Search
  • Follow NativePlanet
Share
» »ಭಾರತದ ಅತಿ ಸುಂದರ ರೈಲು ಮಾರ್ಗಗಳು

ಭಾರತದ ಅತಿ ಸುಂದರ ರೈಲು ಮಾರ್ಗಗಳು

By Vijay

ನಮ್ಮಲ್ಲಿ ಹಲವರು ರೈಲಿನ ಅಭಿಮಾನಿಗಳು. ಅದು ಚಲಿಸುತ್ತಿರುವುದನ್ನು ನೋಡುವುದಾಗಲಿ ಅಥವಾ ಅವುಗಳಲ್ಲಿ ಪ್ರಯಾಣ ಮಾಡುವುದಾಗಲಿ ಅವರಿಗೆ ತುಂಬ ಇಷ್ಟ ಅಥವಾ ನೆಚ್ಚಿನ ಹವ್ಯಾಸ. ರೈಲುಗಳಿಗೆಂದೆ ಪ್ರತ್ಯೇಕವಾದ ರಾಜ್ಯ ಮುಂಗಡ ಪತ್ರ ಅಥವಾ ಬಜೆಟ್ ಮಂಡಿಸುವ ಭಾರತದ ಸಮೇತ ಕೇವಲ ಕೆಲೆವೆ ಕೆಲವು ರಾಷ್ಟ್ರಗಳನ್ನು ಜಗತ್ತಿನಲ್ಲಿ ಕಾಣಬಹುದು. ಮೂರು ಕೋಟಿಯಷ್ಟು ಜನರನ್ನು ಹೊತ್ತೊಯ್ಯುವ, ಭಾರತದಲ್ಲೆ ಸುಮಾರು 65,000 ಕಿ.ಮೀ ಗಳಷ್ಟು ಚಲಿಸುವ ಭಾರತೀಯ ರೈಲು ವಿಶ್ವದ ಅಗ್ರಗಣ್ಯ ರೈಲುಗಳ ಪೈಕಿ ಒಂದಾಗಿದೆ.

ರೈಲು ಪ್ರಯಾಣವೆ ಹಾಗೆ. ಬೆಟ್ಟ ಗುಡ್ಡಗಳ ನಡುವೆ, ನದಿ, ಹಳ್ಳ ಕೊಳ್ಳಗಳ ಪಕ್ಕ, ಕಾಡಿನ ಮಧ್ಯದಲ್ಲಿ, ಘಟ್ಟ ಪ್ರದೇಶಗಳಲ್ಲಿ, ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಹಳಿಗಳ ಮೇಲೆ ಸರಾಗವಾಗಿ ಸಾಗುತ್ತ ಪ್ರಕೃತಿಯ ಸೊಬಗನ್ನು, ಗಂಭೀರತೆಯನ್ನು, ರುದ್ರಮಯ ನೋಟವನ್ನು ರೈಲು ಪ್ರಯಾಣವು ಅತಿ ಹತ್ತಿರದಿಂದ ಒದಗಿಸುತ್ತದೆ. ಇಂತಹ ನೋಟಗಳು ಬಸ್ಸು ಅಥವಾ ಇತರೆ ವಾಹನಗಳಲ್ಲಿ ಸಂಚರಿಸುವಾಗ ಸಿಗುವುದು ಅತಿ ಕಷ್ಟ ಅಥವಾ ಅಸಾಧ್ಯವಾದುದರಿಂದ ಬಹು ಜನರಿಗೆ ಅದರಲ್ಲೂ ಪ್ರಕೃತಿ ಪ್ರಿಯರಿಗೆ ರೈಲು ಪ್ರಯಾಣವು ಮನಸ್ಸಿಗೆ ಮುದ ನೀಡುತ್ತದೆ.

ಪ್ರಸ್ತುತ, ಭಾರತದಲ್ಲಿ ಅಸಂಖ್ಯಾತ ರೈಲು ಮಾರ್ಗಗಳಿವೆ. ಪ್ರತಿಯೊಂದು ರೈಲು ಮಾರ್ಗಗಳು ತಮ್ಮದೆ ಆದ ವಿಶೀಷ್ಟತೆಯಿಂದ ಕೂಡಿರುವುದು ಸತ್ಯ. ಈ ಲೇಖನದಲ್ಲಿ ಭಾರತದಲ್ಲಿ ಕಂಡುಬರುವ ಕೆಲವು ಅತಿ ಸುಂದರ ರೈಲು ಮಾರ್ಗಗಳ ಪರಿಚಯ ಮಾಡಲು ಯತ್ನಿಸಲಾಗಿದೆ. ಇವುಗಳಲ್ಲದೆ ಇನ್ನೂ ಹಲವು ಸುಂದರ ರೈಲು ಮಾರ್ಗಗಳೂ ಇರಬಹುದು. ಆದರೆ ಇಲ್ಲಿ ಪ್ರಸ್ತುತಪಡಿಸಲಾದ ರೈಲು ಮಾರ್ಗಗಳಲ್ಲಿ ಒಮ್ಮೆ ಪ್ರಯಾಣಿಸಿದರೆ ನಿಮಗಾಗುವ ಆನಂದ ಅಷ್ಟಿಷ್ಟಲ್ಲ.

