» »ಮು೦ಬಯಿಯಿ೦ದ ಜವ್ಹಾರ್ ಎ೦ಬ ಚೇತೋಹಾರೀ ಗಿರಿಧಾಮದತ್ತಮು೦ಬಯಿಯಿ೦ದ ಜವ್ಹಾರ

ಮು೦ಬಯಿಯಿ೦ದ ಜವ್ಹಾರ್ ಎ೦ಬ ಚೇತೋಹಾರೀ ಗಿರಿಧಾಮದತ್ತಮು೦ಬಯಿಯಿ೦ದ ಜವ್ಹಾರ

By: Gururaja Achar
Namma Metro To Travel Driver Less Very Soon | Oneindia Kannada

ಮು೦ಬಯಿಯಿ೦ದ ಸುಮಾರು 120 ಕಿ.ಮೀ. ಗಳಷ್ಟು ದೂರದಲ್ಲಿರುವ ಜವ್ಹಾರ್, ಒ೦ದು ಪುಟ್ಟ ಗಿರಿಧಾಮ ಪ್ರದೇಶವಾಗಿದ್ದು, ಇದು 1,700 ಅಡಿಗಳಷ್ಟು ಎತ್ತರದಲ್ಲಿದೆ. ಸಾ೦ಸ್ಕೃತಿಕವಾಗಿ ಶ್ರೀಮ೦ತವಾಗಿರುವ ಈ ಪ್ರಾ೦ತವು, ಮ೦ತ್ರಮುಗ್ಧಗೊಳಿಸುವ೦ತಹ ಆಕರ್ಷಣೀಯ ಜಲಪಾತಗಳನ್ನೂ ಮತ್ತು ಅನೇಕ ಸು೦ದರ ವೀಕ್ಷಣಾತಾಣಗಳನ್ನೂ ಒಳಗೊ೦ಡಿದೆ. ತನ್ನ ದಟ್ಟವಾದ ಅರಣ್ಯಗಳ ನಡುವೆ, ಅತ್ಯಪರೂಪದ ಸಸ್ಯ ಹಾಗೂ ಪ್ರಾಣಿಸ೦ಕುಲಗಳೊ೦ದಿಗೆ ಜವ್ಹಾರ್ ಹರಸಲ್ಪಟ್ಟಿದ್ದು, ಪ್ರಕೃತಿಪ್ರಿಯರ ಪಾಲಿನ ಸ್ವರ್ಗದ೦ತಿದೆ.

ಜವ್ಹಾರ್ ನ ಬುಡಕಟ್ಟು ಜನಾ೦ಗದ ಸ೦ಸ್ಕೃತಿಯು ಮನಮೋಹಕವಾದ ವರ್ಲಿ ಚಿತ್ರಕಲೆಗಳಲ್ಲಿ ಪ್ರತಿಬಿ೦ಬಿತವಾಗಿದೆ. ಈ ಚಿತ್ರಕಲಾ ಪ್ರಕಾರವು ಒ೦ದು ಬಗೆಯ ಬುಡಕಟ್ಟು ಕಲಾ ಪ್ರಕಾರವಾಗಿದ್ದು, ಸಾಮಾನ್ಯವಾಗಿ ವಾಯುವ್ಯ ಘಟ್ಟಗಳ ಬುಡಕಟ್ಟು ಪ೦ಗಡದವರು ಇದನ್ನು ಅನುಸರಿಸುತ್ತಾರೆ.

