ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಭಾರತ ದೇಶವು ಭೌಗೋಳಿಕವಾಗಿ ಜಗತ್ತಿನ ಏಳನೇಯ ದೊಡ್ಡ ದೇಶವಾಗಿದ್ದು, ಆಕರ್ಷಕ ಹಾಗು ಸುಮಧುರವಾದ ಪ್ರಾಕೃತಿಕ ತಾಣಗಳಿಂದ ತುಂಬಿ ತುಳುಕುತ್ತಿದೆ. ಸುಡು ಬಿಸಿಲಿನ ರಾಜಸ್ಥಾನದ ಮರಭೂಮಿಯಿಂದ ಹಿಡಿದು, ಹಿಮಪಾತದ ಮಧುರ ಅನುಭವ ನೀಡುವ ಹಿಮಾಚಲ ಪ್ರದೇಶ, ಅಗಾಧ ಪರಂಪರೆಯ ಕರ್ನಾಟಕ, ನಿಸರ್ಗ ಸಹಜ ಸೌಂದರ್ಯದ ಕೇರಳ, ಧಾರ್ಮಿಕ ವೈಭವದ ತಮಿಳುನಾಡು ಹೀಗೆ ಹತ್ತು ಹಲವಾರು ಪ್ರವಾಸಿ ವೈವಿಧ್ಯಮಯ ತಾಣಗಳನ್ನು ಈ ದೇಶದಲ್ಲಿ ಕಾಣಬಹುದು.
ಇನ್ನು ಕ್ರಿಕೆಟ್ ಜೊತೆ ಚಲನಚಿತ್ರಗಳೂ ಕೂಡ ಈ ದೇಶದ ಜನರ ಆಧುನಿಕ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಸರಿ. ಸಾಕಷ್ಟು ಪ್ರಮಾಣದ ಪ್ರಾದೇಶಿಕ ಹಾಗು ಹಿಂದಿ ಚಿತ್ರಗಳು ಭಾರತದ ತುಂಬೆಲ್ಲ ಚಿತ್ರೀಕರಣಗೊಂಡಿವೆ ಹಾಗು ಗೊಳ್ಳುತ್ತಲೂ ಇವೆ. ಇತ್ತೀಚಿನ ಕೆಲವು ದಶಕಗಳಲ್ಲಿ ದೂರದ ಹಾಲಿವುಡ್ ಎಂಬ ಆಂಗ್ಲ ಚಿತ್ರಗಳ ಬಲಾಢ್ಯ ಮಾಧ್ಯಮ ತನ್ನಲ್ಲಿ ನಿರ್ಮಿಸಲಾಗುತ್ತಿರುವ ಚಿತ್ರಗಳ ಚಿತ್ರೀಕರಣಕ್ಕೆಂದು ಭಾರತ ದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ನಮ್ಮೆಲ್ಲರಿಗೂ ಒಂದು ರೀತಿಯ ಹೆಮ್ಮೆಯ ಸಂಗತಿ ಎಂದರೆ ತಪ್ಪಾಗಲಾರದು.
ಹಾಗಾದರೆ ಬನ್ನಿ ಒಮ್ಮೆ...ಹಾಲಿವುಡ್ಡಿನ ಯಾವ್ಯಾವ ಚಿತ್ರಗಳು ಭಾರತದ ಯಾವ್ಯಾವ ಭಾಗಗಳಲ್ಲಿ ಚಿತ್ರೀಕರಣಗೊಂಡಿವೆ ಎಂಬ ವಿಷಯದ ಕುರಿತು ಒಂದು ಪ್ರವಾಸ ಮಾಡಿ ಬರೋಣ.

ಅಕ್ಟೋಪಸ್ಸಿ, ಉದೈಪುರ್
1983 ರಲ್ಲಿ ಬಂದಿದ್ದ ಅಕ್ಟೋಪಸ್ಸಿ ಎಂಬ ಜೇಮ್ಸ್ ಬಾಂಡ್ ಚಿತ್ರವು ರಾಜಸ್ಥಾನದ ಪ್ರಖ್ಯಾತ ಕೆರೆಗಳ ನಗರ ಎಂಬ ಖಾತಿಯ ಉದೈಪುರ್ ನಲ್ಲಿ ಚಿತ್ರೀಕರಣಗೊಂಡಿತ್ತು. ಉದೈಪುರಿನ ಮನ್ಸೂನ್ ಪ್ಯಾಲೇಸ್, ಲೇಕ್ ಪ್ಯಾಲೇಸ್ ಮತ್ತು ಜಗ್ ಮಂದಿರ್ ಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರದ ನಾಯಕ ಅರ್ಥಾತ್ ಬಾಂಡ್ ರವರು ಶಿವ್ ನಿವಾಸ್ ಪ್ಯಾಲೇಸ್ ನಲ್ಲಿ ತಂಗಿದ್ದರು.