ಸೂಚನೆ: ಇಲ್ಲಿ ಪ್ರಸ್ತುತಪಡಿಸಲಾದ ಮಾರ್ಗಗಳಲ್ಲಿ ಕೆಲವು ಪ್ರಕೃತಿ ವೈಪರಿತ್ಯದಿಂದಲೊ ಅಥವಾ ಇನ್ನಿತರ ಕಾರಣಗಳಿಂದಲೊ ಒಮ್ಮೊಮ್ಮೆ ಮುಚ್ಚಲ್ಪಟ್ಟಿರುತ್ತದೆ. ಆದ ಕಾರಣ, ನೀವೇನಾದರೂ ಈ ಮಾರ್ಗಗಳಲ್ಲಿ ಪ್ರಯಾಣ ಮಾಡಲು ಬಯಸಿದ್ದಲ್ಲಿ ಹೊರಡುವ ಮುನ್ನ ಆ ಮಾರ್ಗದಲ್ಲಿ ರೈಲುಗಳ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳುವುದು ಸಮಂಜಸ.

ನಿಲ್ಗಿರಿ ಮೌಂಟೆನ್ ರೈಲ್ವೆ:

ನಿಲ್ಗಿರಿ ಮೌಂಟೆನ್ ರೈಲ್ವೆ:

ಮೇಟ್ಟುಪಾಳಯಂ ನಿಂದ ಊಟಿಯವರೆಗೆ ಸಾಗುವ ನಿಲ್ಗಿರಿ ಮೌಂಟೆನ್ ರೈಲು ಪ್ರಯಾಣವು ನಿಮ್ಮ ಮನದಲ್ಲಿ ಸದಾ ಹಸಿರಾಗಿ ಉಳಿಯುವಂತೆ ಮಾಡುತ್ತದೆ. 110 ವರ್ಷಗಳಿಂದಲೂ ಲವಲವಿಕೆಯಿಂದ ಚಲಿಸುವ ಈ ರೈಲು ಉಗಿಬಂಡೆಯನ್ನು ಹೊಂದಿದ್ದು 46 ಕಿ.ಮೀ ಗಳ ಪ್ರಯಾಣವನ್ನು ನಾಲ್ಕುವರೆ ಘಂಟೆಗಳಲ್ಲಿ ಪೂರ್ಣಗೊಳಿಸುತ್ತದೆ.

Stephan Niew

ದಾರ್ಜೀಲಿಂಗ್ ಹಿಮಾಲಯನ್ ರೈಲು:

ದಾರ್ಜೀಲಿಂಗ್ ಹಿಮಾಲಯನ್ ರೈಲು:

ಮೌಂಟೆನ್ ರೈಲುಗಳ ಪೈಕಿ ಅತಿ ಹಳೆಯದಾದ ಈ ಟಾಯ್ ಟ್ರೈನ್ ದಾರ್ಜೀಲಿಂಗಿನ ಒಂದು ಪ್ರಮುಖ ಆಕರ್ಷಣೆ. 1999 ರಲ್ಲಿ ಉನೆಸ್ಕೊದಿಂದ ಇದು ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆಯಿತು. ಹಲವು ಸುರುಳಿಗಳ ಮಾರ್ಗವನ್ನು ಹೊಂದಿರುವ ಈ ರೈಲು ದಾರ್ಜೀಲಿಂಗ್ ಮತ್ತು ಹೊಸ ಜಲ್ಪೈಗುರಿಯ ಮಧ್ಯೆ ಸಂಚರಿಸುತ್ತದೆ. ಇದರ ಸುರುಳಿ ಮಾರ್ಗಗಳಲ್ಲಿ ಬತಾಸಿಯಾ ಸುರುಳಿ ಮಾರ್ಗವು ಜನಪ್ರಿಯವಾಗಿದ್ದು ಇಲ್ಲಿಂದ ಹಿಮಚ್ಛಾದಿತ ಕಂಚನ್ ಜುಂಗಾ ಪರ್ವತ ಹಾಗು ದಾರ್ಜೀಲಿಂಗ್ ಪಟ್ಟಣದ ವಿಹಂಗಮ ನೋಟವನ್ನು ಸವಿಯಬಹುದು.

