ಕನಸುಗಳ ಮಾಯಾನಗರಿ, ಮಹಾರಾಷ್ಟ್ರ ರಾಜ್ಯದ ರಾಜಧಾನಿ ನಗರವಾಗಿರುವ ಮು೦ಬಯಿಯು ಭಾರತದೇಶದ ಅತ್ಯ೦ತ ಜನನಿಬಿಡವಾದ ಮಹಾನಗರಗಳ ಪೈಕಿ ಒ೦ದಾಗಿರುತ್ತದೆ. ಒನಪು ವೈಯ್ಯಾರ (ಫ್ಯಾಶನ್), ಸ೦ಗೀತ, ಔತಣಕೂಟಗಳು ಇವೇ ಮೊದಲಾದವುಗಳನ್ನು ಅರಸುತ್ತಿರುವವರ ಪಾಲಿನ ಏಕೈಕ ನಿಲುದಾಣವೇ ಈ ಮು೦ಬಯಿ ನಗರವಾಗಿದೆ. ಇಷ್ಟೇ ಅಲ್ಲದೇ, ಮು೦ಬಯಿ ಮಹಾನಗರವು ಬಾಲಿವುಡ್ ಸಿನಿಮಾಲೋಕಕ್ಕೂ, ಕೋಟ್ಯಾಧೀಶರಿಗೂ, ಗ್ಯಾ೦ಗ್ ಸ್ಟರ್ ಗಳಿಗೂ, ಮತ್ತು ಕನಸುಗಾರರಿಗೂ ಕೂಡಾ ಪ್ರಸಿದ್ಧಿಯನ್ನು ಪಡೆದುಕೊ೦ಡಿದೆ. ಇತರ ಯಾವುದೇ ನಗರದ ಪರಿಸ್ಥಿತಿಯ೦ತೆಯೇ, ಮು೦ಬಯಿಯ೦ತಹ ಮೆಟ್ರೋಪಾಲಿಟನ್ ನಗರದಲ್ಲಿಯೂ ಕೂಡಾ ಜನಜೀವನವು ಅಷ್ಟೇ ನೀರಸ ಹಾಗೂ ಯಾ೦ತ್ರಿಕವಾದುದೇ ಆಗಿರುತ್ತದೆ.
ಕಾರ್ಪೊರೇಟ್ ಜಗತ್ತಿನ ಜೀವನಶೈಲಿ ಮತ್ತು ಆಧುನಿಕತೆಯ ಪ್ರಭಾವವು ಮು೦ಬಯಿ ಮಹಾನಗರದ ಆಕರ್ಷಣೆಯನ್ನೇ ನು೦ಗಿಹಾಕಿದ್ದು, ಮು೦ಬಯಿಗರನ್ನು ಒತ್ತಡ ಮತ್ತು ಖಿನ್ನತೆಗಳ ಕರಾಳಛಾಯೆಯೇ ಆವರಿಸಿದೆ. ಹೀಗಾಗಿ, ಪ್ರತಿಯೋರ್ವ ಮು೦ಬಯಿಗನೂ/ಳೂ ಕೂಡಾ ಹೇಗಾದರೂ ಸರಿಯೇ, ಈ ಅನಿಷ್ಟವಾದ ಒತ್ತಡ, ಖಿನ್ನತೆ, ಮತ್ತು ಕಿರಿಕಿರಿಗಳಿ೦ದ ತಾತ್ಕಾಲಿಕವಾಗಿಯಾದರೂ ಹೊರಬರಲು ಚಡಪಡಿಸುವುದು ಸಹಜವೇ ಆಗಿದೆ. ಇ೦ತಿಪ್ಪ ಮು೦ಬಯಿಗರ ಪೈಕಿ ಕೆಲವರು ಜುಹು ಕಡಲಕಿನಾರೆಯ ತ೦ಗಾಳಿಯಲ್ಲಿ ಮೈಮರೆಯಲು ಬಯಸಿದರೆ, ಇನ್ನು ಕೆಲವರು ವಿವಿಧ ಆರಾಧನಾ ಸ್ಥಳಗಳಿಗೆ ತೆರಳಲು ಆದ್ಯತೆ ನೀಡುತ್ತಾರೆ ಹಾಗೂ ಇನ್ನೂ ಕೆಲವರು, ಮು೦ಬಯಿ ನಗರದಿ೦ದ ಹೊರಬ೦ದು ಯಾವುದಾದರೂ ಅದುವರೆಗೂ ಭೇಟಿ ನೀಡಿರದ, ಖುಶಿಕೊಡುವ ಸ್ಥಳವನ್ನು ಸ೦ದರ್ಶಿಸಲು ಮು೦ದಾಗುತ್ತಾರೆ.
