ಕುಂದಾ ನಗರಿ ಎಂದೆ ಪ್ರಖ್ಯಾತಿ ಗಳಿಸಿದ ಪ್ರಾಚೀನ ವೇಣುಗ್ರಾಮ ಇಂದು ಕರ್ನಾಟಕದ ವಾಯವ್ಯ ಭಾಗದಲ್ಲಿ ನೆಲೆಸಿರುವ ಪ್ರಮುಖ ಜಿಲ್ಲೆಗಳ ಪೈಕಿ ಒಂದಾಗಿದೆ. ಹೌದು, ಅದೆ ಬೆಳಗಾವಿ ಜಿಲ್ಲೆ. ಉತ್ತರ ಕರ್ನಾಟಕದ ಭಾಗದಲ್ಲಿ ಬರುವ ಬೆಳಗಾವಿ ಇತರೆ ಉತ್ತರ ಕರ್ನಾಟಕದ ಸ್ಥಳಗಳಂತೆ ಇಲ್ಲದೆ ಪಶ್ಚಿಮ ಘಟ್ಟಗಳ ಪ್ರಭಾವವಿರುವ ವಿಶೇಷ ಜಿಲ್ಲೆ.
ಮಲೆನಾಡಿನ ಛಾಪು ಹೊಂದಿರುವ ಬೆಳಗಾವಿಯಲ್ಲಿ ಸಾಕಷ್ಟು ನಯನಮನೋಹರವಾದ ಪ್ರದೇಶಗಳಿವೆ. ಬೆಳಗಾವಿ ನಗರ ಹಾಗೂ ಅದರ ಸುತ್ತಮುತ್ತಲು ಬಲು ಆಕರ್ಷಣೀಯವಾದ ಪ್ರವಾಸಿ ತಾಣಗಳಿವೆ. ಬೆಳಾಗಾವಿ ತನ್ನ ಅದಿ ಬದಿಗಳಲ್ಲಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಸುತ್ತುವರಿದಿರುವುದರಿಂದ ಸಾಕಷ್ಟು ಮರಾಠಿ ಪ್ರಭಾವ ಹೊಂದಿರುವುದನ್ನು ಗಮನಿಸಬಹುದು.
ಬೆಳಗಾವಿ ಕುರಿತು ಹೇಳುವಾಗ ಇನ್ನೊಂದು ವಿಷಯ ಖಂಡಿತ ಹೇಳಲೇಬೇಕು. ಅದೆಂದರೆ ಇಲ್ಲಿ ಸಿಗುವ ವೈವಿಧ್ಯಮಯ ತಿಂಡಿ ತಿನಿಸುಗಳು. ಅದರಲ್ಲೂ ವಿಶೇಷವಗಿ ಕುರುಕಲು ಅಥವಾ ಚಾಟ್ ತಿಂಡಿಗಳು. ಇಲ್ಲೊಮ್ಮೆ ಚಾಟ್ ಗಳ ರುಚಿ ನೋಡಿದಿರೆಂದರೆ ಸಾಕು ವರ್ಷಕ್ಕೊಮ್ಮೆಯಾದರೂ ಬೆಳಗಾವಿಗೆ ತಿನ್ನುವ ಚಪಲವನ್ನು ಪೂರೈಸಲಎಂದಾದರೂ ಇಲ್ಲಿಗೆ ಭೇಟಿ ನೀಡುತ್ತೀರಿ. ಇದು ಖಂಡಿತ ಸತ್ಯ.