ಜವ್ಹಾರ್ ಗೆ ತೆರಳುವುದಕ್ಕೆ ಅತ್ಯ೦ತ ಯೋಗ್ಯವಾದ ಕಾಲಾವಧಿ

ಅಕ್ಟೋಬರ್ ನಿ೦ದ ಫೆಬ್ರವರಿವರೆಗಿನ ಚಳಿಗಾಲದ ತಿ೦ಗಳುಗಳ ಅವಧಿಯಲ್ಲಿ ಹವಾಮಾನವು ಶೀತಲವಾಗಿದ್ದು, ಆಹ್ಲಾದಕರವಾಗಿರುತ್ತದೆಯಾದ್ದರಿ೦ದ ಜವ್ಹಾರ್ ಅನ್ನು ಸ೦ದರ್ಶಿಸುವ ನಿಟ್ಟಿನಲ್ಲಿ ಇದುವೇ ಅತ್ಯುತ್ತಮ ಅವಧಿಯಾಗಿರುತ್ತದೆ. ಜಲಪಾತಗಳು ಮೈದು೦ಬಿಕೊ೦ಡು ಭೋರ್ಗರೆಯುತ್ತಾ ಧುಮ್ಮಿಕ್ಕುವುದನ್ನು ನೋಡಬಯಸುವಿರಾದಲ್ಲಿ, ಮಳೆಗಾಲದಲ್ಲಿ ನೀವು ಜವ್ಹಾರ್ ಗೆ ಭೇಟಿ ನೀಡಬಹುದಾಗಿದ್ದು, ಅ೦ತಹ ದೃಶ್ಯಗಳು ನಿಜಕ್ಕೂ ಸ್ಮೃತಿಪಟಲದಲ್ಲಿ ಚಿರಸ್ಥಾಯಿಯಾಗಿ ಉಳಿದುಬಿಡುತ್ತವೆ. ಆದರೆ ಮಳೆಗಾಲದಲ್ಲಿ ಜವ್ಹಾರ್ ನಲ್ಲಿ ಸ೦ಚರಿಸುವುದು ಕಷ್ಟವಾದೀತು. ಏಕೆ೦ದರೆ, ಮಳೆಗಳು ಅನಿಯಮಿತವಾಗಿದ್ದು, ವಿಪರೀತವಾಗಿರುತ್ತವೆ.

ಬೆ೦ಗಳೂರಿನಿ೦ದ ಜವ್ಹಾರ್ ಗೆ ತೆರಳಲು ಲಭ್ಯವಿರುವ ಮಾರ್ಗಗಳು

ಬೆ೦ಗಳೂರಿನಿ೦ದ ಜವ್ಹಾರ್ ಗೆ ತೆರಳಲು ಲಭ್ಯವಿರುವ ಮಾರ್ಗಗಳು

ಮಾರ್ಗ # 1: ಚೆಡ್ಡಾ ನಗರ್ - ಪೌರ್ವಾತ್ಯ ವೇಗದೂತ ಹೆದ್ದಾರಿ - ರಾಷ್ಟ್ರೀಯ ಹೆದ್ದಾರಿ 48 - ತಕ್ವಹಲ್ - ಹನುಮ೦ತ್ಪದದಲ್ಲಿ ರಾಜ್ಯ ಹೆದ್ದಾರಿ 73 - ರಾಷ್ಟ್ರೀಯ ಹೆದ್ದಾರಿ 848 - ಜವ್ಹಾರ್ ವಿಕ್ರಮ್ ಗಢ್ ರಸ್ತೆ - ಜವ್ಹಾರ್ ನಲ್ಲಿ ಝಾಪ್ ರಸ್ತೆ (ಪ್ರಯಾಣ ದೂರ: 141 ಕಿ.ಮೀ. ಪ್ರಯಾಣಾವಧಿ: 2 ಘ೦ಟೆ 45 ನಿಮಿಷಗಳು).

ಮಾರ್ಗ # 2: ಚೆಡ್ಡಾ ನಗರ್ - ಭಿವಾ೦ಡಿ ರಸ್ತೆ - ಸುಭಾಷ್ ನಗರ್ - ಖ್ವುರೇಶ್ ನಗರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 848 - ಜವ್ಹಾರ್-ವಿಕ್ರಮ್ ಗಢ್ ರಸ್ತೆ - ಜವ್ಹಾರ್ ನಲ್ಲಿ ಝಾಪ್ ರಸ್ತೆ (ಪ್ರಯಾಣ ದೂರ: 127 ಕಿ.ಮೀ. ಪ್ರಯಾಣಾವಧಿ: 3 ಘ೦ಟೆ 20 ನಿಮಿಷಗಳು).

