ಐಆರ್‌ಸಿಟಿಸಿ (IRCTC) ಪ್ರವಾಸಿಗರಿಗೆ ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿರುವುದು ಗೊತ್ತೇ ಇದೆ. ಈ ಪ್ರವಾಸ ಪ್ಯಾಕೇಜ್ ಅನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಪ್ರವಾಸದ ಪ್ಯಾಕೇಜ್‌ನ ಆರಂಭಿಕ ಬೆಲೆ 22,500 ರೂ. ಐಆರ್‌ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಮೂಲಕ ಪ್ರವಾಸಿಗರು ಅಯೋಧ್ಯೆ ಮತ್ತು ಗಯಾಗೂ ಪ್ರಯಾಣಿಸಬಹುದು.
ಪ್ರವಾಸ ಪ್ಯಾಕೇಜ್‌ನ ವಿಶೇಷತೆ
ಐಆರ್‌ಸಿಟಿಸಿ ದೇಶ ಮತ್ತು ವಿದೇಶದ ಪ್ರವಾಸಿಗರಿಗೆ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಿರುತ್ತದೆ ಎಂಬುದು ಗಮನಾರ್ಹ. ಈ ಪ್ರವಾಸ ಪ್ಯಾಕೇಜ್‌ಗಳ ಮೂಲಕ, ಪ್ರವಾಸಿಗರು ಅಗ್ಗದ ಬೆಲೆಯಲ್ಲಿ ಕಂಫರ್ಟಬಲ್ ಆಗಿ ಪ್ರಯಾಣಿಸಬಹುದು. ಪ್ರವಾಸಿಗರಿಗೆ ಉಚಿತ ವಸತಿ ಮತ್ತು ಊಟವನ್ನು ಒದಗಿಸುವುದು ಈ ಪ್ರವಾಸ ಪ್ಯಾಕೇಜ್‌ಗಳ ವಿಶೇಷತೆಯಾಗಿದೆ. ಐಆರ್‌ಸಿಟಿಸಿ ಪ್ರವಾಸ ಪ್ಯಾಕೇಜ್‌ಗಳಲ್ಲಿ ಪ್ರವಾಸಿಗರಿಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟ ಇರುತ್ತದೆ.
ಕನ್ನಡಿಗರಿಗೆ ಪ್ಯಾಕೇಜ್‌ನಲ್ಲಿ ಸಬ್ಸಿಡಿ
ಐಆರ್‌ಸಿಟಿಸಿಯ ಭಾರತ ಗೌರವ ಕಾಶಿ ದರ್ಶನ ಪ್ರವಾಸ ಪ್ಯಾಕೇಜ್ ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುತ್ತದೆ. ಈ ಟೂರ್ ಪ್ಯಾಕೇಜ್ ಬೆಂಗಳೂರಿನಿಂದ ಆರಂಭವಾಗಲಿದೆ. ಪ್ಯಾಕೇಜ್ ಅಯೋಧ್ಯೆ, ಗಯಾ ಮತ್ತು ಪ್ರಯಾಗ್‌ರಾಜ್ ಸ್ಥಳಗಳನ್ನು ಒಳಗೊಂಡಿದೆ. ಐಆರ್‌ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ 8 ರಾತ್ರಿಗಳು ಮತ್ತು 9 ಹಗಲುಗಳು ಇರುತ್ತವೆ. ಕರ್ನಾಟಕದಲ್ಲಿ ವಾಸಿಸುವ ಜನರಿಗೆ ಈ ಪ್ರವಾಸ ಪ್ಯಾಕೇಜ್‌ನಲ್ಲಿ ಸಬ್ಸಿಡಿ ನೀಡಲಾಗುತ್ತದೆ. ಕರ್ನಾಟಕದಲ್ಲಿ ನೆಲೆಸಿರುವ ಪ್ರಯಾಣಿಕರು 7500 ರೂಗೆ ಪ್ರವಾಸ ಪ್ಯಾಕೇಜ್‌ನಲ್ಲಿ ಪ್ರಯಾಣಿಸುತ್ತಾರೆ. ಪ್ರವಾಸಿಗರು ಈ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು. ಇದಲ್ಲದೇ ಪ್ರವಾಸಿಗರು 8595931292 ಕ್ಕೆ ಕರೆ ಮಾಡುವ ಮೂಲಕ ಬುಕ್ ಮಾಡಬಹುದು.