ಅದ್ಭುತ
ಬೆಳಗಾವಿಯು ಬೆಂಗಳೂರಿನಿಂದ 502 ಕಿ.ಮೀ. ಅಂತರದಲ್ಲಿದ್ದು, ಗೋವಾದಿಂದ 125 ಕಿ.ಮೀ. ದೂರದಲ್ಲಿದೆ. ತೆರಳಲು ಸಾಕಷ್ಟು ಅನುಕುಲತೆಗಳಿವೆ ಬಸ್ಸುಗಳಾಗಲಿ, ರೈಲಾಗಲಿ ಅಥವಾ ವಿಮಾನಯಾನವಾಗಲಿ ಬೆಂಗಳೂರಿನಿಂದ ಬೆಳಗಾವಿಗೆ ದೊರೆಯುತ್ತವೆ. ಉತ್ತರ ಕರ್ನಾಟಕದಲ್ಲಿ ನೀವು ಪ್ರವಾಸ ಮಾಡ ಬಯಸಿದ್ದಲ್ಲಿ ಬೆಳಗಾವಿಯಿಂದ ಪ್ರವಾಸ ಪ್ರಾರಂಭಿಸಿದರೆ ಉತ್ತಮ. ಬೆಳಗಾವಿ ಕುಂದಾ ಹಾಗೂ ಕಲಾಕಂದ ಸಿಹಿ ಖಾದ್ಯ್ಗಳಿಗೆ ಬಲು ಹೆಸರುವಾಸಿಯಾಗಿದೆ.
ಚಿತ್ರಕೃಪೆ: Pradeep717

ಜಲಪಾತ
ಬೆಳಗಾವಿ ಜಿಲ್ಲೆಯಲ್ಲಿ ನೋಡಬಹುದಾದ ಒಂದು ನಯನಮನೋಹರ ಜಲಪಾತ ತಾಣವೆಂದರೆ ಅದು ಗೋಕಾಕ ಜಲಪಾತ. ಇದು ಬೆಳಗಾವಿಯಿಂದ 60 ಕೀಮೀ. ದೂರದಲ್ಲಿದ್ದು, ಗೋಕಾಕ ನಗರದಿಂದ 10 ಕೀ.ಮೀ. ಅಂತರದಲ್ಲಿದೆ. ಇದು ಮುಖ್ಯ ರಸ್ತೆಯಲ್ಲಿಯೇ ಇದ್ದು, ಸುಲಭವಗಿ ತಲುಪಬಹುದಾಗಿದೆ.
ಚಿತ್ರಕೃಪೆ: Shishirmk

170 ಅಡಿಗಳಷ್ಟು ಎತ್ತರ
ಗೋಕಾಕ ಜಲಪಾತವು ಘಟಪ್ರಭಾ ನದಿಯಿಂದ ರುಪಗೊಂಡ ಜಲಪಾತವಾಗಿದ್ದು ಭೂಮಿಗೆ 170 ಅಡಿಗಳಷ್ಟು ಎತ್ತರದಿಂದ ಧುಮುಕುತ್ತದೆ. ಈ ಜಲಪಾತ ತನ್ನ ಅಗಾಧ ಆಕಾರ ಹಾಗೂ ಭೋರ್ಗೆರೆದು ಉಕ್ಕುವ ರೀತಿಗೆ ಪ್ರಸಿದ್ಧಿ ಹೊಂದಿದೆ. ಜೂನ್ - ಸೆಪ್ಟೆಂಬರ ಅವಧಿಯು ಇದರ ಅಂದ-ಚೆಂದವನ್ನು ಗಮನಿಸಲು ಪ್ರಶಸ್ತವಾಗಿರುತ್ತದೆ.
ಚಿತ್ರಕೃಪೆ: Shil.4349