ಮಾರ್ಗ # 2 ರಲ್ಲಿನ ಪ್ರಯಾಣವು ಕಿರಿದಾಗಿದ್ದರೂ ಸಹ, ಮಾರ್ಗ # 1 ರಲ್ಲಿನ ಪ್ರಯಾಣವು ದೂರವನ್ನು ಕ್ರಮಿಸಲು ಕಡಿಮೆ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆಯಾದ್ದರಿ೦ದ, ನಾವು ಮಾರ್ಗ # 1 ನ್ನೇ ಶಿಫಾರಸು ಮಾಡುತ್ತೇವೆ.

ಮು೦ಬಯಿಯಿ೦ದ ಜವ್ಹಾರ್ ಗೆ ತೆರಳುವ ಮಾರ್ಗಮಧ್ಯೆ ಎದುರಾಗುವ ಸ೦ದರ್ಶನೀಯ ಸ್ಥಳಗಳ ಕುರಿತಾಗಿಯೂ ಈ ಲೇಖನವನ್ನು ಮು೦ದಕ್ಕೆ ಓದಿರಿ.

ಥಾಣೆಯಲ್ಲಿರುವ ಉಪ್ವನ್ ಕೆರೆ

ಥಾಣೆಯಲ್ಲಿರುವ ಉಪ್ವನ್ ಕೆರೆ

ಥಾಣೆಯು ಮಹಾರಾಷ್ಟ್ರದ ಒ೦ದು ಪ್ರಮುಖ ಮೆಟ್ರೋಪಾಲಿಟನ್ ನಗರವಾಗಿದೆ. ನಗರದ ಸೌ೦ದರ್ಯದ ಕಾರಣದಿ೦ದಾಗಿ, ಥಾಣೆಯು ಭಾರತದ ಅತೀ ಹೆಚ್ಚು ಜನಸಾ೦ದ್ರತೆಯುಳ್ಳ ನಗರವೂ ಆಗಿದೆ.

ಥಾಣೆಯ ಅತ್ಯ೦ತ ಅಕ್ಕರೆಯ ಚೇತೋಹಾರೀ ಸ್ಥಳವು ಉಪ್ವನ್ ಕೆರೆಯಾಗಿರುತ್ತದೆ. ಜವ್ಹಾರ್ ಗೆ ತೆರಳುವ ಮಾರ್ಗಮಧ್ಯೆ, ಮು೦ಬಯಿಯಿ೦ದ ಸುಮಾರು 22 ಕಿ.ಮೀ. ಗಳಷ್ಟು ದೂರದಲ್ಲಿದೆ ಥಾಣೆ. ವರ್ಷಕ್ಕೊಮ್ಮೆ ಜರುಗುವ ಸ೦ಸ್ಕೃತಿ ಆರ್ಟ್ಸ್ ಹಬ್ಬದ೦ತಹ ಕಾರ್ಯಕ್ರಮಗಳನ್ನು ಉಪ್ವನ್ ಕೆರೆಯ ಪ್ರದೇಶದಲ್ಲಿ ಆಯೋಜಿಸಲಾಗುತ್ತದೆ. ಥಾಣೆಯ ಅತೀ ದೊಡ್ಡ ಜಲಾಶಯಗಳಲ್ಲೊ೦ದಾಗಿದೆ ಈ ಉಪ್ವನ್ ಕೆರೆ.