ಚಿತ್ರಕೃಪೆ: Golf Bravo

ಹಿಮದ ಪ್ರವಾಸ (ಕಾಜಿಗುಂಡ್ - ಶ್ರೀನಗರ - ಬಾರಾಮುಲ್ಲಾ)

ಹಿಮದ ಪ್ರವಾಸ (ಕಾಜಿಗುಂಡ್ - ಶ್ರೀನಗರ - ಬಾರಾಮುಲ್ಲಾ)

ಕಾಶ್ಮೀರ ರೈಲಿನ ಭಾಗವಾಗಿರುವ ಈ ರೈಲು ಕಾಜಿಗುಂಡ್, ಶ್ರೀನಗರ ಹಾಗು ಬಾರಾಮುಲ್ಲಾಗಳ ಮಧ್ಯೆ ಸಂಚರಿಸುತ್ತದೆ. ಚಳಿಗಾಲದ ಸಮಯವು ಈ ರೈಲಿನ ಪ್ರಯಾಣಕ್ಕೆ ಅನುಕೂಲಕರವಾಗಿದ್ದು ಸುತ್ತಲಿನ ಸುಮಧುರವಾದ ಹಿಮದಿಂದ ನಳನಳಿಸುತ್ತಿರುವ ಪ್ರಕೃತಿಯ ಆನಂದವನ್ನು ಪಡೆಯಬಹುದು.

ಚಿತ್ರಕೃಪೆ: Amareshwara Sainadh

ಸಮುದ್ರ ಸೇತುವೆ (ಮಂಡಪಂ - ಪಂಬನ್ - ರಾಮೇಶ್ವರಂ)

ಸಮುದ್ರ ಸೇತುವೆ (ಮಂಡಪಂ - ಪಂಬನ್ - ರಾಮೇಶ್ವರಂ)

ತಮಿಳುನಾಡಿನ ಮಂಡಪಂ ನಿಂದ ಪಂಬನ್ ದ್ವೀಪಕ್ಕೆ ಸಂಪರ್ಕ ಕಲ್ಪಿಸುವ ಈ ರೈಲು ಭಾರತದ ಎರಡನೆಯ ಅತಿ ಉದ್ದದ ಸಮುದ್ರ ಸೇತುವೆಯ ರೈಲು ಮಾರ್ಗವಾಗಿದೆ. ಎರಡೂ ಬದಿಗಳಲ್ಲಿ ವಿಶಾಲ ಸಮುದ್ರದವನ್ನು ನೋಡುತ್ತಾ ಸಾಗುವಾಗ ಮೈಮನಗಳಲ್ಲಿ ರೋಮಾಂಚನವಾಗದೆ ಇರಲಾರದು.

ಚಿತ್ರಕೃಪೆ: Tracy Hunter

ಅರಕು ಕಣಿವೆ ರೈಲು (ವೈಜಾಗ್ - ಅರಕು)

ಅರಕು ಕಣಿವೆ ರೈಲು (ವೈಜಾಗ್ - ಅರಕು)

ಅರಕುಕಣಿವೆ ಆಂಧ್ರದಲ್ಲಿರುವ ಏಕೈಕ ಪ್ರಕೃತಿ ವೈಭವದ ಗಮ್ಯ ತಾಣವಾಗಿದೆ. ನಿರ್ಮಲವಾದ ಪರಿಸರ, ಹಿತಕರ ವಾತಾವರಣ, ಸುವಾಸನೆ ಭರಿತ ಕಾಫಿ ತೋಟಗಳು, ಹಚ್ಚ ಹಸಿರಿನ ಬೆಟ್ಟಗುಡ್ಡಗಳು ಎಲ್ಲವೂ ಸೇರಿ ಈ ಗಿರಿಧಾಮವನ್ನು ಒಂದು ಪ್ರಭುದ್ಧ ಪ್ರವಾಸಿ ತಾಣವನ್ನಾಗಿ ಮಾಡಿವೆ. ವಿಶಾಖಪಟ್ಟಣಂ (ವೈಜಾಗ್) ಹಾಗು ಅರಕುಗಳ ಮಧ್ಯೆ ಸಂಚರಿಸುವ ಈ ರೈಲು ಮಾರ್ಗವು ಹಲವು ಗುಹೆಗಳು ಹಾಗು ಸುಂದರ ಜಲಪಾತಗಳ ಮೂಲಕ ಹಾದು ಹೋಗುತ್ತದೆ.