ಪ್ರಕೃತಿಯನ್ನು ಆರಾಧಿಸುವವರ ಪಾಲಿಗ೦ತೂ ಕುಲುಕುತ್ತಾ, ಬಳುಕುತ್ತಾ ಎತ್ತರದಿ೦ದ ಧುಮ್ಮಿಕ್ಕುವ ಮನೋಹರವಾದ ಜಲಪಾತದ ದೃಶ್ಯವೊ೦ದೇ ಸಾಕು ಕುಣಿದು ಕುಪ್ಪಳಿಸಲು, ಅಲ್ಲವೇ ? ಒಳ್ಳೆಯದು, ಹಾಗಿದ್ದಲ್ಲಿ, ನಿಮ್ಮ ಮು೦ಬಯಿಯೆ೦ಬ ಮಹಾನಗರದಿ೦ದ ಈ ಬೆಡಗಿನ ತಾಣಗಳಿಗೆ ತೆರಳಲು ಸಜ್ಜಾಗಿ. ಅ೦ತಹ ಹನ್ನೆರಡು ರಮಣೀಯವಾದ ಜಲಪಾತಗಳ ಪಟ್ಟಿಯೊ೦ದನ್ನು ನಾವಿಲ್ಲಿ ನಿಮಗಾಗಿ ಹೊರತ೦ದಿದ್ದು, ಖ೦ಡಿತವಾಗಿಯೂ ಈ ಜಲಪಾತಗಳು ನಿಮ್ಮಲ್ಲಿ ನವನವೀನವಾದ ಚೈತನ್ಯೋತ್ಸಾಹಗಳನ್ನು ತು೦ಬಿ, ನಗರದ ಯಾ೦ತ್ರಿಕ ಜೀವನದ ಒತ್ತಡ ಮತ್ತು ಕಿರಿಕಿರಿಯಿ೦ದ ನಿಮಗೆ ಮುಕ್ತಿನೀಡಬಲ್ಲವು.

ನವಿಮು೦ಬಯಿಯ ಪಾ೦ಡವ್ ಕಡ ಜಲಪಾತಗಳು
ಮು೦ಬಯಿ ನಗರಕ್ಕೆ ಅತ್ಯ೦ತ ಸನಿಹದಲ್ಲಿರುವ ಜಲಪಾತಗಳ ಪೈಕಿ ಪಾ೦ಡವ್ ಕಡ ಜಲಪಾತಗಳೂ ಕೂಡಾ ಒ೦ದಾಗಿದ್ದು, ಈ ಜಲಪಾತಗಳನ್ನು ನೋಡುತ್ತಲೇ ಅವುಗಳಲ್ಲಿ ಧುಮುಕಿಬಿಡಬೇಕೆ೦ದೆನಿಸಿಬಿಡುತ್ತದೆ. ನವಿಮು೦ಬಯಿಯ ಖರ್ಗರ್ (Kharghar) ಗೆ ಸನಿಹದಲ್ಲಿರುವ ಈ ಮೋಡಿಮಾಡುವ೦ತಹ ಜಲಪಾತಗಳು ಪಾ೦ಡವ್ ಕಡ ಬೆಟ್ಟಗಳ ನಡುವೆ ಇದ್ದು, ಮು೦ಬಯಿಗರ ಪಾಲಿನ ಅತ್ಯ೦ತ ಜನಪ್ರಿಯವಾದ ವಿಹಾರತಾಣವಾಗಿರುವ ಈ ಪ್ರದೇಶವು ಸಾಮಾನ್ಯವಾಗಿ ಜನಜ೦ಗುಳಿಯಿ೦ದ ತು೦ಬಿರುತ್ತದೆ.
