ಆಧುನಿಕ ಭಾರತದ ಆರ್ಥಿಕ ಶಕ್ತಿ ಕೇಂದ್ರ, ಜಗತ್ತಿನಲ್ಲೆ ಹೆಚ್ಚಿನ ಜನಸಂಖ್ಯೆಯುಳ್ಳ ನಾಲ್ಕನೇಯ ಹಾಗು ಭಾರತದ ಮೊದಲನೇಯ ದೊಡ್ಡ ಹಾಗು ಶ್ರೀಮಂತ ನಗರ, ಮುಂಬೈ (ಹಿಂದಿನ ಬಾಂಬೆ) ಒಂದು ಬೆರುಗುಗೊಳಿಸುವ ಕನಸಿನ ಮಹಾಲೋಕ. ಭಾರತದ ಪಶ್ಚಿಮ ಕರಾವಳಿಯ ಆಳವಾದ ನೈಸರ್ಗಿಕ ಬಂದರು ಹೊಂದಿರುವ ಪ್ರದೇಶದಲ್ಲಿ ನೆಲೆಸಿರುವ ಮುಂಬೈ ಮಹಾನಗರಿಯು ಮಹಾರಾಷ್ಟ್ರ ರಾಜ್ಯದ ರಾಜಧಾನಿ ನಗರವಾಗಿದ್ದು, ಬೆಂಗಳೂರಿನ ವಾಯವ್ಯ ದಿಕ್ಕಿಗೆ ಸುಮಾರು 985 ಕಿ.ಮೀ ಗಳ ಅಂತರದಲ್ಲಿ ನೆಲೆಸಿದೆ. ಆಧುನಿಕ ಭಾರತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಚಲನಚಿತ್ರರಂಗ ಅದರಲ್ಲೂ ವಿಶೇಷವಾಗಿ ಹಿಂದಿ ಚಿತ್ರೋದ್ಯಮವು ತಳ ಊರಿರುವುದು ಇದೆ ಮುಂಬೈನಲ್ಲೆ.
ಹಲವು ಅಭೂತಪೂರ್ವ ಅನುಭೂತಿ ನೀಡುವ ವಿಲಾಸಿ ಆಕರ್ಷಣೆಗಳನ್ನು ಹೊಂದಿರುವ ಮುಂಬೈ ಮಹಾನಗರಿಯು ಇಂದಿಗೂ ಕೂಡ ಭಾರತದ ಇತರೆ ಭಾಗಗಳಲ್ಲಿ ವಾಸಿಸುತ್ತಿರುವ ಬಹಳಷ್ಟು ಜನರಿಗೆ ಒಂದು ಅಮೋಘವಾದ ಹಾಗು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕಾದ ಪ್ರವಾಸಿ ತಾಣವಾಗಿದೆ. ನಾವು ಇಂದು ನೋಡುತ್ತಿರುವ ಮುಂಬೈ ಹಿಂದೊಮ್ಮೆ ಏಳು ದ್ವೀಪಗಳ ಸಮೂಹವಾಗಿತ್ತು. ಭೂಸುಧಾರಣೆ ಯೋಜನೆಯಡಿಯಲ್ಲಿ ಕ್ರಮೇಣವಾಗಿ ಈ ದ್ವೀಪಗಳನ್ನು ಜೋಡಿಸುತ್ತ ಇಂದಿನ ಮುಂಬೈ ನಗರವು ನಿರ್ಮಾಣವಾಗಿದೆ.
ವಿಶಾಲವಾಗಿ ಹರಡಿರುವ ಮುಂಬೈ ನಗರದಲ್ಲಿ ಸುತ್ತಾಡುವುದು ಒಂದು ಸುಂದರ ಅನುಭವ. ಮೂಲ ಮರಾಠಿ ಸಂಸ್ಕೃತಿಯೊಂದಿಗೆ ಹಲವು ವಿವಿಧ ಸಂಸ್ಕೃತಿಗಳು ಪ್ರೀತಿಯಿಂದ ಬೆರೆತಿರುವುದನ್ನು ಇಲ್ಲಿ ಕಾಣಬಹುದು ದೇಶದ ಯಾವುದೆ ಭಾಗದಿಂದಲು ಸಾರಿಗೆಯ ಮೂರು ಮಾಧ್ಯಮಗಳಾದ ರಸ್ತೆ, ರೈಲು ಹಾಗು ಆಕಾಶ ಮಾರ್ಗಗಳ ಮೂಲಕ ಅಲ್ಫಾ ಸಿಟಿ (ಗ್ಲೋಬಲ್ ಸಿಟಿ)ಮುಂಬೈಗೆ ಸುಲಭವಾಗಿ ತಲುಪಬಹುದು. ಅದಕ್ಕೂ ಮುಂಚೆ ಈ ಲೇಖನದ ಮೂಲಕ ಮುಂಬೈ ಆಕರ್ಷಣೆಗಳ ಕುರಿತು ತಿಳಿಯಿರಿ ಹಾಗು ಚಿತ್ರಗಳ ಕಾಲ್ಪನಿಕ ಪ್ರವಾಸ ಮಾಡಿ ಆನಂದಿಸಿ.

