗಳು ಮತ್ತು ಬಸ್ಸುಗಳಿವೆ. ಬೆಂಗಳೂರಿನಿಂದ ಗೋವಾ ರಸ್ತೆಯ ಅಂತರ 557 ಕಿ.ಮೀ.


Click it and Unblock the Notifications

















