ಎಲೆ ಮರೆಯ ಕಾಯಿಯಂತೆ, ಪಶ್ಚಿಮ ಘಟ್ಟಗಳ ದಟ್ಟ ಹಸಿರಿನ ಜಾಡಿನಲ್ಲಿ ನವ ನವೀನವಾಗಿ ಕಂಗೊಳಿಸುತ್ತದೆ ಮಂಗಳೂರು. ಒಂದೆಡೆ ದಟ್ಟವಾಗಿ ಹಬ್ಬಿರುವ ವನ್ಯಸಂಪತ್ತು ಇನ್ನೊಂದೆಡೆ ವಿಶಾಲವಾಗಿ ಚಾಚಿರುವ ಅರಬ್ಬಿ ಸಮುದ್ರ, ಮಧ್ಯದಲ್ಲಿ ಪ್ರಶಾಂತವಾಗಿ ನೆಲೆಸಿರುವ ಮಂಗಳೂರು ಕರ್ನಾಟಕದ ಪ್ರವಾಸೋದ್ಯಮಕ್ಕೆ ತನ್ನದೆ ಆದ ಕೊಡುಗೆ ನೀಡಿದೆ. ರಾಜಧಾನಿ ಬೆಂಗಳೂರು ನಗರದಿಂದ ಸುಮಾರು 350 ಕಿ.ಮೀ ದೂರದಲ್ಲಿ ನೆಲೆಸಿರುವ ಈ ಬಂದರು ನಗರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೈಗಾರಿಕೆಗಳು, ಉದ್ದಿಮೆಗಳು ಗಟ್ಟಿಯಾಗಿ ನೆಲೆಯುರಿದ್ದು ಇದನ್ನು ಒಂದು ಆಧುನಿಕ ನಗರವನ್ನಾಗಿಸಿದೆ. ವಾಣಿಜ್ಯ ಕೇಂದ್ರಗಳು, ಹೊಸ ಬಗೆಯ ಅಂಗಡಿ ಮುಗ್ಗಟ್ಟುಗಳು, ಆಧುನಿಕ ಜೀವನ ಶೈಲಿ ಮಂಗಳೂರನ್ನು ಒಂದು ಮಹಾನಗರವನ್ನಾಗಿಸಿದೆ.
ಪ್ರವಾಸಿ ದೃಷ್ಟಿಯಿಂದಲೂ ಸಹ ಮಂಗಳೂರು ನಗರ ತನ್ನೊಳಗೆ ಹಾಗು ಹತ್ತಿರದಲ್ಲಿ ಅನೇಕ ಪ್ರವಾಸಿ ಆಕರ್ಷಣೆಗಳನ್ನು ಹೊಂದಿದೆ. ನಿಸರ್ಗ ಸಿರಿಯ ಸೊಬಗನ್ನು ಹೊತ್ತಿರುವ ತಾಣದಿಂದ ಹಿಡಿದು ಸುಂದರ ಕಡಲ ತೀರಗಳವರೆಗೆ ಹಲವು ಆಕರ್ಷಣೆಗಳನ್ನು ಇಲ್ಲಿ ಕಾಣಬಹುದು. ನಗರಕ್ಕೆ ಮಂಗಳೂರು ಎಂಬ ಹೆಸರು ಆ ಪ್ರದೇಶದಲ್ಲಿರುವ ಮಂಗಳಾ ದೇವಿಯಿಂದ ಬಂದುದಾಗಿದೆ ಎಂದು ಹೇಳಲಾಗಿದೆ. ಭಾರತದ ಪ್ರಮುಖ ಬಂದರುಗಳಲ್ಲಿ ಒಂದಾಗಿರುವ ಮಂಗಳೂರು ಬಂದರು, ಮಲಬಾರ್ ಕೊಲ್ಲಿಯೊಂದಿಗೆ ಸ್ಟೇಜಿಂಗ್ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತದೆ. ಮಂಗಳೂರನ್ನು ದೇಶದ ಯಾವುದೆ ಮೂಲೆಯಿಂದ ಸುಲಭವಾಗಿ ವಿಮಾನ, ರೈಲು ಹಾಗು ರಸ್ತೆಯ ಮುಖಾಂತರ ತಲುಪಬಹುದಾಗಿದೆ. ತಲುಪುವ ಬಗೆಯ ಕುರಿತು ವಿವರವಾಗಿ ಇಲ್ಲಿ ತಿಳಿಯಿರಿ.
ಮಂಗಳೂರಿನ ಆಕರ್ಷಣೆಗಳ ಕುರಿತು ಒಂದೊಂದಾಗಿ ತಿಳಿಯಿರಿ.