ಅಕ್ಸಾ ಬೀಚ್:
ಮುಂಬೈ ನಗರದ ಮಲಾಡ್ ನ ಅಕ್ಸಾ ಎಂಬ ಹಳ್ಳಿಯಲ್ಲಿ ನೆಲೆಸಿದೆ ಈ ಸುಂದರ ಪ್ರಶಾಂತ ಕಡಲ ತೀರ. ಅಷ್ಟೊಂದು ಅನ್ವೇಷಿಸಲ್ಪಡದ ಈ ಕಡಲ ತೀರ ಒಂದು ಉತ್ತಮ ಪಿಕ್ನಿಕ್ ತಾಣವಾಗಿದೆ. ಈ ಕಡಲ ತೀರದ ಒಂದು ಕೊನೆಯಲ್ಲಿ ಭಾರತ ನೌಕಾ ಪಡೆಯ (ಐ.ಎನ್.ಎಸ್ ಹಮ್ಲಾ) ನೆಲೆಯಿದ್ದು 'ದಾನಾ ಪಾನಿ' ಎಂಬ ಇನ್ನೊಂದು ಕಿರು ಕಡಲ ತೀರವನ್ನು ಇಲ್ಲಿ ಕಾಣಬಹುದು.
ಮಲಾಡ್ ಪಶ್ಚಿಮದಿಂದ ಬೆಸ್ಟ್ (BEST) ಬಸ್ಸುಗಳ ಮೂಲಕ, ಬೋರಿವಲಿ ರೈಲು ಮಾರ್ಗದ ಮೂಲಕ ಮದ್ ಐಲ್ಯಾಂಡ್ ಮೂಲಕವಾಗಿ ಈ ಕಡಲ ತೀರವನ್ನು ಸುಲಭವಾಗಿ ತಲುಪಬಹುದು. ಅಲ್ಲದೆ ಖಾಸಗಿ ಟ್ಯಾಕ್ಸಿ ಹಾಗು ರಿಕ್ಷಾಗಳು ಕೂಡ ಇಲ್ಲಿಗೆ ತೆರಳಲು ಲಭ್ಯವಿರುತ್ತದೆ. ಮಲಾಡ್ ನಿಂದ 9 ಕಿ.ಮೀ ಹಾಗು ಬೋರಿವಲಿಯಿಂದ 12 ಕಿ.ಮೀ ದೂರದಲ್ಲಿದೆ ಈ ಬೀಚ್.

ಏಳು ದ್ವೀಪಗಳು:
ಇಂದಿನ ಮುಂಬೈನಗರ ಈ ಎಳು ದ್ವೀಪಗಳನ್ನು ಒಳಗೊಂಡಿದೆ. ಅವುಗಳೆಂದರೆ, ಬಾಂಬೆ, ಪರೇಲ್, ಮಾಹಿಮ್, ಮಜಗಾಂವ್, ವರ್ಲಿ, ಕೊಲಾಬಾ ಹಾಗು ಲಿಟಲ್ ಕೊಲಾಬಾ.

ಬಾಂದ್ರಾ:
ಮುಂಬೈ ಪಶ್ಚಿಮದಲ್ಲಿ ನೆಲೆಸಿರುವ ಬಾಂದ್ರಾ ಒಂದು ಉಪನಗರ. ವೈಭವಯುತ ರೆಸ್ಟಾರೆಂಟುಗಳು, ಬಾರ್ ಹಾಗು ಭವ್ಯ ಖರೀದಿ ಮಳಿಗೆಗಳನ್ನು ಇಲ್ಲಿ ಕಾಣಬಹುದು. ಇಲ್ಲಿರುವ ಬ್ಯಾಂಡ್‍ಸ್ಟ್ಯಾಂಡ್ ಹಾಗು ಕಾರ್ಟರ್ ರೋಡ್ ಗುಂಟ ಉದ್ದನೇಯ ಸಮುದ್ರ ತೀರವನ್ನು ಇಲ್ಲಿ ಕಾಣಬಹುದು. ಇಲ್ಲಿ ಕೆಲವು ಪ್ರಖ್ಯಾತ ಬಾಲಿವುಡ್ ತಾರೆಗಳೂ ಕೂಡ ವಾಸವಾಗಿದ್ದಾರೆ. ಬಾಂದ್ರಾ ರೈಲು ನಿಲ್ದಾಣವು ಪಶ್ಚಿಮ ರೈಲಿನ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಕೇಂದ್ರ ಮುಂಬೈನ ವರ್ಲಿಯನ್ನು ಸಂಪರ್ಕಿಸುವ ಬಾಂದ್ರಾ-ವರ್ಲಿ ಸೀ ಲಿಂಕ್ ಸೇತುವೆಯು ಒಂದು ಅದ್ಭುತವಾದ ಸ್ಮಾರಕವಾಗಿದೆ.