ಲೈಫ್ ಆಫ್ ಪೈ, ಮುನ್ನಾರ್
2012 ರಲ್ಲಿ ತೆರೆಕಂಡ ಸಾಹಸಪ್ರಧಾನ ಚಿತ್ರ 'ಲೈಫ್ ಆಫ್ ಪೈ' ಕೇರಳದ ಮುನ್ನಾರ್ ಹಾಗು ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿಯಲ್ಲಿ ಚಿತ್ರೀಕರಣಗೊಂಡಿದೆ. ಯಾನ್ ಮಾರ್ಟೆಲ್ ಅವರ ಕಾದಂಬರಿ ಆಧಾರಿತ ಈ ಚಿತ್ರಕ್ಕೆ 3D ಪರಿಣಾಮವನ್ನು ಹೈದರಾಬಾದ್ ಹಾಗು ಮುಂಬೈಗಳಲ್ಲಿ ಸೃಷ್ಟಿಸಲಾಯಿತು.

ಹೋಲಿ ಸ್ಮೋಕ್, ದೆಹಲಿ
1999 ರಲ್ಲಿ ತೆರೆಕಂಡ ಈ ಆಸ್ಟ್ರೇಲಿಯನ್ ಚಿತ್ರವು ದೆಹಲಿ ಹಾಗು ಪುಷ್ಕರ್ ನಲ್ಲಿ ಚಿತ್ರೀಕರಣಗೊಂಡಿದೆ. ದೆಹಲಿಯ ಜನನಿಬಿಡ ಬೀದಿಗಳ ಪಹಾಡ್‍ಗಂಜ್ ಈ ಚಿತ್ರಕ್ಕೆ ಪ್ರಧಾನ ಸ್ಥಳವಾಗಿ ಉತ್ತಮ ಬಗೆಯ ಹಿನ್ನಿಲೆಯ ನೋಟವನ್ನು ಒದಗಿಸಿತ್ತು.

ದಿ ಬೆಸ್ಟ್ ಎಕ್ಸೋಟಿಕ್ ಮಾರಿಗೋಲ್ಡ್ ಹೋಟೆಲ್, ರಾಜಸ್ಥಾನ
2012 ರಲ್ಲಿ ತೆರೆಕಂಡ ಈ ಹಾಸ್ಯ ಕಥಾ ಚಿತ್ರ ರಾಜಸ್ಥಾನದ ಜೈಪುರ್ ಹಾಗು ಉದೈಪುರ್ ಗಳಲ್ಲಿ ಚಿತ್ರೀಕರಣಗೊಂಡಿದೆ. ಭಾರತದ ವೈವಿಧ್ಯಮಯ ಚಿತ್ರಣವನ್ನು ಬೆಳ್ಳಿ ಪರದೆಯಲ್ಲಿ ಅನಾವರಣಗೊಳಿಸಿದ್ದ ಈ ಚಿತ್ರವು ಕಿಶನ್‍ಗಡ್, ಅಮೇರ್ ಕೋಟೆ, ಕನೋಟಾ ಕೋಟೆ, ಲೇಕ್ ಪ್ಯಲೇಸ್ ಹೋಟೆಲ್ ಗಳಲ್ಲಿಯೂ ಕೂಡ ಚಿತ್ರೀಕರಣಗೊಂಡಿದೆ.

