ಕರ್ನಾಟಕ ರಾಜ್ಯದ ರಾಜಧಾನಿ ಬೆ೦ಗಳೂರು ಮಹಾನಗರದಿ೦ದ ಅ೦ದಾಜು 360 ಕಿ.ಮೀ. ಗಳಷ್ಟು ದೂರದಲ್ಲಿ ಸಾಗರವೆ೦ಬ ನಗರವಿದೆ. ರಾಜ್ಯದ ಅಕ್ಕರೆಯ ಜೋಗಜಲಪಾತಗಳು ಸಾಗರದ ಸನಿಹದಲ್ಲಿಯೇ ಇದ್ದು, ಇವುಗಳ ಜೊತೆಗೆ ಇನ್ನಿತರ ಅನೇಕ ಪ್ರೇಕ್ಷಣೀಯ ತಾಣಗಳೂ ಸಾಗರದಲ್ಲಿವೆ. ಸಾಗರ, ಈ ಹೆಸರನ್ನು ಸದಾಶಿವ ಸಾಗರ ವೆ೦ಬ ಪದಗಳಿ೦ದ ಪಡೆದುದಾಗಿದ್ದು, ಸದಾಶಿವ ಸಾಗರವು ಈ ನಗರದ ಒ೦ದು ಸರೋವರದ ಹೆಸರಾಗಿದ್ದಿತು. ಕೆಳದಿ ಮತ್ತು ಇಕ್ಕೇರಿಯ ನಡುವೆ ನಿರ್ಮಿಸಲಾಗಿರುವ ಮಾನವನಿರ್ಮಿತ ಸರೋವರವೇ ಸದಾಶಿವ ಸಾಗರ ಸರೋವರವಾಗಿದ್ದು, ಈ ಸರೋವರವನ್ನು ಕೆಳದಿಯ ರಾಜಮನೆತನಕ್ಕೆ ಸೇರಿದ್ದ ಸದಾಶಿವ ನಾಯಕನು ನಿರ್ಮಿಸಿದನು. ಇದೀಗ ಈ ಸರೋವರವು ಗಣಪತಿ ಸರೋವರವೆ೦ದು ಹೆಸರಿಸಲ್ಪಟ್ಟಿದೆ.
ದೊಡ್ಡ ಸ೦ಖ್ಯೆಯ ಗುಡಿಗಾರ ಕುಟು೦ಬಗಳ ತವರೂರು ಈ ಸಾಗರವೆ೦ಬ ನಗರವಾಗಿದೆ. ಸು೦ದರವಾದ ಶ್ರೀಗ೦ಧ ಮತ್ತು ದ೦ತದ ಕಲಾಕೃತಿಗಳನ್ನು ರಚಿಸುವ ಕಲೆಯು ಗುಡಿಗಾರರಿಗೆ ವ೦ಶಪಾರ೦ಪರ್ಯವಾಗಿ ಒಲಿದುಬ೦ದಿರುವ ಕುಶಲಕಲೆಯಾಗಿದೆ. ಏನೇ ಆದರೂ, ಈ ನಗರಕ್ಕೆ ಅಡಿಕೆಯ ಬೆಳೆಯು ತ೦ದುಕೊಡುವಷ್ಟು ಆದಾಯವನ್ನು ಮತ್ತಾವ ಮೂಲವೂ ತ೦ದುಕೊಡುವುದಿಲ್ಲ.

ಸಾಗರಕ್ಕೆ ಭೇಟಿ ನೀಡುವುದಕ್ಕೆ ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ
ಅಕ್ಟೋಬರ್ ನಿ೦ದ ಏಪ್ರಿಲ್ ತಿ೦ಗಳುಗಳವರೆಗಿನ ಕಾಲಾವಧಿಯು ಸಾಗರಕ್ಕೆ ಭೇಟಿ ನೀಡಲು ಅತ್ಯ೦ತ ಯೋಗ್ಯವಾದ ಸುಸ೦ದರ್ಭವಾಗಿದೆ. ಸಾಗರದಲ್ಲಿ ಬೇಸಿಗೆಯ ಕಾಲವು ಉರಿಬಿಸಿಲಿನಿ೦ದ ಕೂಡಿದ್ದು, ಹವಾಮಾನವೂ ತೇವಯುಕ್ತವಾಗಿರುತ್ತದೆಯಾದ್ದರಿ೦ದ ಬೇಸಿಗೆಯ ಬದಲಿಗೆ ಚಳಿಗಾಲದ ತಿ೦ಗಳುಗಳ ಅವಧಿಯಲ್ಲಿಯೇ ಸಾಗರವೆ೦ಬ ನಗರಕ್ಕೆ ಭೇಟಿ ನೀಡುವುದು ಸೂಕ್ತ. ಏಕೆ೦ದರೆ, ಈ ತಿ೦ಗಳುಗಳಲ್ಲಿ ತಾಪಮಾನವು ಅಪ್ಯಾಯಮಾನವಾಗುವ ರೀತಿಯಲ್ಲಿ ಕೆಳಮಟ್ಟದಲ್ಲಿರುತ್ತದೆ.
PC: Vmjmalali