ಬಾಣಗಂಗಾ:
ಬಾಣಗಂಗಾ ಅಥವಾ ಬಾಣಗಂಗಾ ಕೊಳವು ಒಂದು ಪುರಾತನ ಕೊಳವಾಗಿದೆ. ಮುಂಬೈನ ಮಲಬಾರ್ ಹಿಲ್ ಪ್ರದೇಶದ ವಾಕೇಶ್ವರ್ ದೇವಾಲಯ ಸಂಕೀರ್ಣದಲ್ಲಿ ಈ ಕೊಳವು ನೆಲೆಸಿದೆ. ದಂತ ಕಥೆಯ ಪ್ರಕಾರ, ಒಂದೊಮ್ಮೆ ಸೀತೆಯನ್ನು ಹುಡುಕುತ್ತ ಹೊರಟಿರುವಾಗ ರಾಮನಿಗೆ ಆಯಾಸವಾಗಿ ಇಲ್ಲಿ ತಂಗಿದನು. ನೀರು ಬೇಕಾಗಿದ್ದ ರಾಮನಿಗೆ ತಮ್ಮನಾದ ಲಕ್ಷ್ಮಣನು ನೀರು ಕೊಡಲು ಸಿದ್ಧನಾಗಲು, ನೀರು ಸಿಗದೆ ಇದ್ದಾಗ ತನ್ನಲ್ಲಿರುವ ಬಾಣದಿಂದ ಭೂಮಿಯನ್ನು ಸಿಳಿ ಗಂಗೆಯ ಒಂದು ಭಾಗವನ್ನು ಚಿಮ್ಮಿಸಿದನು. ಆದ್ದರಿಂದ ಇದನ್ನು ಬಾಣಗಂಗಾ ಎಂದು ಕರೆಯುತ್ತಾರೆ.

ಮುಂಬಾದೇವಿ ದೇವಾಲಾಯ:
ಮುಂಬೈ ನಗರದಲ್ಲಿರುವ ಮುಂಬಾ ದೇವಿ ದೇವಾಲಯಾವು ಮುಂಬೈ ನಗರದ ದೇವತೆಯಾಗಿದ್ದಾಳೆ. ಈ ಪ್ರದೇಶಕ್ಕೆ ಮುಂಬೈ ಎಂಬ ಹೆಸರು ಇದೆ ಮುಂಬಾ ದೇವಿಯಿಂದಲೆ ಬಂದುದಾಗಿದೆ. 6 ಶತಮಾನಗಳಷ್ಟು ಪುರಾತನವಾದಿದೆ ಈ ದೇವಾಲಯ ಎನ್ನಲಾಗುತ್ತದೆ. ಟ್ಯಾಕ್ಸಿ ಹಾಗು ರಿಕ್ಷಾಗಳ ಮೂಲಕ ಸುಲಭವಾಗಿ ತಲುಪಬಹುದಾದ ದಕ್ಷಿಣ ಮುಂಬೈನ ಭುಲೇಶ್ವರ ಪ್ರದೇಶದಲ್ಲಿರುವ ಈ ದೇವಾಲಯ ಕುತೂಹಲಕಾರಿ ಹಿನ್ನಿಲೆಯನ್ನು ಹೊಂದಿದೆ. ಒಂದೊಮ್ಮೆ ಮುಂಬಾರಕ ಎಂಬ ದೈತ್ಯನ ಉಪಟಳವು ಇಲ್ಲಿ ಹೆಚ್ಚಾದಾಗ ಇಲ್ಲಿ ವಾಸಿಸುತ್ತಿದ್ದವರೆಲ್ಲ ಒಟ್ಟಿಗೆ ಸೇರಿ ಬ್ರಹ್ಮನನ್ನು ಕುರಿತು ಭಕ್ತಿಯಿಂದ ತಮ್ಮನ್ನು ಆ ದೈತ್ಯ್ನಿಂದ ಕಾಪಾಡು ಎಂದು ಪ್ರಾರ್ಥಿಸುತ್ತಾರೆ.
ಇವರ ಪ್ರಾರ್ಥನೆಯನ್ನು ಆಲಿಸಿದ ಬ್ರಹ್ಮನು ಅಷ್ಟ ಭುಜವುಳ್ಳ ಶಕ್ತಿ ರೂಪದ ದೇವಿಯನ್ನು ಸೃಷ್ಟಿಸುತ್ತಾನೆ. ನಂತ ಆ ದೇವಿಯು ಮುಂಬರಕನೊಡನೆ ಘೋರ ಯುದ್ಧ ಮಾಡಿ ಅವನನ್ನು ಸೋಲಿಸಿ ಕೆಳಗುರುಳಿಸುತ್ತಾಳೆ. ಸೋತಿದ್ದ ಆ ದೈತ್ಯನು ದೇವಿಯನ್ನು ಮನಸಾರೆ ಪ್ರಾರ್ಥಿಸಿ ತನ್ನ ಹೆಸರನ್ನು ಇಟ್ಟುಕೊಂಡು ಇಲ್ಲಿಯೆ ನೆಲೆಸಲು ಕೋರುತ್ತಾನೆ.

ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸಾಯಿಟಿ:
15 ನೇಯ ಸೆಪ್ಟಂಬರ್ 1883 ರಲ್ಲಿ ಸ್ಥಾಪಿತವಾದ ಈ ಪ್ರತಿಷ್ಠಿತ ಎನ್.ಜಿ.ಒ ಒಂದು ಜೀವ ವೈವಿಧ್ಯತೆಯ ಸಂಶೋಧನೆ ಹಾಗು ಸಂರಕ್ಷಣೆಯ ಸಂಸ್ಥೆಯಾಗಿದೆ. ಮುಂಬೈನ ಅಪೊಲೊ ಸ್ಟ್ರೀಟ್ ನಲ್ಲಿರುವ ಈ ಸಂಸ್ಥೆಯು ಒಂದು ಆಸಕ್ತಿಭರಿತ ಪ್ರದೇಶವಾಗಿದೆ.

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್/ ಬಿ.ಎಸ್.ಇ:
ಮುಂಬೈನ ದಲಾಲ್ ಸ್ಟ್ರೀಟ್ ನಲ್ಲಿರುವ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಅಥವಾ ಬಾಂಬೆ ಷೇರು ಮಾರುಕಟ್ಟೆ ಜಗತ್ತಿನ 11 ನೇಯ ದೊಡ್ಡ ಷೇರು ಮಾರುಕಟ್ಟೆಯಾಗಿದೆ.1875 ರಲ್ಲಿ ಸ್ಥಾಪಿತವಾದ ಈ ಷೇರು ಮಾರುಕಟ್ಟೆ ಏಷಿಯಾ ಖಂಡದ ಮೊದಲನೇಯ ಷೇರು ಮಾರುಕಟ್ಟೆ ಎಂಬ ಬಿರುದು ಪಡೆದಿದೆ.

ಛತ್ರಪತಿ ಶಿವಾಜಿ ಮಹಾರಾಜ ವಾಸ್ತು ಸಂಗ್ರಹಾಲಯ:
ಮುಂಬೈನ ಪ್ರಮುಖ ವಸ್ತು ಸಂಗ್ರಹಾಲಯವಾಗಿರುವ ಇದು ಮೊದಲಿಗೆ ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಂ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. 20 ನೇಯ ಶತಮಾನದ ಮೊದಲ ಭಾಗದಲ್ಲಿ ಮುಂಬೈನ ಗಣ್ಯ ವ್ಯಕ್ತಿಗಳು ಸರಕಾರದ ನೆರವಿನೊಂದಿಗೆ ಅಂದಿನ ಪ್ರಿನ್ಸ್ ಆಫ್ ವೇಲ್ಸ್ ಮುಂಬೈಗೆ ಭೇಟಿ ನೀಡಿದ್ದ ಗೌರವಾರ್ಥವಾಗಿ ಈ ಸಂಗ್ರಹಾಗಾರವನ್ನು ಸ್ಥಾಪಿಸಿದರು. ದಕ್ಷಿಣ ಮುಂಬೈನ ಹೃದಯ ಭಾಗದಲ್ಲಿ ನೆಲೆಸಿರುವ ಈ ಸಂಗ್ರಹಾಲಯವು ಗೇಟ್ ವೇ ಆಫ್ ಇಂಡಿಯಾಗೆ ಹತ್ತಿರದಲ್ಲಿದೆ. ಭಾರತದ ಇತಿಹಾಸ ಕುರಿತು ತಿಳಿಯುವಂತಹ 50,000 ಕ್ಕೂ ಅಧಿಕ ಕಲಾಕೃತಿಗಳನ್ನು ಇಲ್ಲಿ ಸಂರಕ್ಷಿಸಿ ಇರಿಸಲಾಗಿದೆ.