ಏನೆಲ್ಲಾ ನೋಡಬಹುದು?
ತುಳಸಿ ಮಾನಸ ದೇವಾಲಯ
ತುಳಸಿ ಮಾನಸ ದೇವಾಲಯವು ಉತ್ತರ ಪ್ರದೇಶದ ಪವಿತ್ರ ನಗರ ವಾರಣಾಸಿಯ ಐತಿಹಾಸಿಕ ದೇವಾಲಯವಾಗಿದೆ. 1964 ರಲ್ಲಿ ನಿರ್ಮಿಸಲಾದ ಈ ದೇವಾಲಯವು ರಾಮನಿಗೆ ಸಮರ್ಪಿತವಾಗಿದೆ. 16 ನೇ ಶತಮಾನದಲ್ಲಿ ಕವಿ, ಸಂತ ಗೋಸ್ವಾಮಿ ತುಳಸಿದಾಸ್ ಅವರು ಬರೆದ ಮಹಾಕಾವ್ಯ ಶ್ರೀ ರಾಮಚರಿತಮಾನಸ್ ಎಂಬ ಮಹಾಕಾವ್ಯವನ್ನು ಇಲ್ಲಿನ ಗೋಡೆಗಳ ಮೇಲೆ ಕೆತ್ತಲಾಗಿದೆ. ತುಳಸಿದಾಸರು ಮಹಾಕಾವ್ಯವನ್ನು ರಚಿಸಿದ ಸ್ಥಳದಲ್ಲಿ ಈ ದೇವಾಲಯವಿದೆ. ಇಲ್ಲಿ ಭಕ್ತರು ಭಜನೆ ಮತ್ತು ಆರತಿ ಮಾಡುತ್ತಾರೆ. ದೇವಾಲಯದ ಆವರಣವು ಸುಂದರವಾದ ಉದ್ಯಾನವನವನ್ನು ಸಹ ಒಳಗೊಂಡಿದೆ ಮತ್ತು ರಾಮಚರಿತಮಾನಸ ದೃಶ್ಯಗಳನ್ನು ದೇವಾಲಯದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ.
ಸಂಕಷ್ಟ ಮೋಚನ್ ಹನುಮಾನ್ ದೇವಾಲಯ
ಸಂಕಷ್ಟ ಮೋಚನ್ ಹನುಮಾನ್ ದೇವಾಲಯವು ವಾರಣಾಸಿಯಲ್ಲಿರುವ ಹಿಂದೂ ದೇವಾಲಯವಾಗಿದ್ದು, ಇದು ಹನುಮನಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು 1500 ರ ದಶಕದ ಆರಂಭದಲ್ಲಿ ಪ್ರಸಿದ್ಧ ಹಿಂದೂ ಬೋಧಕ ಮತ್ತು ಕವಿ, ಸಂತ ಶ್ರೀ ಗೋಸ್ವಾಮಿ ತುಳಸಿದಾಸ್ ಸ್ಥಾಪಿಸಿದರು. ಇದು ಅಸ್ಸಿ ನದಿಯ ದಡದಲ್ಲಿದೆ. ದೇವರಿಗೆ "ಸಂಕಟ್ ಮೋಚನ್" ಎಂದು ಹೆಸರಿಡಲಾಗಿದೆ. ದೇವಸ್ಥಾನದಲ್ಲಿ "ಬೆಸನ್ ಲಾಡೂ" ಮಾರಾಟ ಮಾಡಲಾಗುತ್ತದೆ. ಇದನ್ನು ಭಕ್ತರು ಪ್ರಸಾದವಾಗಿ ಸ್ವೀಕರಿಸುತ್ತಾರೆ. ದೇವರ ವಿಗ್ರಹವನ್ನು ಚೆಂಡು ಹೂವಿನ ಹಾರದಿಂದ ಅಲಂಕರಿಸಲಾಗಿದೆ.