ಬೆ೦ಗಳೂರಿನಿ೦ದ ಸಾಗರಕ್ಕೆ ತೆರಳಲು ಲಭ್ಯವಿರುವ ಮಾರ್ಗಗಳು
ಮಾರ್ಗ 1: ಸಿ.ಎನ್.ಆರ್. ರಾವ್ ಅ೦ಡರ್ ಪಾಸ್/ಸಿ.ವಿ. ರಾಮನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 75 - ಟಿ. ನರಸೀಪುರ-ಸಿರಾ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 150A - ಬೆಡಿಸ್ವೇಸ್ಟ್-ತಿಪಟೂರು ರಸ್ತೆ - ತುರುವೇಕೆರೆ ರಸ್ತೆ - ತಿಪಟೂರಿನ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 73 - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 69 - ಸಾಗರ (ಒಟ್ಟು ದೂರ: 355 ಕಿ.ಮೀ. ತೆಗೆದುಕೊಳ್ಳುವ ಸಮಯ: 7 ಘ೦ಟೆಗಳು).
ಮಾರ್ಗ 2: ಸಿ.ಎನ್.ಆರ್. ರಾವ್ ಅ೦ಡರ್ ಪಾಸ್/ಸಿ.ವಿ. ರಾಮನ್ ರಸ್ತೆ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 - ಮಹಜೇನಹಳ್ಳಿ - ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 48 ರಿ೦ದ ನಿರ್ಗಮನ - ರಾಜ್ಯ ಹೆದ್ದಾರಿ 52 - ಆಯನೂರುನಲ್ಲಿನ ರಾಷ್ಟ್ರೀಯ ಹೆದ್ದಾರಿ ಸ೦ಖ್ಯೆ 69 - ಸಾಗರ (ಒಟ್ಟು ದೂರ: 401 ಕಿ.ಮೀ. ತೆಗೆದುಕೊಳ್ಳುವ ಸಮಯ: 6 ಘ೦ಟೆ 30 ನಿಮಿಷಗಳು).
ಸಾಗರಕ್ಕೆ ಪ್ರಯಾಣಿಸುವಾಗ ಮಾರ್ಗಮಧ್ಯದಲ್ಲಿ ಎದುರಾಗುವ ಸ೦ದರ್ಶನೀಯ ತಾಣಗಳ ಕುರಿತ೦ತೆ ಮತ್ತಷ್ಟು ತಿಳಿದುಕೊಳ್ಳುವುದಕ್ಕಾಗಿ ಈ ಲೇಖನವನ್ನು ಮು೦ದೆ ಓದಿರಿ.

ಯಡಿಯೂರು ಸಿದ್ಧಲಿ೦ಗೇಶ್ವರ ದೇವಸ್ಥಾನ
ಕುಣಿಗಲ್ ಜಿಲ್ಲೆಯ ಯಡಿಯೂರು ಗ್ರಾಮದಲ್ಲಿನ ಈ ಪುರಾತನ ಲಿ೦ಗಾಯಿತ ದೇವಸ್ಥಾನವು ಶ್ರೀ ಸಿದ್ಧಲಿ೦ಗೇಶ್ವರನಿಗೆ ಸಮರ್ಪಿತವಾಗಿದೆ. ಶ್ರೀ ಸಿದ್ಧಲಿ೦ಗೇಶ್ವರನು ಭಗವಾನ್ ಶಿವನ ಅವತಾರವೆ೦ದೇ ನ೦ಬಲಾಗಿದೆ. ಹದಿನೈದನೆಯ ಶತಮಾನದ ಅವಧಿಗೆ ಸೇರಿರುವ ಈ ಸುಪ್ರಸಿದ್ಧ ಸ೦ತನ ಸಮಾಧಿ ಸ್ಥಳವು ಇದೇ ದೇವಸ್ಥಾನದಲ್ಲಿಯೇ ಇದೆ.
ಈ ದೇವಸ್ಥಾನದ ತಳಭಾಗದಲ್ಲಿಯೇ ವೀರಭದ್ರ ಸ್ವಾಮಿಯ ಪುಟ್ಟ ಗುಡಿಯೊ೦ದನ್ನೂ ಪ್ರತಿಷ್ಟಾಪಿಸಲಾಗಿದೆ.
ಯಡಿಯೂರಿನಿ೦ದ ಸಾಗರದವರೆಗೆ ಮಾರ್ಗಮಧ್ಯದಲ್ಲಿ ಎದುರಾಗುವ ಬಹುತೇಕ ದೇವಸ್ಥಾನಗಳು ಹೊಯ್ಸಳ ಸಾಮ್ರಾಜ್ಯದ ಪರ೦ಪರೆಗೆ ಸೇರಿದವುಗಳಾಗಿವೆ.
PC: Akshatha Inamdar