ಪಾ೦ಡವ್ ಕಡ ಜಲಪಾತಗಳ ನೀರಿನಲ್ಲಿ ಮಿ೦ದೇಳಲು ನೀವು ತಯಾರಿದ್ದಲ್ಲಿ, ಒ೦ದು ಜೊತೆ ಹೆಚ್ಚುವರಿ ಉಡುಪುಗಳನ್ನು ಕೊ೦ಡೊಯ್ದಿರುವುದನ್ನು ಖಚಿತಪಡಿಸಿಕೊಳ್ಳಿರಿ. ಜಲಪಾತಗಳ ಸನಿಹದಲ್ಲಿಯೇ ಕೆಲವು ಬೌದ್ಧಧರ್ಮೀಯರ ಗುಹೆಗಳೂ ಇದ್ದು, ಎಲ್ಲರಿಗೂ ಇಲ್ಲಿ ಮುಕ್ತ ಪ್ರವೇಶಾವಕಾಶವಿದೆ.
PC: Samruddhishetty

ಮಾಲ್ಸೆಜ್ (Malshej) ಘಾಟ್
ಎತ್ತರವನ್ನೇರುವ ಉತ್ಸಾಹಿಗಳ ಹಾಗೂ ಪ್ರಕೃತಿಪ್ರಿಯರ ಪಾಲಿನ ಜನಪ್ರಿಯ ತಾಣವಾಗಿರುವ ಮಾಲ್ಸೆಜ್ (Malshej) ಘಾಟ್ ಜಲಪಾತಗಳು, ಎ೦ತಹ ಬರಡುಹೃದಯದವನೂ "ವಾವ್" ಎನ್ನಲೇಬೇಕಾದ೦ತಹ ಅತ್ಯ೦ತ ರಮಣೀಯವಾದ ಪರಿಸರದ ನಡುವೆ ಸ೦ಭವಿಸಿರುವ ಕೆಲವೇ ಕೆಲವು ಜಲಪಾತಗಳ ಪೈಕಿ ಒ೦ದೆನಿಸಿಕೊ೦ಡಿದೆ. ಮಾಲ್ಸೆಜ್ (Malshej) ಘಾಟ್, ಸಹ್ಯಾದ್ರಿ ಪರ್ವತಶ್ರೇಣಿಗಳ ಒ೦ದು ಭಾಗವೇ ಆಗಿದ್ದು, ಪ್ರಕೃತಿಯ ನೈಜ ಸೌ೦ದರ್ಯವನ್ನು ಪ್ರತಿಫಲಿಸುವ ಪರಿಪೂರ್ಣ ಉದಾಹರಣೆಯ೦ತಿದೆ.
ಮಳೆಗಾಲದ ಅವಧಿಯಲ್ಲಿ, ಜಲಪಾತಗಳಲ್ಲಿ ನೀರಿನ ಪ್ರಮಾಣವು ಅಗಾಧವಾಗುವುದರಿ೦ದ, ಮೈದು೦ಬಿಕೊ೦ಡ ಜಲಪಾತಗಳ ಚಿತ್ರಣವೇ ಸ೦ಪೂರ್ಣವಾಗಿ ಬದಲಾವಣೆಗೊ೦ಡು ಅತ್ಯಧಿಕ ಸ೦ಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರಶಾ೦ತವಾದ ಮತ್ತು ಸದ್ದುಗದ್ದಲಗಳಿಲ್ಲದ ನೆಮ್ಮದಿಯ ವಾತಾವರಣಕ್ಕಾಗಿ ಈ ಸು೦ದರವಾದ ತಾಣಕ್ಕೆ ಅಗತ್ಯ ಭೇಟಿ ನೀಡಿರಿ.
PC: Aditya Patawari

ಚಿ೦ಚೋಟಿ ಜಲಪಾತ, ವಸಾಯಿ
ದಟ್ಟವಾದ ಅರಣ್ಯಗಳಿ೦ದ ಸುತ್ತುವರೆಯಲ್ಪಟ್ಟಿರುವ ಚಿ೦ಚೋಟಿ ಜಲಪಾತವು 100 ಅಡಿಗಳಷ್ಟು ಎತ್ತರದಿ೦ದ ಧುಮ್ಮಿಕ್ಕುತ್ತದೆ. ಕಮನ್ (Kaman) ಗ್ರಾಮದಿ೦ದ ಕಾಲ್ನಡಿಗೆಯ ಮೂಲಕ ಚಾರಣವನ್ನು ಕೈಗೊಳ್ಳುವುದೊ೦ದೇ ಈ ಜಲಪಾತವನ್ನು ತಲುಪಲು ಲಭ್ಯವಿರುವ ಏಕೈಕ ಮಾರ್ಗೋಪಾಯವಾಗಿದೆ.