ಚಿತ್ರಕೃಪೆ: Meetteju

ಒಡಿಶಾದ ವೈಭವ (ಕೋರಾಪುತ್ - ರಾಯಗಡ)

ಒಡಿಶಾದ ವೈಭವ (ಕೋರಾಪುತ್ - ರಾಯಗಡ)

ಕೆ.ಆರ್ ಮಾರ್ಗವೆಂದೆ ಜನಪ್ರಿಯವಾಗಿರುವ ಈ ಕೋರಾಪುತ್ - ರಾಯಗಡ ರೈಲು ಮಾರ್ಗವು ಸಮುದ್ರಮಟ್ಟದಿಂದ 800 ಮೀ ಎತ್ತರದಲ್ಲಿದ್ದು, ರಾಯಗಡ ತಲುಪುವವರೆಗೂ 200 ಮೀ ಆಳದ ಪ್ರದೇಶದ ಮೂಲಕ ಸಾಗುತ್ತ ಒಂದು ಅದ್ಭುತವಾದ ಅನುಭವವನ್ನು ನೀಡುತ್ತದೆ.

ಚಿತ್ರಕೃಪೆ: Viswa Chandra

ಕಾಂಗ್ರಾ ಕಣಿವೆ (ಪಠಾನ್‍ಕೋಟ್ - ಕಾಂಗ್ರಾ - ಪಾಲಂಪುರ್)

ಕಾಂಗ್ರಾ ಕಣಿವೆ (ಪಠಾನ್‍ಕೋಟ್ - ಕಾಂಗ್ರಾ - ಪಾಲಂಪುರ್)

ಪಠಾನ್‍ಕೋಟ್, ಕಾಂಗ್ರಾ ಹಾಗು ಪಾಲಂಪುರ್ ಗಳ ಮಧ್ಯೆ ಸಂಚರಿಸುವ ಈ ರೈಲು ಉಫಿಮಾಲಯ ಪ್ರದೇಶದ ಹಿಮಾಚಲ ಪ್ರದೇಶ ರಾಜ್ಯದ ಭಾಗವಾಗಿದೆ. ಹಲವು ನದಿಗಳು, ಕ್ಲಿಷ್ಟಕರ ಮಾರ್ಗಗಳು ಹಾಗು ಕಣಿವೆಗಳ ಮೂಲಕ ಈ ಚಲಿಸುವ ಈ ರೈಲು ದೌಲಾಧರ್ ಹಿಮಚ್ಛಾದಿತ ಪರ್ವತ ಶ್ರೇಣಿಗಳ ಅನನ್ಯ ನೋಟವನ್ನು ಒದಗಿಸುತ್ತದೆ.

ಚಿತ್ರಕೃಪೆ: Vikasjariyal

ಕಾಶ್ಮೀರ ರೈಲು (ಜಮ್ಮು - ಉಧಂಪುರ್)

ಕಾಶ್ಮೀರ ರೈಲು (ಜಮ್ಮು - ಉಧಂಪುರ್)

ಕಾಶ್ಮೀರ ರೈಲು, ರೈಲ್ವೆ ಇಂಜಿನಿಯರುಗಳಿಗೆ ಬೆವರಿಳಿಸಿದಂತಹ ಒಂದು ಪ್ರಮುಖ ರೈಲು ಮಾರ್ಗ ಯೋಜನೆಯಾಗಿದೆ. ಅತಿಶಯವಾದ ಚಳಿ, ಅಹಿತಕರವಾದ ವಾತವರಣ, ಉಬ್ಬು ತೆಗ್ಗಿನ ಪ್ರದೇಶಗಳು ಈ ರೈಲು ಮಾರ್ಗದ ಯೋಜನೆಯಲ್ಲಿ ಪ್ರಮುಖವಾಗಿ ಸವಾಲೆಸೆದ ಅಂಶಗಳು. ಆದರೆ ಅಷ್ಟೆ ಪರಿಣಾಮಕಾರಿಯಾದ ಪ್ರಕೃತಿಯ ವಿವಿಧ ಚಿತ್ತಾರಗಳನ್ನು ಜಮ್ಮುವಿನಿಂದ ಉಧಂಪುರಿನ ವರೆಗೆ ಚಲಿಸುವ ಈ ರೈಲಿನಲ್ಲಿ ಸಂತೃಪ್ತವಾಗಿ ಪಡೆಯಬಹುದು.