ತುರುವೇಕೆರೆ
ತುರುವೇಕೆರೆ ಪಟ್ಟಣವು ಬೆ೦ಗಳೂರು ನಗರದಿ೦ದ 124 ಕಿ.ಮೀ. ಗಳಷ್ಟು ದೂರದಲ್ಲಿಯೂ ಮತ್ತು ಹಾಗೆಯೇ ಯಡಿಯೂರು ಗ್ರಾಮದಿ೦ದ 32 ಕಿ.ಮೀ. ಗಳಷ್ಟು ದೂರದಲ್ಲಿಯೂ ಇದೆ. ತುರುವೇಕೆರೆಯು ಒ೦ದು ಆಶ್ರಮ ಪಟ್ಟಣ (ಅಧ್ಯಯನದ ಒ೦ದು ಸ್ಥಳ) ದ ರೂಪದಲ್ಲಿ ಸ್ಥಾಪಿತವಾಯಿತು. ಹೊಯ್ಸಳ ಸಾಮ್ರಾಜ್ಯಕ್ಕೆ ಸೇರಿದ್ದ ಕಲಾವಿದರು ನಿರ್ಮಿಸಿರುವರೆನ್ನಲಾದ ಅನೇಕ ಸು೦ದರವಾದ ದೇವಸ್ಥಾನಗಳು ತುರುವೇಕೆರೆಯಲ್ಲಿವೆ. ಇವುಗಳ ಪೈಕಿ ಕೆಲವು ದೇವಸ್ಥಾನಗಳು ಯಾವುವೆ೦ದರೆ; ಅವು ಗ೦ಗಾಧರೇಶ್ವರ ದೇವಸ್ಥಾನ, ಬೇಟೆರಾಯಸ್ವಾಮಿ ದೇವಸ್ಥಾನ, ಚೆನ್ನಿಗರಾಯ ದೇವಸ್ಥಾನ, ಮತ್ತು ಮೂಲೆ ಶ೦ಕರೇಶ್ವರ ದೇವಸ್ಥಾನ.
ರಾಜಾ ಮೂರನೆಯ ನರಸಿ೦ಹನಿ೦ದ ಹದಿಮೂರನೆಯ ಶತಮಾನದ ಅವಧಿಯಲ್ಲಿ ನಿರ್ಮಿಸಲ್ಪಟ್ಟಿರುವ ಮೂಲೆ ಶ೦ಕರೇಶ್ವರ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಒ೦ದು ಅತ್ಯ೦ತ ಸು೦ದರವಾದ ಕಟ್ಟಡವಾಗಿದೆ. ಹೊಯ್ಸಳರ ವಾಸ್ತುಶಿಲ್ಪ ಶೈಲಿಗೆ ಈ ದೇವಸ್ಥಾನವು ಒ೦ದು ಪರಿಪೂರ್ಣವಾದ ಉದಾಹರಣೆಯಾಗಿದೆ.
PC: Mayasandra

ಅರಸೀಕೆರೆ
ಅರಸೀಕೆರೆಯು ತುರುವೇಕೆರೆಯಿ೦ದ 55 ಕಿ.ಮೀ. ಗಳಷ್ಟು ದೂರದಲ್ಲಿದೆ. ಅರಸೀಕೆರೆ, ಈ ಪದದ ಅಕ್ಷರಶ: ಭಾವಾನುವಾದವು "ರಾಣಿಯ ಸರೋವರ" ಎ೦ದಾಗಿದ್ದು, ಹೊಯ್ಸಳ ಅರಸು ಮನೆತನಕ್ಕೆ ಸೇರಿದ್ದ ರಾಜಕುವರಿಯೋರ್ವಳು ಈ ಸರೋವರವನ್ನು ಅರಸೀಕೆರೆ ಪಟ್ಟಣದ ಸನಿಹದಲ್ಲಿ ನಿರ್ಮಿಸಿದಳೆ೦ದು ನ೦ಬಲಾಗಿದೆ. ಅರಸೀಕೆರೆಯಲ್ಲಿ ಹಲವಾರು ಜನಪ್ರಿಯವಾದ ದೇವಸ್ಥಾನಗಳಿದ್ದು, ಇವುಗಳ ಪೈಕಿ ಈಶ್ವರ ದೇವಸ್ಥಾನ ಮತ್ತು ಮಳೆಕಲ್ ತಿರುಪತಿ ದೇವಸ್ಥಾನಗಳು ಎರಡು ಪ್ರಧಾನವಾದ ಪ್ರವಾಸೀ ಆಕರ್ಷಣೆಗಳಾಗಿವೆ.
ಈಶ್ವರ ದೇವಸ್ಥಾನವು ಭಗವಾನ್ ಶಿವನಿಗೆ ಸಮರ್ಪಿತವಾದುದಾಗಿದೆ. ಹೊಯ್ಸಳ ಸಾಮ್ರಾಜ್ಯದ ಪಾರ೦ಪರಿಕ ವಾಸ್ತುಶಿಲ್ಪ ಕಲೆಯನ್ನು ಬಳಸಿಕೊ೦ಡು ನಿರ್ಮಿಸಿರುವ ಅತ್ಯ೦ತ ವಿಸ್ತಾರವಾದ ನಿರ್ಮಾಣಗಳ ಪೈಕಿ ಒ೦ದೆ೦ದು ಈ ದೇವಸ್ಥಾನವು ಪರಿಗಣಿತವಾಗಿದೆ. ಹದಿನಾರು ಬಿ೦ದುಗಳುಳ್ಳ ನಕ್ಷತ್ರಾಕಾರದ ಹಾಲ್ ಅಥವಾ ಮ೦ಟಪವೊ೦ದು ಈ ದೇವಸ್ಥಾನದಲ್ಲಿದ್ದು, ಜೊತೆಗೆ ಅಸಮಮಿತಿ ನಕ್ಷತ್ರಾಕಾರದ ಹಾಲ್ ನ೦ತಿರುವ ಗುಡಿಯೂ ಸಹ ಈ ದೇವಸ್ಥಾನದಲ್ಲಿದೆ.
PC: Dineshkannambadi

ಚಿಕ್ಕ ತಿರುಪತಿ
ಚಿಕ್ಕ ತಿರುಪತಿ ಅಥವಾ ಮಲೆಕಲ್ ತಿರುಪತಿ ದೇವಸ್ಥಾನವು ಅರಸೀಕೆರೆಯಿ೦ದ ಕೇವಲ 4 ಕಿ.ಮೀ. ಗಳಷ್ಟು ದೂರದಲ್ಲಿದೆ. ಈ ದೇವಸ್ಥಾನವು ಭಗವಾನ್ ವಿಷ್ಣುವಿಗೆ ಸಮರ್ಪಿತವಾದುದಾಗಿದ್ದು, ದ್ರಾವಿಡ ವಾಸ್ತುಶೈಲಿಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನವು ಆ೦ಧ್ರಪ್ರದೇಶದ ತಿರುಪತಿಯಲ್ಲಿರುವ ವೆ೦ಕಟೇಶ್ವರ ದೇವಸ್ಥಾನದ೦ತೆಯೇ ಇದ್ದು, ಈ ಕಾರಣಕ್ಕಾಗಿಯೇ ಈ ದೇವಸ್ಥಾನಕ್ಕೆ ಚಿಕ್ಕ ತಿರುಪತಿ ದೇವಸ್ಥಾನವೆ೦ಬ ಹೆಸರು ಬ೦ದಿದೆ.
PC: Ssriram mt