ಜಲ ವಿದ್ಯುತ್
ಇನ್ನೊಂದು ವಿಶೇಷವೆಂದರೆ ದೇಶದಲ್ಲಿ ಪ್ರಪ್ರಥಮ ಬಾರಿಗೆ ಜಲಪಾತದಿಂದ ವಿದ್ಯುತ್ ಅನ್ನು ಇಲ್ಲಿಯೆ ಉತ್ಪಾದಿಸಲಾಗಿದೆ. ಅದೂ 1887 ರಲ್ಲಿ. ಅಲ್ಲದೆ ಇಂದು ನೀರು ಧುಮುಕುವ ಸ್ಥಳದ ಸ್ವಲ್ಪ ಇಚೆ ತೂಗು ಸೇತುವೆಯೊಂದಿದ್ದು ಅದು ಘಟಪ್ರಭಾ ನದಿಯ ಇಚೆ ದಂಡೆಯಲ್ಲಿರುವ ಕಿರು ಗ್ರಾಮವೊಂದಕ್ಕೆ ಸಮ್ಪರ್ಕ ಕಲ್ಪಿಸುತ್ತದೆ. ಈ ತೂಗು ಸೇತುವೆ ಪುರಾತನವಾದುದು ಹಾಗೂ ನಡೆಯುವಾಗ ಸಾಕಷ್ಟು ಭಯ ಮೂಡಿಸುತ್ತದೆ ಎಂದರೂ ತಪ್ಪಾಗಲಿಕ್ಕಿಲ್ಲ.
ಚಿತ್ರಕೃಪೆ: Sujaybagi

16 ಕೀಮಿ.
ಇದು ಸಹ ಒಂದು ಆಕರ್ಷಕ ಜಲಪಾತವಾಗಿದ್ದು ಅತಿ ಕಡಿಮೆ ಎತ್ತರ ಆದರೆ ಅತಿ ಅಗಲವಾಗಿ ಧುಮುಕುವ ಜಲಪಾತವಾಗಿ ಹೆಸರುವಾಸಿಯಾಗಿದೆ. ಗೋಕಾಕನಿಂದ 16 ಕೀಮಿ. ಅಂತರದಲ್ಲಿದೆ. ಗೋಕಾಕ್ - ಕೊಣ್ಣುರ ಮಾರ್ಗದ ಮಧ್ಯದಲ್ಲಿ ಹಚ್ಚು ಹಸಿರು ಪರ್ವತದ ಮಧ್ಯದಲ್ಲಿ ಈ ಜಲಪಾತವಿದ್ದು ಮಾರ್ಕಂಡೆಯ ನದಿಯಿಂದ ರುಪಗೊಂಡಿದೆ.
ಚಿತ್ರಕೃಪೆ: Shil.4349

ಸವದತ್ತಿ
ಸವದತ್ತಿಯು ಒಂದು ಯಾತ್ರಾ ಕ್ಷೇತ್ರವಾಗಿದ್ದು, ಬೆಳಗಾವಿಯ ಪೂರ್ವ ದಿಕ್ಕಿಗೆ (ಹೆಚ್ಚು ಕಡಿಮೆ ಆಗ್ನೇಯ) ಸುಮಾರು 78 ಕಿ.ಮೀ ಗಳ ದೂರದಲ್ಲಿ ನೆಲೆಸಿದೆ. ಸುಗಂದವರ್ತಿ, ಸೌಗಂದಿಪುರ ಎಂದೂ ಕರೆಯಲ್ಪಡಿತ್ತಿದ್ದ ಇದು ರಟ್ಟ ವಂಶದ (875 -1230) ರಾಜಧಾನಿಯಾಗಿತ್ತು. ಶಕ್ತಿ ದೇವಿಯ ಆರಾಧಕರಿಗೆ ಪವಿತ್ರವಾಗಿರುವ ಶ್ರೀ ರೇಣುಕಾ ದೇವಿ/ ಎಲ್ಲಮನ ದೇವಾಲಯ ಇಲ್ಲಿರುವ ಪ್ರಮುಖ ಪ್ರವಾಸಿ ತಾಣ. ಎಲ್ಲಮಗುಡ್ಡ ಎಂದೂ ಕರೆಯಲ್ಪಡುವ ಈ ತಾಣಕ್ಕೆ ತೆರಳಲು ಬೆಳಗಾವಿಯಿಂದ ನಿರಂತರವಾಗಿ ಬಸ್ ಸೌಲಭ್ಯವಿದೆ. ಬನದ ಹುಣ್ಣಿಮೆ ಹಾಗು ಭಾರತಿ ಹುಣ್ಣಿಮೆ ದಿನಗಳಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.

