Search
  • Follow NativePlanet
Share
» »ಬೆಂಗಳೂರಿನಿಂದ ಮೈಸೂರಿನವರೆಗೆ: ಒಂದು ಪ್ರವಾಸ ಲೇಖನ

ಬೆಂಗಳೂರಿನಿಂದ ಮೈಸೂರಿನವರೆಗೆ: ಒಂದು ಪ್ರವಾಸ ಲೇಖನ

ಬೆಂಗಳೂರು ಹಾಗು ಮೈಸೂರು, ಕರ್ನಾಟಕದ ಎರಡು ವಿಶೀಷ್ಟ ಮಹಾನಗರಗಳು. ಒಂದು ರಾಜ್ಯದ ರಾಜಧಾನಿಯಾದರೆ ಮತ್ತೊಂದು ಸಾಂಸ್ಕೃತಿಕ ರಾಜಧಾನಿ. ಅದೇನು ವಿಶೇಷತೆಯೋ ಏನೊ ಗೊತ್ತಿಲ್ಲ ಆದರೆ ರಾಜ್ಯದ ಯಾವುದೇ ಒಬ್ಬ ಕನ್ನಡಿಗನಿಗಾದರೂ ಸರಿ ಈ ಎರಡೂ ಊರುಗಳ ಹೆಸರನ್ನು ಕೇಳಿದಾಗ ಮನದಲ್ಲಿ ಆಸೆ, ಆಕಾಂಕ್ಷೆ, ಕಲರವ, ಕಾತುರಗಳು ಪುಂಖಾನಿಪುಂಖವಾಗಿ ಹರಿಯುತ್ತವೆ. ಇನ್ನು ಬೆಂಗಳೂರಿನಿಂದ ಮಸೂರಿಗೆ ಹಾಗೆ ಸುಮ್ಮನೆ ಜಾಲಿಯಾಗಿ ಪ್ರವಾಸ ಹೊರಡುವುದೆಂದರೆ ಸಾಕು ಸ್ವರ್ಗವು ಕೂಡ ಬೆಸರ ಎನಿಸುವಷ್ಟರ ಮಟ್ಟಿಗೆ ಮಜವಾಗಿರುತ್ತದೆ.

ಸರಿ ಹಾಗಾದರೆ ಬನ್ನಿ ಒಮ್ಮೆ, ಬೆಂಗಳೂರಿನಿಂದ ಮೈಸೂರಿನವರೆಗೆ ವಿಸ್ತೃತವಾದ ಲೇಖನ ಪ್ರವಾಸವನ್ನು ಮಾಡಿಕೊಂಡು ಬರೋಣ! ರೈಲಿನ ಮೂಲಕ ಹೊರಡುವಾಗ ಬೆಂಗಳೂರಿನ ನಂತರ ಮೊದಲ ಸ್ಥಳ ಸಿಗುವುದೆ ಕೆಂಗೇರಿ. ಕೆಂಗೇರಿ ಕುರಿತು ಸ್ವಲ್ಪ ತಿಳ್ಕೊಂಡ್ಬಿಡಿ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ.

ಒಂದನೆ ನಿಲುಗಡೆ, ಕೆಂಗೇರಿ:

ಪ್ರಸ್ತುತ ಬೆಂಗಳೂರಿನ ವ್ಯಾಪ್ತಿಯಲ್ಲಿರುವ ಈ ಪ್ರದೇಶವು ಒಂದೊಮ್ಮೆ ಗಂಗರು, ಚೋಳರಂತಹ ರಾಜವಂಶಗಳಿಂದ ಆಳಲ್ಪಟ್ಟಿತ್ತು. ಕೆಂಗೇರಿ ಎಂಬ ಪದವು ಮೂಲತಃವಾಗಿ ತೆಂಗು ಮತ್ತು ಕೇರಿ (ಸ್ಥಳ ಅಥವಾ ಪ್ರದೇಶ) ಎಂಬ ಪದಗಳಿಂದ ಒಡಮೂಡಿದೆ. ಕಾಲ ಕ್ರಮೇಣ ತೆಂಗು (ಬಹುಶಃ ತೆಂಗೇರಿ) ಎಂಬ ಶಬ್ದವು ಅಪಭ್ರಂಶದಿಂದಾಗಿ ಕೆಂಗೇರಿ ಎಂಬ ಉಚ್ಛಾರವನ್ನು ಪಡೆಯಿತು ಎಂದು ಹೇಳಬಹುದು.