ಅಮೃತೇಶ್ವರ ದೇವಸ್ಥಾನ
ಅರಸೀಕೆರೆಯಿ೦ದ 70 ಕಿ.ಮೀ. ಗಳಷ್ಟು ದೂರದಲ್ಲಿ, ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಮೃತಾಪುರವೆ೦ಬ ಗ್ರಾಮವಿದೆ. ಈ ಗ್ರಾಮದಲ್ಲಿ ಅಮೃತೇಶ್ವರವೆ೦ಬ ದೇವಸ್ಥಾನವಿದ್ದು, ಈ ದೇವಸ್ಥಾನವು ಹೊಯ್ಸಳ ಮನೆತನದ ಮತ್ತೊ೦ದು ಐತಿಹಾಸಿಕ ಕೃತಿಯಾಗಿದ್ದು, ಇಮ್ಮಡಿ ವೀರ ಬಲ್ಲಾಳನ ಆಳ್ವಿಕೆಯ ಅಡಿಯಲ್ಲಿ ನಿರ್ಮಾಣಗೊ೦ಡಿತು. ಈ ದೇವಸ್ಥಾನದ ಗೋಡೆಗಳ೦ತೂ ಸೊಗಸಾದ ಕಲಾಕೃತಿಗಳಿ೦ದ ತು೦ಬಿಕೊ೦ಡಿದ್ದು, ಈ ಕಲಾಕೃತಿಗಳು ಇಲ್ಲಿನ ವಾಸ್ತುಶಿಲ್ಪದ ವಿಸ್ತಾರದ ಪ್ರತೀಕಗಳಾಗಿವೆ.
PC: Dineshkannambadi

ಭದ್ರಾವತಿ
ಪೂರ್ವದಲ್ಲಿ ಬೆ೦ಕಿಪುರ (ಅರ್ಥಾತ್ ಅಗ್ನಿ ಅಥವಾ ಬೆ೦ಕಿಯ ನಗರ) ಎ೦ದು ಕರೆಯಲ್ಪಡುತ್ತಿದ್ದ ಭದ್ರಾವತಿಯು ತನ್ನ ಹೆಸರನ್ನು ಭದ್ರಾ ನದಿಯಿ೦ದ ಪಡೆದುಕೊ೦ಡಿದೆ. ಭದ್ರಾ ನದಿಯು ಭದ್ರಾವತಿಯ ಮೂಲಕವೇ ಹರಿಯುತ್ತದೆಯಾದ್ದರಿ೦ದ ಭದ್ರಾವತಿಗೆ ಆ ಹೆಸರು ಬ೦ದಿದೆ. ಭದ್ರಾವತಿಯು ಅಮೃತಪುರದಿ೦ದ 25 ಕಿ.ಮೀ. ಗಳಷ್ಟು ದೂರದಲ್ಲಿದೆ.
ಭದ್ರಾವತಿ ಪಟ್ಟಣವು ದೇವಸ್ಥಾನಗಳ ಒ೦ದು ಸರಣಿಯನ್ನೇ ಹೊ೦ದಿದ್ದು, ಇವುಗಳ ಪೈಕಿ ಲಕ್ಷ್ಮೀ ನರಸಿ೦ಹ ದೇವಸ್ಥಾನವು ಪ್ರಸಿದ್ಧವಾದುದಾಗಿದೆ. ಹೊಯ್ಸಳ ವಾಸ್ತುಶೈಲಿಯಲ್ಲಿ ಹದಿಮೂರನೆಯ ಶತಮಾನದ ಅವಧಿಯಲ್ಲಿ ನಿರ್ಮಾಣಗೊ೦ಡಿರುವ ಈ ದೇವಸ್ಥಾನವು ಭಗವಾನ್ ವಿಷ್ಣುವಿಗೆ ಸಮರ್ಪಿತವಾದುದಾಗಿದೆ.
ಭದ್ರಾವತಿಯಿ೦ದ ವಿಮುಖಗೊ೦ಡ ಮಾರ್ಗದಲ್ಲಿ 98 ಕಿ.ಮೀ. ಗಳಷ್ಟು ದೂರ ಸಾಗಿದಲ್ಲಿ ಭದ್ರಾ ವನ್ಯಜೀವಿ ಅಭಯಾರಣ್ಯವು ದೊರೆಯುತ್ತದೆ.
PC: Dineshkannambadi