ಕೋಟೆ ತಾಣ
ಬೆಳಗಾವಿ ಕೋಟೆಯನ್ನು ಸ್ಥಳೀಯವಾಗಿ ಆಳುತ್ತಿದ್ದವರು 12 ನೇ ಶತಮಾನದಲ್ಲೆ ನಿರ್ಮಿಸಿದ್ದು, ಹಂತ ಹಂತವಾಗಿ ಇದು ಬೆಳಗಾವಿಯಲ್ಲಿ ನಂತರ ಆಳಿದ ಆಡಳಿತಗಾರರಿಂದ ಅಭಿವೃದ್ಧಿಗೊಂಡಿತು. ಬೆಳಗಾವಿಯ ಐತಿಹಾಸಿಕತೆಗೆ ಸಾಕ್ಷಿಯಾಗಿ ನಿಂತಿರುವ ಈ ಕೋಟೆಯಂಗಳದಲ್ಲಿ ಪ್ರಸಿದ್ಧ ಗಣೇಶನ ದೇವಾಲಯ ಹಾಗೂ ದುರ್ಗಾ ದೇವಾಲಯಗಳಿವೆ.
ಚಿತ್ರಕೃಪೆ: belgaum.nic.in

ಅಥವಾ ಬಸ್ತಿ
ಕೋಟೆಯಲ್ಲಿರುವ ಎರಡು ಬಸ್ತಿಗಳಲ್ಲಿ ಕಮಲಬಸ್ತಿ ಕೂಡ ಒಂದಾಗಿದೆ. ಇದನ್ನು 1204 ರಲ್ಲಿ ನಿರ್ಮಿಸಲಾಗಿದೆ. ಈ ಬಸ್ತಿಯನ್ನು ಚಾಲುಕ್ಯರ ಶೈಲಿಯಲ್ಲಿ ನೇಮಿನಾಥರ ಮೂರ್ತಿಯನ್ನು ಕಪ್ಪು ಕಲ್ಲಿನಲ್ಲಿ ಕೆತ್ತಲಾಗಿದೆ. ಇಲ್ಲಿನ ಮುಖ್ಯ ಆಕರ್ಷಣೆ "ಮುಖಮಂಟಪ" ವನ್ನು ಎತ್ತರದಲ್ಲಿ ಕಮಲ ಹೂವಿನ ಆಕಾರದಲ್ಲಿ ಕೆತ್ತಲಾಗಿದೆ.
ಚಿತ್ರಕೃಪೆ: Manjunath Doddamani Gajendragad

ಪೂರ್ವ ದಿಕ್ಕಿಗೆ
ಬೆಳಗಾವಿಯ ಪೂರ್ವ ದಿಕ್ಕಿಗೆ ಸುಮಾರು 84 ಕಿ.ಮೀಗಳ ಅಂತರದಲ್ಲಿ ನೆಲೆಗೊಂಡಿರುವ ನವೀಲುತೀರ್ಥ ಒಂದು ಸುಪ್ರಸಿದ್ಧ ಪಿಕ್ನಿಕ್ ತಾಣ. ಸವದತ್ತಿಗೆ ಅತಿ ಹತ್ತಿರದಲ್ಲಿರುವ ಈ ತಾಣವನ್ನು ಬೆಳಗಾವಿಯಿಂದ ಸವದತ್ತಿಗೆ ತೆರಳಿ ಸುಲಭವಾಗಿ ಅಲ್ಲಿಂದ ತಲುಪಬಹುದು. 1932 ರಲ್ಲಿ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಜಿಯವರು ಈ ತಾಣದಲ್ಲಿ ಧ್ಯಾನಿಸಿದ್ದರು ಎಂದು ಹೇಳಲಾಗಿದೆ.