1050 ರಲ್ಲಿ ಚೋಳ ದೊರೆ ರಾಜೇಂದ್ರ ಚೋಳನು ಇಲ್ಲಿನ ಈಶ್ವರ ದೇವಾಲಯಕ್ಕೆ ದೇಣಿಗೆಯನ್ನು ಕೊಟ್ಟಿದ್ದನ್ನು ಜ್ಞಾಪಕಾರ್ಥವಾಗಿ ತಮಿಳು ಲಿಪಿಯಲ್ಲಿ ಶಾಸನವೊಂದನ್ನು ಬರೆಸಿದ್ದಾನೆ. ನಂತರ ವಿಜಯನಗರ ಸಾಮ್ರಾಜ್ಯದ ಕೈವಶವಾದ ಈ ಪ್ರದೇಶವು ಮರಾಠಿ ದೊರೆ ಶಾಹಜಿ ಬೆಂಗಳೂರನ್ನು ಗೆದ್ದಾಗ ಅವನ ಕೈ ಸೇರಿತು. ಕೊನೆಯದಾಗಿ ಮೈಸೂರಿನ ದೊರೆ ಚಿಕ್ಕದೇವರಾಜ ಒಡೇಯರ್ ಅವರು 1677 ರಲ್ಲಿ ಕೆಂಗೇರಿಯನ್ನು ಗೆದ್ದುಕೊಂಡು ಮೈಸೂರು ರಾಜ್ಯದಲ್ಲಿ ವಿಲೀನ ಮಾಡಿದರು.

ಶ್ರೀರಾಮ, ಆಂಜನೇಯ, ಗಣೇಶ, ಯಲ್ಲಮ್ಮ ದೇವಿ ಹೀಗೆ ಹತ್ತು ಹಲವಾರು ದೇವಾಲಯಗಳನ್ನು ಇಲ್ಲಿ ಕಾಣಬಹುದು. ಇಲ್ಲಿನ ಕರಡಿ ಬೆಟ್ಟದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನವು ಬಹು ಪ್ರಸಿದ್ಧವಾದದ್ದು. ಇದು ಜನಪ್ರಿಯವಾಗಿ ಶ್ರೀ ಗುಟ್ಟೆ ಆಂಜನೇಯ ದೇವಸ್ಥಾನ ಎಂತಲೂ ಕರೆಯಲ್ಪಡುತ್ತದೆ. ದಂತಕಥೆಯ ಪ್ರಕಾರ, ಈ ದೇವಸ್ಥಾನದ ಆಂಜನೇಯ ವಿಗ್ರಹವು ಮರದ ಬುಡದಲ್ಲಿ ದೊರೆತಿದ್ದು, ಸುಮಾರು 500 ವರ್ಷಗಳಷ್ಟು ಹಳೆಯ ದೇವಸ್ಥಾನ ಇದಾಗಿದೆಯೆಂದು ಹೇಳುತ್ತದೆ. ವೀರಶೈವರ ಬಂಡೆ ಮಠವಿದ್ದು ಇದನ್ನು ಚೆನ್ನವೀರಸ್ವಾಮಿ ಎಂಬುವವರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಇವರು ಬಿಜ್ಜಳ ರಾಜರ ಸಮಕಾಲೀನರಾಗಿದ್ದರೆಂದು ನಂಬಲಾಗಿದೆ.

ಎರಡೆನೇಯ ನಿಲುಗಡೆ, ಬಿಡದಿ

ಒಂದೊಮ್ಮೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಒಳಪಟ್ಟಿದ್ದ ಬಿಡದಿ ಪ್ರಸ್ತುತ ರಾಮನಗರ ಜಿಲ್ಲೆಯಲ್ಲಿ ಸೇರ್ಪಡೆಗೊಂಡಿದೆ. ಬಿಡದಿಯ ಪ್ರಮುಖ ಆಕರ್ಷಣೆಯೆಂದರೆ ಇನ್ನೊವೇಟಿವ್ ಫಿಲ್ಮ್ ಸಿಟಿ. 50 ಎಕರೆ ಪ್ರದೇಶದಲ್ಲಿ ಹರಡಿರುವ ಈ ಬೃಹತ್ ಮನರಂಜನಾ ಪಾರ್ಕ್ ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿದೆ. ಅತ್ಯುತ್ಸಾಹವನ್ನು ತುಂಬುವ 27 ಮನರಂಜನಾ ಆಯಾಮಗಳು ಇಲ್ಲಿ ಲಭ್ಯ. ವಾರಂತ್ಯ ರಜಾ ತಾಣಗಳನ್ನರಸುವ ಜನಕ್ಕಂತೂ ಇದೊಂದು ಆದರ್ಶಮಯ ತಾಣ.