ಈಟ್, ಪ್ರೇ, ಲವ್, ದೆಹಲಿ
2010 ರಲ್ಲಿ ತೆರೆಕಂಡ ಈ ಭಾವಪ್ರಧಾನ ಹಾಸ್ಯ (ರೋಮ್ಯಾಂಟಿಕ್ ಕಾಮೇಡಿ) ಚಿತ್ರವು ಇಟಲಿ, ಭಾರತ ಹಾಗು ಇಂಡೊನೇಷಿಯಾಗಳಲ್ಲಿ ಚಿತ್ರೀಕರಣಗೊಂಡಿದೆ. ಕಥಾನಾಯಕಿಯು ಆಧ್ಯಾತ್ಮಿಕ ಉನ್ನತಿಯನ್ನು ಪಡೆಯಲು ಮೂರು ತಿಂಗಳುಗಳ ಕಾಲ ಭಾರತದಲ್ಲಿ ನೆಲೆಸುತ್ತಾಳೆ. ದೆಹಲಿಯ ಕೆಲವು ಆಶ್ರಮಗಳಲ್ಲಿ ಇದು ಚಿತ್ರೀಕರಣಗೊಂಡಿದೆ.

ಗಾಂಧಿ, ಭಾರತ
ಈ ಚಿತ್ರವು ದೆಹಲಿಯ ರಾಷ್ಟ್ರಪತಿ ಭವನ, ಇಂಡಿಯಾ ಗೇಟ್, ರಾಜಪಥ್ ಗಳಲ್ಲದೆ ರಾಜಸ್ಥಾನ್, ಗುಜರಾತ್, ಮುಂಬೈ, ಪುಣೆ, ಪಟ್ನಾ ಮುಂತಾದ ಭಾರತದ ಹಲವು ಭಾಗಗಳಲ್ಲಿ ಚಿತ್ರೀಕರಣಗೊಂಡಿದೆ.

ಮಾನ್ಸೂನ್ ವೆಡ್ಡಿಂಗ್, ದೆಹಲಿ
ಮೀರಾ ನಾಯರ್ ನಿರ್ದೇಶಿತ 2001 ರಲ್ಲಿ ತೆರೆಕಂಡ ಈ ಚಿತ್ರವು ದೆಹಲಿಯ ಹಿನ್ನಿಲೆಯನ್ನು ಹೊಂದಿದೆ.

ದಿ ನೇಮ್‍ಸೇಕ್, ಕೊಲ್ಕತ್ತಾ
ಝುಂಪಾ ಲಹಿರಿ ಬರೆದ ಇದೇ ಹೆಸರಿನ ಪುಸ್ತಕದ ಈ ಚಿತ್ರವನ್ನು ಕೂಡ ನಿರ್ದೇಶಿಸಿದ್ದು ಮೀರಾ ನಾಯರ್. ಕಥಾನಾಯಕ ಅಮೇರಿಕದಿಂದ ಭಾರತಕ್ಕೆ ಬಂದು ನೆಲೆಸಿದಾಗ ಇಲ್ಲಿನ ಸಂಸ್ಕೃತಿಯೊಂದಿಗೆ ಜೂಜುವ ಕಥೆಯನ್ನು ಹೊಂದಿರುವ ಈ ಚಿತ್ರವನ್ನು ಕೊಲ್ಕತ್ತಾ ಶಹರಿನಲ್ಲಿ ಚಿತ್ರೀಕರಿಸಲಾಗಿದೆ.

ದಿ ಬೌರ್ನ್ ಸುಪ್ರೀಮಸಿ, ಗೋವಾ
2004 ರಲ್ಲಿ ತೆರೆಕಂಡ ಈ ಗೂಢಚರ್ಯ ಚಿತ್ರವು ಭಾಗಶಃವಾಗಿ ಗೋವಾದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರದ ಮೊದಲ ಭಾಗದಲ್ಲಿಯೆ ಗೋವಾದಲ್ಲಿ ಚಿತ್ರೀಕರಿಸಲಾದ ಸನ್ನಿವೇಶಗಳು ಬರುತ್ತವೆ.

ದಿ ಡಾರ್ಕ್ ನೈಟ್ ರೈಸಸ್, ಜೋಧ್ಪುರ್
ಕ್ರಿಸ್ಟೋಫರ್ ನೋಲನ್ ರ ಬ್ಯಾಟ್ ಮ್ಯಾನ್ ಚಿತ್ರ ಸರಣಿಯ ಕೊನೆಯ ಅವತರಣಿಕೆಯಾದ ಈ ಚಿತ್ರವು ಜಗತ್ತಿನ ಹಲವು ಭಾಗಗಳಲ್ಲಿ ಚಿತ್ರೀಕರಣಗೊಂಡಿದ್ದು, ಅವುಗಳಲ್ಲಿ ಭಾರತದ ಜೋಧ್ಪುರ್ ಸಹ ಒಂದು. ನೆಲದಡಿಯ ಬಾವಿಯ ಸನ್ನಿವೇಶಗಳನ್ನು ಇಲ್ಲಿ ಚಿತ್ರೀಸಲಾಗಿದೆ.

