ಜಾರ್ಖಂಡ್ - ಪ್ರವಾಸೋದ್ಯಮದ ಸಂಕ್ಷೀಪ್ತ ಪರಿಚಯ

ಮುಖಪುಟ » ಸ್ಥಳಗಳು » » ಮುನ್ನೋಟ

ಜಾರ್ಖಂಡ್ ರಾಜ್ಯವು ಬಿಹಾರದ ದಕ್ಷಿಣ ಭಾಗದಿಂದ ಬೇರ್ಪಟ್ಟು ರೂಪಗೊಂಡಂತಹ ರಾಜ್ಯವಾಗಿದೆ. ಮೊದಲು ಜಾರ್ಖಂಡ್ ಬಿಹಾರದ ಒಂದು ಭಾಗವಾಗಿತ್ತು. ಭಾರತದ ಸ್ವಾತಂತ್ರ್ಯದ ನಂತರ, ಇಲ್ಲಿನ ಬುಡಕಟ್ಟಿನವರು ತಮಗೆ ಒಂದು ಪ್ರತ್ಯೇಕ ರಾಜ್ಯ ಬೇಕೆಂಬ ಬೇಡಿಕೆ ಆರಂಭಿಸಿದರು ಮತ್ತು ಇದರ ಪರಿಣಾಮವಾಗಿ 15 ನವೆಂಬರ್ 2000 ರಂದು ಇದನ್ನು ಒಂದು ಪ್ರತ್ಯೇಕ ರಾಜ್ಯವನ್ನಾಗಿಸಲಾಯಿತು.

ಜಾರ್ಖಂಡ್ ರಾಜ್ಯವು ತನ್ನ ಉತ್ತರದಲ್ಲಿ  ಬಿಹಾರ ಮತ್ತು ಪಶ್ಚಿಮದಲ್ಲಿ ಚತ್ತೀಸ್ಗಡ್ ನಿಂದ ಸುತ್ತುವರಿದಿದ್ದರೆ, ದಕ್ಷಿಣದಲ್ಲಿ ಒರಿಸ್ಸಾ ಮತ್ತು ಪೂರ್ವದಲ್ಲಿ ಪಶ್ಚಿಮ ಬಂಗಾಳದಿಂದ ಸುತ್ತುವರೆದಿದೆ. ರಾಂಚಿ ಜಾರ್ಖಂಡ್ ನ ರಾಜಧಾನಿ ಮತ್ತು ಜಮಷೇಡಪುರ್ ರಾಜ್ಯದ ಒಂದು ದೊಡ್ಡ ಕೈಗಾರಿಕಾ ನಗರವಾಗಿದೆ. ಧನಬಾದ್, ಬೊಕಾರೊ, ಹಜಾರಿಬಾಗ್ ಇಲ್ಲಿನ ಇತರೆ ಮುಖ್ಯ ನಗರಗಳು. ಕಾಡಿನ ನಡು ಎಂದೇ ಹೆಸರುವಾಸಿಯಾಗಿರುವ ಇಲ್ಲಿ ಸಾಕಷ್ಟು ಬೆಟ್ಟ ಗುಡ್ಡಗಳು, ಕಾಡುಗಳನ್ನು ಕಾಣಬಹುದು. ಈ ರಾಜ್ಯವು ನಿತ್ಯಹರಿದ್ವರ್ಣ ಕಾಡುಗಳು, ಬೆಟ್ಟ ಗುಡ್ಡಗಳು, ಕಲ್ಲಿನ ಪ್ರಸ್ಥಭೂಮಿಗಳ  ಜೊತೆ ಜೊತೆಗೆ ಅನೇಕ ಸುಂದರ ಜಲಪಾತಗಳನ್ನೂ ಒಳಗೊಂಡಿದೆ.

