Budget Friendly Foreign Trips: ಇತ್ತೀಚಿನ ದಿನಗಳಲ್ಲಂತೂ ಜನರು ಸಿಕ್ಕಾಪಟ್ಟೆ ಬ್ಯೂಸಿ ಇರ್ತಾರೆ. ವಿಶೇಷವಾಗಿ ಕಚೇರಿಗೆ ತೆರಳಿ ಕೆಲಸ ಮಾಡುವ ಜನರು ದಿನದ 12 ಗಂಟೆ ಅಲ್ಲೇ ಸಮಯ ಕಳೆಯುತ್ತಾರೆ. ಇನ್ನು ನಗರಗಳಲ್ಲೋ ಕಚೇರಿಯಲ್ಲಿ ದಿನಗಟ್ಟಲೇ ಕೆಲಸ ಮಾಡುವುದಲ್ಲದೆ, ಮನೆಯಿಂದ ಕಚೇರಿ, ಕಚೇರಿಯಿಂದ ಮನೆಗೆ ಓಡಾಡುವುದಕ್ಕೆ ಸುಮಾರು 2 ಗಂಟೆ ಸಮಯ ತೆಗೆದುಕೊಳ್ಳುತ್ತಾರೆ. ಈ ಎಲ್ಲಾ ಕಾರಣಗಳಿಂದ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸಮಯವನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ ತಜ್ಞರ ಪ್ರಕಾರ, ವ್ಯಕ್ತಿ ರಿಫ್ರೆಶ್ ಆಗಬೇಕೆಂದರೆ ಕಚೇರಿ ಜಂಜಾಟದಿಂದ ಹೊರಬಂದು ಪ್ರವಾಸ ಕೈಗೊಳ್ಳಬೇಕು. ಆಗ ಫ್ಯಾಮಿಲಿಯವರ ಜೊತೆ ಕಾಲ ಕಳೆಯಲು, ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ಸಿಗುತ್ತದೆ.
ಪ್ರವಾಸ ಎಂದಾಕ್ಷಣ ಹೆಚ್ಚಿನವರಿಗೆ ವಿದೇಶಕ್ಕೆ ಹೋಗುವ ಕನಸು ಇರುತ್ತದೆ. ಆದರೆ ಹೆಚ್ಚು ಹಣ ಖರ್ಚಾಗುತ್ತದೆ ಎನ್ನುವ ಕಾರಣಕ್ಕೆ ಕೆಲವರು ಸುಮ್ಮನಾಗುತ್ತಾರೆ. ಆದರೆ ಕೆಲವು ವಿದೇಶಿ ಸ್ಥಳಗಳಿಗೆ ಹೋಗಲು ನಿಮಗೆ ಲಕ್ಷಗಟ್ಟಲೇ ಹಣ ಬೇಕಿಲ್ಲ, 25,000-30,000 ರೂಪಾಯಿ ಇದ್ದರೆ ಆರಾಮಾಗಿ ಹೋಗಿ ಬರಬಹುದು. ಆ ದೇಶಗಳಿಗೆ ಹೋಗಲು ವಿಮಾನ ಟಿಕೆಟ್‌ಗಳು ಸಹ ಕಡಿಮೆ ದರದಲ್ಲಿ ಲಭ್ಯವಿದೆ. ಅನೇಕ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಟಿಕೆಟ್ ಬುಕಿಂಗ್‌ನಲ್ಲಿ ಉತ್ತಮ ಆಫರ್ ನೀಡಲಾಗುತ್ತಿದೆ. ಆದರೆ ಈ ಲೇಖನದಲ್ಲಿ ನಾವು ವಿಮಾನದ ವೆಚ್ಚವನ್ನು ಸೇರಿಸಿಲ್ಲ. ಹಾಗಾದರೆ ಬನ್ನಿ ಬಜೆಟ್ ಸ್ನೇಹಿ ವಿದೇಶಿ ಪ್ರವಾಸದ ಬಗ್ಗೆ ಮುಂದೆ ತಿಳಿಯೋಣ.

