ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ದೇಶದೆಲ್ಲೆಡೆ ಈ ಹಬ್ಬದ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ದೇಶದ ಮೂಲೆ ಮೂಲೆಯಲ್ಲಿ ದೀಪಾವಳಿ ಆಚರಣೆ ವಿಶೇಷವಾಗಿರುವುದರ ಬಗ್ಗೆ ನಿನ್ನೆಯ ಲೇಖನದಲ್ಲಿ ತಿಳಿಸಿದ್ದೆವು. ಆದರೆ ಕೆಲವು ಸ್ಥಳಗಳಲ್ಲಿಯಂತೂ ದೀಪಾವಳಿಯನ್ನು ಬಹಳ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಹೌದು, ಹಿಮಾಚಲ ಪ್ರದೇಶದಲ್ಲಿ ದೀಪಾವಳಿಯನ್ನು "ಬುಧಿ ದೀಪಾವಳಿ" ಎಂದು ಆಚರಿಸಲಾಗುತ್ತದೆ. ಇದನ್ನು ಇಗಾಸ್ ಹಬ್ಬ ಎಂದು ಸಹ ಕರೆಯಲಾಗುತ್ತದೆ. ಈ ಸಾರಿ ದೀಪಾವಳಿಯಂದು ನೀವೇನಾದರೂ ಹಿಮಾಚಲ ಪ್ರದೇಶದತ್ತ ತೆರಳಲು ಯೋಜಿಸುತ್ತಿದ್ದರೆ ಅಥವಾ ಯಾವ ಭಾಗದಲ್ಲಿ ಹೇಗೆ ಆಚರಿಸುತ್ತಾರೆ ಎಂಬ ಕುತೂಹಲ ಹೊಂದಿದ್ದರೆ ಬುಧಿ ದೀಪಾವಳಿಯ ಆಚರಣೆಯ ಬಗ್ಗೆ, ಅದರ ವಿಶೇಷತೆ ತಿಳಿದುಕೊಂಡಿರಲೇಬೇಕು.
ಕೈಯಲ್ಲಿ ಉರಿಯುವ ಪಂಜುಗಳು
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಬುಧಿ ದೀಪಾವಳಿ ಅಥವಾ ಇಗಾಸ್ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ದೀಪಾವಳಿಯ ಒಂದು ತಿಂಗಳ ನಂತರ ಬುಧಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಹಿಮಾಚಲ ಪ್ರದೇಶವು ದೇಶದ ಗುಡ್ಡಗಾಡು ಪ್ರದೇಶವಾಗಿದ್ದು, ಅದರ ಸಂಸ್ಕೃತಿಯು ಕೂಡ ಬಹಳ ವಿಶೇಷವಾಗಿದೆ.
ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಸಹ ಕಡಿಮೆಯಾಗಿಲ್ಲ. ಬುಧಿ ದೀಪಾವಳಿಯ ವಿಶೇಷತೆ ಏನೆಂದರೆ ಹಿಮಾಚಲ ಪ್ರದೇಶದಲ್ಲಿ ಈ ದಿನದಂದು ಮನೆಗಳಲ್ಲಿ ದೀಪಗಳನ್ನು ಹಚ್ಚುವುದು ಮಾತ್ರವಲ್ಲದೆ, ಕೈಯಲ್ಲಿ ಉರಿಯುವ ಪಂಜುಗಳನ್ನು ಹಿಡಿದು ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು, ಹಿಮಾಚಲದ ಸಂಸ್ಕೃತಿಯನ್ನು ಚಿತ್ರಿಸಲಾಗುತ್ತದೆ ಮತ್ತು ಜಾನಪದ ಹಾಡುಗಳನ್ನು ಹಾಡಲಾಗುತ್ತದೆ ಹಾಗೂ ಸಾಂಪ್ರದಾಯಿಕ ನೃತ್ಯಗಳನ್ನು ಮಾಡಲಾಗುತ್ತದೆ. ಇದಲ್ಲದೇ ಈ ದಿನ ದೀಪಾವಳಿಯಂದು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅದನ್ನು ನೋಡಲು ಬಹಳ ಹಿತಕರವಾಗಿರುತ್ತದೆ.

