ಚೋಪ್ಟಾದ - ಉತ್ತರಾಖಂಡದ ಮಿನಿ ಸ್ವಿಟ್ಜರ್ ಲ್ಯಾಂಡ್!

ಸಮುದ್ರ ಮಟ್ಟದಿಂದ 2680 ಮೀಟರ್ ಎತ್ತರದಲ್ಲಿರುವ, ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಚೋಪ್ಟಾ ಒಂದು ಸುಂದರ ಗಿರಿಧಾಮ. ಇಲ್ಲಿನ ಅದ್ಭುತ ಪ್ರಾಕೃತಿಕ ಸೌಂದರ್ಯ ಮತ್ತು "ಬುಗ್ಯಾಲ್ಸ್" ಎಂದು ಕರೆಯಲ್ಪಡುವ ಸಮೃದ್ಧ ಹಸಿರು ಹುಲ್ಲುಗಾವಲುಗಳಿಂದಾಗಿ ಈ ಗಿರಿಧಾಮವನ್ನು 'ಮಿನಿ ಸ್ವಿಜರ್ಲ್ಯಾಂಡ್' ಎಂದೂ ಸಹ ಸಂಭೋದಿಸಲಾಗುತ್ತದೆ. ಚೋಪ್ಟಾ ಗಿರಿಧಾಮವು ಪ್ರವಾಸಿಗರಿಗೆ ತನ್ನ ಪ್ರಶಾಂತತೆಯ ಅನುಭವದ ಜೊತೆಗೆ ಚೌಖಂಬಾ, ತ್ರಿಶೂಲ್ ಮತ್ತು ನಂದಾ ದೇವಿ ಪರ್ವತಗಳ ಭವ್ಯ ವೀಕ್ಷಣೆಯ ಆನಂದವನ್ನೆ ಉಣಬಡಿಸುತ್ತದೆ.

ಈ ಸ್ಥಳವು ಸಮುದ್ರ ಮಟ್ಟದಿಂದ 3680 ಮೀಟರ್ ಎತ್ತರದಲ್ಲಿ, ತುಂಗ್ನಾಥ್ ಪರ್ವತ ಶ್ರೇಣಿಯಲ್ಲಿರುವ ತುಂಗ್ನಾಥ್ ದೇವಸ್ಥಾನಕ್ಕೆ ಪ್ರಸಿದ್ಧವಾಗಿದ್ದು, ಈ ದೇವಸ್ಥಾನವು ವಿಶ್ವದಲ್ಲೇ ಅತ್ಯಂತ ಎತ್ತರದಲ್ಲಿರುವ ಶಿವನ ದೇವಸ್ಥಾನ ಎಂಬ ಕೀರ್ತಿ ಪಡೆದಿದೆ. ಹಿಂದೂ ಮಹಾಕಾವ್ಯ ರಾಮಾಯಣದ ದುಷ್ಟಾತ್ಮನಾಗಿದ್ದ  ರಾವಣನು, ತನ್ನ ಪಾಪಗಳಿಗೆ ಪ್ರಾಯಶ್ಚಿತ್ತವನ್ನು ಪಡೆದುಕೊಂಡಿದ್ದ ಸುಕ್ಷೇತ್ರವಿದು ಎಂಬುದಾಗಿ ಹಿಂದೂ ಪುರಾಣದಲ್ಲಿ ಉಲ್ಲೇಖವಿದೆ. ತುಂಗ್ನಾಥ್  ದೇವಾಲಯವನ್ನು ತಲುಪಬೇಕಾದರೆ ಚೋಪ್ಟಾದಿಂದ 3.5 ಕಿ.ಮೀ ಕಾಲ್ನಡಿಗೆಯಲ್ಲಿ ತೆರಳಬೇಕಾಗುತ್ತದೆ.

