ತಮಿಳ ನಾಡಿನಲ್ಲಿರುವ ಒಂಬತ್ತು ನವಗ್ರಹ ದೇವಾಲಯಗಳಲ್ಲಿ ಒಂದು ಇಲ್ಲಿದೆ.ಕುಂಬಕೋಣಂನಿಂದ 7 ಕಿ.ಮಿ ದೂರದಲ್ಲಿರುವ ಈ ಗುಡಿಯಲ್ಲಿರುವ ನವಗ್ರಹ ರಾಹು. ಭಗವಾನ ಶಿವನು ನಾಗನಾಥಸ್ವಾಮಿಯಾಗಿ, ಪಾರ್ವತಿದೇವಿಯು ಗಿರಿಗುಜಾಂಬಿಕೆಯಾಗಿ ನೆಲೆಸಿರುವ ಈ ದೇಗುಲದಲ್ಲಿ ಪಾರ್ವತಿಯ ಜೊತೆ ಲಕ್ಷ್ಮಿ, ಸರಸ್ವತಿಯರೂ ನೆಲೆಸಿದ್ದಾರೆ. ಈ ದೇವಾಲಯದಲ್ಲಿ ರಾಹುವು ತನ್ನ ಪತ್ನಿಯರಾದ ನಾಗಕನ್ನಿ ಮತ್ತು ನಾಗವಲ್ಲಿಯರೊಂದಿಗೆ ತನ್ನ ಶಾಪ ವಿಮೋಚನೆಗಾಗಿ ಶಿವನನು ಪೂಜಿಸುವನು. ರಾಹುವಿಗೆ ಬೇರೆ ಕಡೆಗಳಂತೆ ಸರ್ಪದ ಮುಖವಿರದೆ ಮಾನವನ ಮುಖವಿರುವುದು ಇಲ್ಲಿನ ವಿಶೇಷಗಳಲ್ಲೊಂದು. ಇಲ್ಲಿ ಪ್ರತಿದಿನ ರಾಹುಕಾಲದಲ್ಲಿ ರಾಹುವಿಗೆ ಕ್ಷೀರಾಭಿಷೇಕ ನಡೆಯುತ್ತದೆ. ಈ ಹಾಲು ರಾಹುವಿನ ಮೇಲೆ ಬಿದ್ದಾಗ ನೀಲವರ್ಣಕ್ಕೆ ತಿರುಗುತ್ತದೆಂದೂ, ಮೂರ್ತಿಯಿಂದ ಜಾರಿ ನೆಲೆದ ಮೇಲೆ ಬಂದಾಗ ಮತ್ತೆ ಬಿಳಿ ಬಣ್ಣಕ್ಕೆ ತಿರುಗುತ್ತದೆಂದೂ ನೋಡಿದವರು ಹೇಳುವುದುಂಟು.
ನಾಗನಾಥಸ್ವಾಮಿಯ ದೇವಾಲಯದಲ್ಲಿ ಕೆಲವು ಮಂಟಪಗಳಿದ್ದು, ಶಿಖರವು ಗೋಪುರ ಮತ್ತು ಪ್ರಕಾರಗಳಿಂದ ಅಲಂಕೃತವಾಗಿದೆ. ಕೋಟೆಯಂತಹ ಗೋಡೆಗಳುಳ್ಳ ನಾಲ್ಕು ಪ್ರವೇಶಗೋಪುರಗಳಿದ್ದು ಅವು ಹೊರಗಿನ ಪ್ರಕಾರಗಳನ್ನು ಸುತ್ತುವರೆದಿವೆ. ದೇವಾಲಯದ ದಕ್ಷಿಣಕ್ಕೆ ಕಲ್ಯಾಣಿ ಹಾಗು ನಾಲ್ಕು ಮಂಟಪಗಳಿವೆ.ಈ ಮಂಟಪಗಳು ರಥದ ವಿನ್ಯಾಸದಲ್ಲಿದ್ದು 100 ಕಂಬಗಳಿಂದ ಸುತ್ತುವರೆಯಲ್ಪಟ್ಟಿವೆ. ಇಲ್ಲಿ ರಾಹುವಿನ ಪ್ರತಿಮೆಯು ನೈರುತ್ಯದಿಕ್ಕಿನಲ್ಲಿ ಪ್ರತಿಷ್ಠಾಪಿತವಾಗಿದೆ. ಈ ದೇವಾಲಯದ ವಾಸ್ತುಶಿಲ್ಪವು ಚೋಳರ ಶೈಲಿಯದ್ದಾಗಿದೆ.


Click it and Unblock the Notifications