ಬೆಂಗಳೂರು ಮೆಟ್ರೊಪಾಲಿಟನ್ ಡೆವೆಲಪ್‍ಮೆಂಟ್ ಪ್ರಾಧಿಕಾರವು 'ಬಿಡದಿ ಟೌನ್ ಶಿಪ್' ಎಂಬ ಯೋಜನೆಯನ್ನು ಸಿದ್ಧಗೊಳಿಸುತ್ತಿದೆ. ಪೂರ್ಣಗೊಂಡ ನಂತರ ಇದನ್ನು 'ಬಿಡದಿ ನೊವ್‍ಲೆಡ್ಜ್ ಸಿಟಿ' ಎಂದು ನಾಮಕರಣ ಮಾಡಲಾಗುವುದು. ವಾಹನೋದ್ಯಮದಲ್ಲಿ ಮಂಚೂಣಿಯಲ್ಲಿರುವ ಟೊಯೊಟಾ ಕಂಪನಿಯು ಈಗಾಗಲೆ ಇಲ್ಲಿ ತನ್ನ ಬೃಹತ್ ಕಾರ್ಖಾನೆಯನ್ನು ಹೊಂದಿದ್ದು, ಮುಂದೆ 'ಬಾಷ್' ಕಂಪನಿಯು ಕೂಡ ತನ್ನ ಕಚೇರಿಯನ್ನು ಇಲ್ಲಿ ತೆರೆಯಲು ಯೋಜನೆ ಹಾಕುತ್ತಿದೆ.

ಮೂರನೇಯ ನಿಲುಗಡೆ, ರಾಮನಗರ

"ಅರೇ ಓ ಸಾಂಬಾ...ಕಿತನೆ ಆದ್ಮಿ ಥೆ?" ಬಹುಶಃ ಈ ಹಿಂದಿ ಡೈಲಾಗ್ ಬಹು ಜನರಿಗೆ ನೆನಪಿರಬಹುದು. ಹೌದು, ಇದು ಹಿಂದಿ ಚಿತ್ರರಂಗದ ಅತಿ ಯಶಸ್ಸಿನ ಚಿತ್ರಗಳಲ್ಲೊಂದಾದ ಶೋಲೆ ಚಿತ್ರದ ಡೈಲಾಗ್. ಬಂಡೆಗಳ ಮೇಲೆ ನಡೆಯುತ್ತ ಚಿತ್ರದ ಖಳನಾಯಕ 'ಗಬ್ಬರ್ ಸಿಂಗ್' ಇದನ್ನು ಹೇಳುತ್ತಾನೆ. ಈ ರೀತಿಯಾಗಿ ಅವನು ಅಬ್ಬರಿಸುತ್ತಿದ್ದಾಗ ಹಿಂದಿನ ಪ್ರಾಕೃತಿಕ ನೋಟ, ಕಲ್ಲು ಬಂಡೆಗಳ ಚಿತ್ರಣ ಅದಕ್ಕೆ ಪೂರಕವಾದಂತೆ ಭಾಸವಾಗುತ್ತದೆ. ಯಾಕಪ್ಪಾ ಈ ವಿಷಯವೆಂದರೆ, ಈ ಚಿತ್ರ ಚಿತ್ರೀಕರಣಗೊಂಡ ಆ ಪ್ರದೇಶವೇ ರಾಮನಗರ.

ರಾಮನಗರವು ರೇಷ್ಮೆ ಸಾಕಾಣಿಕೆಗೂ ಕೂಡ ಪ್ರಸಿದ್ಧವಾಗಿದ್ದು 'ಸಿಲ್ಕ್ ಸಿಟಿ/ಸಿಲ್ಕ್ ಟೌನ್' ಎಂದೂ ಕರೆಯಿಸಿಕೊಳ್ಳುತ್ತದೆ. ಇಲ್ಲಿ ಉತ್ಪಾದಿಸಲಾಗುವ ರೇಷ್ಮೆಯು ಪ್ರಖ್ಯಾತ ಮೈಸೂರು ರೇಷ್ಮೆಯ ಅವಿಭಾಜ್ಯವಾದ ಅಂಗವಾಗಿ ಕಾರ್ಯನಿರ್ವಹಿಸುತ್ತದೆ. ರಾಮನಗರವು ಏಷಿಯಾದಲ್ಲೆ ಬೃಹತ್ತಾದ ರೇಷ್ಮೆ ಗೂಡುಗಳ ಮಾರುಕಟ್ಟೆಯನ್ನು ಹೊಂದಿದೆ. ಪ್ರತಿ ದಿನ 50 ಟನ್ ಗಳಷ್ಟು ರೇಷ್ಮೆ ಗೂಡುಗಳು ಇಲ್ಲಿನ ಮಾರುಕಟ್ಟೆಗೆ ಬರುತ್ತವೆ.