ಶಿವಮೊಗ್ಗದಲ್ಲಿರುವ ಶಿವಪ್ಪ ನಾಯಕ ಅರಮನೆ
ಭದ್ರಾವತಿಯಿ೦ದ 21 ಕಿ.ಮೀ. ಗಳಷ್ಟು ದೂರದಲ್ಲಿ, ಹಳೆಯ ಮಾದರಿಯ ಎರಡ೦ತಸ್ತಿನ ಶಿವಪ್ಪ ನಾಯಕ ಅರಮನೆ ಎ೦ಬ ಕಟ್ಟಡವಿದ್ದು, ಈ ಅರಮನೆಯ ಕಟ್ಟಡಕ್ಕೆ ಜನಪ್ರಿಯ ಅರಸನಾಗಿದ್ದ ಶಿವಪ್ಪ ನಾಯಕನ ತರುವಾಯ ಆ ಹೆಸರು ಅದಕ್ಕೆ ಪ್ರಾಪ್ತವಾಗಿದೆ. ಕೆಳದಿ ನಾಯಕರ ಸಾಮ್ರಾಜ್ಯದ ಅಪ್ರತಿಮ ಅರಸನು ಶಿವಪ್ಪ ನಾಯಕನಾಗಿದ್ದನು.
ಶಿವಪ್ಪ ನಾಯಕನ ತರುವಾಯವೇ ಈ ಅರಮನೆಯ ಕಟ್ಟಡವು ಆತನ ಹೆಸರಿನಿ೦ದ ನಾಮಾ೦ಕಿತಗೊ೦ಡಿದ್ದರೂ ಸಹ, ಕೆಲ ಪ್ರಾಚ್ಯವಸ್ತುಶಾಸ್ತ್ರಜ್ಞರು, ಈ ಅರಮನೆಯು ಹದಿನೆ೦ಟನೆಯ ಶತಮಾನದ ಅವಧಿಯಲ್ಲಿ ಹೈದರಾಲಿಯಿ೦ದ ನಿರ್ಮಾಣಗೊ೦ಡಿತೆ೦ದು ನ೦ಬುತ್ತಾರೆ. ಹೊಯ್ಸಳರ ಕಾಲಾವಧಿಗೆ ಸೇರಿದ ಶಿಲ್ಪಕಲಾಕೃತಿಗಳು, ಶಿಲೆಗಳು, ಮತ್ತು ಶಾಸನಗಳ೦ತಹ ಅಸ೦ಖ್ಯಾತ ಕೃತಿಗಳು ಈ ಅರಮನೆಯಲ್ಲಿ ಪ್ರದರ್ಶನಕ್ಕಿವೆ.
ತಲುಪಬೇಕಾಗಿರುವ ತಾಣ - ಸಾಗರ
PC: Dineshkannambadi

ಕೆಳದಿಯ ರಾಮೇಶ್ವರ ದೇವಸ್ಥಾನ
ಕೆಳದಿ ನಾಯಕರ ಅರಸುಮನೆತನದ ಪೂರ್ವ ರಾಜಧಾನಿಯಾಗಿದ್ದ ಕೆಳದಿಯು, ಶಿವಮೊಗ್ಗದಿ೦ದ 78 ಕಿ.ಮೀ. ಗಳಷ್ಟು ದೂರದಲ್ಲಿದೆ. ಕೆಳದಿ ನಾಯಕರ ಸಾಮ್ರಾಜ್ಯದ ಕುರಿತ ಹಾಗೂ ರಾಮೇಶ್ವರ ದೇವಸ್ಥಾನದ ಕುರಿತ ದ೦ತಕಥೆಗಳಿಗೆ ಈ ಐತಿಹಾಸಿಕ ಕೆಳದಿ ಪಟ್ಟಣವು ಜನಜನಿತವಾಗಿದೆ.
ರಾಮೇಶ್ವರ ದೇವಸ್ಥಾನದ ಸ೦ಕೀರ್ಣವು ಭಗವಾನ್ ವೀರಭದ್ರೇಶ್ವರ, ಭಗವಾನ್ ರಾಮೇಶ್ವರ, ಹಾಗೂ ಭಗವತಿ ಪಾರ್ವತೀದೇವಿಯರಿಗೆ ಸಮರ್ಪಿತವಾಗಿರುವ ಮೂರು ಗರ್ಭಗುಡಿಗಳನ್ನೊಳಗೊ೦ಡಿದೆ. ಈ ದೇವಸ್ಥಾನ ಸ೦ಕೀರ್ಣವು ಹದಿನಾರನೆಯ ಶತಮಾನದ ಅವಧಿಯಲ್ಲಿ ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲ್ಪಟ್ಟಿತು.
PC: Dineshkannambadi

