ನಮ್ಮ ಭಾರತದಲ್ಲಿ ಪ್ರವಾಸಿ ಸ್ಥಳಗಳಿಗೆ ಬರವಿಲ್ಲ ಬಿಡಿ, ಯಾವುದೇ ಕಾಲ ಬಂದರೂ ಋತುಮಾನಕ್ಕೆ ಅನುಗುಣವಾಗಿ ನೋಡುವಂತಹ ಅನೇಕ ತಾಣಗಳಿವೆ. ಅದರಲ್ಲಿ ಹೆಚ್ಚಿನ ಸ್ಥಳಗಳು ಮಾನ್ಸೂನ್ ಸಮಯದಲ್ಲಿ ತುಂಬಾ ಸುಂದರವಾಗಿ ಕಾಣುತ್ತವೆ ಅಥವಾ ಕಂಗೊಳಿಸುತ್ತವೆ ಎಂದರೆ ಅತಿಶಯೋಕ್ತಿಯಾಗಲಾರದು. ಆದ್ದರಿಂದಲೇ ಜನರು ಮಳೆಗಾಲದಲ್ಲಿ ಅಂತಹ ಸ್ಥಳಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ಆದರೆ ಮಳೆಗಾಲದಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡುವ ಮೊದಲು ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು.
ಮಳೆಗಾಲದಲ್ಲಿ ಹೆಚ್ಚಿನ ಜನರು ನೋಡಲು ಇಷ್ಟಪಡುವುದು ಫಾಲ್ಸ್ ಅಥವಾ ಜಲಪಾತಗಳನ್ನು. ಹಾಗಾಗಿ ಇಂತಹ ಸ್ಥಳಗಳಲ್ಲಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ತಮ್ಮ ಜೀವವನ್ನೇ ಕಳೆದುಕೊಳ್ಳಬಹುದು. ಆದ್ದರಿಂದ ಸದ್ಯ ಜಲಪಾತಗಳನ್ನು ನೋಡಲು ಯೋಜಿಸುತ್ತಿರುವ ಮಂದಿ ಈ ಲೇಖನದಲ್ಲಿ ತಿಳಿಸಿರುವ ಜಲಪಾತಗಳನ್ನು ನೋಡುವ ಮುನ್ನ ಜಾಗರೂಕರಾಗಿರಿ.

ಕುಂಚಿಕಲ್ ಜಲಪಾತ
ಕುಂಚಿಕಲ್ ಜಲಪಾತವು ಕರ್ನಾಟಕದಲ್ಲಿರುವ ವಿಶಿಷ್ಟವಾದ ಒಂದು ನೈಸರ್ಗಿಕ ಅದ್ಭುತ. ಇದು ಭಾರತದ ಅತಿ ಎತ್ತರದ ಜಲಪಾತವಾಗಿದ್ದರೂ, ಇದರ ಸೌಂದರ್ಯದ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಗುಪ್ತರತ್ನವಿದು. 1493 ಅಡಿ ಎತ್ತರದಿಂದ ಬೀಳುವ ಈ ಜಲಪಾತವು ಪ್ರಕೃತಿ ಪ್ರಿಯರು ಒಮ್ಮೆ ಭೇಟಿ ನೀಡಲೇಬೇಕಾದ ತಾಣವಾಗಿದೆ. ಕುಂಚಿಕಲ್ ಜಲಪಾತವು ಅತ್ಯಂತ ಸುಂದರವಾಗಿದ್ದರೂ ಈ ಸ್ಥಳದ ಬಳಿ ಹೋಗುವಾಗ ಜಾಗರೂಕರರಾಗಿರಬೇಕು. ಏಕೆಂದರೆ ಮಳೆಗಾಲದಲ್ಲಿ ಜಲಪಾತದ ನೀರು ವೇಗವಾಗಿ ಬೀಳುವಾಗ ಇಲ್ಲಿ ಇರುವ ಕಲ್ಲುಗಳು ನೀರಿನಿಂದ ಬಹಳ ನುಣುಪಾಗುತ್ತವೆ.
ಕಲ್ಲುಗಳ ಮೇಲೆ ಕಾಲಿಟ್ಟಾಗ ಜಾರಿ ಬೀಳುವ ಸಂಭವ ಹೆಚ್ಚು. ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ವರಾಹಿ ನದಿಯಿಂದ ಕುಂಚಿಕಲ್ ಜಲಪಾತ ಸೃಷ್ಟಿಯಾಗುತ್ತದೆ. ಜಲಪಾತವು ಕೆಳಗೆ ಬೀಳುವ ಮೊದಲು ದಟ್ಟವಾದ ಕಾಡುಗಳು ಮತ್ತು ಒರಟಾದ ಭೂಪ್ರದೇಶದ ಮೂಲಕ ಹರಿಯುತ್ತದೆ. ಋತುಮಾನಕ್ಕೆ ಅನುಗುಣವಾಗಿ ಜಲಪಾತದ ಹರಿವು ಬದಲಾಗುತ್ತದೆ. ಮಳೆಗಾಲದಲ್ಲಿ ಜಲಪಾತವು ಸಂಪೂರ್ಣವಾಗಿ ಅದ್ಭುತವಾಗಿರುವುದರಿಂದ ಈ ಸಮಯವೇ ಇದನ್ನು ನೋಡಲು ಸೂಕ್ತವೆಂದು ಪರಿಗಣಿಸಲಾಗಿದೆ.