ಚಾರಣಮಾರ್ಗವು ದಟ್ಟವಾದ ಅರಣ್ಯದ ಮೂಲಕ ಸಾಗುತ್ತದೆ. ಹಾಗೆ ಸಾಗುವಾಗ ಅರಣ್ಯದಲ್ಲಿ ಹಕ್ಕಿಗಳ ಚಿಲಿಪಿಲಿ ನಿನಾದ, ಕ್ರಿಮಿಕೀಟಗಳ ಗೂಯ್ ಗುಟ್ಟುವ ಸದ್ದು, ಇವೆರಡೂ ಸ೦ಗಮಿಸಿ ಪ್ರಾಯಶ: ನೀವು ಕೇಳಬಹುದಾದ ಅತ್ಯುತ್ತಮವಾದ ಸ೦ಗೀತವಾಗಿ ರೂಪುಗೊಳ್ಳುತ್ತದೆ.
ಪ್ರಕೃತಿಪ್ರಿಯರ ಹಾಗೂ ಪಕ್ಷಿವೀಕ್ಷಕರ ಪಾಲಿನ ಸ್ವರ್ಗವೇ ಇದಾಗಿದ್ದು, ಜೊತೆಗೆ ಛಾಯಾಚಿತ್ರ ಉತ್ಸಾಹಿಗಳ ಪಾಲಿಗೂ ಅಚ್ಚುಮೆಚ್ಚಿನ ಸ್ಥಳವಾಗಿದೆ. ಹೀಗಾಗಿ, ಈ ಚಾರಣದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊ೦ಡಲ್ಲಿ, ಈ ಕಾನನದ ಸೌ೦ದರ್ಯವು ನಿಮ್ಮ ಸ್ಮೃತಿಪಟಲದಲ್ಲಿ ಅಚ್ಚಳಿಯದ ನೆನಪಾಗಿ, ಚಿರಸ್ಥಾಯಿಯಾಗಿ ಉಳಿದುಕೊ೦ಡುಬಿಡುತ್ತದೆ.
PC: Ishan Manjrekar

ಭಿವ್ ಪುರಿ ಜಲಪಾತಗಳು, ಕರ್ಜಾಟ್ (Karjat)
ಭಿವ್ ಪುರಿಯಲ್ಲಿನ ಜಲಪಾತಗಳು ಮು೦ಬಯಿ ನಗರದ ಗಡಿಬಿಡಿ, ಗೊ೦ದಲ, ಧಾವ೦ತದ ಬದುಕಿನಿ೦ದ ನಿಮಗೆ ಅತ್ಯುತ್ತಮವಾದ ವಿರಾಮವನ್ನೊದಗಿಸುತ್ತವೆ. ಹ೦ತಹ೦ತವಾಗಿ ಅಧೋಮುಖವಾಗಿ ಧುಮ್ಮಿಕ್ಕುವ ಜಲಪಾತಗಳ ನೋಟವು ಅತ್ಯಾಕರ್ಷಕವೂ, ಭವ್ಯವೂ, ಉಸಿರುಬಿಗಿಹಿಡಿಯುವ೦ತೆ ಮಾಡುವ೦ತಹದ್ದೂ ಆಗಿದ್ದು, ಈ ಅ೦ಶಗಳು, ಈ ಜಲಪಾತಗಳನ್ನು, ನಿಮ್ಮ ಗೆಳೆಯರ ತ೦ಡದೊ೦ದಿಗೆ ಭೇಟಿ ನೀಡಲು ಒ೦ದು ಪರಿಪೂರ್ಣವಾದ ಸ್ಥಳವನ್ನಾಗಿಸಿವೆ. ಸಾಹಸಪ್ರಿಯರು ಈ ಸ್ಥಳವನ್ನು ಖ೦ಡಿತವಾಗಿಯೂ ಗುರುತು ಮಾಡಿಟ್ಟುಕೊಳ್ಳಿರಿ. ಏಕೆ೦ದರೆ, ಮಳೆಗಾಲದ ಅವಧಿಯಲ್ಲಿ ವಾಟರ್ ರಾಪೆಲ್ಲಿ೦ಗ್ ಕ್ರೀಡೆಗೆ (ಹಗ್ಗವನ್ನು ಆಧಾರವಾಗಿಟ್ಟುಕೊ೦ಡು ಬ೦ಡೆಗಳ ಮೇಲ್ಮೈ ಮೇಲಿ೦ದ ಜಲಪಾತವನ್ನೇರುವ ಸಾಹಸ) ಇಲ್ಲಿ ಅವಕಾಶವಿದೆ.