ನೇಪಾಳ
ಈ ದೇಶವು ಭಾರತಕ್ಕೆ ಹತ್ತಿರದಲ್ಲಿದೆ. ಕಡಿಮೆ ಬಜೆಟ್ ವಿಷಯ ಬಂದಾಗ ಈ ದೇಶ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿಗೆ ಭೇಟಿ ನೀಡುವವರು ಸಂಪೂರ್ಣ ವೆಚ್ಚ 30,000 ರೂ. ಹೊಂದಿದ್ದರೆ ಸಾಕು. ನೇಪಾಳಕ್ಕೆ ಹೋಗಲು, ನೀವು ವಾಯು ಮಾರ್ಗ, ರೈಲು ಮಾರ್ಗ ಮತ್ತು ರಸ್ತೆಯನ್ನು ಬಳಸಬಹುದು. ನೇಪಾಳದಲ್ಲಿ ನೀವು ಕಠ್ಮಂಡುವನ್ನು ನೋಡಬಹುದು.ಇಲ್ಲಿ ಅನೇಕ ಸುಂದರವಾದ ದೇವಾಲಯಗಳು ಮತ್ತು ಸ್ಥಳೀಯ ಮಾರುಕಟ್ಟೆಗಳಿವೆ. ಕಠ್ಮಂಡುವಿನಲ್ಲಿ ಪಶುಪತಿನಾಥ ದೇವಾಲಯ, ದರ್ಬಾರ್ ಚೌಕ ಮತ್ತು ಸ್ವಯಂಭುನಾಥ ದೇವಾಲಯವನ್ನು ನೋಡಬಹುದು.

ಶ್ರೀಲಂಕಾ
ಈ ದೇಶದಲ್ಲಿ ಸುಂದರ ಹಸಿರು ಮತ್ತು ವಾಸ್ತುಶಿಲ್ಪ ನೋಡಲು ಎರಡು ಕಣ್ಣು ಸಾಲದು. ಇಲ್ಲಿ ನೀವು ಪೌರಾಣಿಕ ದೇವಾಲಯಗಳು, ಐತಿಹಾಸಿಕ ಸ್ಥಳಗಳು ಸೇರಿದಂತೆ ಅನೇಕ ಪ್ರಾಕೃತಿಕ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ರಾವಣ ಜಲಪಾತ ಮತ್ತು ಆಡಮ್ ಶಿಖರಕ್ಕೂ ಹೋಗಬಹುದು, ಶ್ರೀಲಂಕಾವನ್ನು ಅನ್ವೇಷಿಸಲು ಸ್ಥಳೀಯ ಸಾರಿಗೆಯನ್ನು ಬಳಸುವುದು ಉತ್ತಮ. ದೆಹಲಿಯಿಂದ ಶ್ರೀಲಂಕಾಕ್ಕೆ 8 ರಿಂದ 13 ಸಾವಿರ ರೂ.ಗೆ ವಿಮಾನ ಟಿಕೆಟ್ ಲಭ್ಯವಿದ್ದು, ಇದನ್ನು ಹೊರತುಪಡಿಸಿ 25,000 ರಿಂದ 30,000 ರೂ.ವರೆಗಿನ ಬಜೆಟ್ ಶ್ರೀಲಂಕಾಕ್ಕೆ ಭೇಟಿ ನೀಡಲು ಸೂಕ್ತವಾಗಿರುತ್ತದೆ.
ಬ್ಯಾಂಕಾಕ್
ಬ್ಯಾಂಕಾಕ್‌ಗೆ ಭೇಟಿ ನೀಡುವುದು ಯಾವಾಗಲೂ ಭಾರತೀಯರಿಗೆ ಅಚ್ಚುಮೆಚ್ಚಿನ ಸಂಗತಿಯಾಗಿದೆ, ಇಲ್ಲಿನ ಬೀದಿ ಮಾರುಕಟ್ಟೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ಅಷ್ಟೇ ಅಲ್ಲ, ಈ ಬೀದಿಗಳಲ್ಲಿ ಲಭ್ಯವಿರುವ ಸ್ಥಳೀಯ ಆಹಾರವೂ ಪ್ರವಾಸಿಗರಿಗೆ ಇಷ್ಟವಾಗುತ್ತದೆ. ಬ್ಯಾಂಕಾಕ್‌ನಲ್ಲಿ ಲುಂಬಿನಿ ಪಾರ್ಕ್, ಎಮರಾಲ್ಡ್ ಟೆಂಪಲ್ ಮುಂತಾದ ಅನೇಕ ಯಾತ್ರಾ ಮತ್ತು ಪ್ರವಾಸಿ ಸ್ಥಳಗಳಿವೆ. ಇದು ಇಲ್ಲಿ ಸಾಕಷ್ಟು ಜನಪ್ರಿಯವಾಗಿದೆ, ಬ್ಯಾಂಕಾಕ್‌ನಲ್ಲಿನ ಐಷಾರಾಮಿ ಹೋಟೆಲ್‌ಗಳ ಬೆಲೆಗಳು ಸಹ ಸಾಕಷ್ಟು ಕಡಿಮೆ. ಸದ್ಯ ದೆಹಲಿಯಿಂದ ಬ್ಯಾಂಕಾಕ್ ಗೆ 10 ರಿಂದ 12 ಸಾವಿರ ರೂ.ಗೆ ವಿಮಾನ ಟಿಕೆಟ್ ದೊರೆಯಲಿದೆ. ಇದಲ್ಲದೇ ಬ್ಯಾಂಕಾಕ್‌ಗೆ ಭೇಟಿ ನೀಡಲು 25,000 ರಿಂದ 30,000 ರೂ.ಸಾಕು.