ಪ್ರಾವಿಣ್ಯತೆ
ಆಧ್ಯಾತ್ಮಿಕ ಹಾಗು ಯೋಗ ಸಾಧನೆಯಲ್ಲಿ ಅತಿ ಪ್ರಾವಿಣ್ಯತೆಯನ್ನು ಪಡೆದ್ದಿದ್ದ ಇವರು ದೇವಿಯ ಕೃಪೆಯಿಂದಾಗಿ ತಮ್ಮ 18 ನೇಯ ವಯಸ್ಸಿನಲ್ಲಿಯೆ ಕುಂಡಲಿನಿಯನ್ನು ಜಾಗೃತಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಮಲಪ್ರಭಾ ನದಿ ತಟದಲ್ಲಿ ನೆಲೆಸಿರುವ ನವೀಲುತೀರ್ಥದಲ್ಲಿ ವಾಸಿಸುತ್ತ ಯೋಗಾಭ್ಯಾಸದಲ್ಲಿ ನಿರತರಾಗಿರುತ್ತಿದ್ದ ಇವರು ಇಲ್ಲಿಯೆ ಯೋಗದ ಕಡೆಯ ಹಂತ ಸಿದ್ಧಿಯನ್ನು ಪಡೆದಿದ್ದರು ಎನ್ನಲಾಗಿದೆ.

ಪ್ರಸಿದ್ಧ ದೇವಾಲಯ
ಇದು ಬೆಳಗಾವಿ ನಗರದ ಬಲು ಪುರಾತನ ಹಾಗೂ ಅಷ್ಟೆ ಪ್ರಸಿದ್ಧಿ ಪಡೆದ ದೇವಾಲಯವಾಗಿದೆ. ಈ ದೇವಸ್ಥಾನವು ದಕ್ಷಿಣದ ಕಾಶಿ ಎಂದು ಹೆಸರುವಾಸಿಯಾಗಿದೆ. 12 ಜ್ಯೋತಿರ್ಲಿಂಗದ ದರ್ಶನದ ನಂತರ ಕಪಿಲೇಶ್ವರ ದೇವರ ದರ್ಶನ ಮಾಡದಿದ್ದರೆ ಯಾತ್ರೆ ಅಪೂರ್ಣವೆಂದು ಜನರ ನಂಬಿಕೆಯಾಗಿದೆ. ಶ್ರಾವಣ ಮಾಸದಲ್ಲಿ ಕಪಿಲೇಶ್ವರ ಮಂದಿರಕ್ಕೆ ಭೇಟಿ ಮಾಡಲೇಬೇಕಾಗಿದ್ದು, ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ಜನ ಬರುತ್ತಾರೆ.
ಚಿತ್ರಕೃಪೆ: belgaum.nic.in

ಕುಡಿಯುವ ನೀರಿನ ಸಂಗ್ರಹ ಕೆರೆ
ರಕ್ಕಸಕೊಪ್ಪ ಎಂತಲೂ ಕರೆಯಲ್ಪಡುವ ಈ ನೀರಿನ ಕೆರೆ ಬೇಳಗಾವಿ ಜನರಿಗೆ ಕುಡಿಯಲು ನೀರೊದಗಿಸುವ ಪ್ರಮುಖ ಮೂಲವಾಗಿದೆ. ಹಿಂದೆ ಈ ಪ್ರದೇಶವು ದಟ್ಟವಾದ ಬೆಟ್ಟ ಕಾಡುಗಳಿಂದ ಸುತ್ತುವರೆದಿತ್ತು ಹಾಗೂ ರಕ್ಕಸರು ಇಲ್ಲಿ ವಾಸಿಸುತ್ತಿದ್ದರಿಂದ ಇದಕ್ಕೆ ರಕ್ಕಸಕೊಪ್ಪ ಎಂಬ ಹೆಸರು ಬಂದಿದೆ. ಮಾರ್ಕಂಡೇಯ ನದಿಗೆ ಇಲ್ಲಿಯೆ ಡ್ಯಾಂ ನಿರ್ಮಿಸಲಾಗಿದ್ದು ನೀರನ್ನು ಸಂಗ್ರಹಿಸಲಾಗುತ್ತದೆ. ಇದೊಂದು ಸುಂದರ ಪಿಕ್ನಿಕ್ ಸ್ಥಳವಾಗಿ ಹೆಸರುವಾಸಿಯಾಗಿದ್ದು ಬೆಳಗಾವಿ ನಗರ ಕೇಂದ್ರದಿಂದ 16 ಕಿ.ಮೀ ಗಳಷ್ಟು ದೂರದಲ್ಲಿದೆ.
ಚಿತ್ರಕೃಪೆ: belgaum.nic.in