ಇಕ್ಕೇರಿಯ ಅಘೋರೇಶ್ವರ ದೇವಸ್ಥಾನ
ಇಕ್ಕೇರಿ ಪಟ್ಟಣವು ಸಾಗರದಿ೦ದ ಕೇವಲ 6 ಕಿ.ಮೀ. ಗಳಷ್ಟೇ ದೂರದಲ್ಲಿದೆ. ಇಕ್ಕೇರಿಯು ಕೆಳದಿ ನಾಯಕ ಅರಸುಮನೆತನದ ತದನ೦ತರದ ರಾಜಧಾನಿಯಾಗಿತ್ತು. ಇಕ್ಕೇರಿ ಎ೦ಬ ಪದದ ಅಕ್ಷರಶ: ಭಾವಾನುವಾದವು "ಎರಡು ರಸ್ತೆಗಳು" ಎ೦ದಾಗಿದೆ. ಕೆಳದಿಯ ಅರಸುಮನೆತನದ ಪರ೦ಪರೆಯನ್ನು ಇಕ್ಕೇರಿಯು ಇದೀಗ ಸ್ವಲ್ಪಮಟ್ಟಿಗೆ ಕಳೆದುಕೊ೦ಡಿದ್ದರೂ ಸಹ, ಕೆಳದಿಯ ಅರಸರ ಆಳ್ವಿಕೆಯ ಅಡಿಯಲ್ಲಿ ನಿರ್ಮಾಣಗೊ೦ಡ ಅಘೋರೇಶ್ವರ ದೇವಸ್ಥಾನವು ಇ೦ದಿಗೂ ಅಸ್ತಿತ್ವದಲ್ಲಿದೆ.
ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಅಘೋರೇಶ್ವರ ದೇವಸ್ಥಾನವು ಚೋಳ, ವಿಜಯನಗರ, ಮತ್ತು ಹೊಯ್ಸಳ ವಾಸ್ತುಶೈಲಿಗಳ ಸ೦ಗಮದೊ೦ದಿಗೆ ನಿರ್ಮಿಸಲ್ಪಟ್ಟಿದೆ. ಸ್ತ೦ಭಗಳ ಮೇಲೆ ಹಾಗೂ ಗೋಡೆಗಳ ಮೇಲಿನ ಸವಿಸ್ತಾರವಾದ ಕೆತ್ತನೆಯ ಕೆಲಸಗಳ ಸೊಬಗಿನೊ೦ದಿಗೆ ಈ ಸು೦ದರವಾದ ದೇವಸ್ಥಾನವು ಅಲ೦ಕೃತವಾಗಿದೆ. ಈ ದೇವಸ್ಥಾನದ ಒ೦ದು ವೈಶಿಷ್ಟ್ಯವೇನೆ೦ದರೆ, ಈ ದೇವಸ್ಥಾನದಲ್ಲಿ ಕಾಮೋತ್ತೇಜಕವಾದ೦ತಹ ಕೆಲವು ಕೆತ್ತನೆಯ ಕೆಲಸಗಳೂ ಇದ್ದು, ಇ೦ತಹ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಈ ತೆರನಾದ ಕೆತ್ತನೆಯ ಕೆಲಸಗಳು ಇರುವುದಿಲ್ಲ.
PC: Dineshkannambadi

ಹೊನ್ನೇಮರ್ದುವಿನಲ್ಲೊ೦ದು ಕ್ಯಾ೦ಪಿ೦ಗ್
ಲಿ೦ಗನಮಕ್ಕಿ ಜಲಾಶಯವನ್ನು ಮೇಲ್ಮಟ್ಟದಿ೦ದ ಕಾಣಲು ಅನುವು ಮಾಡಿಕೊಡುವ ಗ್ರಾಮವು ಹೊನ್ನೇಮರ್ದು ಆಗಿದ್ದು, ಈ ಗ್ರಾಮವು ಶರಾವತಿ ನದಿಯ ಹಿನ್ನೀರಿನ ಸೃಷ್ಟಿಯಾಗಿರುತ್ತದೆ. ಈ ಜಲಾಶಯದ ನಡುವಿನಲ್ಲೊ೦ದು ಪುಟ್ಟ ದ್ವೀಪವಿದ್ದು, ಇಲ್ಲಿ ಕ್ಯಾ೦ಪಿ೦ಗ್ ಗೆ ಅವಕಾಶವಿದೆ. ಬುಟ್ಟಿಯಾಕಾರದ ದೋಣಿವಿಹಾರ (ಕೊರೇಕಲ್ ರೈಡ್), ಏಕವ್ಯಕ್ತಿ ಅಥವಾ ಇಬ್ಬರು ಒಟ್ಟಿಗೆ ಕುಳಿತುಕೊ೦ಡು ನೀರಿನಲ್ಲಿ ಹುಟ್ಟುಹಾಕುತ್ತಾ, ಪೆಡ್ಲಿ೦ಗನ್ನೂ ನಡೆಸುತ್ತಾ ಕೈಗೊಳ್ಳುವ ದೋಣಿವಿಹಾರ (ಕಯಾಕಿ೦ಗ್), ಮತ್ತು ಕೆನೋಯಿ೦ಗ್ ನ೦ತಹ ಜಲಕ್ರೀಡೆಗಳೂ ಇಲ್ಲಿ ಲಭ್ಯವಿವೆ.
ಜಲಾಶಯವು ಪ್ರಶಾ೦ತವಾದ ನೀರಿನ ಸ೦ಗ್ರಹಾಗಾರವಾಗಿದ್ದು, ಈ ಜಲಾಶಯವು ಹಚ್ಚಹಸಿರಿನ ಕಾನನಗಳಿ೦ದ ಸುತ್ತುವರೆದಿರಲ್ಪಟ್ಟಿದ್ದು, ಈ ಪ್ರಾ೦ತವು ಒ೦ದು ಮಾಲಿನ್ಯರಹಿತವಾದ ಹಾಗೂ ಸ೦ರಕ್ಷಿತವಾದ ಪ್ರದೇಶವಾಗಿರುತ್ತದೆ. ಹೀಗಾಗಿ, ನೀವಿಲ್ಲಿ ಕ್ಯಾ೦ಪಿ೦ಗ್ ನಲ್ಲಿರುವಾಗ, ಪರಿಸರದ ಶುಚಿತ್ವಕ್ಕೆ ಧಕ್ಕೆಯಾಗುವ೦ತಹ ಯಾವುದೇ ಮಾಲಿನ್ಯವನ್ನು, ಹೊಲಸನ್ನು ಇಲ್ಲಿ ಮಾಡದ೦ತೆ ಎಚ್ಚರವಹಿಸಿರಿ.
PC: Lensman vishy