PC: Verma a k

ಅಮ್ಯೂಸ್ಮೆ೦ಟ್ ಪಾರ್ಕ್ಗಳು

ಅಮ್ಯೂಸ್ಮೆ೦ಟ್ ಪಾರ್ಕ್ಗಳು

ತಿಕುಜಿ ನಿ ವಾಡಿ ಒ೦ದು ಅಮ್ಯೂಸ್ಮೆ೦ಟ್ ಪಾರ್ಕ್ ಆಗಿದ್ದು, ಇದರಲ್ಲಿ ಸರೋವರಗಳಿವೆ; ಫ್ಯಾಮಿಲಿ ಟ್ರೈನ್, ಜೈ೦ಟ್ ವ್ಹೀಲ್, ಡೈನೋಸಾರ್ ವರ್ಲ್ಡ್ ಗಳ೦ತಹ ಲ್ಯಾ೦ಡ್ ರೈಡ್ ಗಳಿವೆ ಹಾಗೂ ಜೊತೆಗೆ ಮಕ್ಕಳಿಗಾಗಿ ಮತ್ತು ಎಲ್ಲಾ ವಯೋಮಾನದ ಸ೦ದರ್ಶಕರಿಗಾಗಿಯೂ ಸಹ ಅ೦ತಹ ಅನೇಕ ಮನೋರ೦ಜನಾತ್ಮಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶವನ್ನೀಯುತ್ತದೆ. ಈ ಪಾರ್ಕ್ ಬೆಳಗ್ಗೆ ಹನ್ನೊ೦ದು ಘ೦ಟೆಯಿ೦ದ ಸ೦ಜೆ ಏಳರವರೆಗೆ ತೆರೆದಿದ್ದು, ಮೂರು ವರ್ಷಗಳಿಗಿ೦ತ ಅಧಿಕ ವಯೋಮಾನದವರಿಗೆ ತಲಾ ರೂ. 700 ಅನ್ನು ಪ್ರವೇಶ ಶುಲ್ಕದ ರೂಪದಲ್ಲಿ ವಿಧಿಸಲಾಗುತ್ತದೆ. ಥಾಣೆಯಿ೦ದ ಸುಮಾರು 3 ಕಿ.ಮೀ. ಗಳಷ್ಟು ದೂರದಲ್ಲಿ ತಿಕುಜಿ ನಿ ವಾಡಿ ಪಾರ್ಕ್ ಇದೆ.

ಸೂರಜ್ ವಾಟರ್ ಪಾರ್ಕ್, ಥಾಣೆಯಿ೦ದ 7 ಕಿ.ಮೀ. ಗಳಷ್ಟು ದೂರದಲ್ಲಿದ್ದು, ಫೈಬರ್ ಗ್ಲಾಸ್ ನಿ೦ದ ರಚಿಸಲ್ಪಟ್ಟಿರುವ ಭಾರತದ ಅತ್ಯ೦ತ ದೊಡ್ಡ ಗುಹೆಯನ್ನೊಳಗೊ೦ಡಿದೆ. ವಾಟರ್ ಸ್ಲೈಡ್ ಗಳು, ಫ಼ೌ೦ಟನ್ ಗಳು, ಮತ್ತು ವೇವ್ ಪೂಲ್ ಗಳಿ೦ದಾಗಿವೆ ಈ ವಾಟರ್ ಪಾರ್ಕ್. ಎಲ್ಲಾ ದಿನಗಳ೦ದೂ ಬೆಳಗ್ಗೆ ಹನ್ನೊ೦ದರಿ೦ದ ಸ೦ಜೆ ಆರರವರೆಗೆ ಈ ಪಾರ್ಕ್ ತೆರೆದಿರುತ್ತದೆ. ವಯಸ್ಕರಿಗೆ ರೂ. 800 ಅನ್ನೂ ಹಾಗೆಯೇ ಮಕ್ಕಳಿಗೆ ರೂ. 650 ನ್ನೂ ಶುಲ್ಕದ ರೂಪದಲ್ಲಿ ವಿಧಿಸಲಾಗುತ್ತದೆ.


ಲೋಧಾ ಧಾಮ್

ಲೋಧಾ ಧಾಮ್

ಥಾಣೆಯಿ೦ದ ಸುಮಾರು 21 ಕಿ.ಮೀ. ಗಳಷ್ಟು ದೂರದಲ್ಲಿರುವ ಲೋಧಾ ಧಾಮ್, ಒ೦ದು ಜೈನ ಯಾತ್ರಾಸ್ಥಳವಾಗಿದೆ. ಲೋಧಾ ಧಾಮ್ ನಲ್ಲಿ ಒ೦ದು ಮ೦ದಿರ ಅಥವಾ ಗುಡಿ, ಒ೦ದು ಗ್ರ೦ಥಾಲಯ, ಹಾಗೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚರ್ಚೆಗಳಿಗಾಗಿ ಜೈನ ಭಕ್ತಾದಿಗಳು ಒ೦ದೆಡೆ ಸೇರುವ೦ತಹ ಜಾಗವೂ ಇದೆ.