ಕೊಂಕಣ ರೈಲು ಮಾರ್ಗ

ಕೊಂಕಣ ರೈಲು ಮಾರ್ಗ

ಕೊಂಕಣ ರೈಲು ಮಾರ್ಗ ತಾಂತ್ರಿಕತೆಯ ದೃಷ್ಟಿಯಿಂದ ಈ ಒಂದು ರೈಲು ಮಾರ್ಗದ ನಿರ್ಮಾಣವು ದೊಡ್ಡ ಸವಾಲೇ ಆಗಿತ್ತು. ಆದ್ದರಿಂದ ಕೊಂಕಣ ಭಾಗದ ಜನರಿಗೆ ಇದೊಂದು ಹೆಮ್ಮೆಯ ಸಂಕೇತ. ಇನ್ನು ಈ ರೈಲು ಮಾರ್ಗವು ಮಂಗಳೂರು ಬಳಿಯ ತೋಕೂರುವಿನಿಂದ ಪ್ರಾರಂಭವಾಗಿ ಮಹಾರಾಷ್ಟ್ರದ ರೋಹಾವರೆಗೆ ತಲುಪುತ್ತದೆ. ಈ ರೈಲು ಮಾರ್ಗದ ಒಟ್ಟಾರೆ ಉದ್ದ 760 ಕಿ.ಮೀ. ಒಟ್ಟು ನಿಲ್ದಾಣಗಳು 59. ಮಾರ್ಗದಲ್ಲಿ ಬರುವ ದೊಡ್ಡ ಸೇತುವೆಗಳು 179. ಕರ್ನಾಟಕ, ಗೋವಾ ಹಾಗು ಮಹಾರಾಷ್ಟ್ರ ಈ ಮೂರು ರಾಜ್ಯಗಳ ಕಡಲ ಪಟಣಗಳಗುಂಟ ಈ ರೈಲಿನಲ್ಲಿ ಸಾಗುತ್ತಾ ಹೋಗುವುದೆ ಒಂದು ಅದ್ಭುತವಾದ ಅನುಭವ.

ಚಿತ್ರಕೃಪೆ: Vinayaraj

ಗೋವಾ ಸೆಳೆತ (ವಾಸ್ಕೊ ಡಾ ಗಾಮಾ - ಲೊಂಡಾ)

ಗೋವಾ ಸೆಳೆತ (ವಾಸ್ಕೊ ಡಾ ಗಾಮಾ - ಲೊಂಡಾ)

ಮೊದಲಿನಿಂದಲೂ ಗೋವಾ ಜನಪ್ರಿಯವಾಗಿರುವುದು ತನ್ನಲ್ಲಿರುವ ಸುಪ್ರಸಿದ್ಧ ಕಡಲ ತೀರಗಳಿಂದ. ಆದರೆ ಬಹು ಜನರಿಗೆ ಗೊತ್ತಿರಲಾರದ ಒಂದು ಅಂಶವೆಂದರೆ ಗೋವಾದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಹಳ್ಳಿಗಳು, ಪ್ರಾಕೃತಿಕ ನೋಟಗಳು ಒಂದು ವಿಶೀಷ್ಟ ಅನುಭವವನ್ನು ನೀಡುತ್ತವೆ. ವಾಸ್ಕೊ ಡಾ ಗಾಮಾ ದಿಂದ ಬೆಳಗಾವಿ ಬಳಿಯಿರುವ ಲೊಂಡಾದ ವರೆಗೆ ಚಲಿಸುವ ರೈಲು ಹಲವು ಕಡಲ ತೀರಗಳ, ಪಶ್ಚಿಮ ಘಟ್ಟಗಳ ಉತ್ತಮ ನೋಟಗಳನ್ನು ಮಾತ್ರವಲ್ಲದೆ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವ ದೂಧ್ ಸಾಗರ್ ಜಲಪಾತದ ರುದ್ರರಮಣೀಯ ನೋಟವನ್ನು ಒದಗಿಸುತ್ತದೆ.

ಚಿತ್ರಕೃಪೆ: Purshi

ಹಿಮಾಲಯನ್ ಕ್ವೀನ್ (ಕಲ್ಕಾ - ಶಿಮ್ಲಾ)

ಹಿಮಾಲಯನ್ ಕ್ವೀನ್ (ಕಲ್ಕಾ - ಶಿಮ್ಲಾ)

ನಿರಂತರವಾಗಿ ಚಲಿಸುವ ಮೌಂಟೆನ್ ರೈಲು ಇದಾಗಿದೆ. ಅಷ್ಟೆ ಅಲ್ಲ, 96 ಕಿ.ಮೀ ಗಳ ಪ್ರಯಾಣದಲ್ಲಿ ಅತಿ ಎತ್ತರದ ಪ್ರದೇಶಕ್ಕೆ ಚಲಿಸುವ ದಾಖಲೆಯನ್ನು ಗಿನ್ನಿಸ್ ಬುಕ್ ನಲ್ಲಿ ಪಡೆದುಕೊಂಡಿದೆ ಈ ರೈಲು. ತನ್ನ ಒಟ್ಟಾರೆ ಪ್ರಯಾಣದಲ್ಲಿ 102 ಟನೆಲ್ ಹಾಗು 864 ಸೇತುವೆಗಳ ಮೂಲಕ ಇದು ಸಾಗುತ್ತದೆ.