ಮತ್ತೊಂದು ಆಸಕ್ತಿಭರಿತ ವಿಷಯವೆಂದರೆ ರಾಮನಗರವು ತನ್ನಲ್ಲಿ ದೊರಕುವ ಜಗತ್ತಿನ ಪುರಾತನ ಗ್ರಾನೈಟ್ ಕಲ್ಲುಗಳಿಗೂ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿರುವ ರಾಮದೇವರ ಬೆಟ್ಟವು ಚಿತ್ರೋದ್ಯಮಿಗಳ ನೆಚ್ಚಿನ ತಾಣವಾಗಿದೆ. ರೇವಣಸಿದ್ದೇಶ್ವರ ಹಾಗು ಹಂದಿಗುಂಡಿ ಬೆಟ್ಟಗಳನ್ನು ಕೂಡ ಇಲ್ಲಿ ಕಾಣಬಹುದು. ಲಾಂಗ್ ಬಿಲ್ಡ್ ಹದ್ದುಗಳು ಕಂಡು ಬರುವ ದಕ್ಷಿಣ ಭಾರತದ ಕೆಲವೇ ಕೆಲವು ಬೆಟ್ಟಗಳಲ್ಲಿ ಇದು ಕೂಡ ಒಂದು. ಇಲ್ಲಿನ ಕಲ್ಲು ಬಂಡೆಗಳು, ರ್‍ಯಾಪೆಲ್ಲಿಂಗ್, ಬಂಡೆ ಹತ್ತುವಿಕೆಗು ಕೂಡ ಹೆಸರುವಾಸಿಯಾಗಿವೆ.

ಬೆಂಗಳೂರಿನಿಂದ ಮೈಸೂರಿನವರೆಗೆ: ಒಂದು ಪ್ರವಾಸ ಲೇಖನ

ನಾಲ್ಕನೇಯ ನಿಲುಗಡೆ, ಚೆನ್ನಪಟ್ಟಣ

ರಾಮನಗರ ಜಿಲ್ಲೆಯಲ್ಲಿ ಬರುವ ಚೆನ್ನಪಟ್ಟಣವು ಕಟ್ಟಿಗೆಯ ಬೊಂಬೆಗಳಿಗೆ ಅತ್ಯಂತ ಹೆಸರುವಾಸಿಯಾಗಿದೆ. ಇದನ್ನು 'ಬೊಂಬೆಗಳ ಊರು' ಎಂದು ಕೂಡ ಸಂಭೋದಿಸಲಾಗುತ್ತದೆ. ಈ ಅನನ್ಯ ಬೊಂಬೆಗಳು ನೋಡಲು ಆಕರ್ಷಕವಾಗಿದ್ದು, ಇವುಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ತಯಾರಿಸಲಾಗುತ್ತದೆ.

ಐತಿಹಾಸಿಕ ದಾಖಲೆಗಳ ಪ್ರಕಾರ, ತಿಮ್ಮಪ್ಪರಾಜ ಅರಸನು ಮೊದಲಿಗೆ ಈ ಪ್ರದೇಶವನ್ನು ಆಳುತ್ತಿದ್ದನು. ನಂತರ ತೆಲುಗು ಬಣಜಿಗನಾದ ರಾಣಾ ಜಗದೇವರಾಯನು ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿ ಆಳಿದ್ದನು. ರಾಣಾ ಪೇದ ಜಗದೇವರಾಯ, ರಾಣಾ ಇಮ್ಮಡಿ ಜಗದೇವರಾಯ, ರಾಣಾ ಅಂಕುಸರಾಯ, ರಾಣಾ ಕುಮಾರಜಗದೇವ ರಾಯ, ಇಮ್ಮಡಿ ಅಂಕುಸರಾಯ ಮುಂತಾದವರು ಈ ವಂಶದ ಕೆಲವು ಪ್ರಮುಖರು.

ಬೆಂಗಳೂರಿನಿಂದ ಮೈಸೂರಿನವರೆಗೆ: ಒಂದು ಪ್ರವಾಸ ಲೇಖನ

ಐದನೇಯ ನಿಲುಗಡೆ, ಮದ್ದೂರು

ಶಿಮ್ಶಾ ನದಿ (ಕಾವೇರಿಯ ಉಪನದಿ) ತಟದಲ್ಲಿ ನೆಲೆಸಿರುವ ಮದ್ದೂರು ಮಂಡ್ಯ ಜಿಲ್ಲೆಯಲ್ಲಿ ಬರುತ್ತದೆ. ಮದ್ದೂರು ಪ್ರಸಿದ್ಧಿಯನ್ನು ಪಡೇದಿದೆ ತನ್ನಲ್ಲಿ ದೊರಕುವ ವಿಶೀಷ್ಟ ಖಾದ್ಯ ವಡೆಯ ಮೂಲಕ. ಇದು 'ಮದ್ದೂರು ವಡೆ' ಎಂತಲೆ ಪ್ರಖ್ಯಾತಿಯನ್ನು ಪಡೆದಿದೆ.

