ಬ್ರಹ್ಮ ದೇವಸ್ಥಾನವು ಪುಷ್ಕರ್ ಸರೋವರದ ದಂಡೆಯ ಮೇಲೆ ಸ್ಥಿತವಾಗಿದೆ. ಪುಷ್ಕರ್ ನಲ್ಲಿರುವ ಬ್ರಹ್ಮ ದೇವಸ್ಥಾನವು, ಬ್ರಹ್ಮ ದೇವರಿಗೆ ಸಮರ್ಪಿತವಾಗಿರುವ ಭಾರತದಲ್ಲಿ ಕಾಣಸಿಗುವ ಕೆಲವೆ ಕೆಲವು ದೇವಾಲಯಗಳಲ್ಲಿ ಒಂದಾಗಿದೆ.
ಕೆಲವು ಹಿಂದು ಜಾನಪದ ಕಥೆಗಳ ಪ್ರಕಾರ, ಒಮ್ಮೆ ಬ್ರಹ್ಮದೇವನು ಪುಷ್ಕರ್ ನಲ್ಲಿ ಯಜ್ಞವನ್ನು ಮಾಡಲು ನಿಶ್ಚಯಿಸಿದನು. ಆದರೆ, ಯಜ್ಞ ಸಮಯದಲ್ಲಿ ಅವನ ಪತ್ನಿಯಾದ ಸಾವಿತ್ರಿಯು ಅಲ್ಲಿರಲಿಲ್ಲ. ಇದರ ಪರಿಣಾಮವಾಗಿ ಯಜ್ಞವನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಬ್ರಹ್ಮದೇವನು ಅಲ್ಲೇ ಸ್ಥಳೀಯವಾಗಿ ಹಾಲು ಮಾರುವವಳಾದ ಗಾಯತ್ರಿ ಎಂಬಾಕೆಯನ್ನು ವರಿಸಿ ಯಜ್ಞ ಪೂರ್ಣಗೊಳಿಸಿದ. ಇದರಿಂದ ಬೇಸರಗೊಂಡ ಸಾವಿತ್ರಿಯು, ಬ್ರಹ್ಮ ದೇವರು ಪುಷ್ಕರ್ ಹೊರತಾಗಿ ಎಲ್ಲಿಯೂ ಪೂಜಿಸಲ್ಪಡುವುದಿಲ್ಲವೆಂದು ಶಾಪ ಕೊಟ್ಟಳು. ಮೂಲತಃ 14 ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನದಲ್ಲಿ, ಚತುರ್ಮುಖ ಬ್ರಹ್ಮನು ತನ್ನ ಪತ್ನಿಯರ ಸಮೇತ ಗಾಯತ್ರಿ ಹಾಗು ಸಾವಿತ್ರಿ ಕ್ರಮವಾಗಿ ಎಡ ಹಾಗು ಬಲ ಬದಿಗೆ ಕುಳಿತಿರುವುದನ್ನು ಕಾಣಬಹುದು.