ಚಿತ್ರಕೃಪೆ: Raghavan V

ಮಾಥೇರಾನ್ ಹಿಲ್ ರೈಲ್ವೆ

ಮಾಥೇರಾನ್ ಹಿಲ್ ರೈಲ್ವೆ

ಮುಂಬೈನ ಜನರು ವಾರಾಂತ್ಯದ ರಜಾ ದಿನಗಳನ್ನು ಕಳೆಯಬಯಸುವ ಪ್ರಸಿದ್ಧ ಗಿರಿ ಪ್ರದೇಶ ಮಾಥೇರಾನ್. ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ನೆಲೆಸಿರುವ ಈ ಪ್ರದೇಶ ಅದ್ಭುತವಾದ ನಿಸರ್ಗ ಸೌಂದರ್ಯವನ್ನು ಹೊಂದಿದೆ. ಇದು ಮಹಾರಾಷ್ಟ್ರದ ಏಕೈಕ ಹೆರಿಟೆಜ್ ರೈಲಾಗಿದ್ದು ನೇರಲ್ ಹಾಗು ಮಾಥೇರಾನ್ ಮಧ್ಯ ಸಂಚರಿಸುತ್ತದೆ.

ಚಿತ್ರಕೃಪೆ: Amboein

ಡುವರ್ಸ್ ವೊಯೇಜ್ (ಸಿಲಿಗುರಿ - ನಿವ್ ಮಾಲ್ - ಹಸಿಮಾರಾ)

ಡುವರ್ಸ್ ವೊಯೇಜ್ (ಸಿಲಿಗುರಿ - ನಿವ್ ಮಾಲ್ - ಹಸಿಮಾರಾ)

ದಟ್ಟ ಕಾಡುಗಳು, ಝುಳು ಝುಳು ಹರಿಯುವ ತೊರೆಗಳು, ತೀಸ್ತಾ ನದಿಯ ವಿಹಂಗಮ ನೋಟ ಎಲ್ಲವನ್ನು ಸವಿಯಬಹುದು ಈ ರೈಲು ಮಾರ್ಗದಲ್ಲಿ.

ಚಿತ್ರಕೃಪೆ: Sarbamit Chowdhury

ಆಸ್ಸಾಮಿನ ಸ್ವಾದ (ಗುವಾಹಟಿ - ಲುಮ್ಡಿಂಗ್ - ಸಿಲ್ಚರ್ )

ಆಸ್ಸಾಮಿನ ಸ್ವಾದ (ಗುವಾಹಟಿ - ಲುಮ್ಡಿಂಗ್ - ಸಿಲ್ಚರ್ )

ಈ ರೈಲಿನಲ್ಲಿ ಚಲಿಸುವಾಗ ಅಸ್ಸಾಮಿನ ಚಹಾ ತೋಟಗಳ ಸುವಾಸನೆಯು ನಿಮ್ಮ ಮೈಮನಗಳಲ್ಲಿ ಪಸುರುವುದು ಖಂಡಿತ. ಜತಿಂಗಾ ನದಿ, ಬರಾಕ್ ಕಣಿವೆಯ ಮೂಲಕ ಸಾಗುವ ಈ ರೈಲು ಈಶಾನ್ಯ ಭಾರತದ ದೊಡ್ಡ ನಗರ ಅಗರ್ತಲಾವನ್ನೂ ಸಂಪರ್ಕಿಸುತ್ತದೆ.