ದುಬೈ
ದುಬೈನ ಬುರ್ಜ್ ಖಲೀಫಾವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ, ಪ್ರತಿದಿನ ಸಾವಿರಾರು ಜನರು ಈ ವಿಶ್ವ ಪ್ರಸಿದ್ಧ ತಾಣಕ್ಕೆ ಭೇಟಿ ನೀಡುತ್ತಾರೆ. ದುಬೈನ ಪ್ರಸಿದ್ಧ ಮಾಲ್, ಥಾರ್ ಮರುಭೂಮಿ ಮತ್ತು ಈ ಸ್ಥಳದ ಆಧುನಿಕ ಸೌಲಭ್ಯಗಳು ಜನರನ್ನು ಆಕರ್ಷಿಸುತ್ತವೆ. ದುಬೈಗೆ ಭೇಟಿ ನೀಡಲು ವಿಮಾನದ ವೆಚ್ಚದ ಜೊತೆಗೆ, ಹೋಟೆಲ್‌ನಲ್ಲಿ ತಂಗಲು, ಆಹಾರ ಮತ್ತು ಪಾನೀಯ ಮತ್ತು ಪ್ರಯಾಣದ ವೆಚ್ಚ 28,000 ರಿಂದ 30,000 ವರೆಗೆ ವೆಚ್ಚವಾಗುತ್ತದೆ. ವಿಮಾನ ಸೇರಿದಂತೆ 80,000 ರೂ.ಗೆ ದುಬೈನಲ್ಲಿ ಇಬ್ಬರು ಆರಾಮವಾಗಿ ಪ್ರಯಾಣಿಸಬಹುದು.

ಮಲೇಷ್ಯಾ
ನೀವು ವಿದೇಶಕ್ಕೆ ಪ್ರಯಾಣಿಸಲು ಬಯಸಿದರೆ ಮಲೇಷ್ಯಾವು ಭಾರತದಿಂದ ಉತ್ತಮ ಸ್ಥಳವಾಗಿದೆ. ಖಂಡಿತವಾಗಿಯೂ ಮಲೇಷ್ಯಾದ ಸಾಂಪ್ರದಾಯಿಕ ಪೆಟ್ರೋನಾಸ್ ಟವರ್ಸ್ ನೋಡುವುದನ್ನು ಮಿಸ್ ಮಾಡಬೇಡಿ. ಬಟು ಕೇವಾಸ್ ಮತ್ತು ಇಲ್ಲಿನ ದೇವಾಲಯಗಳು ಮಲೇಷಿಯಾದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ಜೀವನ ವೆಚ್ಚ ಕೇವಲ 1,500 ರಿಂದ 10,000 ರೂ., ಪ್ರಯಾಣ ಮತ್ತು ಆಹಾರ ದಿನಕ್ಕೆ ಸುಮಾರು 5,000 ರೂ. ಹಾಗಾಗಿ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಮಲೇಷ್ಯಾಕ್ಕೆ ಭೇಟಿ ನೀಡಲು ಯೋಜಿಸಬಹುದು.


Click it and Unblock the Notifications