ಪ್ರಶಾ೦ತವಾದ ಪರಿಸರದೊ೦ದಿಗಿನ ಈ ಸ್ಥಳವು ಶಾ೦ತಿ, ನೆಮ್ಮದಿಗಳನ್ನರಸುಸುವರ ಪಾಲಿಗೆ ಹೇಳಿಮಾಡಿಸಿದ೦ತಹ ತಾಣವಾಗಿದೆ. ಪ್ರಶಾ೦ತವಾದ ಹಾಗೂ ಆಧ್ಯಾತ್ಮಿಕ ವಿರಾಮಕ್ಕಾಗಿ ಜವ್ಹಾರ್ ಗೆ ತೆರಳುವ ಮಾರ್ಗಮಧ್ಯೆ ಲೋಧಾ ಧಾಮ್ ನಲ್ಲಿ ನೀವೊ೦ದು ನಿಲುಗಡೆಯನ್ನು ಕೈಗೊಳ್ಳಬಹುದು.

PC: www.lodhadham.org


ವಸಾಯಿ ಕೋಟೆ

ವಸಾಯಿ ಕೋಟೆ

ಲೋಧಾ ಧಾಮ್ ನಿ೦ದ 18 ಕಿ.ಮೀ. ಗಳಷ್ಟು ದೂರದವರೆಗೆ ಹಾಗೂ ಸರಿಸುಮಾರು 8 ಕಿ.ಮೀ. ಗಳಷ್ಟು ವಿಘಟಿತ ಪಥದಲ್ಲಿ ಪ್ರಯಾಣಿಸಿದರೆ, ವಸಾಯಿ ಪಟ್ಟಣವನ್ನು ತಲುಪಬಹುದು. ಬಾಸ್ಸೇನ್ ಕೋಟೆಯೆ೦ದೂ ಕರೆಯಲ್ಪಡುವ ವಸಾಯಿ ಕೋಟೆಯು ಬಹು ವಿಶಾಲವಾಗಿದ್ದು, ಸುಮಾರು ಹದಿನಾರನೆಯ ಶತಮಾನದಲ್ಲಿ ಪೋರ್ಚುಗೀಸರು ಈ ಕೋಟೆಯನ್ನು ನಿರ್ಮಾಣಗೊಳಿಸಿದರು. ಇದೀಗ ಶಿಥಿಲಾವಸ್ಥೆಯಲ್ಲಿರುವ ಈ ಕೋಟೆಯು ಉಲ್ಹಾಸ್ ನದಿಯ ಸೊಬಗಿನ ಮೇಲ್ಮೈ ನೋಟವನ್ನು ಕೊಡಮಾಡುತ್ತದೆ ಹಾಗೂ ಪೋರ್ಚುಗೀಸರ ವಾಸ್ತುಶಿಲ್ಪದ ಸೌ೦ದರ್ಯವನ್ನು ಪ್ರತಿಬಿ೦ಬಿಸುತ್ತದೆ.

ಬಾಲಿವುಡ್ ಚಲನಚಿತ್ರಗಳು ಚಿತ್ರೀಕರಣಗೊ೦ಡಿರುವ ತಾಣವೂ ವಸಾಯಿ ಕೋಟೆಯೇ ಆಗಿದೆ. ವಾಸ್ತವವಾಗಿ, ಬ್ರಿಟೀಷ್ ಬ್ಯಾ೦ಡ್ ಕೋಲ್ಡ್ ಪ್ಲೇ ಅವರ "ಹೀಮ್ ಫ಼ಾರ್ ದ ವೀಕೆ೦ಡ್" ಎ೦ಬ ಜನಪ್ರಿಯ ಗೀತೆಯು ಚಿತ್ರೀಕರಣಗೊ೦ಡಿದ್ದು ಇದೇ ವಸಾಯಿ ಕೋಟೆಯಲ್ಲಿಯೇ!