ಪಿಲಿಕುಳ ನಿಸರ್ಗಧಾಮ:
ಮಂಗಳೂರು ಬಳಿಯಿರುವ ವಮಂಜೂರು ಎಂಬಲ್ಲಿದೆ ಪ್ರಾಕೃತಿಕ ಸಿರಿಯಿಂದ ಸಂಪದ್ಭರಿತವಾದ ಈ ನಿಸರ್ಗಧಾಮ. ತುಳು ಭಾಷೆಯಲ್ಲಿ ಪಿಲಿ ಎಂದರೆ ಹುಲಿ ಹಾಗು ಕುಳ ಎಂದರೆ ಕೆರೆ ಎಂದಾಗುತ್ತದೆ. ಒಂದೊಮ್ಮೆ ಹುಲಿಗಳು ಇಲ್ಲಿ ನೀರನ್ನು ಕುಡಿಯಲು ಬರುತ್ತಿದ್ದುದರಿಂದ ಇದಕ್ಕೆ ಪಿಲಿಕುಳ ಎಂದು ಕರೆಯಲಾಗಿದೆ. ಮಂಗಳೂರು ನಗರ ಸಭೆಯು ಈ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿರುವುದರಿಂದ ಪ್ರಸ್ತುತ ನಗರವಾಸಿಗಳಿಗೆ ಇದೊಂದು ಅನನ್ಯ ವರದಾನವಾಗಿ ಲಭಿಸಿದೆ. ಪಿಕ್ನಿಕ್ ಗಳಿಗಂತೂ ಇದು ಹೇಳಿ ಮಾಡಿಸಿದ ತಾಣವಾಗಿದೆ.

ಪಣಂಬೂರು ಕಡಲ ತೀರ:
ಪಣಂಬೂರು ಮಂಗಳೂರಿನ ಹೊಸ ಬಂದರು ಪ್ರದೇಶವಾಗಿದೆ. ಇಲ್ಲಿ ಕಂಡುಬರುವ ಕಡಲ ತೀರವು ತನ್ನದೆ ಆದ ವೈಶೀಷ್ಟ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ರಕೃಪೆ: Arindambasu

ಸೇಂಟ್ ಮೇರೀಸ್ ಐಲ್ಯಾಂಡ್ಸ್:
ಮಂಗಳೂರು ನಗರದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಉಡುಪಿಯ ಮಲ್ಪೆ ಕಡಲ ತೀರದ ಬಳಿಯಲ್ಲಿದೆ ಈ ಪುಟ್ಟ ನಾಲ್ಕು ದ್ವೀಪ ಸಮೂಹಗಳು. ಇದೊಂದು ಗಮ್ಯ ಪ್ರವಾಸಿ ಆಕರ್ಷಣೆಯಾಗಿದೆ. ಲಾವಾ ರಸದಿಂದ ರೂಪಗೊಂಡ ವಿಶೀಷ್ಟ ಬಗೆಯ ಶಿಲಾ ರಚನೆಗಳಿಂದ ಆಕರ್ಷಿಸುತ್ತದೆ.
ಚಿತ್ರಕೃಪೆ: Man On Mission

ಸುರತ್ಕಲ್ ಬೀಚ್:
ಸುರತ್ಕಲ್ ಮಂಗಳೂರು ನಗರದ ಉಪನಗರವಾಗಿದೆ. ಲೈಟ್ ಹೌಸ್ ಹೊಂದಿರುವ ಇಲ್ಲಿನ ಕಡಲ ತೀರವು ನೋಡಲು ಸುಂದರವಾಗಿ ಗೋಚರಿಸುತ್ತದೆ. ಮಂಗಳೂರಿಗೆ ಬರುವ ಹಲವು ಪ್ರವಾಸಿಗರು ಈ ಕಡಲ ತೀರಕ್ಕೂ ಭೇಟಿ ನೀಡುತ್ತಿರುತ್ತಾರೆ.
ಚಿತ್ರಕೃಪೆ: Pranavjee

ತಣ್ಣೀರುಬಾವಿ ಕಡಲ ತೀರ:
ಮಂಗಳೂರಿನ ಮತ್ತೊಂದು ಪ್ರಮುಖ ಆಕರ್ಷಣೆ ತಣ್ಣೀರುಬಾವಿ ಕಡಲ ತೀರ. ಈ ತಾಣವು ಸುಂದರವಾದ ಸೂರ್ಯಾಸ್ತದ ನೋಟ ಕರುಣಿಸುವುದಕ್ಕೆ ಹೆಸರುವಾಸಿಯಾಗಿದೆ. ಇದನ್ನು ಪಣಂಬೂರಿನಿಂದ ಅಥವಾ ಫೆರ್‍ರಿಯ ಸಹಾಯದಿಂದ ಸುಲ್ತಾನ್ ಬತೇರಿ ಬಳಿಯ ಗುರುಪುರ ನದಿಯ ಮೂಲಕ ಇಲ್ಲಿಗೆ ತಲುಪಬಹುದು.
ಚಿತ್ರಕೃಪೆ: Peresbennet