ಚಿತ್ರಕೃಪೆ: Vikramjit Kakati

ಮಲೆನಾಡಿನ ಜಾದು (ಹಾಸನ - ಮಂಗಳೂರು)

ಮಲೆನಾಡಿನ ಜಾದು (ಹಾಸನ - ಮಂಗಳೂರು)

ಹಾಸನ ಹಾಗು ಮಂಗಳೂರು ಮಧ್ಯದ ಈ ರೈಲು ಮಾರ್ಗವು ಸ್ವಚ್ಛಂದವಾಗಿ ಬೆಳೆದ ಹಸಿರುಮಯ ಹೊಲ ಗದ್ದೆಗಳು, ಪ್ರತಿಯೊಂದು ಹಂತದಲ್ಲೂ ನಿಮ್ಮನ್ನು ಸ್ವಾಗತಿಸುತ್ತಿರುವ ಹಾಗೆ ಗೋಚರಿಸುವ ಅಡಿಕೆ ಮರಗಳ ಮೂಲಕ ಸಾಗುತ್ತದೆ. ಅದರಲ್ಲೂ ವಿಶೇಷವಾಗಿ ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯದವರೆಗಿರುವ ಹಸಿರು ಪಥ ಅಥವಾ ಮಾರ್ಗವು ಒಂದು ಉತ್ಕೃಷ್ಟವಾದ ಅನುಭವವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ.

ಪಶ್ಚಿಮ ಘಟ್ಟದ ಮೋಡಿ (ಕರ್ಜಾತ್ - ಲೋನಾವಲಾ)

ಪಶ್ಚಿಮ ಘಟ್ಟದ ಮೋಡಿ (ಕರ್ಜಾತ್ - ಲೋನಾವಲಾ)

ಮಹಾರಾಷ್ಟ್ರದ ಕರ್ಜಾತ್ ನಿಂದ ಲೋನಾವಲಾ ತಲುಪುವ ರೈಲು ಮಾರ್ಗವು ಒಂದು ಸುಮಧುರ ಅನುಭವವನ್ನು ನೀಡುತ್ತದೆ. ಇದರ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂದರೆ ಮಳೆಗಾಲದ ಸಂದರ್ಭದಲ್ಲಿ ಈ ಮಾರ್ಗದಲ್ಲೊಮ್ಮೆ ಪ್ರಯಾಣ ಬೆಳೆಸಿ. ಚಿಕ್ಕ ಪುಟ್ಟ ನೀರಿನ ತೊರೆಗಳು, ಅಲ್ಲಲ್ಲಿ ಕಂಡುಬರುವ ಅತಿ ತಂಪು ನೀರಿನ ಜಲಪಾತಗಳು ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ. ಈ ಒಂದು ಸುಂದರ ವಾತಾವರಣವು ನಿಮ್ಮನ್ನೆ ನೀವು ಮರೆಯುವಂತೆ ಮಾಡುತ್ತದೆ.

ಚಿತ್ರಕೃಪೆ: Ravinder Singh Gill

ಚಂಬಲ್ ಕಣಿವೆ (ಆಗ್ರಾ - ಗ್ವಾಲಿಯರ್)

ಚಂಬಲ್ ಕಣಿವೆ (ಆಗ್ರಾ - ಗ್ವಾಲಿಯರ್)

ಒಂದೊಮ್ಮೆ ಡಕಾಯಿತರು ಚುರುಕಾಗಿದ್ದ ಚಂಬಲ್ ಕಣಿವೆ ಎಂದಾಗ ತಕ್ಷಣ ಭಯವಾಗುವುದು ಖಂಡಿತ. ಹೌದು ಇದರ ಭೊಗೋಳಿಕತೆಯೆ ಹಾಗಿದೆ. ಉಬ್ಬು ತಗ್ಗಿನ ಪ್ರದೇಶಗಳು, ಬಟಾ ಬಯಲಿನ ಭೂಮಿ ಡಕಾಯಿತರಿಗೆ ಹಿಂದೆ ಸಾಕಷ್ಟು ಅನುಕೂಲಕರವಾಗಿ ಪರಿಣಮಿಸಿತ್ತು. ಪ್ರಸ್ತುತ ಇಂತಹ ಚಟುವಟಿಕೆ ಇಲ್ಲಿಲ್ಲದಿದ್ದರೂ ಈ ಮಾರ್ಗದ ಮೂಲಕ ಚಲಿಸುವಾಗ ಒಂದು ರೀತಿಯ ರೋಮಾಂಚನವಾಗುವುದು ಖಂಡಿತ.