ಮದ್ದೂರು ಸುತ್ತಮುತ್ತಲಿರುವ ಕೆಲವು ಆಕರ್ಷಕ ಪ್ರವಾಸಿ ತಾಣಗಳು

ವೈದ್ಯನಾಥಪುರ:

ಮದ್ದೂರಿನಿಂದ 2 ಕಿ.ಮೀ ದೂರದಲ್ಲಿರುವ ಈ ಹಳ್ಳಿಯು ವೈದ್ಯನಾಥೇಶ್ವರ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಪ್ರಸ್ತುತ ದಿಕ್ಷೀತ ಕುಟುಂಬವು ಇದರ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಇಲ್ಲಿರುವ ಪ್ರತೀತಿಯೆಂದರೆ ಈ ದೇವರು ತನಗೆ ನಡೆದುಕೊಳ್ಳುವ ಭಕ್ತರನ್ನು ಯಾವಾಗಲು ಕಷ್ಟ ಕಾರ್ಪಣ್ಯಗಳಿಂದ ಪಾರು ಮಾಡಿ ಸುಖ ಸಂತೃಪ್ತಿಗಳಿಂದ ಇಟ್ಟಿರುತ್ತಾನೆ. ವಿದ್ಯುತ್ ಸೌಲಭ್ಯ ಪಡೆದ ಈ ಪ್ರದೇಶದ ಹಳ್ಳಿಗಳಲ್ಲಿ ಇದು ಮೊದಲನೆಯದು ಎಂಬ ಖ್ಯಾತಿಯನ್ನು ಪಡೆದಿದೆ.

ಶ್ರೀ ಉಗ್ರನರಸಿಂಹ ಸ್ವಾಮಿ ದೇವಾಲಯ:

ಮದ್ದೂರಿನಲ್ಲಿರುವ ಈ ದೇವಸ್ಥಾನದಲ್ಲಿ ಉಗ್ರ ನರಸಿಂಹ, ಶ್ರೀ ಸೌಮ್ಯನಾಯಕಿ, ರಾಮ, ಸೀತೆ, ಲಕ್ಷ್ಮಣ, ಆಂಜನೇಯ, ಯಶೋಧೆ ಹಾಗು ಕೃಷ್ಣರ ಸನ್ನಿಧಿಗಳನ್ನು ಕಾಣಬಹುದು. ಯಶೋಧೆಯ ತನ್ನ ಸುಪುತ್ರ ಶ್ರೀ ಬಾಲಕೃಷ್ಣನಿಗೆ ಹಾಲುಣಿಸುತ್ತಿರುವ ಭಂಗಿಯನ್ನು ಇಲ್ಲಿನ ಗರ್ಭಗುಡಿಯಲ್ಲಿ ಕಾಣಬಹುದು.

ಅಲ್ಲದೆ ಬ್ರಹ್ಮನು ಶ್ರೀಕೃಷ್ಣನ ನಾಭಿಯ ಮೂಲಕ ಕುಳಿತಿರುವುದು ನೋಡಲು ಆಕರ್ಷಕವೆನಿಸುತ್ತದೆ. ಮಹಾಭಾರತದ ಕೊನೆಯಲ್ಲಿ ಅರ್ಜುನನು ಶ್ರೀ ಕೃಷ್ಣನನ್ನು ಕುರಿತು ಉಗ್ರನರಸಿಂಹನ ಅವತಾರವನ್ನು ಕಾಣಲು ಪ್ರಾರ್ಥಿಸಿದಾಗ, ಕೃಷ್ಣನು ಆ ಅವತಾರವು ಅತಿ ಭಯಂಕರ ಹಾಗು ಉಗ್ರವಾಗಿರುವುದರಿಂದ ಅರ್ಜುನನ ಕೋರಿಕೆಯನ್ನು ಒಪ್ಪಿಕೊಳ್ಳದೆ ಬದಲಾಗಿ ಬ್ರಹ್ಮನನ್ನು ಕುರಿತು ಆ ರೂಪವನ್ನು ಹೋಲುವ ಕಲ್ಲಿನ ಪ್ರತಿಮೆಯನ್ನು ಸೃಷ್ಟಿಸಲು ವಿನಂತಿಸುತ್ತಾನೆ. ಈ ಮೂರ್ತಿಯನ್ನೇ ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದು ಪ್ರತೀತಿ.