ತ್ರಿಷ್ಣಾ, ಮುಂಬೈ ಮತ್ತು ಜೈಪುರ್
2011 ರಲ್ಲಿ ತೆರೆಕಂಡ ಈ ಹಾಲಿವುಡ್ ಚಿತ್ರವು ಮುಂಬೈ ಹಾಗು ಜೈಪುರ್ ಗಳಲ್ಲಿ ಚಿತ್ರೀಕರಣಗೊಂಡಿದೆ. ಆಧುನಿಕ ಭಾರತದ ಸಮಾಜವನ್ನು ಪ್ರತಿಬಿಂಬಿಸಿರುವ ಈ ಚಿತ್ರದಲ್ಲಿ ಒಬ್ಬ ಸಾಮಾನ್ಯ ಮಹಿಳೆ ಭಾರತದಲ್ಲಿ ಎದುರಿಸಬೇಕಾದ ಬವಣೆಗಳ ಕುರಿತು ಹೇಳಲಾಗಿದೆ.

ಸ್ಲಮ್ ಡಾಗ್ ಮಿಲೀಯನೇರ್, ಮುಂಬೈ
2008 ರಲ್ಲಿ ತೆರೆಕಂಡ ಹಾಗು ಹಲವು ದಶಕಗಳ ನಂತರ ಭಾರತೀಯರಿಗೆ ಆಸ್ಕರ್ ಪ್ರಶಸ್ತಿ ದೊರಕಿಸಿಕೊಟ್ಟ ಈ ಚಿತ್ರವು ಮುಂಬೈನ ಜುಹು, ಸ್ಲಮ್ ಗಳಲ್ಲಿ ಚಿತ್ರೀಕರಣಗೊಂಡಿದೆ.

ಜೀರೊ ಡಾರ್ಕ್ ಥರ್ಟಿ, ಚಂದೀಗಡ್
2012 ರಲ್ಲಿ ತೆರೆಕಂಡ ಈ ಯುದ್ಧ ಚಿತ್ರವು ಚಂದೀಗಡಿನ ಪಿ.ಇ.ಸಿ ವಿಶ್ವವಿದ್ಯಾಲಯದಲ್ಲಿ ಭಾಗಶಃ ಚಿತ್ರೀಕರಣಗೊಂಡಿದೆ. ಒಸಾಮಾ ಬಿನ್ ಲಾಡೆನ್ ನನ್ನು ಹುಡುಕುವ ಕಥೆಯಿರುವ ಈ ಚಿತ್ರವನ್ನು ಚಂದೀಗಡಿನ ಕೆಲವು ಭಾಗಗಳನ್ನು ಪಾಕಿಸ್ತಾನಿನ ಲಾಹೋರ್ ಹಾಗು ಅಬೋತಾಬಾದ್ ಹಾಗೆ ಕಾಣುವಂತೆ ಮಾಡಿ ಚಿತ್ರೀಕರೀಸಲಾಗಿದೆ.

ದ ಮಿತ್, ಹಂಪಿ
2005 ರಲ್ಲಿ ತೆರೆಕಂಡ ಈ ಚಿತ್ರ ಹಾಸ್ಯ, ಕಾಲ್ಪನಿಕ, ಸಾಹಸಗಳನ್ನೊಳಗೊಂಡ ಕಥೆಯನ್ನು ಹೊಂದಿದೆ. ಹಂಪಿಯ ಹಲವು ಭಾಗಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ಹಿನ್ನಿಲೆಯಲ್ಲಿ ವಿರೂಪಾಕ್ಷ ದೇವಾಲಯ ಕಂಡುಬರುತ್ತದೆ.

ಸಿಂಗ್ಯುಲ್ಯಾರಿಟಿ, ಮಧ್ಯ ಪ್ರದೇಶ
ಮಧ್ಯ ಪ್ರದೇಶದ ಒರ್ಛಾ, ಚಂಬಲ್ ಹಾಗು ಗ್ವಾಲೀಯರ್ ತಾಣಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರವು ರೋಮ್ಯಾಂಟಿ ಹಾಗು ಸಾಹಸಮಯವಾಗಿದ್ದು, 18 ನೇಯ ಶತಮಾನದ ಬ್ರಿಟೀಷ್ ಆಡಳಿದ ಭಾರತವನ್ನು ಅನಾವರಣಗೊಳಿಸುತ್ತದೆ.