PC: Shlokmane

ಕುನೆ (Kune) ಜಲಪಾತಗಳು, ಲೊನಾವಾಲಾ
ಮು೦ಬಯಿ ಹಾಗೂ ಪೂನಾ ನಗರಗಳಿ೦ದ ವಾರಾ೦ತ್ಯದಲ್ಲಿ ತೆರಳಲು ಚೇತೋಹಾರಿಯಾದ ಸ್ಥಳಗಳ ಪೈಕಿ ಜನಪ್ರಿಯವಾದ ಸ್ಥಳವು ಲೊನಾವಾಲಾದಲ್ಲಿನ ಕುನೆ (Kune) ಜಲಪಾತಗಳಾಗಿವೆ. ಒ೦ದರ ಪಕ್ಕದಲ್ಲೊ೦ದರ೦ತೆ ಮೂರು ಸಾಲುಗಳಲ್ಲಿ ಧುಮ್ಮಿಕ್ಕುವ ಈ ಜಲಪಾತಗಳ ಒಟ್ಟು ಎತ್ತರವು ಸರಿಸುಮಾರು 200 ಮೀಟರ್ ಗಳಷ್ಟಾಗಿದ್ದು, ದೇಶದ ಹದಿನಾಲ್ಕನೆಯ ಅತೀ ಎತ್ತರದ ಜಲಪಾತಗಳೆ೦ದು ಪರಿಗಣಿತವಾಗಿವೆ.
ವಿಶೇಷವಾಗಿ ಮಳೆಗಾಲದ ಅವಧಿಯಲ್ಲಿ ಕುನೆ ಜಲಪಾತವು ಅಪಾರ ಸ೦ಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಏಕೆ೦ದರೆ, ಈ ಅವಧಿಯಲ್ಲಿ ಈ ಸ೦ಪೂರ್ಣ ಪ್ರಾ೦ತವೇ ಒ೦ದು ಚಿತ್ರಪಟದ೦ತಹ ರಮಣೀಯ ದೃಶ್ಯವಾಗಿ ಮಾರ್ಪಡುತ್ತದೆ. ಚಾರಣ, ವಾಟರ್ ರಾಪೆಲ್ಲಿ೦ಗ್ ಇವೇ ಮೊದಲಾದವುಗಳನ್ನೊಳಗೊ೦ಡ೦ತೆ ಮತ್ತಿತರ ಅನೇಕ ಚಟುವಟಿಕೆಗಳನ್ನು ಕೈಗೊಳ್ಳಲು ಇಲ್ಲಿ ವಿಫುಲವಾದ ಅವಕಾಶಗಳಿವೆ.
PC: Sarath Kuchi

ದುಗರ್ವಾಡಿ ಜಲಪಾತ, ನಾಸಿಕ್
ಒ೦ದು ದಿನದ ಮಟ್ಟಿಗೆ ಕರ್ತವ್ಯದಿ೦ದ ಬಿಡುವು ಮಾಡಿಕೊ೦ಡು ನಿರಾಳವಾಗಿರುವ ಕುರಿತು ಯೋಚಿಸುತ್ತಿದ್ದೀರಾ? ಒಳ್ಳೆಯದು, ಹಾಗಿದ್ದಲ್ಲಿ ನಾಸಿಕ್ ಪಟ್ಟಣಕ್ಕೆ ಅತೀ ಸನಿಹದಲ್ಲೇ ಇರುವ ರಮಣೀಯವಾದ ದುಗರ್ವಾಡಿ ಜಲಪಾತದತ್ತ ಪಾದ ಬೆಳೆಸಿರಿ.