ಇಲ್ಲಿನ ಮತ್ತೊಂದು ಜನಪ್ರಿಯ ಧಾರ್ಮಿಕ ಆಕರ್ಷಣೆಯೆಂದರೆ ಮಂದಾಕಿನಿ ನದಿಯ ಸಾನಿಧ್ಯದಲ್ಲಿರುವ ಕೇದಾರನಾಥ ಮಂದಿರ. ಪಂಚ ಕೇದಾರಗಳಲ್ಲೊಂದಾದ ಈ ದೇವಸ್ಥಾನವು ಹಿಂದೂಗಳ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದು. ದೇವಸ್ಥಾನದಲ್ಲಿ ಪ್ರತಿಷ್ಠಾಪಿತವಾಗಿರುವ ಶಿವ ಲಿಂಗವು12 ಜ್ಯೋತಿರ್ಲಿಂಗಗಳಲ್ಲೊಂದಾಗಿದ್ದು, ಇಲ್ಲಿ ಶಿವನ ಸುಮಾರು 200 ವಿಗ್ರಹಗಳಿವೆ.

ಮಧ್ಯಮಹೇಶ್ವರ ದೇವಸ್ಥಾನ, ಕಲ್ಪೇಶ್ವರ ಮಂದಿರ ಮತ್ತು ಕಂಛುಲಾ ಕೊರಕ್ ಕಸ್ತೂರಿ ಮೃಗಗಳ ಅಭಯಾರಣ್ಯ,ಇವು ಇಲ್ಲಿನ ಇತರ ಹೆಸರಾಂತ ಪ್ರವಾಸಿ ಆಕರ್ಷಣೆಗಳಲ್ಲಿ ಕೆಲವು.

ಸಸ್ಯಗಳು ಮತ್ತು ಸಸ್ತನಿಗಳಿಂದ ಸಮೃದ್ಧವಾಗಿರುವ ಚೋಪ್ಟಾವು ಪ್ರವಾಸಿಗರಿಗೆ ವಿಶೇಷವಾಗಿ ನಿಸರ್ಗ ಪ್ರೇಮಿಗಳಿಗೆ ಆಕರ್ಷಣೀಯ ತಾಣವಾಗಿದ್ದು, ಇಲ್ಲಿನ ಪಂಚ ಕೇದಾರ ಕ್ಷೇತ್ರಕ್ಕೆ ಹೋಗುವ ಚಾರಣಿಗರಿಗೆ ಆರಂಭಿಕ ನೆಲೆಯಾಗಿದೆ.

ಪ್ರಯಾಣಿಕರು ವಿಮಾನ, ರೈಲು ಮತ್ತು ರಸ್ತೆಗಳ ಮಾರ್ಗವಾಗಿ ಚೋಪ್ಟಾವನ್ನು ತಲುಪಬಹುದು. ಡೆಹ್ರಾಡೂನ್ ದಲ್ಲಿನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವು  ಚೋಪ್ಟಾದ ಹತ್ತಿರದ ವಾಯುನೆಲೆಯಾಗಿದ್ದು, ಇದು ಗಿರಿಧಾಮದಿಂದ 226 ಕಿಮೀ ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.  ರಿಷಿಕೇಶ್ ರೈಲ್ವೆ ನಿಲ್ದಾಣವು ಚೋಪ್ಟಾದ ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು, ಪ್ರವಾಸಿಗರು ಹರಿದ್ವಾರ, ಡೆಹ್ರಾಡೂನ್ ಮತ್ತು ರಿಷಿಕೇಶ ಗಳಿಂದ ಬಸ್ಸುಗಳಲ್ಲಿಯೂ  ಚೋಪ್ಟಾಕ್ಕೆ ತೆರಳಬಹುದು.

ಬೇಸಿಗೆ ಮತ್ತು ಮಳೆಗಾಲಗಳು ಈ ಸುಂದರ ಗಿರಿಧಾಮಕ್ಕೆ ಪ್ರಯಾಣ ಬೆಳೆಸಲು ಉತ್ತಮ ಕಾಲಗಳೆಂದು ಪರಿಗಣಿಸಲಾಗುತ್ತದೆ. ಚಳಿಗಾಲದಲ್ಲಿ ಇಲ್ಲಿ ಭಾರೀ ಹಿಮಪಾತವಾಗುವುದರಿಂದ ಈ ಕಾಲವು ಚೋಪ್ಟಾ ಪ್ರಯಾಣಕ್ಕೆ ಅಷ್ಟೊಂದು ಹಿತಕರವಲ್ಲ.

Please Wait while comments are loading...