ಭೀಷ್ಮ ಕುಂಡ್ ಥಾನೇಶ್ವರದಲ್ಲಿರುವ ನರ್ಕತರಿಯಲ್ಲಿ ನೆಲೆಗೊಂಡಿದೆ. ಭೀಷ್ಮ ಪಿತಾಮಹನು ಕೌರವ ಮತ್ತು ಪಾಂಡವರಿಬ್ಬರನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಬೆಳೆಸಿದ ಮಹಾನುಭಾವ. ಉಪ್ಪಿನ ಋಣಕ್ಕಾಗಿ ಈತ ಕೌರವರ ಕಡೆ ಸೇನಾಧಿಪತಿಯಾಗಿ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡನು.
ದಂತಕತೆಗಳ ಪ್ರಕಾರ ಈತ ಇಚ್ಛಾ ಮರಣವನ್ನು ಪಡೆಯಲು ಶಕ್ತನಾಗಿದ್ದ, ಈತನ ತಾಯಿ ಗಂಗೆ ಈಕೆಗೆ ಈ ವರ ನೀಡಿದ್ದಳು. ಈ ವರದಿಂದ ಈತನು ಎಂದೆಂದಿಗು ಅಜೇಯನಾದ ವೀರನಾಗಿದ್ದನು. ಪಾಂಡವರ ಮೇಲೆ ಯುದ್ಧ ಮಾಡಿದರು ಈತನಿಗೆ ಪಾಂಡವರ ಮೇಲೆ ಅಭಿಮಾನವಿತ್ತು.
ಮಹಾಭಾರತದ ಮೊದಲ ಹತ್ತುದಿನ ವೀರಾವೇಶದಿಂದ ಪಾಂಡವರ ಸೇನೆಯನ್ನು ಆಹುತಿ ತೆಗೆದುಕೊಂಡ ಭೀಷ್ಮನನ್ನು ನಿಗ್ರಹಿಸುವುದು ಹೇಗೆಂದು ಅರಿಯಲಾಗದೆ ಪಾಂಡವರು ಶ್ರೀಕೃಷ್ಣನ ಬಳಿಗೆ ಹೋದರು. ಭೀಷ್ಮನ ಮರ್ಮವನ್ನು ಅರಿತ ಕೃಷ್ಣನು ಶಿಖಂಡಿಯನ್ನು ( ನಪುಂಸಕನಾಗಿದ್ದ ಅಂಬೆ) ತಂದು ಯುದ್ಧ ಮಾಡುವ ಉಪಾಯವನ್ನು ಸೂಚಿಸಿದನು. ಏಕೆಂದರೆ ಭೀಷ್ಮನು ಹೆಣ್ಣಾಗಿದ್ದು ಗಂಡಸಿನಂತಿರುವವರ ಮೇಲೆ ಯುದ್ಧ ಮಾಡುವುದಿಲ್ಲ ಎಂದು ಶ್ರೀಕೃಷ್ಣನಿಗೆ ತಿಳಿದಿತ್ತು.
ಈ ಉಪಾಯದ ಪ್ರಕಾರ ಅರ್ಜುನ ಶಿಖಂಡಿಯನ್ನು ಮುಂದೆ ಇಟ್ಟುಕೊಂಡು ಯುದ್ಧ ಮಾಡಿದನು. ಶಿಖಂಡಿಯನ್ನು ನೋಡಿದ ಭೀಷ್ಮ ಪಿತಾಮಹನು ತನ್ನ ಬಿಲ್ಲನ್ನು ತ್ಯಜಿಸಿ, ಅರ್ಜುನನ ಬಾಣಗಳು ತನ್ನನ್ನು ಘಾಸಿಗೊಳಿಸುವಂತೆ ನಿಂತನು. ಹೀಗೆ ಮಹಾಭಾರತದ ಹತ್ತನೆಯ ದಿನ ಭೀಷ್ಮನು ಶರಾಘಾತದಿಂದ ತೀವ್ರವಾಗಿ ಗಾಯಗೊಂಡನು.
ಆಗ ಅವನು ಶಯಶಯ್ಯೆಯ ಮೇಲೆ ಮಲಗಿರಲು ಕೌರವ ಮತ್ತು ಪಾಂಡವರು ಆತನ ಸುತ್ತ ನೆರೆದರು. ಬಾಯಾರಿಕೆಯಿಂದ ಭೀಷ್ಮನು ಕುಡಿಯಲು ನೀರು ಕೇಳಿದಾಗ ಅರ್ಜುನನು ಬಾಣವನ್ನು ಬಿಟ್ಟು ಒಂದು ನೀರಿನ ಚಿಲುಮೆಯನ್ನು ಸೃಷ್ಟಿಸಿದನಂತೆ. ಅದರಿಂದ ಬಂದ ನೀರು ಭೀಷ್ಮನ ಬಾಯಾರಿಕೆಯನ್ನು ತಣಿಸಿತು. ಈ ಘಟನೆ ನಡೆದಿದ್ದು, ಕುರುಕ್ಷೇತ್ರ ಜಿಲ್ಲೆಯ ನರಕ್ಟಾರಿ ಹಳ್ಳಿಯ ಬಳಿಯಲ್ಲಿ. ಈ ಘಟನೆಯನ್ನು ಸ್ಮರಿಸುವ ಸಲುವಾಗಿ ಇಲ್ಲಿ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿನ ಕಲ್ಯಾಣಿಯ ಮೆಟ್ಟಿಲುಗಳನ್ನು ನವೀಕರಿಸಲಾಗಿದೆ.


Click it and Unblock the Notifications