ಜಾರ್ಖಂಡ್ ಭೂಗೋಳ ಮತ್ತು ಹವಾಮಾನ

ಜಾರ್ಖಂಡ್ ನ ಹೆಚ್ಚು ಭಾಗವು ಛೋಟಾ ನಾಗಪುರ್ ಪ್ರಸ್ಥಭೂಮಿಯಲ್ಲಿದ್ದು, ದಾಮೋದರ್, ಖಾರ್ಕೈ ,ಕೊಯಲ್ ಮತ್ತು ಸುಬಾನಾರೇಖಾ ನದಿಗಳು ಈ ರಾಜ್ಯದ ಮುಖ್ಯ ನೀರಿನ ಅಧಾರಗಳಾಗಿವೆ. ರಾಜ್ಯದ ಬಹುಭಾಗವು ಕಾಡಿನಿಂದ ಕೂಡಿದ್ದು, ಇಲ್ಲಿ ಹುಲಿಗಳು ಮತ್ತು ಏಷಿಯಾ ಆನೆಗಳು ಹೆಚ್ಚಿವೆ.  ಕೆಲವು ಶತಮಾನಗಳ ಹಿಂದೆ ಜಾರ್ಖಂಡ್ ಎಷ್ಟೊಂದು ದಟ್ಟವಾದ ಅರಣ್ಯದಿಂದ ಕೂಡಿತ್ತೆಂದರೆ ಇದರೊಳಗೆ ಪ್ರವೇಶಿಸುವುದು ಕೂಡ ಅತ್ಯಂತ ಕಷ್ಟಮಯವಾಗಿತ್ತು. ಕಾಲಕ್ರಮೇಣ ಇಲ್ಲಿ ಶೋಧಿಸಲಾದ ಅಪಾರವಾದ ಖನಿಜ ಸಂಪತ್ತಿನಿಂದಾಗಿ ಜಾರ್ಖಂಡ್ ಭಾರತದ ಮುಖ್ಯ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾಗುವಲ್ಲಿ ಸಫಲವಾಯಿತು. ಒಂದೆಡೆ, ಗಣಿ-ಜಾಗ, ರೈಲು ಮತ್ತು ರಸ್ತೆ, ವೇಗವಾಗಿ ಮುಂದುವರೆದರೆ, ಶೈಕ್ಷಣಿಕ ಮತ್ತು ತಾಂತ್ರಿಕ ಸಂಸ್ಥೆಗಳು ಹೆಚ್ಚುತ್ತ ಪ್ರಮುಖ ಪಟ್ಟಣಗಳು ಹೆಚ್ಚುಹೆಚ್ಚಾಗಿ ಕಾಸ್ಮೋಪಾಲಿಟನ್ ಸಿಟಿಗಳಾಗಿ ಮಾರ್ಪಡಲು ಆರಂಭಿಸಿದವು.

ಜಾರ್ಖಂಡ್ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲವನ್ನು ಹೊಂದಿದೆ. ಬೇಸಿಗೆ ತುಂಬಾ ಧಗೆಯಿಂದ ಕೂಡಿರುತ್ತದೆ. ಈ ಸಮಯ ಪ್ರವಾಸಿಗರಿಗೆ ಜಾರ್ಖಂಡ್ ನೋಡಲು ಸೂಕ್ತವಲ್ಲ. ಸೆಪ್ಟೆಂಬರ್ ಜಾರ್ಖಂಡ್ ರಾಜ್ಯಕ್ಕೆ ಭೇಟಿ ನೀಡಲು ಉತ್ತಮ ಸಮಯ, ಏಕೆಂದರೆ ಈ ಸಮಯದಲ್ಲಿ ಆಗತಾನೆ ಮಳೆ ಕಡಿಮೆ ಆಗಿ ವಾತಾವರಣ ಆಹ್ಲಾದಕರವಾಗಿರುತ್ತದೆ.

ಜಾರ್ಖಂಡ್ - ಶ್ರೀಮಂತ ಪ್ರಾಣಿ ಮತ್ತು ಸಸ್ಯಗಳನ್ನು ಒಳಗೊಂಡ ಭೂಮಿ

ಜಾರ್ಖಂಡ್ ರಾಜ್ಯವು ತನ್ನ ವಸುಧೆಯಲ್ಲಿ ವಿವಿಧ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಒಳಗೊಂಡಿದೆ. ಜಾರ್ಖಂಡ್ ನಲ್ಲಿರುವ ರಾಷ್ಟ್ರೀಯ ಉದ್ಯಾನವನ ಮತ್ತು ಪ್ರಾಣಿ ಸಂಗ್ರಹಾಲಯಗಳು ವಿಹಂಗಮ ನೋಟವನ್ನು ನೀಡುತ್ತವೆ. ಲಾತೆಹಾರ್ ನಲ್ಲಿರುವ ಬೆಲ್ತಾ ರಾಷ್ಟ್ರೀಯ ಉದ್ಯಾನವನ ವಿವಿಧ ರೀತಿಯ ವನ್ಯಜೀವಿಗಳನ್ನು ಹೊಂದಿದೆ. ಇಲ್ಲಿರುವ ಪಳಮಾವ್ ಹುಲಿ ಯೋಜನೆಯಿಂದಾಗಿ ಜಾರ್ಖಂಡ್ ರಾಜ್ಯವು ಸಸ್ಯ ಮತ್ತು ಪ್ರಾಣಿಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿ ನೂರಾರು ಸಸ್ಯ ಮತ್ತು ಪ್ರಾಣಿಗಳನ್ನು ಕಾಣಬಹುದು.