ಛತ್ರಪತಿ ಶಿವಾಜಿ ಟರ್ಮಿನಸ್/ವಿಕ್ಟೋರಿಯಾ ಟರ್ಮಿನಸ್:
ವಿಕ್ಟೋರಿಯಾ ಟರ್ಮಿನಸ್ ಒಂದು ಯುನೆಸ್ಕೊ ಮಾನ್ಯತೆ ಪಡೆದ ವಿಶ್ವ ಪಾರಂಪರಿಕ ತಾಣವಾಗಿರುವುದು ಅಲ್ಲದೆ ಐತಿಹಾಸಿಕ ಮಹತ್ವವುಳ್ಳ ರೈಲು ನಿಲ್ದಾಣವೂ ಸಹ ಹೌದು. ಮುಂಬೈನ ಕೇಂದ್ರ ರೈಲ್ವೆಗೆ ಇದು ಕೇಂದ್ರ ಪ್ರದೇಶವಾಗಿದೆ. 1996 ರಲ್ಲಿ ಅಂದಿನ ರೈಲು ಮಂತ್ರಿಯು, ಮರಾಠಿ ಸಾಮ್ರಾಜ್ಯದ ದೊರೆಯಾದ ಶಿವಾಜಿಯ ಗೌರವಾರ್ಥವಾಗಿ ಇದರ ಹೆಸರನ್ನು ಛತ್ರಪತಿ ಶಿವಾಜಿ ಟರ್ಮಿನಸ್ ಎಂದು ಬದಲಾಯಿಸಿದರು. ಒಟ್ಟಾರೆಯಾಗಿ 18 ಪ್ಲಾಟ್ ಫಾರ್ಮ್ ಗಳು ಇಲ್ಲಿದ್ದು ಅವುಗಳಲ್ಲಿ 7 ಪ್ಲಾಟ್ ಫಾರ್ಮ್ ಗಳು ಸ್ಥಳೀಯ ರೈಲುಗಳಿಗೆ ಮೀಸಲಾಗಿದ್ದರೆ, ಮಿಕ್ಕ 11 ಪ್ಲಾಟ್ ಫಾರ್ಮ್ ಗಳು ಅಂತಾರಾಜ್ಯ ರೈಲುಗಳಿಗೆ ಮೀಸಲಾಗಿವೆ.

ಕಫ್ ಪರೇಡ್:
ದಕ್ಷಿಣ ಮುಂಬೈನಲ್ಲಿ ನೆಲೆಸಿರುವ ಇದು ಇತ್ತೀಚೆಗೆ ಜನಪ್ರಿಯಗೊಳ್ಳುತ್ತಿರುವ ಮಾರುಕಟ್ಟೆ ಪ್ರದೇಶವಾಗಿದೆ. ಈ ಪ್ರದೇಶವು ದಕ್ಷಿಣದ ತುದಿಯಲ್ಲಿದ್ದು, ನೇವಿ ನಗರದ ಉತ್ತರಕ್ಕೆ ಹತ್ತಿರದಲ್ಲಿದೆ. ಎಂ.ವಿ.ಆರ್.ಡಿ.ಸಿ ಯ ವರ್ಲ್ಡ್ ಟ್ರೇಡ್ ಸೆಂಟರ್ ನೆಲೆಸಿರುವ ಈ ಪ್ರದೇಶವನ್ನು ಟ್ಯಾಕ್ಸಿ ಹಾಗು ರಿಕ್ಷಾ ಮೂಲಕ ಸುಲಭವಾಗಿ ತಲುಪಬಹುದು.

ಗಿರಗಾವ್ ಚೌಪಾಟಿ:
ಕೆವಲ ಚೌಪಾಟಿ ಎಂದೆ ಜನಪ್ರಿಯವಾಗಿರುವ ಮುಂಬೈನ ಗಿರಗಾವ್ ನ ಈ ಸಾರ್ವಜನಿಕ ಕಡಲ ತೀರವು ಮತ್ತೊಂದು ಪ್ರಖ್ಯಾತ ತಾಣ ಮರೀನ್ ಡ್ರೈವ್ ಪಕ್ಕದಲ್ಲೆ ನೆಲೆಸಿದೆ. ವಿಶೇಷವಾಗಿ ಈ ಪ್ರದೇಶವು ಗಣೇಶ ಚತುರ್ಥಿಯ ಗಣೇಶ ವಿಗ್ರಹ ವಿಸರ್ಜನಾ ಕಾರ್ಯಕ್ಕೆ ಬಹು ಹೆಸರುವಾಸಿಯಾಗಿದೆ. ಮುಂಬೈನ ಸಾವಿರಾರು ಭಕ್ತಾದಿಗಳು ಇಲ್ಲಿನ ಅರೇಬಿಯನ್ ಸಮುದ್ರದಲ್ಲಿ ಗಣೇಶನ ವಿಗ್ರಹಗಳನ್ನು ವಿಸರ್ಜಿಸಲು ಇಲ್ಲಿಗೆ ಬರುತ್ತಾರೆ.