ಸುಲ್ತಾನ್ ಬತೇರಿ:
ನಗರ ಪ್ರದೇಶದಿಂದ ಐದು ಕಿ.ಮೀ ದೂರದಲ್ಲಿರುವ ಸುಲ್ತಾನ್ ಬತೇರಿಯು ಒಂದು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. 1784 ರಲ್ಲಿ ಟಿಪ್ಪು ಸುಲ್ತಾನನಿಂದ ನಿರ್ಮಿಸಲಾದ ಈ ಚಿಕ್ಕ ರಚನೆಯು ಒಂದು ವೀಕ್ಷಣಾಲಯವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಈ ತಾಣದ ಬಳಿ ಕಡಲ ತೀರವೂ ಇರುವುದರಿಂದ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಚಿತ್ರಕೃಪೆ: Premkudva

ಉಲ್ಲಾಳ ಬೀಚ್:
ಮಂಗಳೂರು ನಗರದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಉಲ್ಲಾಳ ಪಟ್ಟಣವು ತನ್ನಲ್ಲಿರುವ ಕಡಲ ತೀರದಿಂದಾಗಿ ಗಮ್ಯ ಪ್ರವಾಸಿ ಆಕರ್ಷಣೆಯಾಗಿ ಹೆಸರುವಾಸಿಯಾಗಿದೆ. ನೇತ್ರಾವತಿ ನ್ದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯು ಸೂರ್ಯಾಸ್ತದ ವಿಹಂಗಮ ನೋಟವನ್ನು ಒದಗಿಸುತ್ತದೆ.

ಪೊಳಲಿ ರಾಜರಾಜೇಶ್ವರಿ ದೇವಾಲಯ:
ಶಕ್ತಿಯ ಸ್ವರೂಪಳಾದ ರಾಜರಾಜೇಶ್ವರಿ ದೇವಿಯ ದೇವಸ್ಥಾನದಿಂದಾಗಿ ಪೊಳಲಿಯು ಪ್ರಸಿದ್ಧವಾಗಿದೆ. ಇದು ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಸೂರತ ಎಂಬುವ ರಾಜನಿಂದ ಸುಮಾರು 8 ನೆಯ ಶತಮಾನದಲ್ಲಿ ಈ ದೇವಾಲಯದ ನಿರ್ಮಾಣವಾಗಿದೆ. ವಾರ್ಷಿಕವಾಗಿ ಹಲವು ಉತ್ಸವಗಳನ್ನು ಈ ದೇವಸ್ಥಾನದಲ್ಲಿ ಆಯೋಜಿಸಲಾಗುತ್ತದೆ. ಅವುಗಳಲ್ಲಿ ಪೊಳಲಿ ಚೆಂಡು ಉತ್ಸವವು ಅತ್ಯಂತ ಪ್ರಮುಖವಾಗಿದೆ.
ಚಿತ್ರಕೃಪೆ: Surajt88

ಕದ್ರಿ ಪಾರ್ಕ್:
ಮಂಗಳೂರು ನಗರ ಮಿತಿಯಲ್ಲಿರುವ ಅತಿ ದೊಡ್ಡ ಉದ್ಯಾನ ಇದಾಗಿದೆ. ನಗರದಿಂದ ಐದು ಕಿ.ಮೀ ದೂರದಲ್ಲಿರುವ ಈ ಪಾರ್ಕ್ ಎ.ಐ.ಆರ್ ಸ್ಟುಡಿಯೊ ಬಳಿಯಲ್ಲಿದೆ. ಎಲ್ಲ ವಯಸ್ಕರೂ ಕೂಡ ವಿರಾಮದ ವೇಳೆಯನ್ನು ಹಾಯಾಗಿ ಕಳೆಯಲು ಆದರ್ಶಪ್ರಾಯವಾದ ಈ ಉದ್ಯಾನ ಪಿಕ್ನಿಕ್ ಗಳಿಗೆ ಹೇಳಿಮಾಡಿಸಿದಂತಿದೆ.
ಚಿತ್ರಕೃಪೆ: Premkudva