ದಿ ದಾರ್ಜೀಲಿಂಗ್ ಲಿಮಿಟೆಡ್, ರಾಜಸ್ಥಾನ
2007 ರಲ್ಲಿ ತೆರೆಕಂಡ ಈ ಹಾಸ್ಯ ಪ್ರಧಾನ ಚಿತ್ರವು ಭಾರತದೆಲ್ಲೆಡೆ ಪಯಣಿಸುವ ಒಂದು ವೈಭವದ ರೈಲ್ ಸವಾರಿಯನ್ನು ಒಳಗೊಂಡಿದೆ. ಆ ರೈಲಿನ ಹೆಸರೆ ದಾರ್ಜೀಲಿಂಗ್ ಲಿಮಿಟೆಡ್ (ಇದು ಕೇವಲ ಚಿತ್ರದಲ್ಲಿಡಲಾದ ಹೆಸರು). ರಾಜಸ್ಥಾನದ ಹಲವು ಭಾಗಗಳಲ್ಲಿ ಇದು ಚಿತ್ರೀಕರಣಗೊಂಡಿದೆ.

ಬ್ರೈಡ್ ಆಂಡ್ ಪ್ರಿಜುಡಿಸ್, ಅಮೃತಸರ್
2004 ರಲ್ಲಿ ತೆರೆಕಂಡ ಪ್ರಣಯಕಾವ್ಯದ ಈ ಚಿತ್ರವನ್ನು ಅಮೃತಸರ್ ನಲ್ಲಿ ಚಿತ್ರೀಕರಿಸಲಾಗಿದೆ. ಗೋಲ್ಡನ್ ಟೆಂಪಲ್ ಈ ಚಿತ್ರದ ಮುಖ್ಯ ಹಿನ್ನಿಲೆಯಾಗಿದೆ. ಅಲ್ಲದೆ ಚಿತ್ರದ ಕೆಲವು ಸನ್ನಿವೇಶಗಳನ್ನು ಮುಂಬೈ ಹಾಗು ಗೋವಾಗಳಲ್ಲೂ ಚಿತ್ರೀಕರಿಸಲಾಗಿದೆ.

ಮಿಶನ್ ಇಂಪಾಸಿಬಲ್ (ಘೋಸ್ಟ್ ಪ್ರೊಟೋಕಾಲ್), ಬೆಂಗಳೂರು
2011 ರಲ್ಲಿ ತೆರೆಕಂಡ ಈ ಸಾಹಸಮಯ ಚಿತ್ರದ ಅಂತ್ಯ ಭಾಗವನ್ನು ಬೆಂಗಳೂರಿನ ಸನ್ ನೆಟವರ್ಕ್ ಕಚೇರಿಯಲ್ಲಿ ಚಿತ್ರೀಕರಿಸಲಾಗಿದೆ. (ಇಲ್ಲಿ ಕಾಣುತ್ತಿರುವುದು ಚೆನ್ನೈನಲ್ಲಿನ ಸನ್ ನೆಟವರ್ಕ್ ಕಚೇರಿಯ ಚಿತ್ರ).

ಎ ಮೈಟಿ ಹಾರ್ಟ್, ಪುಣೆ
2007 ರಲ್ಲಿ ತೆರೆಕಂಡ ಈ ಚಿತ್ರದ ಕೆಲವು ಭಾಗಗಳನ್ನು ಪುಣೆ ಹಾಗು ಮುಂಬೈಗಳಲ್ಲಿ ಚಿತ್ರೀಕರಿಸಲಾಗಿದೆ. ಕರಾಚಿಯಲ್ಲಿ ಅಪಹರಿಸಲ್ಪಟ್ಟ ಪತ್ರಕರ್ತನ ಸುತ್ತ ತಿರುಗುವ ಈ ಚಿತ್ರವನ್ನು ಪುಣೆಯಲ್ಲಿ ಚಿತ್ರೀಕರಿಸಲಾಗಿದ್ದು ಪುಣೆಯನ್ನು ಕರಾಚಿಯನ್ನಾಗಿ ಬಿಂಬಿಸಲಾಗಿದೆ.


Click it and Unblock the Notifications



















