ಜೈಸಲ್ಮೇರ್ ನಿಂದ 8 ಕಿ.ಮೀ ದೂರದಲ್ಲಿರುವ ಮೂಲ್ ಸಾಗರ್ ಇಲ್ಲಿನ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಸ್ಯಾಮ್ ಸ್ಯಾಂಡ್ ಡ್ಯೂನ್ಸ್ ಕಡೆಗೆ ಸಾಗುವ ರಸ್ತೆಯ ಬದಿಯಲ್ಲಿ ಕಾಣಸಿಗುತ್ತದೆ. ಮೂಲ್ ಸಾಗರ್ ಎಂಬುದು ಕೆರೆಯನ್ನು ಹೊಂದಿರುವ ಒಂದು ಉದ್ಯಾನವನವಾಗಿದ್ದು, ಜೈಸಲ್ಮೇರಿನ ರಾಜ ಪರಿವಾರದವರು ಬೇಸಿಗೆಯಲ್ಲಿ ಕಾಲಕಳೆಯುವ ಉದ್ದೇಶಕ್ಕಾಗಿ ನಿರ್ಮಿಸಲಾಗಿತ್ತು. ಪ್ರವಾಸಿಗರು ಈ ಉದ್ಯಾನವನದ ಒಳಗೆ ಒಂದು ಶಿವನ ದೇವಾಲಯವನ್ನು ಸಹ ಕಾಣಬಹುದು. ಈ ಶಿವನ ದೇವಾಲಯವನ್ನು ಎರಡು ಬೃಹತ್ತಾದ ಮರಳುಗಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಮೂಲ್ ಸಾಗರವನ್ನು 1815ರಲ್ಲಿ ಮಹಾರಾಜ ಇಮ್ಮಡಿ ಮೂಲ್ ರಾಜ್ ನಿರ್ಮಿಸಿದನು. ಪ್ರವಾಸಿಗರು ಈ ಉದ್ಯಾನವನದಲ್ಲಿ ಹಲವಾರು ಬಾವಿಗಳನ್ನು, ಒಂದು ರಾಜ ಮಹಲನ್ನು ಮತ್ತು ಜೈನ ತೀರ್ಥಂಕರರನ್ನು ಪೂಜಿಸುವ ಸಲುವಾಗಿ ನಿರ್ಮಿಸಿದ ಮೂರು ಜೈನ ದೇವಾಲಯಗಳನ್ನು ಸಹ ವೀಕ್ಷಿಸಬಹುದು. ಈ ಅರಮನೆಯು ಹಲವಾರು ಚಿತ್ರಕಲೆಗಳಿಂದ ಮತ್ತು ಪುತ್ಥಳಿಗಳಿಂದ ಶೃಂಗಾರಗೊಂಡಿದ್ದು, ನೋಡಲು ಆಕರ್ಷಕವಾಗಿದೆ. ಪ್ರವಾಸಿಗರು ಜೈಸಲ್ಮೇರ್ ನಗರದಿಂದ ಆಟೋ ರಿಕ್ಷಾದಲ್ಲಿ ಇಲ್ಲಿಗೆ ತಲುಪಬಹುದು.


Click it and Unblock the Notifications