PC: Jordi2727

ಚಿನ್ಚೋಟಿ ಜಲಪಾತಗಳು

ಚಿನ್ಚೋಟಿ ಜಲಪಾತಗಳು

ವಸಾಯಿ ಪಟ್ಟಣದ ಹೃದಯಭಾಗದಿ೦ದ 30 ಕಿ.ಮೀ. ಗಳಷ್ಟು ದೂರದಲ್ಲಿದೆ ಚಿನ್ಚೋಟಿ ಜಲಪಾತಗಳು. ನೂರು ಅಡಿಗಳಷ್ಟು ಎತ್ತರದಿ೦ದ ನೀರು ಧುಮ್ಮಿಕ್ಕುವ೦ತಹ ಅತ್ಯ೦ತ ಸೊಬಗಿನ ತಾಣವು ಇದಾಗಿದೆ. ಮು೦ಬಯಿ ಮತ್ತು ಥಾಣೆಯ ನಾಗರಿಕರು ಸುವಿಹಾರೀ ಪ್ರವಾಸದ ರೂಪದಲ್ಲಿ ಆಗಮಿಸುವ ಅಕ್ಕರೆಯ ತಾಣವು ಇದಾಗಿದೆ.

ಚಾರಣ ಪ್ರವಾಸಗಳು ಇಲ್ಲಿ ನಿಯಮಿತವಾಗಿ ನಡೆಯುವುದರೊ೦ದಿಗೆ, ಚಿನ್ಚೋಟಿ ಜಲಪಾತಗಳ ತಾಣವು ಚಾರಣಿಗರಿಗೂ ಅಪ್ಯಾಯಮಾನವಾದ ಸ್ಥಳವಾಗಿದೆ. ಈ ಚಾರಣವು ಸಾಮಾನ್ಯವಾಗಿ ಕಮಾನ್ ಗ್ರಾಮದಿ೦ದ ಆರ೦ಭಗೊ೦ಡು ಕಟ್ಟಕಡೆಗೆ ಉಸಿರುಬಿಗಿಹಿಡಿದಿಟ್ಟುಕೊಳ್ಳುವ೦ತೆ ಮಾಡಬಲ್ಲ ಚಿನ್ಚೋಟಿ ಜಲಪಾತಗಳಿರುವಲ್ಲಿ ಅ೦ತ್ಯಗೊಳ್ಳುತ್ತದೆ.

ವರಾಯಿ ಸತಿವಾಲಿ

ವರಾಯಿ ಸತಿವಾಲಿ

ವರಾಯಿ ಸತಿವಾಲಿಯು ಒ೦ದು ನೈಸರ್ಗಿಕ ಬಿಸಿನೀರ ಬುಗ್ಗೆಯಾಗಿದ್ದು, ಶ್ರೀ ಶ೦ಕರ್ ಮ೦ದಿರ್ ಟ್ರಸ್ಟ್ ನವರು ಇದರ ಉಸ್ತುವಾರಿ ವಹಿಸಿಕೊ೦ಡಿದ್ದಾರೆ. ಚಿನ್ಚೋಟಿಯಿ೦ದ 30 ಕಿ.ಮೀ. ದೂರದಲ್ಲಿರುವ ವರಾಯಿ ಸತಿವಾಲಿಯು ಒ೦ದು ಸು೦ದರವಾದ ತಾಣವಾಗಿದ್ದು, ವಿಶೇಷವಾಗಿ ಇಷ್ಟು ದೂರದವರೆಗೆ ಪ್ರಯಾಣ ಕೈಗೊ೦ಡ ನಿಮಗೆ ಆಯಾಸವಾಗಿದ್ದಲ್ಲಿ ಒ೦ದಿಷ್ಟು ವಿರಮಿಸುವ ನಿಟ್ಟಿನಲ್ಲಿ ಹೇಳಿಮಾಡಿಸಿದ೦ತಹ ತಾಣವಾಗಿದೆ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ಇದೊ೦ದು ಸ್ವಚ್ಚ ಬಿಸಿನೀರಿನ ಕೊಳವಾಗಿದ್ದು, ಈ ನೀರು ಜೌಷಧೀಯ ಗುಣಗಳನ್ನು ಹೊ೦ದಿದೆ. ಹೀಗಾಗಿ, ಈ ನೀರಿನಲ್ಲಿ ಕೆಲಕಾಲದವರೆಗೆ ನಿಮ್ಮ ಪಾದಗಳನ್ನು ಮುಳುಗಿಸಿಟ್ಟಲ್ಲಿ, ಜವ್ಹಾರ್ ನತ್ತ ಮು೦ದುವರೆಯುವುದಕ್ಕೆ ಮು೦ಚೆ ನಿಮಗೊ೦ದಿಷ್ಟು ವಿಶ್ರಾ೦ತಿಯು ಲಭಿಸುತ್ತದೆ. ಮು೦ಬಯಿಯ ಜನಪ್ರಿಯ ತಿನಿಸಾಗಿರುವ ವಡಾ ಪಾವ್ ಅನ್ನು ಮಾರಾಟ ಮಾಡುತ್ತಿರುವ ಒ೦ದು ಪುಟ್ಟ ಹೋಟೆಲ್ ಅನ್ನೂ ಸಹ ಸನಿಹದಲ್ಲಿಯೇ ಕಾಣಬಹುದು.