ಕ್ರಾಫರ್ಡ್ ಮಾರ್ಕೇಟ್:
ಅಧಿಕೃತವಾಗಿ ಮಹಾತ್ಮಾ ಜ್ಯೋತಿಬಾ ಫುಲೆ ಮಂಡಯಿ ಎಂದು ಕರೆಯಲ್ಪಡುವ ಈ ಮಾರುಕಟ್ಟೆಯು ದಕ್ಷಿಣ ಮುಂಬೈನಲ್ಲಿರುವ ಜನಪ್ರಿಯ ಮಾರುಕಟ್ಟೆಗಳಲ್ಲೊಂದಾಗಿದೆ. ನಗರ ಪುರಸಭೆಯ ಮೊದಲ ಕಮಿಷನರ್ ಆಗಿದ್ದ ಅರ್ಥರ್ ಕ್ರಾಫರ್ಡ್ ಅವರ ಗೌರವಾರ್ಥವಾಗಿ ಇದಕ್ಕೆ ಕ್ರಾಫರ್ಡ್ ಹೆಸರನ್ನು ಇರಿಸಲಾಗಿದೆ. ತದನಂತರ ಮಹಾತ್ಮಾ ಫುಲೆ ಸ್ಮಾರಕ ಸಮೀತಿಯ ಅಧ್ಯಕ್ಷರ ಸತತ ಪ್ರಯತ್ನದಿಂದ ಇದರ ಹೆಸರನ್ನು ಅಧಿಕೃತವಾಗಿ ಜ್ಯೊತಿಬಾ ಫುಲೆ ಮಂಡಯಿ ಎಂದಿಡಲಾಯಿತು. ಛತ್ರಪತಿ ಶಿವಾಜಿ ಟರ್ಮಿನಸ್ ಉತ್ತರಕ್ಕಿರುವ ಮುಂಬೈ ಪೋಲಿಸ್ ನ ಕೇಂದ್ರ ಕಚೇರಿಯ ಎದುರಿನಲ್ಲಿ ಈ ಮಾರುಕಟ್ಟೆ ಪ್ರದೇಶ ಸ್ಥಿತಗೊಂಡಿದೆ. ತರಕಾರಿ ಹಣ್ಣುಗಳಿಂದ ಹಿಡಿದು ಸಾಕು ಪ್ರಾಣಿಗಳ ವರೆಗೆ ಎಲ್ಲ ರೀತಿಯ ವಸ್ತುಗಳು ಇಲ್ಲಿ ಸಿಗುತ್ತವೆ.

ಎಲಿಫಂಟಾ ಗುಹೆಗಳು:
ಮುಂಬೈನ ಪೂರ್ವಕ್ಕೆ ಸುಮಾರು 10 ಕಿ.ಮೀ ದೂರದಲ್ಲಿರುವ ಮುಂಬೈ ಬಂದರು ಪ್ರದೇಶದ ಎಲಿಫಂಟ ದ್ವೀಪದಲ್ಲಿ ಈ ಪುರಾತನ ಗುಹಾ ಸ್ಮಾರಕಗಳನ್ನು ಕಾಣಬಹುದಾಗಿದೆ. ಸ್ಥಳೀಯವಾಗಿ ಘಾರಾಪುರಿಚಿ ಲೇಣಿ (ಲೇಣಿ ಎಂದರೆ ಮರಾಠಿಯಲ್ಲಿ ಗುಹೆ ಎಂದರ್ಥ) ಎಂದು ಕರೆಯಲ್ಪಡುವ ಈ ತಾಣದಲ್ಲಿ ಗುಹೆಗಳ ಎರಡು ಸಮೂಹಗಳನ್ನು ಕಾಣಬಹುದು. ಮೊದಲನೆಯ ಗುಂಪು 5 ಹಿಂದು ಗುಹೆಗಳನ್ನು ಹೊಂದಿದ್ದರೆ, ಎರಡನೇಯ ಗುಂಪು ಎರಡು ಬೌದ್ಧ ಧರ್ಮದ ಗುಹೆಗಳನ್ನು ಹೊಂದಿದೆ. ಗೇಟ್ ವೇ ಆಫ್ ಇಂಡಿಯಾದಿಂದ ಫೆರ್ರಿಗಳ ಮೂಲಕ ಈ ತಾಣಕ್ಕೆ ತಲುಪಬಹುದು.

ಎಸ್ಸೆಲ್ ವರ್ಲ್ಡ್:
ಮುಂಬೈನ ಗೊರಾಯಿ ಪ್ರದೇಶದಲ್ಲಿರುವ ಈ ಮನರಂಜನಾ ಉದ್ಯಾನವು ಭಾರತದ ದೊಡ್ಡ ವಿನೋದಮಯ ಉದ್ಯಾನ ಎಂಬ ಖ್ಯಾತಿಯನ್ನು ಪಡೆದಿದೆ. 1986 ರಲ್ಲಿ ಪಾನ್ ಇಂಡಿಯಾ ಪರ್ಯಟನ್ ಖಾಸಗಿ ನಿಯಮಿತ ಕಂಪನಿಯಿಂದ ಸ್ಥಾಪಿಸಲಾದ ಇದು ಅಂತಾರಾಷ್ಟ್ರೀಯ ಗುಣಮಟ್ಟದ ಆಟೋಪಕರಣಗಳನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ಬೆಳಿಗ್ಗೆ 11 ಘಂಟೆಯಿಂದ ಸಾಯಂಕಾಲ 7 ಘಂಟೆಯವರೆಗೆ ತೆರೆದಿರುವ ಇದು ಶನಿವಾರ ಹಾಗು ಭಾನುವಾರಗಳಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 7 ಘಂಟೆಯವರೆಗೆ ತೆರೆದಿರುತ್ತದೆ. ಬಗೆ ಬಗೆಯ ಆಟಗಳು ಇಲ್ಲಿ ಲಭ್ಯ.