ಅರ್ಜುನನು ಇಲ್ಲಿ ಪೂಜಿಸುತ್ತಿದ್ದುದರಿಂದ ಇದನ್ನು(ಮದ್ದೂರು) ಮೊದಲಿಗೆ ಅರ್ಜುನಪುರಿ ಎಂದು ಕರೆಯಲಾಗುತ್ತಿತ್ತು. ನಂತರ ಕದಂಬ ಋಷಿಯು ಇಲ್ಲಿ ತಮ್ಮ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸಿದ ನಂತರ ಮದ್ದೂರನ್ನು "ಕದಂಬನದಿ ಕ್ಷೇತ್ರಂ" ಎಂದು ಕರೆಯಲಾಯಿತು. ಕಾಲಕ್ರಮೇಣ ಇಲ್ಲಿ ಆಳಿದ ದೊರೆಗಳು ಇದನ್ನು ಯುದ್ಧಕ್ಕೆ ಬಳಸಲಾಗುತ್ತಿದ್ದ ಸಿಡಿ ಮದ್ದುಗಳನ್ನು ತಯಾರಿಸುವ ತಾಣವನ್ನಾಗಿ ಮಾಡಿದಾಗ ಇದಕ್ಕೆ ಮದ್ದೂರು ಎಂಬ ಹೆಸರು ಬಂದಿತು.

ಶ್ರೀ ವರದರಾಜ ಸ್ವಾಮಿ ದೇವಾಲಯ:

ಈ ದೇವಸ್ಥಾನವು ರಾಜ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟಿದೆ. ದಂತಕಥೆಯ ಪ್ರಕಾರ, ವಿಷ್ಣುವರ್ಧನನ ತಾಯಿಯು ಕುರುಡಿಯಾಗಿದ್ದಳು. ರಾಮಾನುಜರು ಅವಳ ಅಂಧತ್ವವನ್ನು ನಿವಾರಿಸುವ ಉದ್ದೇಶದಿಂದ ಅವಳನ್ನು ಕಂಚೀಪುರಂನ ವರದರಾಜ ಸ್ವಾಮಿ ದೇವಾಲಯಕ್ಕೆ ಕರೆದುಕೊಂಡು ಹೋಗಲು ವಿಷ್ಣುವರ್ಧನನಿಗೆ ಸೂಚಿಸಿದರು.

ಆದರೆ ತಾಯಿಗೆ ವಯಸ್ಸಾಗಿದ್ದರಿಂದ ಪ್ರಯಾಣ ಕಷ್ಟಕರವಾಗಿತ್ತು. ಆದ್ದರಿಂದ ಸ್ವತಃ ವರದರಾಜ ಸ್ವಾಮಿಯೆ ಕನಸಿನಲ್ಲಿ ಬಂದು (ರಾಮನುಜರ ಕನಸಿನಲ್ಲೊ ಅಥವಾ ರಾಜನ ಕನಸಿನಲ್ಲೊ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ) ಮದ್ದೂರಿನಲ್ಲೆ ತನ್ನ ದೇವಾಲಯವನ್ನು ನಿರ್ಮಿಸಲು ಹೇಳಿದರು.

ನಂತರ ರಾಜನು ಕಾಂಚೀಪುರಂನಿಂದ ಶಿಲ್ಪಿಗಳನ್ನು ಕರೆತಂದು ಸ್ವಾಮಿಯ ವಿಗ್ರಹವನ್ನು ಕೆತ್ತಿಸಿ, ಪ್ರತಿಷ್ಠಾಪಿಸಿ 48 ದಿನಗಳ ಮಂಡಲ ಪೂಜೆಯನ್ನು ನೆರವೇರಿಸಿದನು. ಪವಾಡವೆಂಬಂತೆ 48 ನೇಯ ದಿನ ರಾಜನ ತಾಯಿಯು ಅಲ್ಲಿಗೆ ಪೂಜಿಸಲು ಬಂದಾಗ ಅವಳ ಕಣ್ಣುಗಳಿಗೆ ದೃಷ್ಟಿ ಬಂದಿತು. ತದನಂತರದಿಂದ ಈ ದೇವರನ್ನು "ನೇತ್ರ ನಾರಾಯಣ" ಎಂತಲೂ ಕರೆಯಲಾಗುತ್ತಿದೆ.

