ಶ್ರೀ ಗುಲ್ಜಾರಿ ಲಾಲ್ ನಂದಾರವರು ಭಾರತ ಕಂಡ ಅತ್ಯಂತ ಪ್ರಾಮಾಣಿಕ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರು. ಉಪಪ್ರಧಾನಿಯಾಗಿದ್ದರು ಸಂತನಂತಹ ಜೀವನವನ್ನು ಬಾಳಿದ ಮಹಾಪುರುಷರು ಇವರು.
ಗುಲ್ಜಾರಿ ಲಾಲ್ ನಂದಾರವರು ಒಬ್ಬ ಸ್ವಾತಂತ್ರ್ಯ ಸೇನಾನಿ. ಇವರು ನೆಹರೂ, ಗಾಂಧೀ ಮತ್ತು ಪಟೇಲರ ಸಾಲಿನಲ್ಲಿ ಗುರುತಿಸಲ್ಪಡುವವರು. ಇವರು ದೇಶಕ್ಕಾಗಿ ಕಾರ್ಮಿಕ ಸಚಿವ, ಗೃಹ ಮಂತ್ರಿ ಮತ್ತು ಎರಡು ಬಾರಿ ಹಂಗಾಮಿ ಪ್ರಧಾನ ಮಂತ್ರಿಯಾಗಿದ್ದರು ( ಜವಾಹರ್ ಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ನಿಧನದ ನಂತರ)
ತಮ್ಮ ಸಕ್ರಿಯ ರಾಜಕಾರಣದ ನಂತರದ ನಿವೃತ್ತ ಜೀವನವನ್ನು ಇವರು ಕುರುಕ್ಷೇತ್ರದಲ್ಲಿ ಕಳೆದರು. ತಮ್ಮ ನಿವೃತ್ತ ದಿನಗಳಲ್ಲಿ ಇವರು ಬ್ರಹ್ಮ ಸರೋವರ್ ಮತ್ತು ಥಾನೇಶ್ವರ್ ದೇವಾಲಯಗಳನ್ನು ಅಭಿವೃದ್ಧಿಪಡಿಸಲು ದುಡಿದರು. ಇವರು ಶ್ರೀ ಕೃಷ್ಣ ವಸ್ತು ಸಂಗ್ರಹಾಲಯದ ರೂವಾರಿ ಸಹ ಹೌದು.
ನಂದಾಜೀಯವರು 1998 ಜನವರಿ 15 ರಂದು ಇಹಲೋಕವನ್ನು ತ್ಯಜಿಸಿದರು. ಹರಿಯಾಣ ಸರ್ಕಾರವು ಈ ಧೀಮಂತ ವ್ಯಕ್ತಿಯ ಸವಿನೆನಪನ್ನು ಸಾರುವ ಸಲುವಾಗಿ ಕುರುಕ್ಷೇತ್ರದಲ್ಲಿ ಒಂದು ಸ್ಮಾರಕವನ್ನು ನಿರ್ಮಿಸಿದ್ದಾರೆ.


Click it and Unblock the Notifications