ಫ್ಯಾಷನ್ ಸ್ಟ್ರೀಟ್:
ದಕ್ಷಿಣ ಮುಂಬೈನ ಆಜಾದ್ ಮೈದಾನದ ಬಳಿಯಿರುವ ಮಹಾತ್ಮಾ ಗಾಂಧಿ (ಎಂ.ಜಿ ರಸ್ತೆ) ರಸ್ತೆಯ ಮೇಲಿದೆ ಈ ಫ್ಯಾಷನ್ ಸ್ಟ್ರೀಟ್. 385 ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿರುವ ಈ ಬೀದಿಯಲ್ಲಿ ಬಟ್ಟೆ ಬರೆಗಳಲ್ಲದೆ ಹಲವು ಅಲಂಕಾರಿಕ ವಸ್ತುಗಳನ್ನು ಕೂಡ ಖರೀದಿಸಬಹುದಾಗಿದೆ.

ಗೇಟ್ ವೇ ಆಫ್ ಇಂಡಿಯಾ:
ಬ್ರಿಟೀಷರ ಆಡಳಿತವಿದ್ದಾಗ ನಿರ್ಮಾಣಗೊಂಡ ಮುಂಬೈನ ಈ ಅತಿ ಪ್ರಸಿದ್ಧ ಸ್ಮಾರಕವು ದಕ್ಷಿಣ ಮುಂಬೈನ ಅಪೋಲೊ ಬಂಡರ್ ಎಂಬ ಪ್ರದೇಶದಲ್ಲಿದೆ. ಛತ್ರಪತಿ ಶಿವಾಜಿ ಮಾರ್ಗದ ಕೊನೆಯಲ್ಲಿರುವ ಮುಂಬೈ ಬಂದರಿನ ದಡದಲ್ಲಿದೆ 85 ಅಡಿಗಳಷ್ಟು ಎತ್ತರವಾದ ಈ ಸ್ಮಾರಕ. ಪ್ರವಾಸಿಗರಂತು ಈ ಸ್ಮಾರಕ ನೋಡದೆ ಹಿತಿರುಗುವುದೆ ಇಲ್ಲ. ಅಂದ ಚೆಂದಗಳ ಸ್ಮಾರಕವಾದ ಇದನ್ನು ಒಮ್ಮೊಮ್ಮೆ ಮುಂಬೈನ ತಾಜ್ ಮಹಲ್ ಎನ್ನುವುದು ಉಂಟು.

ಹಾಜಿ ಅಲಿ ದರ್ಗಾ:
ಮುಂಬೈನ ದಕ್ಷಿಣದಲ್ಲಿರುವ ವರ್ಲಿ ಕರಾವಳಿಯ ಒಂದು ಸಣ್ಣ ದ್ವೀಪದಲ್ಲಿ ನೆಲೆಸಿದೆ ಈ ಹಾಜಿ ಅಲಿ ದರ್ಗಾ ಮತ್ತು ಮಸೀದಿ. ಮುಂಬೈನ ಪ್ರಮುಖ ಹೆಗ್ಗುರುತಾಗಿರುವ ಈ ದರ್ಗಾ ಕಟ್ಟಡವು ಇಂಡೊ-ಇಸ್ಲಾಮಿಕ್ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಸಯ್ಯದ್ ಪೀರ್ ಹಾಜಿ ಅಲಿ ಶಾ ಬುಖಾರಿ ಅವರ ಸಮಾಧಿ ಇಲ್ಲಿದೆ.

ಹ್ಯಾಂಗಿಂಗ್ ಗಾರ್ಡನ್:
ಫಿರೋಜ್ ಶಾ ಮೆಹತಾ ಉದ್ಯಾನ ಎಂತಲೂ ಕರೆಯಲ್ಪಡುವ ಈ ಉದ್ಯಾನವನ್ನು ಮುಂಬೈನ ಮಲಬಾರ್ ಗುಡ್ಡದ ಮೇಲೆ ನಿರ್ಮಿಸಲಾಗಿದೆ. ಇದರ ಪಶ್ಚಿಮದಲ್ಲಿ ಕಮಲಾ ನೆಹರು ಪಾರ್ಕ್ ಕೂಡ ಇದೆ. ಈ ಉದ್ಯಾನದಲ್ಲಿರುವ ನಿರ್ಮಿಸಲಾಗಿರುವ ಪಥವನ್ನು ಮೇಲಿನಿಂದ ನೋಡಿದಾಗ ಆಂಗ್ಲ ಭಾಷೆಯ QME ಎಂಬ ಅಕ್ಷರಗಳು ವಕ್ರ ರೂಪದಲ್ಲಿ ಗೋಚರಿಸುತ್ತವೆ ಎಂದು ಹೇಳಲಾಗಿದೆ.