ಕಾಶಿ ವಿಶ್ವನಾಥ ದೇವಾಲಯ
ಕಾಶಿ ವಿಶ್ವನಾಥ ದೇವಾಲಯ ಕೂಡ ವಾರಣಾಸಿಯಲ್ಲಿರುವ ದೇವಾಲಯ. ಇದು ಭಾರತದ ಪ್ರಮುಖ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ದೇವಾಲಯವು ಗಂಗಾ ನದಿಯ ಪಶ್ಚಿಮ ದಂಡೆಯಲ್ಲಿದೆ. ಇದು ಶಿವನಿಗೆ ಸಮರ್ಪಿತವಾಗಿದ್ದು, ನೂರಾರು ವರ್ಷಗಳಿಂದ ಇಲ್ಲಿ ಶಿವನನ್ನು ವಿಶ್ವನಾಥ ಅಥವಾ ವಿಶ್ವೇಶ್ವರ, "ವಿಶ್ವದ ಅಧಿಪತಿ" ಎಂದು ಪೂಜಿಸಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ, ಕಾಶಿ ವಿಶ್ವನಾಥ ದೇವಾಲಯಕ್ಕೆ ಭೇಟಿ ನೀಡುವುದು ಮತ್ತು ಗಂಗಾನದಿಯಲ್ಲಿ ಸ್ನಾನ ಮಾಡುವುದು ವಿಮೋಚನೆ ಅಥವಾ ಮೋಕ್ಷದ ಹಾದಿಯಲ್ಲಿ ಪ್ರಮುಖ ಹಂತಗಳಾಗಿವೆ. ಪ್ರತಿ ವರ್ಷ ಮಹಾಶಿವರಾತ್ರಿಯಂದು ಮಹಾಮೃತ್ಯುಂಜಯ ದೇವಸ್ಥಾನದಿಂದ ಕಾಶಿ ವಿಶ್ವನಾಥ ದೇವಸ್ಥಾನದವರೆಗೆ ದೊಡ್ಡ ಮೆರವಣಿಗೆ ನಡೆಯುತ್ತದೆ.

ಅಯೋಧ್ಯೆ
ಅಯೋಧ್ಯೆ ರಾಮ ಮಂದಿರವು ಉತ್ತರ ಪ್ರದೇಶ ರಾಜ್ಯದ ಅಯೋಧ್ಯಾ ನಗರದಲ್ಲಿದೆ. ಇದು ಭಾರತದ ಪ್ರಸಿದ್ಧ ಮತ್ತು ಜನಪ್ರಿಯ ದೇವಾಲಯವಾಗಿದೆ. ರಾಮಮಂದಿರ 'ಪ್ರಾಣ ಪ್ರತಿಷ್ಠಾ' ಸಮಾರಂಭವು ಜನವರಿ 22, 2024 ರಂದು ನಡೆಯಿತು. ಆ ನಂತರ ಜನರಿಗಾಗಿ ರಾಮಮಂದಿರದ ಬಾಗಿಲು ತೆರೆಯಿತು. ದೇವಾಲಯವು 360 ಅಡಿ ಉದ್ದ, 235 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. ಇದು ಮೂರು ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿ 20 ಅಡಿ ಎತ್ತರವಿದೆ. ನೆಲ ಅಂತಸ್ತಿನಲ್ಲಿ 160 ಕಂಬಗಳು, ಮೊದಲ ಮಹಡಿಯಲ್ಲಿ 132 ಕಂಬಗಳು ಮತ್ತು ಎರಡನೇ ಮಹಡಿಯಲ್ಲಿ 74 ಕಂಬಗಳನ್ನು ಹೊಂದಿದೆ. ಅಷ್ಟೇ ಅಲ್ಲ, ದೇವಾಲಯವು ಐದು ಶಿಖರಗಳು (ಗೋಪುರ) ಮತ್ತು ಐದು ಮಂಟಪಗಳನ್ನು ಹೊಂದಿದೆ. ಒಟ್ಟು 12 ದ್ವಾರಗಳಿವೆ.