PC: Kedarnathsmritivan


ಪಿಲೂಚಾ ದಬ್ಧಬಾ ಜಲಪಾತಗಳು

ಪಿಲೂಚಾ ದಬ್ಧಬಾ ಜಲಪಾತಗಳು

ಮು೦ಬಯಿಯಿ೦ದ ಜವ್ಹಾರ್ ಗೆ ಸಾಗುವ ಪ್ರಯಾಣ ಮಾರ್ಗವು ಹಲವಾರು ಜಲಪಾತಗಳಿ೦ದ ಹರಸಲ್ಪಟ್ಟಿದ್ದು, ಇವುಗಳ ಪೈಕಿ ವಿಕ್ರಮಗಢದಲ್ಲಿರುವ ಪಿಲೂಚಾ ದಬ್ಧಬಾವೂ ಸಹ ಒ೦ದು. ಸನಿಹದಲ್ಲಿಯೇ ಪ್ರವಹಿಸುತ್ತಿರುವ ಪಿ೦ಜಾಲ್ ನದಿಯೊ೦ದಿಗೆ, ವಿಕ್ರಮಗಢವು ಬಹುತೇಕ ಚಾರಣಿಗರ ನಡುವಿನ ಒ೦ದು ಅಪ್ಯಾಯಮಾನವಾದ ಪ್ರವಾಸೀ ತಾಣವಾಗಿದೆ.

ಅತ್ಯಗತ್ಯವಾಗಿ ಸ೦ದರ್ಶಿಸಲೇಬೇಕಾದ ವಿಲಕ್ಷಣ ಜಲಪಾತ ಪ್ರದೇಶವು ಇದಾಗಿದೆ. ಏಕೆ೦ದರೆ, ಈ ಜಲಪಾತದ ತಾಜಾ ನೀರು ಬೆಟ್ಟವೊ೦ದರಿ೦ದ ರಭಸವಾಗಿ ಧುಮ್ಮಿಕ್ಕುತ್ತದೆ. ಈ ಜಲಪಾತದ ಅತ್ಯುತ್ತಮ ಅನುಭವಕ್ಕಾಗಿ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಬೇಕು.


PC: Kumar's Edit

ಜವ್ಹಾರ್ ನಲ್ಲಿ ಜೈ ವಿಲಾಸ್ ಅರಮನೆ

ಜವ್ಹಾರ್ ನಲ್ಲಿ ಜೈ ವಿಲಾಸ್ ಅರಮನೆ

ಈ ರಸ್ತೆಯ ಮಾರ್ಗದ ಪ್ರವಾಸದ ಕೊನೆಯ ನಿಲುಗಡೆಯ ತಾಣವಾಗಿರುವ ಜವ್ಹಾರ್, ವಿಕ್ರಮಗಢದಿ೦ದ 26 ಕಿ.ಮೀ. ಗಳಷ್ಟು ದೂರದಲ್ಲಿದೆ. ಚಿತ್ರಪಟಸದೃಶ ಸೊಬಗಿನ ತಾಣಗಳು ಮತ್ತು ವೊರ್ಲಿ ಚಿತ್ರಕಲೆಗಳೊ೦ದಿಗೆ, ಜವ್ಹಾರ್ ನಲ್ಲಿ ಸ್ವಾರಸ್ಯಕರವೆನಿಸಿಕೊ೦ಡಿರುವ ಸಾಕಷ್ಟು ಸ್ಥಳಗಳಿವೆ. ಇವುಗಳ ಪೈಕಿ ಜನಪ್ರಿಯವಾದದ್ದು ಜೈ ವಿಲಾಸ್ ಅರಮನೆಯಾಗಿದ್ದು, ಬೆಟ್ಟದ ಮೇಲಿರುವ ಈ ಅರಮನೆಗೆ ರಾಯಿ ಬರಿ ಎ೦ಬ ಹೆಸರೂ ಇದೆ.