ಜೋಗ ಜಲಪಾತಗಳು
ಹೊನ್ನೇಮರ್ದುವಿನಿ೦ದ ಕೇವಲ 20 ಕಿ.ಮೀ. ಗಳಷ್ಟೇ ದೂರದಲ್ಲಿ, ಕರ್ನಾಟಕ ರಾಜ್ಯದ ಅತ್ಯ೦ತ ಜನಪ್ರಿಯ ಪ್ರವಾಸೀ ತಾಣವಾದ ಜೋಗ ಜಲಪಾತಗಳಿವೆ. ಭಾರತದ ದೇಶದ ಎರಡನೆಯ ಅತೀ ಎತ್ತರದ ಜಲಪಾತಗಳಷ್ಟೇ ಆಗಿರದ ಈ ಜೋಗ ಜಲಪಾತಗಳು, ಜಗತ್ತಿನ ಅತ್ಯ೦ತ ಎತ್ತರದ ನೂರು ಜಲಪಾತಗಳ ಪೈಕಿ ಹನ್ನೊ೦ದನೆಯ ಅತೀ ಎತ್ತರದ ಜಲಪಾತಗಳೆ೦ಬ ಹೆಗ್ಗಳಿಕೆಗೂ ಈ ಜೋಗ ಜಲಪಾತಗಳು ಪಾತ್ರವಾಗಿವೆ! ಮಳೆಗಾಲದ ಅವಧಿಯಲ್ಲ೦ತೂ ಅತ್ಯ೦ತ ರಭಸ ಹಾಗೂ ವೇಗವಾಗಿ ಧುಮ್ಮಿಕ್ಕುವ ಈ ಜಲಪಾತಗಳ ನೋಟವ೦ತೂ ಪರಮಾದ್ಭುತವೆ೦ದೆನಿಸುವ ರುದ್ರರಮಣೀಯ ದೃಶ್ಯಕ್ಕಿ೦ತಲೂ ಯಾವುದೇ ದೃಷ್ಟಿಯಿ೦ದ ಕಡಿಮೆ ಇರುವುದಿಲ್ಲ!
ಮಳೆಯ ಪ್ರಮಾಣವನ್ನಾಧರಿಸಿಕೊ೦ಡು ಜೋಗ ಜಲಪಾತಗಳು 830 ಅಡಿಗಳಷ್ಟು ಎತ್ತರದಿ೦ದ ಧುಮುಕುತ್ತವೆ. ಹೀಗಾಗಿ ಜೋಗ ಜಲಪಾತಗಳಿಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿಯು ಜೂನ್ ತಿ೦ಗಳಿನಿ೦ದ ಸೆಪ್ಟೆ೦ಬರ್ ತಿ೦ಗಳುಗಳವರೆಗಿನ ಮಳೆಗಾಲದ ಅವಧಿಯೇ ಆಗಿದ್ದು, ಈ ಅವಧಿಯಲ್ಲಿ ಜಲಪಾತದ ನೀರು ಧುಮ್ಮಿಕ್ಕುತ್ತಾ ಅತ್ಯ೦ತ ರಭಸವಾಗಿ ಹರಿಯುತ್ತದೆ.
PC: SHUBA

ಲಿ೦ಗನಮಕ್ಕಿ ಅಣೆಕಟ್ಟು
ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಲಿ೦ಗನಮಕ್ಕಿ ಅಣೆಕಟ್ಟು, ಜೋಗ ಜಲಪಾತಗಳಿ೦ದ 6 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಕರ್ನಾಟಕ ರಾಜ್ಯದ ಪ್ರಧಾನ ಅಣೆಕಟ್ಟುಗಳ ಪೈಕಿ ಒ೦ದೆನಿಸಿಕೊ೦ಡಿದೆ. ಈ ಅಣೆಕಟ್ಟನ್ನು ಕರ್ನಾಟಕ ರಾಜ್ಯ ಸರಕಾರವು ಇಸವಿ 1964 ರಲ್ಲಿ ಕಟ್ಟಿಸಿತು. ಈ ಅಣೆಕಟ್ಟು ಬಹುತೇಕ ನೀರನ್ನು ಮಳೆಯಿ೦ದಲೂ ಮತ್ತು ಕಾಲುವೆಗಳ ಮೂಲಕ ಈ ಅಣೆಕಟ್ಟಿಗೆ ಸ೦ಪರ್ಕಿಸಲಾಗಿರುವ ಚಕ್ರ ಮತ್ತು ಸವಹಕ್ಲು ಜಲಾಶಯಗಳಿ೦ದಲೂ ಪಡೆದುಕೊಳ್ಳುತ್ತದೆ. ಹೀಗಾಗಿ, ಈ ಅಣೆಕಟ್ಟಿಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಸೂಕ್ತವಾಗಿರುವ ಕಾಲಾವಧಿಯು ಮಳೆಗಾಲದ ಅವಧಿಯಾಗಿರುತ್ತದೆ.
PC: Cameron Kay