ಬಾಂಬೆ ಹೈ ಕೋರ್ಟ್:
1862 ಅಗಸ್ಟ್ 14 ರಂದು ಉದ್ಘಾಟನೆಗೊಂಡ ಮುಂಬೈ ಹೈ ಕೋರ್ಟ್ ಭಾರತದ ಹಳೆಯ ಹೈ ಕೋರ್ಟ್‌ಗಳಲ್ಲೊಂದಾಗಿದೆ. ಮಹಾರಾಷ್ಟ್ರ, ಗೋವಾ, ದಮನ್ ಮತ್ತು ದೀವ್ ಹಾಗು ದಾದ್ರಾ ಮತ್ತು ನಗರಹವೇಲಿಗಳು ಇದರ ಅಡಿಯಲ್ಲಿ ಬರುತ್ತವೆ. ಮುಂಬೈನಲ್ಲಿ ಮುಖ್ಯ ಕಚೇರಿಯಿದ್ದು ಗೋವಾದ ಪಣಜಿ, ಮಹಾರಾಷ್ಟ್ರದ ನಾಗ್ಪುರ್ ಹಾಗು ಔರಂಗಾಬಾದ್ ನಲ್ಲಿ ಶಾಖೆಗಳನ್ನು ಹೊಂದಿದೆ.

ದಿ ಇಂಪೇರಿಯಲ್ ಟವರ್:
ಮುಂಬೈನಲ್ಲಿರುವ ಎರಡು ಗೋಪುರಗಳುಳ್ಳ ಈ ವಸತಿ ಸಂಕೀರ್ಣವು ಭಾರತದಲ್ಲಿ ಪೂರ್ಣಗೊಂಡ ಎತ್ತರದ ಕಟ್ಟಡವಾಗಿದೆ. ಮುಂಬೈನ ತಾರ್ದೇವ್ ನಲ್ಲಿರುವ ಈ ಕಟ್ಟಡವು ಸಮುದ್ರಕ್ಕೆ ಎದುರಾಭಿಮುಖವಾಗಿ ನೆಲೆಸಿದೆ.

ನೆಹರೂ ತಾರಾಲಯ:
ಭಾರತದಲ್ಲಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಗೌರವಾರ್ಥ ಅವರ ಹೆಸರನ್ನು ಇಡಲಾದ ಐದು ತಾರಾಲಯಗಳ ಪೈಕಿ ಇದೂ ಒಂದು. ಮಿಕ್ಕ ನಾಲ್ಕು ತಾರಾಲಯಗಳಿರುವುದು, ಪುಣೆ, ಬೆಂಗಳೂರು, ದೆಹಲಿ ಹಾಗು ಅಲಹಾಬಾದ್ ಗಳಲ್ಲಿ. ಈ ತಾರಾಲಯವು 1977 ಮಾರ್ಚ್ 3 ರಂದು ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರಿಂದ ಉದ್ಘಾಟನೆಗೊಂಡಿತು.

ಪೋವಾಯ್ ಲೇಕ್:
ಮುಂಬೈನ ಒಂದು ಉಪನಗರವಾದ ಪೋವಾಯ್ ನಲ್ಲಿ ನೆಲೆಸಿದೆ ಈ ಸುಂದರ ಕೃತಕ ಕೆರೆ. ಪ್ರತಿಷ್ಠಿತ ಮುಂಬೈ ಐ.ಐ.ಟಿ ಯು ಈ ಕೆರೆಯ ಪೂರ್ವ ಬದಿಯಲ್ಲಿ ನೆಲೆಸಿದೆ.

ಪೃಥ್ವಿ ರಂಗಮಂದಿರ:
ಮುಂಬೈನ ಪೃಥ್ವಿ ಥಿಯೇಟರ್ ಅತಿ ಜನಪ್ರಿಯ ರಂಗಮಂದಿರವಾಗಿದೆ. ಬಾಲಿವುಡ್ ತಾರೆ ಶಶಿ ಕಪೂರ್ ಅವರಿಂದ ತಮ್ಮ ತಂದೆಯಾದ ಪೃಥ್ವಿ ರಾಜ ಕಪೂರ್ ಅವರ ಗೌರವಾರ್ಥ ನಿರ್ಮಿಸಲ್ಪಟ್ಟಿದೆ.


Click it and Unblock the Notifications
