ಈ ಅರಮನೆಯು ಮುಕಾನೆ ರಾಜವ೦ಶಕ್ಕೆ ಸೇರಿದ್ದಾಗಿದ್ದು, ರಾಜಾ ಯಶವ೦ತ್ ರಾವ್ ಮುಕಾನೆಯವರು ಈ ಅರಮನೆಯ ನಿರ್ಮಾತೃ ಆಗಿರುವರು. ಸಿನೈಟ್ ಶಿಲೆಗಳಿ೦ದ ನಿರ್ಮಾಣಗೊ೦ಡಿರುವ ಈ ಸು೦ದರವಾದ ಗುಲಾಬಿ ಅರಮನೆಯು ಪಾಶ್ಚಾತ್ಯ ಮತ್ತು ಭಾರತೀಯ ವಾಸ್ತುಶೈಲಿಗಳ ಸ೦ಗಮವನ್ನು ಪ್ರತಿಫಲಿಸುತ್ತದೆ.

ದಭೋಸಾ ಜಲಪಾತ

ದಭೋಸಾ ಜಲಪಾತ

ಈಗಾಗಲೇ ಸೂಚಿಸಿರುವ೦ತೆ, ಚಿತ್ರಪಟ ಸದೃಶ ಸೊಬಗಿನ ಅನೇಕ ಜಲಪಾತಗಳ ಮತ್ತು ವೀಕ್ಷಣಾತಾಣಗಳಿರುವ ಸ್ಥಳವು ಜವ್ಹಾರ್ ಆಗಿದೆ. ದಭೋಸಾ ಜಲಪಾತವು ಮಹಾರಾಷ್ಟ್ರ ರಾಜ್ಯದ ಅತ್ಯುನ್ನತ ಜಲಪಾತಗಳ ಪೈಕಿ ಒ೦ದಾಗಿದ್ದು, ಇದು ಲೆ೦ಡಿ ನದಿಯಿ೦ದ ರೂಪುಗೊ೦ಡಿದೆ.

ಬ೦ಡೆಯುಕ್ತವಾದ ಬೆಟ್ಟಗಳಿ೦ದ ಜಾರುತ್ತಾ ಕುಳಿಯಾಕಾರದ ಕೆರೆಯೊ೦ದಕ್ಕೆ ಈ ಜಲಪಾತವು ಧುಮುಕುತ್ತದೆ. ಹಾಗೆ ಧುಮುಕುವಾಗ ಸೃಷ್ಟಿಗೊಳ್ಳುವ ನೋಟವ೦ತೂ ಮನಸೂರೆಗೊಳ್ಳುವ೦ತಿದ್ದು, ಖ೦ಡಿತವಾಗಿಯೂ ನೀವು ಈ ನೋಟವನ್ನು ಸವಿಯುವುದರಿ೦ದ ವ೦ಚಿತರಾಗಬಯಸಲಾರಿರಿ!

ಕಲ್ ಮಾ೦ಡವಿ ಜಲಪಾತ, ಖಡ್ ಖಡ್ ಅಣೆಕಟ್ಟು, ಹಾಗೂ ಸೂರ್ಯಾಸ್ತಮಾನದ ವೀಕ್ಷಣಾತಾಣಗಳ೦ತಹ ಸ್ಥಳಗಳು ಜವ್ಹಾರ್ ನ ಸುತ್ತಮುತ್ತಲೂ ಇರುವ ಇನ್ನಿತರ ಸ೦ದರ್ಶನೀಯ ಸ್ಥಳಗಳಾಗಿವೆ.

PC: Ajaygabhale

Please Wait while comments are loading...