1551 ರಲ್ಲಿ ನಿರ್ಮಾಣಗೊಂಡ ರೈಸ್ ಮಾಗೋಸ ಕೋಟೆಯು ಇಂದು ಭಾಗಶಹ ಅವಶೇಷವಾಗಿದ್ದರೂ ಕೂಡ ವೈಭವತೆಯ ಪ್ರತೀಕವಾಗಿದ್ದು ಆಕರ್ಷಣೀಯ ಪ್ರವಾಸಿ ಸ್ಥಳವಾಗಿದೆ. ಮಾಂಡೋವಿ ನದಿಯ ದಡದ ಉತ್ತರಕ್ಕಿರುವ ಈ ಕೋಟೆಯು ಸುಲ್ತಾನ ಅದೀಲ್ ಶಾಹನಿಂದ ನಿರ್ಮಾಣವಾಗಿದೆ. ತದನಂತರ ಪೋರ್ಚುಗೀಸರ ಆಡಳಿತದಲ್ಲಿದ್ದ ಈ ಕೋಟೆಯು ಅವರ ಭದ್ರತಾ ಕೋಟೆಯಾಗಿ ಮೆರೆಯಿತು.
ಐತಿಹಾಸಿಕ ಮಹತ್ವ
ಪೋರ್ಚುಗೀಸರು 1760 ರಲ್ಲಿ ರೈಸ್ ಮಾಗೋಸ್ ಕೋಟೆಯನ್ನು ವಶಪಡಿಸಿಕೊಂಡರು. ಅಂದು ಇದು ಅವರ ಶತ್ರುಗಳ ಮೇಲೆ ನಿಗಾ ಇಡಲು ಕಾವಲು ಗೋಪುರಗಳಾಗಿ ಕಾರ್ಯ ನಿರ್ವಹಿಸಿತ್ತು. ಇಂದು ಈ ಕೋಟೆಯ ಮೇಲೆ ನಿಂತು ನೋಡಿದಾಗ ಮಾಂಡೋವಿ ನದಿಯ ಅದ್ಭುತವಾದ ದೃಶ್ಯ ಹಾಗು ಪಣಜಿಯ ಸಮುದ್ರದಲ್ಲಿರುವ ಹಲವಾರು ಹಡುಗುಗಳ ನೋಟವು ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಲ್ಯಾಟರೈಟ್ ಕಲ್ಲುಗಳಿಂದ ನಿರ್ಮಿತವಾಗಿರುವ ಈ ಕೋಟೆಯು ಸಾಮಾನ್ಯವಾಗಿ ಕಂಡುಬರುವ ಗ್ರೇ ಬಣ್ಣದ ಕಲ್ಲಿನ ಕೋಟೆಗಳಿಗೆ ವಿರುದ್ಧವಾಗಿ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ. ಬಹಳ ಕಾಲದವರೆಗೆ ಪೋರ್ಚುಗೀಸರು ಈ ಕೋಟೆಯನ್ನು ಮರಾಠರ ಆಕ್ರಮಣವನ್ನು ತಡೆಯಲು ಬಳಸಿದ್ದರು. ನಂತರ ಇವರ ಅಧಿಕಾರ ಪತನಗೊಂಡಮೇಲೆ ಈ ಕೋಟೆಯು ಜೈಲಾಗಿ ಉಪಯೋಗಿಸಲಾಯಿತು.


Click it and Unblock the Notifications