ಬರೇಹಿಪಾನಿ ಜಲಪಾತ
ಒಡಿಶಾದ ಮಯೂರ್‌ಭಂಜ್ ಜಿಲ್ಲೆಯಲ್ಲಿರುವ ಬರೇಹಿಪಾನಿ ಜಲಪಾತವು ಭಾರತದ ಎರಡನೇ ಅತಿ ಎತ್ತರದ ಜಲಪಾತವಾಗಿದೆ. ಸುಮಾರು 400 ಮೀಟರ್ ಎತ್ತರದ ಈ ಜಲಪಾತದ ಸೊಬಗನ್ನು ಮಳೆಗಾಲದಲ್ಲಿ ನೋಡಲೇಬೇಕು. ಈ ಜಲಪಾತವು ಸಿಮ್ಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿದೆ. ಮೇಘಸುನಿ ಪರ್ವತದ ಮೇಲೆ ಹರಿಯುವ ಬುದ್ಬಲಾಂಗ್ ನದಿಯ ಹರಿವಿನ ಹಾದಿಯಲ್ಲಿ ಈ ಜಲಪಾತವಿದೆ.
ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ಇದು ಮಳೆಗಾಲದಲ್ಲಿ ಎಷ್ಟು ಸುಂದರವಾಗಿ ಕಾಣುತ್ತದೆ ಎಂದರೆ ಅದನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ವರ್ಷವಿಡೀ ಇಲ್ಲಿ ಪ್ರವಾಸಿಗರ ದಂಡೇ ಇದ್ದರೂ, ಮಳೆಗಾಲದಲ್ಲಿ ಮಾತ್ರ ಇದು ಅದ್ಭುತ. ಜಲಪಾತದ ನೀರು ಬೃಹತ್ ಬಂಡೆಯಿಂದ ಎರಡು ಹಂತಗಳಲ್ಲಿ ಬೀಳುತ್ತದೆ. ಅನೇಕ ಜನರು ಈ ಜಲಪಾತದ ಬಳಿ ಹೋಗಿ ರೀಲ್ಸ್ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ. ಮಳೆಗಾಲದಲ್ಲಿ ಅತಿವೃಷ್ಟಿಯಿಂದ ಜಲಪಾತದ ಹರಿವು ಹೆಚ್ಚುತ್ತದೆ. ಇಂತಹ ಸಮಯದಲ್ಲಿ ಜಲಪಾತದ ಬಳಿ ಹೋದರೆ ದೊಡ್ಡ ಅವಘಡ ಸಂಭವಿಸಬಹುದು.

ನೋಹ್ಕಲಿಕೈ ಜಲಪಾತ
ನೊಹ್ಕಲಿಕೈ ವಿಶ್ವದ ನಾಲ್ಕನೇ ಅತಿ ಎತ್ತರದ ಜಲಪಾತವಾಗಿದೆ. ಈ ಜಲಪಾತವು 340 ಮೀಟರ್ ಎತ್ತರದಿಂದ ಬೀಳುತ್ತದೆ. ಇದು ಮೇಘಾಲಯದ ಚಿರಾಪುಂಜಿ ಬಳಿಯ ಪೂರ್ವ ಖಾಸಿ ಬೆಟ್ಟಗಳಲ್ಲಿದೆ. ಈ ಜಲಪಾತವನ್ನು ನೋಡಲು ಪ್ರವಾಸಿಗರು ದೇಶದ ಮೂಲೆ ಮೂಲೆಗಳಿಂದ ಬರುತ್ತಾರೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವ ಈ ಜಲಪಾತ ನೋಡಲು ಬಹಳ ಆಕರ್ಷಕವಾಗಿದೆ.
ಈ ಸುಂದರವಾದ ಜಲಪಾತವನ್ನು ಮೇಘಾಲಯದ ಹೆಮ್ಮೆ ಎಂದೂ ಕರೆಯುತ್ತಾರೆ. ಬೃಹತ್ ಬಂಡೆಯಿಂದ ನೆಲಕ್ಕೆ ಬೀಳುವ ಈ ಜಲಪಾತವು ತುಂಬಾ ಅದ್ಭುತವಾಗಿದೆ. ಅದರ ಸೌಂದರ್ಯವು ಪ್ರವಾಸಿಗರ ಮನಸ್ಸನ್ನು ಸೂರೆಗೊಳ್ಳುತ್ತದೆ. ಈ ಜಲಪಾತವೂ ಅಪಾಯಕಾರಿ ಏಕೆಂದರೆ ಇಲ್ಲಿ ಹೆಚ್ಚು ಮಳೆಯಾಗುತ್ತದೆ. ಮಳೆಗಾಲದಲ್ಲಿ ಇಲ್ಲಿ ನೀರಿನ ಹರಿವು ಹೆಚ್ಚಾಗುತ್ತದೆ. ಆದ್ದರಿಂದ, ಇಲ್ಲಿಗೆ ಭೇಟಿ ನೀಡುವಾಗ, ಜಲಪಾತದಿಂದ ಅಂತರವನ್ನು ಕಾಯ್ದುಕೊಳ್ಳಿ.


Click it and Unblock the Notifications
