ಆರನೇಯ ನಿಲುಗಡೆ, ಮಂಡ್ಯ

ಸಕ್ಕರೆ ನಾಡು ಎಂಬ ಖ್ಯಾತಿಯ ಮಂಡ್ಯವು ತನ್ನ ಹೆಸರಿನ ಹಿಂದೆ ಎರಡು ಕೌತುಕಮಯ ಸಂಗತಿಗಳನ್ನು ಒಳಗೊಂಡಿದೆ. ಪೌರಾಣಿಕ ಕಥೆಯ ಪ್ರಕಾರ, ಮಾಂಡವ್ಯ ಋಷಿಗಳು ಇಲ್ಲಿ ವಾಸಿಸುತ್ತಿದ್ದರಿಂದ ಮಂಡ್ಯ ಎಂಬ ಹೆಸರು ಬಂದಿತು. ಆದರೆ ಇತಿಹಾಸಕಾರರು, ಶಿಕ್ಷಣ ತಜ್ಞರು ಅವಲೋಕಿಸಿದ ಪುರಾತನ ಶಾಸನದ ಪ್ರಕಾರ, ಇದರ ಹೆಸರು 'ಮಂಟಯ' ಎಂಬ ಪದದಿಂದ ಬಂದಿದ್ದಾಗಿದೆ. ಇದರ ಅರ್ಥ ಆವಾಸಸ್ಥಾನ ಎಂದಾಗುತ್ತದೆ.

ಮಂಡ್ಯ ಹಾಗು ಸುತ್ತಮುತ್ತಲಿರುವ ಪ್ರವಾಸಿ ಆಕರ್ಷಣೆಗಳು

ಮಂಡ್ಯ ಸಕ್ಕರೆ ಕಾರ್ಖಾನೆ:

1933 ರ ಸಮಯದಲ್ಲೆ 20 ಲಕ್ಷಗಳಷ್ಟು ಬಂಡವಾಳ ಹೂಡಿ ನಿರ್ಮಿಸಲಾದ ಈ ಕಾರ್ಖಾನೆಯು ಇಂದು ಮಂಡ್ಯದ ಹೆಗ್ಗುರುತಾಗಿದ್ದು, ಭಾರತದಲ್ಲಿರುವ ಬೃಹತ್ ಸಕ್ಕರೆ ಕಾರ್ಖಾನೆಗಳಲ್ಲೊಂದಾಗಿದೆ.

ಜನಾರ್ಧನಸ್ವಾಮಿ ದೇವಾಲಯ:

ಮಂಡ್ಯದಲ್ಲಿರುವ ಒಂದು ಪ್ರಮುಖ ದೇವಾಲಯವಿದು. ಶಂಖ, ಚಕ್ರಗಳಿಂದ ಶೋಭಿತನಾಗಿರುವ ಜನಾರ್ಧನ ಸ್ವಾಮಿಯು ಶ್ರೀದೇವಿ ಹಾಗು ಭೂದೇವಿಯರೊಂದಿಗೆ ರಾರಾಜಿಸುತ್ತಿರುವುದನ್ನು ನೋಡಿದಾಗ ಮನಸ್ಸಿಗಾನಂದ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಇನ್ನು ಮಂಡ್ಯದ ಆಸುಪಾಸಿನಲ್ಲಿ ಹಲವಾರು ಪ್ರವಾಸಿ ಆಕರ್ಷಣೆಗಳಿದ್ದು, ಅವುಗಳಲ್ಲಿ ಪ್ರಮುಖವಾದವುಗಳು ಇಂತಿವೆ.

ಮಳವಳ್ಳಿ (ಮಂಡ್ಯದಿಂದ 37 ಕಿ.ಮೀ), ಕಾವೇರಿ ನೀರಿನ ಜಲಪಾತ (ಮಂಡ್ಯದಿಂದ 44 ಕಿ.ಮೀ), ಭೀಮೇಶ್ವರಿ (ಮಂಡ್ಯದಿಂದ 50 ಕಿ.ಮೀ), ಕುಂತಿಬೆಟ್ಟ (ಮಂಡ್ಯದಿಂದ 28 ಕಿ.ಮೀ), ಮೇಲ್ಕೋಟೆ (ಮಂಡ್ಯದಿಂದ 38 ಕಿ.ಮೀ), ತಿರುಮಲಸಾಗರ (ಮಂಡ್ಯದಿಂದ 44 ಕಿ.ಮೀ), ಕೃಷ್ಣರಾಜಪೇಟೆ, ಕಿಕ್ಕೇರಿ, ಶಿವಪುರ (ಮಂಡ್ಯದಿಂದ 19 ಕಿ.ಮೀ), ಕೊಕ್ಕರೆ ಬೆಳ್ಳೂರು (ಮಂಡ್ಯದಿಂದ 31 ಕಿ.ಮೀ), ಮುತ್ತತ್ತಿ (ಮಳವಳ್ಳಿಯಿಂದ 35 ಕಿ.ಮೀ), ನಾಗಮಂಗಲ (ಮಂಡ್ಯದಿಂದ 42 ಕಿ.ಮೀ), ಶ್ರೀರಂಗಪಟಣ (ಮಂಡ್ಯದಿಂದ 27 ಕಿ.ಮೀ).