ಪಳಮಾವ್ ನ ಬೆಲ್ತಾ ರಾಷ್ಟ್ರೀಯ ಉದ್ಯಾನವನದಂತೆಯೇ, ಅಲ್ಲೇ ಹತ್ತಿರದಲ್ಲಿರುವ ಹಜಾರಿಬಾಗ್ ವನ್ಯಜೀವಿ ಅಭಯಾರಣ್ಯ ಕೂಡ ಸುಂದರವಾಗಿದೆ. ಬೊಕಾರೊ ಸ್ಟೀಲ್ ಸಿಟಿ ಯಲ್ಲಿರುವ  ಜವಾಹರ್ ಲಾಲ್ ನೆಹರು ಜೈವಿಕ ಪಾರ್ಕ್ ಜಾರ್ಖಂಡ್ ನಲ್ಲೇ ಅತಿ ದೊಡ್ಡ ಝೂಲಾಜಿಕಲ್ ಗಾರ್ಡನ್ ಆಗಿದೆ. ಇದು 200 ಎಕರೆ ಭೂಮಿಯನ್ನು ಆವರಿಸಿಕೊಂಡಿದ್ದು ಇಲ್ಲಿ ಸಾಕಷ್ಟು ಪ್ರಾಣಿಗಳು ಮತ್ತು ಪಕ್ಷಿ ತಳಿಗಳು ಮತ್ತು ಕೃತಕ ಸರೋವರ, ಬೋಟಿಂಗ್ ವ್ಯವಸ್ಥೆ ಕೂಡ ಇದೆ. ಇನ್ನೊಂದು ಉದ್ಯಾನವನ ಬಿರ್ಸಾ ಮುಂಡ  ಜೈವಿಕ ಉದ್ಯಾನವನ ರಾಂಚಿಯಿಂದ 16 ಕಿ ಮೀ ಅಂತರದಲ್ಲಿದೆ. ಇಲ್ಲಿ ಪ್ರವಾಸಿಗರಿಗೋಸ್ಕರ ಸಾಕಷ್ಟು ಸಸ್ತನಿಗಳನ್ನು ಇಡಲಾಗಿದೆ.

ಜಾರ್ಖಂಡ್ - ಸಾಂಸ್ಕೃತಿಕ ಮೊಸಾಯಿಕ್, ಹಬ್ಬಗಳು ಮತ್ತು ಅಡುಗೆಗಳು

ಜಾರ್ಖಂಡ್, ಬುಡಕಟ್ಟು ಜನಾಂಗದ ರಾಜ್ಯವಾಗಿರುವುದರಿಂದ ಇಲ್ಲಿ ಸಂಸ್ಕೃತಿ ಮತ್ತು ಜೀವನಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಪವಿತ್ರ ಮರಗಳ ಶಾಖೆಗಳನ್ನು ತಂದು ಔಪಚಾರಿಕವಾಗಿ ಅಂಗಳದಲ್ಲಿ  ನೆಡಲಾಗುತ್ತದೆ. ದೇವ ಮತ್ತು ದೇವತೆಗಳಿಗೆ ಭಕ್ತಾದಿಗಳು ಈ ಮರವನ್ನು ಪೂಜಿಸಿ ನಮಿಸುತ್ತಾರೆ. ಮಕರ ಸಂಕ್ರಾಂತಿ ಸಂದರ್ಭದಲ್ಲಿ ಆಚರಿಸುವ ತುಸು ಹಬ್ಬ ಅಥವಾ ಪೌಷ್ ಮೇಳ ಜನಪ್ರಿಯಗೊಂಡಿದೆ. ತುಸು ಹಬ್ಬ ದೇವ ದೇವತೆಗಳ ಬಗ್ಗೆ ಅಲ್ಲ ಇಲ್ಲಿನ ಬುಡಕಟ್ಟು ಜನರ ಸಣ್ಣ ಹೆಣ್ಣು ಮಗುವಿನ ಬಗ್ಗೆ ಜನರ ಒಂದು ಜನಪದ ನಂಬಿಕೆ. ಹೊಸ ತಳಿಗಳು ಬಂದಾಗ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ತುಂಬಾ ಸುಂದರವಾಗಿರುತ್ತದೆ.

