ರಂದತ್ತಾರ ಸಿನಮೋನ್ ಎಸ್ಟೇಟ್ ಮೊದಮೊದಲು ತಲಸ್ಸೆರಿಯ ವಾಣಿಜ್ಯ ಕೇಂದ್ರವಾಗಿ ಜನಪ್ರಿಯವಾಗಿತ್ತು. ಸಮುದ್ರ ತೀರದಲ್ಲಿ ನಿರ್ಮಾಣವಾಗಿರುವ ಈ ಪಟ್ಟಣ ವಾಣಿಜ್ಯ ಹಬ್ ಆಗಿ ಬೆಳೆದಿದ್ದು, ಸಾಂಬಾರು ಪದಾರ್ಥಗಳಾದ ಕಾಳು ಮೆಣಸು, ಶುಂಟಿ, ಅರಿಶಿಣವನ್ನು ರಫ್ತು ಮಾಡುವ ಕೇಂದ್ರವಾಗಿತ್ತು. ಬ್ರಿಟೀಷರು ಇಲ್ಲೊಂದು ಬಂದರು ಸ್ಥಾಪಿಸಿ ಆ ಮೂಲಕ ವಿದೇಶಕ್ಕೆ ಇವನ್ನು ರವಾನೆ ಮಾಡುತ್ತಿದ್ದರು.
1790ರ ಸಮಯದಲ್ಲಿ ಟಿಪ್ಪು, ಹೈದರ್‌ಅಲಿ, ಪಜಸ್ಸಿ ರಜಾ ದಾಳಿಯಿಂದಾಗಿ ಸಾಂಬಾರು ಪದಾರ್ಥ ಉದ್ಯಮಕ್ಕೆ ಹಿನ್ನಡೆಯಾಯಿತು. ಇದರಿಂದಾಗಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿಯು ಸಾಂಬಾರು ಪದಾರ್ಥವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ತನ್ನದೇ ಆದ ಪ್ಲಾಂಟೇಶನ್ ತೆರೆಯಲು ನಿರ್ಧರಿಸಿತು. ಈ ತಾಣವೇ ರಂದತ್ತಾರ. ಇದೇ ಮುಂದಿನ ದಿನಗಳಲ್ಲಿ ರಂದತ್ತಾರ ಸಿನಮೋನ್ ಎಸ್ಟೇಟ್ ಎಂದು ಹೆಸರಾಯಿತು.
ಈ ಪ್ಲಾಂಟೇಶನ್ ಸುಮಾರು ಸಾವಿರ ಎಕರೆ ವಿಸ್ತಾರದಲ್ಲಿ ವ್ಯಾಪಿಸಿದೆ. ಆಂಗ್ಲರ ಇತಿಹಾಸಕಾರ ವಿಲಿಯಂ ಲಾಗಿನ್ ಪ್ರಕಾರ, ಇಲ್ಲಿ ವಿಶೇಷ ಉತ್ಪನ್ನಗಳಾದ ಕಾಫಿ, ಕಾಳು ಮೆಣಸು, ಜಾಯಿಕಾಯಿ ಹಾಗೂ ಹತ್ತಿ ಬೆಳೆಯಲಾಗಿದೆ. ಈ ಭಾಗದ ಸಸ್ಯ ಜೀವನ ನೋಡ ಬಯಸುವ ಪ್ರವಾಸಿಗರಿಗೆ ಇದೊಂದು ಸೂಕ್ತ ತಾಣ.


Click it and Unblock the Notifications