ಏಳನೇಯ ನಿಲುಗಡೆ, ಪಾಂಡವಪುರ

ಪಾಂಡವರ ಊರು ಎಂಬರ್ಥ ಕೊಡುವ ಪಾಂಡವಪುರ ಮಂಡ್ಯದಿಂದ 26 ಕಿ.ಮೀ ದೂರದಲ್ಲಿ ನೆಲೆಸಿದೆ. ಪುರಾಣದ ಪ್ರಕಾರ, ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಈ ಸ್ಥಳದಲ್ಲಿ ಕೆಲಕಾಲ ತಂಗಿದ್ದರಂತೆ. ಅಲ್ಲದೆ ಈ ಊರನ್ನು ಮುಂಚೆ ಹಿರೋಡೆ, ದಂಡು, ಫ್ರೆಂಚ್ ರಾಕ್ಸ್ ಎಂಬ ಹೆಸರುಗಳಿಂದಲೂ ಕರೆಯಲಾಗುತ್ತಿತ್ತು.

ಹಿಂದೆ ಟಿಪ್ಪುವಿಗೆ ಸಹಾಯಮಾಡಲು ಫ್ರೆಂಚ್ ಸೇನಾಪಡೆಯು ಈ ತಾಣದಲ್ಲೆ ತಂಗಿದ್ದರಿಂದ ಇದನ್ನು ಫ್ರೆಂಚ್ ರಾಕ್ ಎಂದು ಕರೆಯಲಾಯಿತು. ಎರಡು ಬೆಟ್ಟಗಳ ಮಧ್ಯೆ ಈ ಪಟ್ಟಣವು ನೆಲೆಸಿದ್ದು, ಆ ಬೆಟ್ಟಗಳನ್ನು ಕುಂತಿ ಬೆಟ್ಟ ಎಂದು ಕರೆಯಲಾಗುತ್ತದೆ.

ಪಾಂಡವಪುರದ ಸುತ್ತಲೂ ಚಾಚಿರುವ ಭತ್ತದ ಹಾಗು ಕಬ್ಬಿನ ಗದ್ದೆಗಳು ನೋಡಲು ಆಕರ್ಷಕವಾಗಿದ್ದು ಸುಂದರ ನೋಟವನ್ನು ಒದಗಿಸುತ್ತವೆ.

ಬೆಂಗಳೂರಿನಿಂದ ಮೈಸೂರಿನವರೆಗೆ: ಒಂದು ಪ್ರವಾಸ ಲೇಖನ

ಎಂಟನೇಯ ಹಾಗು ಕೊನೆಯ ನಿಲ್ದಾಣ, ಮೈಸೂರು

ಅಬ್ಬಾ, ಈ ಏಳು ಸ್ಥಳಗಳನ್ನು ಸುತ್ತಾಡಿ, ಅವುಗಳಿಗೆ ತಳಕು ಹಾಕಿಕೊಂಡಿರುವ ಕಥೆ, ದಂತಕಥೆಗಳನ್ನು ತಿಳಿದುಕೊಂಡು, ಆ ಪ್ರದೇಶಗಳಲ್ಲಿರುವ ಪ್ರಕೃತಿ ಸೌಂದರ್ಯ, ಪ್ರವಾಸಿ ಆಕರ್ಷಣೆಗಳನ್ನು ಸವಿದು ಸಾರ್ಥಕತೆಯ ಭಾವನೆ ಬಿರುತ್ತಾ ಕೊನೆಯದಾಗಿ ಬಂದು ಸೇರುವ ಸ್ಥಳ ನಮ್ಮ ಚಂದನ ನಗರಿ, ಸಾಂಸ್ಕೃತಿಕ ರಾಜಧಾನಿ ಮೈಸೂರು. ಇನ್ನು ಮೈಸೂರಿನ ಕುರಿತು ಹಲವು ವೈವಿಧ್ಯಮಯ ಆಕರ್ಷಣೆಗಳನ್ನು ತಿಳಿಯ ಬೇಕೆ? ಸ್ವಲ್ಪ ತಾಳಿ. ಅದನ್ನು ಅದಕ್ಕಾಗೆ ಮೀಸಲಿಟ್ಟ ಲೇಖನದಲ್ಲಿ ಓದಿ.

ಕನ್ನಡ ನೇಟಿವ್ ಪ್ಲ್ಯಾನೆಟ್ (kannada.nativeplanet.com), ಎಂದಿಗೂ, ಯಾವಾಗಲೂ ನಿಮ್ಮ ಪ್ರಯಾಣ ಸುಖ ಹಾಗು ಸಂತೋಷದಾಯಕವಾಗಲಿ ಎಂದು ಆಶಿಸುತ್ತದೆ.

More News

Read more about: bangalore mysore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+