ಛೋಟಾ ನಾಗಪುರ್ ಪ್ರದೇಶದಲ್ಲಿ ನಡೆಯುವ ಕರಮ್ ಹಬ್ಬ ಬಹಳ ವೈಭವಯುತವಾಗಿರುತ್ತದೆ. ಒರವೊನ್ ಪಂಗಡಿಗರಿಗೆ ಕರಮ್ ಹಬ್ಬ ತುಂಬಾ ಮುಖ್ಯವಾದುದು ಮತ್ತು ಇದು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಈ ಹಬ್ಬವನ್ನು  ಒರವ್ವನ್ ಮತ್ತು ಸ್ಥಳೀಯರು ಆಚರಿಸುತ್ತಿದ್ದರು ಆದರೆ ಈಗ ಇದು ತುಂಬಾ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತಿದ್ದು ಛೋಟಾ ನಾಗಪುರ್ ಮತ್ತು ನಮ್ಮ ದೇಶದ ಇತರ ಭಾಗಗಳಿಗೆ ಕೂಡ ಇದು ಹಬ್ಬಿದೆ.

ಜಾರ್ಖಂಡ್ ಅಡುಗೆಗಳು, ಇಲ್ಲಿನ ಸ್ಥಳೀಯ ಸ್ವಾದವನ್ನು ಹೊಂದಿದ್ದು ತನ್ನದೇ ಆದ ವಿವಿಧ ಶೈಲಿಯಲ್ಲಿ ದೊರಕುತ್ತದೆ. ಜಾರ್ಖಂಡ್ ನ ಆಹಾರಗಳು ಬೇಗ ಜೀರ್ಣವಾಗುವ ಮತ್ತು ಲೈಟ್ ಆಗಿರುವ ಆಹಾರಗಳು ಎನ್ನಲಾಗುತ್ತದೆ. ಇಲ್ಲಿನ ಆಹಾರ ಪದ್ಧತಿ ಮತ್ತು ಜನಪದ ಜನರಿಂದ ಇದು ಸಾಬೀತಾಗುತ್ತದೆ. ಲಿತ್ತಿ ಮತ್ತು ಚೋಕ ಜಾರ್ಖಂಡ್ ನ ಮುಖ್ಯ ಆಹಾರಗಳು. ಜಾರ್ಖಂಡ್ ನಲ್ಲಿ ತಯಾರಿಸಲಾಗುವ ಖಾರದ ಕೋಳಿ ಕೂಡ ಬಾಯಲ್ಲಿ ನೀರೂರಿಸುವ ಮಾಂಸಾಹಾರ ಖಾದ್ಯವಾಗಿದೆ. ಇಲ್ಲಿನ ಮುಖ್ಯ ಆಹಾರಗಳು ಸ್ವಲ್ಪ ಮೊಘಲರ ಆಹಾರ ಪದ್ಧತಿಯನ್ನು ಹೋಲುತ್ತವೆ.

ಸ್ಥಳೀಯ ಮದ್ಯಪಾನವಾದ ಅಕ್ಕಿ ಬಿಯರ್ ಅನ್ನು  ಹಂಡಿಯ ಎಂದು ಕರೆಯಲಾಗುತ್ತದೆ. ಸಂದಿಯ ಎಂಬ ಬುಡಕಟ್ಟು ಜನಾಂಗದ ಮಹಿಳೆಯರು ಮತ್ತು ಪುರುಷರು ಮದುವೆ ಮತ್ತಿತರ ಸಮಾರಂಭಗಳಲ್ಲಿ ಈ ಹಂಡಿಯ ಎಂಬ ಮದ್ಯಪಾನವನ್ನು ಬಳಸುತ್ತಾರೆ. ಮಹುವ ಮರದಿಂದ ತಯಾರಿಸುವ ಮಹು ಎಂಬ ಮದ್ಯಪಾನ ಕೂಡ ಇಲ್ಲಿನ ವಿಶೇಷತೆಗಳಲ್ಲಿ ಒಂದು.   

Please Wait while comments are loading...