ಅರಣ್ಯ ಪ್ರದೇಶ
ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟಗಳ ಒಡಲಿನಲ್ಲಿ ಸ್ಥಿತವಿರುವ ಭೀಮ್ಗಡ್ ಹಾಗೂ ಜಾಂಬೋಟಿ ಪ್ರದೇಶಗಳು ಅತ್ಯದ್ಭುತ ಪ್ರಾಕೃತಿಕ ತಾಣಗಳಾಗಿವೆ. ಫ್ರೀ ಟೇಲ್ ಇರುವಂತಹ ವಿಶಿಷ್ಟ ಬಾವಲಿಯ ಜಾತಿಯೊಂದು ಭಾರತದಲ್ಲಿ ಈ ಸ್ಥಳದಲ್ಲಿ ಮಾತ್ರವೆ ಕಂಡುಬರುತ್ತದೆ. ಅಲ್ಲದೆ ದಟ್ಟಾರಣ್ಯ ಹಾಗೂ ನೀರಿನ ಮೂಲಗಳಿರುವ ಜಾಂಬೋಟಿ ಪ್ರದೇಶವು ಸಾಕಷ್ಟು ಅದ್ಭುತವಾಗಿದೆ. ಜಾಂಬೋಟಿ ಪ್ರದೇಶ.
ಚಿತ್ರಕೃಪೆ: Milindpk

ಸೋಲ್ ಕಢಿ
ಇನ್ನೂ ಕೊನೆಯದಾಗಿ ನೀವು ಬೆಳಗಾವಿ ನಗರದಲ್ಲಿದ್ದರೆ ರಾಮದೇವ್ ಹೋಟೆಲ್, ಬೋಗಾರ್ ವೇಸ್, ಖಡೇ ಬಜಾರ್, ಟಿಳಕವಾಡಿ, ಕ್ಯಾಂಪ್ ಮುಂತಾದ ಪ್ರದೇಶಗಳಲ್ಲಿ ಬಾಯಲ್ಲಿ ನೀರೂರಿಸುವಂತಹ ವಿವಿಧ ಬಗೆಯ ಚಾಟ್ ಹಾಗೂ ಚೈನೀಸ್ ತಿಂಡಿಗಳನ್ನು ತಿನ್ನಲು ಮರೆಯದಿರಿ. ಇನ್ನೊಂದು ವಿಶೇಷವೆಂದರೆ ಇಲ್ಲಿ ಸಿಗುವ ಗುಲಾಬಿ ಬಣ್ಣದ ಸೋಲ್ ಕಢಿ ಜೂಸ್. ಇದೊಂದು ಅಮ್ಸೋಲಿನಿಂದ ಮಾಡುವ ಅತ್ಯಂತ ರುಚಿಕರವಾದ ಪಾನೀಯವಾಗಿದ್ದು ಉಪ್ಪು-ಹುಳಿ-ಖಾರ ವಗಿರುತ್ತದೆ. ಇದು ಪಚನ ಕ್ರಿಯೆಗೆ ಬಲು ಪರಿಣಮಕಾರಿಯಾಗಿದ್ದು ಸಾಮಾನ್ಯವಾಗಿ ಬೀಡಾ ಅಂಗಡಿಗಳಲ್ಲಿ, ಹಣ್ಣುಗಳ ಪಾನೀಯ ಅಂಗಡಿಗಳಲ್ಲಿ ದೊರೆಯುತ್ತದೆ.
ಚಿತ್ರಕೃಪೆ: Yogesh Khandke


Click it and Unblock the Notifications
