ಪ್ರಯಾಗರಾಜ್
ಪ್ರಯಾಗರಾಜ್ ನಗರವು ಉತ್ತರ ಪ್ರದೇಶದ ಅತಿದೊಡ್ಡ ನಗರಗಳಲ್ಲಿ ಒಂದಾಗಿದೆ. ಗಂಗಾ ಮತ್ತು ಯಮುನಾ ನದಿಗಳ ದಡದಲ್ಲಿರುವ ಇದು ವಿಶೇಷವಾಗಿ ಹಿಂದೂಗಳಿಗೆ ಪವಿತ್ರವಾಗಿದೆ. ಪ್ರಯಾಗರಾಜ್ ಹಿಂದೆ ಅಲಹಾಬಾದ್ ಎಂದು ಕರೆಯಲ್ಪಡುತ್ತಿತ್ತು. ಅಲಹಾಬಾದ್ ಭಾರತದ ಬಹುತೇಕ ಎಲ್ಲಾ ಸಮುದಾಯಗಳಿಗೆ ಪವಿತ್ರ ನಗರವಾಗಿದೆ. ಈ ನಗರವು ವಿವಿಧ ಕಾರಣಗಳಿಂದ ಬಹಳ ಪ್ರಸಿದ್ಧವಾಗಿದೆ. ಅವುಗಳಲ್ಲಿ ಒಂದು ಇಲ್ಲಿರುವ ಮೂರು ನದಿಗಳು - ಗಂಗಾ, ಯಮುನಾ ಮತ್ತು ಸರಸ್ವತಿ. ಕುಂಭಮೇಳದಿಂದ ಅಲಹಾಬಾದ್ ಕೋಟೆಯವರೆಗೆ, ಐತಿಹಾಸಿಕ ಅದ್ಭುತಗಳಿಂದ ಭವ್ಯವಾದ ವಾಸ್ತುಶಿಲ್ಪದವರೆಗೆ ಹೀಗೆ ಅಲಹಾಬಾದ್‌ನಲ್ಲಿ ಭೇಟಿ ನೀಡಲು ಹಲವಾರು ಸ್ಥಳಗಳಿವೆ. ಇದು ಖಂಡಿತವಾಗಿಯೂ ನಿಮ್ಮನ್ನು ಆಕರ್ಷಿಸುತ್ತದೆ. ಈ ಪ್ಯಾಕೇಜ್‌ನಲ್ಲಿ ಪ್ರಯಾಗ್‌ರಾಜ್‌ನಲ್ಲಿ ಭಕ್ತರು ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಮತ್ತು ಗಂಗೆಯಲ್ಲಿ ಸ್ನಾನ ಮಾಡುತ್ತಾರೆ.
ಕಾಶಿ, ಪ್ರಯಾಗರಾಜ್ ಮತ್ತು ಅಯೋಧ್ಯೆಗೆ ಭೇಟಿ ನೀಡಲು ಬಯಸುವ ಭಕ್ತರು ಮತ್ತು ಪ್ರವಾಸಿಗರಿಗೆ ಈ ಪ್ರವಾಸ ಪ್ಯಾಕೇಜ್ ಉತ್ತಮವಾಗಿದೆ.


Click it and Unblock the Notifications

