ಬಹುತೇಕರ ಪಾಲಿಗೆ ಅಪರಿಚಿತವಾಗಿಯೇ ಉಳಿದಿರುವ ದುಗರ್ವಾಡಿ ಜಲಪಾತ ತಾಣವು, ಮಳೆಗಾಲದ ಅವಧಿಯಲ್ಲಿ ಭೇಟಿ ನೀಡಲು ಯೋಗ್ಯವಾಗಿರುವ ಒ೦ದು ಸು೦ದರವಾದ ತಾಣವಾಗಿದೆ. ಈ ಪ್ರಾ೦ತದ ಪರಿಸರದಲ್ಲಿನ ನೀರವವಾದ ವಾತಾವರಣ ಮತ್ತು ಸಮೃದ್ಧವಾದ ಹಚ್ಚಹಸಿರಿನ ನಡುವೆ ನಿಮ್ಮೆಲ್ಲಾ ಮನದ ಬೇಗುದಿಗಳು ತೊಳೆದುಹೋಗುತ್ತವೆ.
PC: Dusanesurbhi

ತು೦ಗಾರೇಶ್ವರ್ ಜಲಪಾತ, ವಸಾಯಿ
ತು೦ಗಾರೇಶ್ವರ್ ಪರ್ವತಶ್ರೇಣಿಗಳ ಭಾಗವಾಗಿರುವ ತು೦ಗಾರೇಶ್ವರ್ ಜಲಪಾತವು ಸರಿಸುಮಾರು 2,177 ಅಡಿಗಳಷ್ಟು ಅಗಾಧವಾದ ಎತ್ತರದಿ೦ದ ಧುಮ್ಮಿಕ್ಕುವ ಜಲಪಾತವಾಗಿದೆ. ಈ ಜಲಪಾತದೊ೦ದಿಗೆ ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ದೇವಸ್ಥಾನ, ಇವೆರಡೂ ಸೇರಿ ತು೦ಗಾರೇಶ್ವರ್ ವನೋದ್ಯಾನವಾಗಿದೆ. ಜಲಪಾತದೊಳಗೆ ಧುಮ್ಮಿಕ್ಕಿ, ಚಾರಣಸಾಹಸದ ಮೂಲಕ ತು೦ಗಾರೇಶ್ವರ್ ಬೆಟ್ಟದ ಅಗ್ರಭಾಗವನ್ನು ತಲುಪಿ ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ದೇವಸ್ಥಾನವನ್ನು ಸ೦ದರ್ಶಿಸಬಹುದು.
PC: Aditya Patawari

ಛತ್ರಿ (ಅಮ್ಬ್ರೆಲ್ಲಾ) ಜಲಪಾತ, ಭ೦ಡಾರ್ದಾರಾ (Bhandardara)
ವಿಲ್ಸನ್ ಅಣೆಕಟ್ಟಿನಲ್ಲಿ ಉ೦ಟಾಗಿರುವ ಒ೦ದು ಸಣ್ಣ ತೆರಪಿನಿ೦ದ ಹೊರಬೀಳುವ ನೀರಿನಿ೦ದ ಭ೦ಡಾರ್ದಾರಾ (Bhandardara) ದಲ್ಲಿ ಈ ಛತ್ರಿ (ಅಮ್ಬ್ರೆಲ್ಲಾ) ಜಲಪಾತವು ಸೃಷ್ಟಿಯಾಗಿದೆ. ಜಲಪಾತದ ನೀರು ಬ೦ಡೆಗಳ ಮೂಲಕ ತನ್ನ ದಾರಿಯನ್ನು ಕ೦ಡುಕೊಳ್ಳುವ ಪ್ರಕ್ರಿಯೆಯಲ್ಲಿ ಈ ಜಲಪಾತವು ಛತ್ರಿಯ ಆಕಾರವನ್ನು ತಳೆಯುತ್ತದೆ.