ಮಂಗಳಾದೇವಿ ದೇವಾಲಯ:
ಮಂಗಳೂರಿನ ಬೋಲಾರಾ ಪ್ರದೇಶದಲ್ಲಿ ಒಂಭತ್ತನೆಯ ಶತಮಾನದ ಈ ಪುರಾತನ ದೇವಾಲಯವಿದೆ. ಈ ದೇವಿಯಿಂದಲೆ ನಗರಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ಕನ್ಯಾಮಣಿಗಳು ಭಕ್ತಿಯಿಂದ ಈ ದೇವಿಯನ್ನು ಬೇಡಿ, ವೃತವನ್ನು ಆಚರಿಸಿದರೆ ತಾವು ಅಪೇಕ್ಷಿಸಿದಂತಹ ಪತಿಯು ದೊರಕುತ್ತಾನೆ ಎಂಬ ನಂಬಿಕೆಯಿದೆ. ಮಂಗಳೂರಿನಲ್ಲಿದ್ದಾಗ ಭೇಟಿ ನೀಡಲೇಬೇಕಾದ ದೇವಸ್ಥಾನ ಇದಾಗಿದೆ.

ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯ:
ಮಂಗಳೂರಿನ ಕುದ್ರೋಳಿ ಎಂಬಲ್ಲಿ ಶಿವನ ಅವತಾರ ಗೋಕರ್ಣನಾಥೇಶ್ವರನ ಈ ದೇವಾಲಯವಿದೆ. ನಾರಾಯಣ ಗುರು ಎಂಬ ಪೂಜ್ಯರು ತಮ್ಮೊಡಿಗೆ ತಂದಿದ್ದ ಶಿವಲಿಂಗವೊಂದನ್ನು ಫೆಬ್ರುವರಿ 1912 ರಲ್ಲಿ ಇಲ್ಲಿ ಪ್ರತಿಷ್ಠಾಪಿಸಿ ಈ ಕ್ಷೇತ್ರವನ್ನು ಪಾವನಗೊಳಿಸಿದರು. ನಗರದಲ್ಲಿ ಇದೊಂದು ಸುಂದರ ದೇವಾಲಯವಾಗಿದ್ದು ಭೇಟಿ ನೀಡಬಹುದಾಗಿದೆ.
ಚಿತ್ರಕೃಪೆ: Premkudva

ಕದ್ರಿ ಮಂಜುನಾಥ ದೇವಾಲಯ:
ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥ ದೇವಾಲಯವು ರೋಚಕವಾದ ಹಿನ್ನಿಲೆಯನ್ನು ಹೊಂದಿದೆ. ವಜ್ರಾಯಣ ಬುದ್ಧನಿಂದ ನಿರ್ಮಿಸಲ್ಪಟ್ಟ ಈ ದೇವಸ್ಥಾನವು ಕ್ರಮೇಣ ಬೌದ್ಧ ಧರ್ಮದ ಪ್ರಭಾವ ಕ್ಷಿಣಿಸಿದ ನಂತರ ಹಿಂದು ದೇವಾಲಯವಾಗಿ ಪರಿವರ್ತಿತವಾಯಿತು. ವಜ್ರಾಯಣನ ಕಾಲದಲ್ಲಿ ಕದ್ರಿ ಎಂಬುದು ಬೌದ್ಧ ವಿಹಾರವಾಗಿದ್ದುದರಿಂದ ಈ ದೇವಸ್ಥಾನಕ್ಕೆ ಕದ್ರಿ ಎಂಬ ಹೆಸರು ಸೇರ್ಪಡೆಗೊಂಡಿತೆನ್ನಲಾಗಿದೆ. ಮುಖ್ಯ ದೇಗುಲದ ಪಶ್ಚಿಮಕ್ಕೆ ದುರ್ಗೆಯ ಹಾಗು ಉತ್ತರಕ್ಕೆ ಗಣಪತಿಯ ದೇವಾಲಯಗಳಿವೆ. ದೇವಾಲಯದ ಹಿಂಭಾಗದಲ್ಲಿ ನೀರಿನ ಚಿಲುಮೆಯೊಂದಿದ್ದು ಪಕ್ಕದಲ್ಲೆ ಇರುವ ವಿವಿಧ ಆಕಾರಗಳ ತೊಟ್ಟಿಗಳಲ್ಲಿ ಈ ನೀರು ಹರಿಯುತ್ತದೆ. ದೇವಾಲಯಕ್ಕೆ ಭೇಟಿ ನೀಡುವವರು ಮೊದಲಿಗೆ ಈ ತೊಟ್ಟಿಯ ನೀರಿನಿಂದ ಕೈಕಾಲುಗಳನ್ನು ತೊಳೆದುಕೊಂಡು ನಂತರ ದೇವಸ್ಥಾನದೊಳಗೆ ಪ್ರವೇಶಿಸುತ್ತಾರೆ.
ಚಿತ್ರಕೃಪೆ: Vaikoovery


Click it and Unblock the Notifications

