ಚಿತ್ರಕೃಪೆ: Yann

ಕೇರಳದ ಆನಂದ (ಎರ್ನಾಕುಲಂ - ಕೊಲ್ಲಂ - ತಿರುವನಂತಪುರಂ)

ಕೇರಳದ ಆನಂದ (ಎರ್ನಾಕುಲಂ - ಕೊಲ್ಲಂ - ತಿರುವನಂತಪುರಂ)

ದೇವರ ಸ್ವಂತ ನಾಡು ಎಂಬ ಖ್ಯಾತಿಯ ಕೇರಳದ ನಿಸರ್ಗ ಸೌಂದರ್ಯವನ್ನು ಪರಿಣಾಮಕಾರಿಯಾಗಿ ಸವಿಯಬೇಕೆಂದಿದ್ದಲ್ಲಿ ಈ ಮಾರ್ಗದ ರೈಲಿನಲ್ಲಿ ಒಮ್ಮೆ ಪ್ರಯಾಣ ಬೆಳೆಸಿ. ಅದ್ಭುತವಾದ ಹಿನ್ನೀರುಗಳು, ಸ್ವಚ್ಛವಾದ ಕೆರೆಗಳು, ಸಾಲು ಸಾಲಾಗಿ ಬೆಳೆದು ನಿಂತ ಪಾಮ್ ಮರಗಳು ಇವೆಲ್ಲವೂ ನಿಮಗೊಂದು ಅಲೌಕಿಕ ಆನಂದವನ್ನು ನಿಮಗೆ ನೀಡುವುದರಲ್ಲಿ ಸಂಶಯವೆ ಇಲ್ಲ.

ಆಂಧ್ರದ ಸೆಳೆತ (ಗುಂತಕಲ್ - ಗುಂಟೂರು)

ಆಂಧ್ರದ ಸೆಳೆತ (ಗುಂತಕಲ್ - ಗುಂಟೂರು)

ಗುಂತಕಲ್ - ಗುಂಟೂರು ರೈಲು ಮಾರ್ಗದ ಧೋನೆ ಹಾಗು ಕುಂಬಂ ಮಧ್ಯದ ವಿಭಾಗವು ಅಷ್ಟೊಂದು ಅನ್ವೇಷಿಸಲ್ಪಡದ ಪೂರ್ವ ಘಟ್ಟ ಪರ್ವತಗಳ ಅದ್ಭುತವಾದ ನೋಟವನ್ನು ನೀಡುತ್ತದೆ. ಇಷ್ಟವಿದ್ದಲ್ಲಿ ಕುಂಬಂನಲ್ಲಿ ಇಳಿದು ಏಷಿಯಾದ ಅತಿ ಪುರಾತನ ಕೃತಕ ಕೆರೆಯಾದ ಕುಂಬಂ ಕೆರೆಯನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Adityamadhav83

ಚಿಲಿಕಾ (ಭುವನೇಶ್ವರ - ಬ್ರಹ್ಮಪುರ)

ಚಿಲಿಕಾ (ಭುವನೇಶ್ವರ - ಬ್ರಹ್ಮಪುರ)

ಭಾರತದ ಅತಿ ದೊಡ್ಡ ಹಾಗು ಜಗತ್ತಿನ ಎರಡನೆಯ ದೊಡ್ಡ ಸಮುದ್ರ ಹಿನ್ನೀರು ಅಥವಾ ಲವಣಯುಕ್ತ ಕೆರೆಯಾದ ಚಿಲಿಕಾ ಕೆರೆಯನ್ನು ನೋಡಲು ಬಯಸಿದರೆ ಬೆಳಿಗ್ಗೆ ಭವನೇಶ್ವರದಿಂದ ಬ್ರಹ್ಮಪುರಕ್ಕೆ ಚಲಿಸುವ ರೈಲನ್ನು ಏರಿ ಈ ರೈಲು ಮಾರ್ಗದಲ್ಲಿ ಪ್ರಯಾಣಿಸಿ. ನಿಮ್ಮ ಎಡಭಾಗದಲ್ಲಿ ಸುಂದರ ಚಿಲಿಕಾ ಕೆರೆ ಹಾಗು ಬಲಭಾಗದಲ್ಲಿ ಪೂರ್ವಘಟ್ಟ ಪರ್ವತಗಳ ಸುಮಧುರ ನೋಟವನ್ನು ಸವಿಯಬಹುದು. ಮತ್ತೊಂದು ಅಂಶವೆಂದರೆ ಚಿಲಿಕಾ ಕೆರೆ ಪ್ರದೇಶವು ವಲಸೆ ಬರುವ ಹಕ್ಕಿಗಳಿಗೆ ಹೆಸರುವಾಸಿಯಾಗಿರುವುದರಿಂದ ಕಿಟಕಿಯ ಬಳಿಯಲ್ಲೆ ಕೂಡುವುದನ್ನು ಖಾತ್ರಿ ಪಡಿಸಿಕೊಳ್ಳಿ ಜೊತೆಗೆ ಬೈನಾಕುಲರ್ ಇದ್ದರೆ ಇನ್ನೂ ಒಳಿತು.

ಚಿತ್ರಕೃಪೆ: Ckpcb

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+