ವೇದಗಳಲ್ಲಿ ಕಂಡುಬರುತ್ತದೆ ಪ್ರಾಮುಖ್ಯತೆ
ಬುಧಿ ದೀಪಾವಳಿಯನ್ನು ಇಲ್ಲಿನ ಕುಲುವಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ ಎಂದು ಹೇಳಿದ್ದೆವು. ಆದರೆ ಇನ್ನು ವಿಶೇಷವಾಗಿ ಇಲ್ಲಿನ ನಿರ್ಮಂದ್, ಸಿರ್ಮೌರ್, ಶಿಮ್ಲಾ, ಲಾಹೌಲ್ ಸ್ಪಿಟಿ ಇತ್ಯಾದಿ ಜಿಲ್ಲೆಗಳಲ್ಲಿ ವಿಶಿಷ್ಟ ಬಣ್ಣಗಳೊಂದಿಗೆ ಆಚರಿಸಲಾಗುತ್ತದೆ. ಈ ಉತ್ಸವದಲ್ಲಿ ಈ ಪ್ರದೇಶದ ಪ್ರಾಚೀನ ಸಂಸ್ಕೃತಿಯ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ದೀಪಗಳ ಉತ್ಸವದ ಸಂಕೇತವಾಗಿ ಇಲ್ಲಿ ಪಂಜುಗಳನ್ನು ಬೆಳಗಿಸಲಾಗುತ್ತದೆ ಮತ್ತು ಸಾಂಪ್ರದಾಯಿಕ ಸಂಗೀತ ವಾದ್ಯಗಳ ಬಡಿತಗಳಿಗೆ ಜನರು ನೃತ್ಯ ಮಾಡುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವೇದಕಾಲದಿಂದಲೂ ಈ ಹಬ್ಬ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ.
ಋಗ್ವೇದದಲ್ಲಿಯೂ ವಿವರಣೆ ಇದೆ
ಇದರ ವಿವರಣೆ ಋಗ್ವೇದದಲ್ಲಿಯೂ ಇದೆ. ಇದಲ್ಲದೆ ರಾಮಾಯಣ ಮತ್ತು ಮಹಾಭಾರತದ ಜೊತೆ ಈ ಹಬ್ಬಕ್ಕೆ ಇರುವ ಸಂಬಂಧವನ್ನು ನೋಡಬಹುದು. ಹಾಗಾಗಿಯೇ ಕೌರವರು ಮತ್ತು ಪಾಂಡವರ ಪ್ರತೀಕವಾಗಿ ಎರಡು ತಂಡಗಳ ನಡುವೆ ಹಗ್ಗ ಜಗ್ಗಾಟ ನಡೆಸಲಾಗುತ್ತದೆ ಎಂದು ಹೇಳಲಾಗುತ್ತದೆ. ಮುಂಜಿ ಹುಲ್ಲಿನಿಂದ ವಿಶೇಷವಾಗಿ ತಯಾರಿಸಿದ ಹಗ್ಗವನ್ನು ಬಳಸಿ ಎರಡೂ ತಂಡಗಳು ಪರಸ್ಪರರ ವಿರುದ್ಧ ತಮ್ಮ ಶಕ್ತಿಯನ್ನು ಪ್ರದರ್ಶಿಸುತ್ತವೆ.
ಕುಲುವಿನಲ್ಲಿರುವ ಪ್ರವಾಸಿ ಆಕರ್ಷಣೆಗಳು
ಹಿಮಾಚಲದಲ್ಲಿರುವ ಈ ಸುಂದರವಾದ ಸ್ಥಳವು ಕುಲು ಪರ್ವತಗಳ ಪ್ರದೇಶವಾಗಿದ್ದು, ಶಾಂತಿ ಮತ್ತು ನೆಮ್ಮದಿಯಿಂದ ಸಮಯವನ್ನು ಕಳೆಯಬಹುದು. ಇಲ್ಲಿಗೆ ಬಂದಾಗ ಕುಲುವಿನ ಶ್ರೀ ಹನೋಗಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಈ ದೇವಾಲಯವನ್ನು ಬಿಯಾಸ್ ನದಿಯ ದಡದಲ್ಲಿ ನಿರ್ಮಿಸಲಾಗಿದೆ ಮತ್ತು ಇಲ್ಲಿನ ದೃಶ್ಯಗಳು ಸಹ ಮನೋಹರವಾಗಿವೆ. ಇದರ ಹೊರತಾಗಿ, ನೀವು ಗುರುದ್ವಾರ ಮಣಿಕರ್ಣ ಸಾಹಿಬ್, ರಘುನಾಥ ದೇವಾಲಯ, ಬಿಜ್ಲಿ ಮಹಾದೇವ ದೇವಾಲಯ, ಕೈಸರ್ಘರ್, ಭೃಗು ಸರೋವರ, ಖೀರ್ ಗಂಗಾ ಮುಂತಾದ ಇತರ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು.


Click it and Unblock the Notifications

