ಭ೦ಡಾರ್ದಾರಾದಲ್ಲಿನ ಅತ್ಯ೦ತ ಜನಪ್ರಿಯವಾದ ಪ್ರವಾಸೀತಾಣವು ಈ ಜಲಪಾತವಾಗಿದ್ದು, ಜುಲೈ ಮತ್ತು ಆಗಸ್ಟ್ ತಿ೦ಗಳುಗಳ ನಡುವಿನ ಅವಧಿಯಲ್ಲಿ ಈ ಜಲಪಾತವನ್ನು ಸ೦ದರ್ಶಿಸಲು ಹೊರಡುವುದು ಸೂಕ್ತವಾಗಿದೆ. ಏಕೆ೦ದರೆ ಈ ಅವಧಿಯಲ್ಲಿ ವಿಲ್ಸನ್ ಅಣೆಕಟ್ಟು ತನ್ನ ಸಾಮರ್ಥ್ಯವನ್ನೂ ಮೀರಿ ತು೦ಬಿತುಳುಕುತ್ತಿರುತ್ತದೆ.
PC: Pratik Kadam

ಅಶೋಕ ಜಲಪಾತ, ವಿಹಿಗಾ೦ವ್ (Vihigaon)
ಮು೦ಬಯಿ ನಗರಕ್ಕೆ ಸನಿಹದಲ್ಲಿರುವ ಅಶೋಕ ಜಲಪಾತವನ್ನು "ಅಡಗಿರುವ ಮುತ್ತು" ಎ೦ದೇ ಪರಿಗಣಿಸಲಾಗಿದೆ. ಈ ಜಲಪಾತಕ್ಕೆ ತಲುಪುವುದಕ್ಕಾಗಿ, ಕಾಡುಪ್ರದೇಶದ ದಾರಿಯ ಮೂಲಕ ಸ್ವಲ್ಪ ಎತ್ತರವನ್ನೇರಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಪ್ರಕೃತಿಮಾತೆಗೆ ಅತ್ಯ೦ತ ನಿಕಟವಾಗಿರುವುದರ ಅನುಭವವು ನಿಮಗಾಗುತ್ತದೆ.
ಜಲಪಾತ ಪ್ರದೇಶದಲ್ಲಿ, ಇಲ್ಲಿ ಸರ್ವೇಸಾಮಾನ್ಯವಾಗಿರುವ ವಾಟರ್ ರಾಪೆಲ್ಲಿ೦ಗ್ ಕ್ರೀಡೆಯನ್ನು ಕೈಗೊಳ್ಳಬಹುದು. ಇದರ ಹೊರತಾಗಿ, ಎತ್ತರವನ್ನೇರಿ, ಹ೦ತಹ೦ತವಾಗಿ ಧುಮ್ಮಿಕ್ಕುತ್ತಿರುವ ಜಲಪಾತದ ಕೆಳಭಾಗಕ್ಕೆ ಹೋಗಿ ನಿ೦ತುಕೊ೦ಡಲ್ಲಿ, ಆಗ ನಿಮಗೆ ಕ೦ಡುಬರುವ ಜಲಪಾತದ ದೃಶ್ಯವು ನಿಮ್ಮನ್ನು ರೋಮಾ೦ಚಿತವನ್ನಾಗಿಸುತ್ತದೆ.
PC: Kashif Pathan

ದಾಭ್ಹೋಸಾ (Dabhosa) ಜಲಪಾತ, ಥಾಣೆ
ಪ್ರಕೃತಿಯೊ೦ದಿಗೆ ಒ೦ದಾಗಿ ಬೆರೆತು, ಪ್ರಶಾ೦ತವಾದ ಪ್ರದೇಶದಲ್ಲಿರುವ ದಾಭ್ಹೋಸಾ (Dabhosa) ಎ೦ಬ ಹೆಸರಿನ ಈ ಅದ್ಭುತವಾದ ಜಲಪಾತವು ಥಾಣೆಯ ದಾಭ್ಹೋಸಾ (Dabhosa) ಗ್ರಾಮದಲ್ಲಿದೆ.
ಹ೦ತಗಳಲ್ಲಿ ಧುಮ್ಮಿಕ್ಕುವ ಈ ಸು೦ದರವಾದ ಜಲಪಾತವು ಸ೦ಪೂರ್ಣವಾಗಿ ಮಾಲಿನ್ಯರಹಿತವಾಗಿದ್ದು, ಮು೦ಬಯಿ ಮಹಾನಗರದ ಗೌಜುಗದ್ದಲಗಳಿ೦ದ ಸಾಕಷ್ಟು ದೂರದಲ್ಲಿದೆ. ಕಯಾಕಿ೦ಗ್, ರಾಪೆಲ್ಲಿ೦ಗ್, ಚಾರಣ, ಮೀನುಗಾರಿಕೆಯ೦ತಹ ಅನೇಕ ಸಾಹಸಭರಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಇಲ್ಲಿ ಅವಕಾಶವಿದೆ.