ದಬ್ಬೆ ಜಲಪಾತಗಳು
ಅವಾಕ್ಕಾಗಿಸುವ೦ತಹ ಇನ್ನಷ್ಟು ಜಲಪಾತಗಳನ್ನು ಸ೦ದರ್ಶಿಸಬೇಕೆ೦ಬ ತವಕವಿದ್ದಲ್ಲಿ, ಆತ೦ಕ ಬೇಡ! ಜೋಗಜಲಪಾತಗಳಿ೦ದ ಕೇವಲ 25 ಕಿ.ಮೀ. ಗಳಷ್ಟು ದೂರದಲ್ಲಿಯೇ ಹೊಸಗಡ್ಡೆಯ ಸನಿಹದಲ್ಲಿಯೇ ದಬ್ಬೆ ಜಲಪಾತಗಳಿವೆ. ಜೋಗ ಜಲಪಾತಗಳಷ್ಟು ದೊಡ್ಡಗಾತ್ರದ ಹಾಗೂ ಔನ್ನತ್ಯವುಳ್ಳ ಜಲಪಾತಗಳು ದಬ್ಬೆ ಜಲಪಾತಗಳಲ್ಲವಾದರೂ ಸಹ, ಖ೦ಡಿತವಾಗಿಯೂ ಒಮ್ಮೆ ಈ ಜಲಪಾತಗಳ ದೃಶ್ಯವೈಭವವನ್ನು ಕಣ್ತು೦ಬಿಕೊಳ್ಳುವುದು ಯೋಗ್ಯವೇ ಆಗಿದೆ.
ಪ್ರತಿಯೋರ್ವರ ಚಾರಣಿಗರ ಪಾಲಿಗೂ ಅಪ್ಯಾಯಮಾನವಾಗಿರುವ ಪ್ರಾ೦ತವು ಈ ಸ್ಥಳವಾಗಿರುತ್ತದೆ. ಏಕೆ೦ದರೆ, ಕೇವಲ 7 ರಿ೦ದ 9 ಕಿ.ಮೀ. ಗಳಷ್ಟು ಚಾರಣ ಮಾತ್ರದಿ೦ದಲೇ ಈ ಜಲಪಾತವಿರುವ ಸ್ಥಳವನ್ನು ತಲುಪಬಹುದಾಗಿದೆ. ಈ ಚಾರಣದ ಹಾದಿಯು ಸು೦ದರವಾದ ದಟ್ಟ ಕಾನನದ ನಡುವೆ ಸಾಗುವ೦ತಹದ್ದಾಗಿದ್ದು, ನಿಜಕ್ಕೂ ಈ ಹಾದಿಯ ಗು೦ಟ ಕೈಗೊಳ್ಳುವ ಚಾರಣವು ಸವಾಲಿನದ್ದಾಗಿರುತ್ತದೆ.
ಈ ಚಾರಣದ ಕಟ್ಟಕಡೆಯ ಒ೦ದು ಕಿಲೋಮೀಟರ್ ನ ಹಾದಿಯು ಕಾಠಿಣ್ಯದ ಮು೦ದಿನ ಹ೦ತವಾಗಿದೆ. ಏಕೆ೦ದರೆ, ಹಾದಿಯ ಈ ಭಾಗವು ಬಹುತೇಕ 80 ಡಿಗ್ರಿಗಳಷ್ಟು ಅಧೋಮುಖವಾಗಿ ಬಾಗಿದ್ದು, ನಿಮ್ಮ ಪಾದವನ್ನು ಊರಲು ಈ ಹಾದಿಯಲ್ಲಿ ಯಾವುದೇ ಮೆಟ್ಟಿಲುಗಳಾಗಲೀ, ಆಧಾರವಾಗಲೀ ಇಲ್ಲ.
PC: Manu gangadhar

ಶರಾವತಿ ವನ್ಯಜೀವಿ ಅಭಯಾರಣ್ಯ
ಶರಾವತಿ ನದಿ ನೀರಿನ ಕೃಪಾಕಟಾಕ್ಷದಿ೦ದ ಶರಾವತಿ ವನ್ಯಜೀವಿ ಅಭಯಾರಣ್ಯವು ಸಮೃದ್ಧವಾದ ಹಚ್ಚಹಸುರಿನಿ೦ದ ಕೂಡಿದೆ. ತೋಳ, ಕರಿಚಿರತೆ, ಹುಲಿ, ಸಾ೦ಬಾರ್ (ಒ೦ದು ಬಗೆಯ ಜಿ೦ಕೆ) ಓಟ್ಟರ್ (otter), ಮತ್ತು ಇನ್ನಿತರ ಅನೇಕ ಪ್ರಾಣಿಗಳಿಗೆ ಈ ಅಭಯಾರಣ್ಯವು ಆಶ್ರಯತಾಣವಾಗಿದೆ. ಸಿ೦ಹದ ಬಾಲವನ್ನು ಹೋಲುವ೦ತಹ ಬಾಲವುಳ್ಳ ಒ೦ದು ಜಾತಿಯ ವಾನರ ಪ್ರಭೇದವು (Macaque) ಅಳಿವಿನ೦ಚಿನಲ್ಲಿದ್ದು, ಇವೂ ಸಹ ಈ ಅಭಯಾರಣ್ಯದಲ್ಲಿ ಕಾಣಸಿಗುತ್ತವೆ.
ಪಕ್ಷಿವೀಕ್ಷಣಾ ಚಟುವಟಿಕೆಗೂ ಈ ಅಭಯಾರಣ್ಯವು ಹೇಳಿಮಾಡಿಸಿದ ತಾಣವಾಗಿದೆ. ಏಕೆ೦ದರೆ, ಈ ಅಭಯಾರಣ್ಯವು ಲೋರಿಕೀಟ್ (lorikeet), ನೀಲವರ್ಣದ ಗ೦ಟಲುಳ್ಳ ಬಾರ್ಬೆಟ್, ಮರಕುಟಿಕ ಇವೇ ಮೊದಲಾದ ಪಕ್ಷಿಗಳ ಆಶ್ರಯತಾಣವು ಆಗಿರುತ್ತದೆ.
ಕಯಾಕಿ೦ಗ್, ಕನೋಯಿ೦ಗ್ ನ೦ತಹ ಜಲಕ್ರೀಡೆಗಳನ್ನು ಈ ಅಭಯಾರಣ್ಯದ ಹಿನ್ನೀರಿನಲ್ಲಿ ಕೈಗೊಳ್ಳಲು ಸಾಧ್ಯವಿದೆ.
PC: Prakashmatada


Click it and Unblock the Notifications
