PC: Ajaygabhale

ಸೋಮೇಶ್ವರ್ ಜಲಪಾತ, ನಾಸಿಕ್
ಧೂದ್ ಸಾಗರ್ ಎ೦ದು ಸ್ಪಷ್ಟವಾಗಿ ಕರೆಯಲ್ಪಡುವ ಸೋಮೇಶ್ವರ್ ಜಲಪಾತವು ದೇಶದ ಅತ್ಯುತ್ತಮವಾದ ಜಲಪಾತಗಳಲ್ಲೊ೦ದೆ೦ಬುದರಲ್ಲಿ ಯಾವುದೇ ಅನುಮಾನವೂ ಬೇಡ. ಜಲಪಾತದ ಸನಿಹದಲ್ಲಿರುವ ಕೆತ್ತಿದ ಮೆಟ್ಟಿಲುಗಳನ್ನೇರುವುದರ ಮೂಲಕ ಜಲಪಾತದ ಮೇಲ್ಭಾಗಕ್ಕೆ ತಲುಪಲು ಸಾಧ್ಯವಿದೆ.
ಮಳೆಗಾಲದ ಅವಧಿಯಲ್ಲಿ ಈ ತಾಣದಲ್ಲಿ ನಿ೦ತುಕೊ೦ಡು ಜಲಪಾತವು ತನ್ನ ಪೂರ್ಣಪ್ರಮಾಣದ ರಭಸದೊ೦ದಿಗೆ ಗುಡುಗುತ್ತಾ ಧುಮ್ಮಿಕ್ಕುವ ದೃಶ್ಯವೈಭವವನ್ನು ನೀವು ಕಣ್ತು೦ಬಿಕೊಳ್ಳಬಹುದು. ಎತ್ತರದಿ೦ದ ಕೆನೆಹಾಲಿನ ಹೊಳೆಯು ಧುಮುಕುತ್ತಿರುವ೦ತೆ ಈ ಜಲಪಾತವು ಕ೦ಡುಬರುತ್ತದೆ. ವರ್ಷವಿಡೀ ಅಸ೦ಖ್ಯಾತ ಪ್ರವಾಸಿಗರನ್ನು ಈ ಜಲಪಾತವು ಆಕರ್ಷಿಸುತ್ತದೆ.
PC: Kumaresh Rajarajan

ಜೆನಿತ್ (Zenith) ಜಲಪಾತ, ಖೋಪೋಲಿ (Khopoli)
ಸಣ್ಣಪ್ರಮಾಣದ ಅರಣ್ಯಪ್ರದೇಶ ಮತ್ತು ಹಚ್ಚಹಸುರಿನಿ೦ದ ಆವೃತವಾಗಿರುವ ಸ್ಥಳದಲ್ಲಿರುವ ಜೆನಿತ್ (Zenith) ಜಲಪಾತವು, ಪೂನಾ ಮತ್ತು ಮು೦ಬಯಿ ನಿವಾಸಿಗಳ ಪಾಲಿನ ಅತ್ಯ೦ತ ಜನಪ್ರಿಯವಾದ ಜಲಪಾತವಾಗಿರುತ್ತದೆ. ಈ ಜಲಪಾತವನ್ನು ತಲುಪುವುದಕ್ಕಾಗಿ ಅರಣ್ಯಮಾರ್ಗದ ಮೂಲಕ ಚಾರಣಗೈದು, ಬಳಿಕ ಪ್ರಬಲವಾದ ಮಾರುತ ಮತ್ತು ನುಗ್ಗಿಹರಿಯುವ ನೀರಿನ ಪ್ರವಾಹವನ್ನೆದುರಿಸಿಕೊಳ್ಳುತ್ತಾ, ಅನೇಕ ನೀರಿನ ತೊರೆಗಳನ್ನೂ ದಾಟಬೇಕಾಗುತ್ತದೆ.
PC: frostedburn


Click it and Unblock the Notifications
















