ಫತೇಹಾಬಾದ್ ನಗರದಿಂದ 16 ಕಿ. ಮೀ. ದೂರದಲ್ಲಿರುವ ಬನವಾಲಿಯು ಐತಿಹಾಸಿಕ ಬೆಟ್ಟವುಳ್ಳ ಒಂದು ಸ್ಥಳವಾಗಿದ್ದು, ಇದಕ್ಕೆ ವನವಾಲಿ ಎಂಬ ಮತ್ತೊಂದು ಹೆಸರೂ ಕೂಡ ಇದೆ. ಈ ಬೆಟ್ಟವು ಸುಮಾರು 10 ಮೀ. ಗಳಷ್ಟು ಎತ್ತರವಿದ್ದು, ಸರಿಸುಮಾರು 1 ಚ. ಕಿ. ಮೀ. ನಷ್ಟು ವಿಸ್ತಾರವಾಗಿದೆ. ಇತಿಹಾಸ ಮತ್ತು ಮಾನವನ ಪೂರ್ವ ಇತಿಹಾಸದ ಕುರಿತು ಶೈಕ್ಷಣಿಕ ಕುತೂಹಲವಿರುವವರಿಗೆ, ಇಲ್ಲಿಗೆ ಸಮೀಪದಲ್ಲಿ ಜನವಸತಿ ಇಲ್ಲದಿದ್ದರೂ ಕೂಡ, ಇದೊಂದು ಜನಪ್ರಿಯ ಪ್ರವಾಸೀ ತಾಣವಾಗಿದೆ.
ಬನವಾಲಿಯಲ್ಲಿ ಕೈಗೊಳ್ಳಲಾದ ಉತ್ಖನನಗಳು, ಹರಪ್ಪನ್ ಪೂರ್ವಕಾಲ ಮತ್ತು ಹರಪ್ಪನ್ ಕಾಲಾವಧಿಯ ಕುರಿತು ಐತಿಹಾಸಿಕ ಮಾಹಿತಿಯ ಅಮೂಲ್ಯವಾದ ನಿಧಿಯನ್ನೇ ನೀಡಿವೆ. ಈ ಕಾಲಾವಧಿಗಳು ಕ್ರಮವಾಗಿ ಕ್ರಿ.ಪೂ.2800 ರಿಂದ ಕ್ರಿ.ಪೂ. 2300 ಮತ್ತು ಕ್ರಿ.ಪೂ. 2300 ರಿಂದ ಕ್ರಿ.ಪೂ. 1800 ಆಗಿರುತ್ತವೆ.
ಮಾನವ ಶಾಸ್ತ್ರಜ್ಞರು ಈ ಕಾಲಘಟ್ಟದಲ್ಲಿ ಪರಿಪೂರ್ಣವಾದ, ಸುಸಜ್ಜಿತ ಪಟ್ಟಣಗಳ ಅಸ್ತಿತ್ವವನ್ನು ಸಾರುವ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಆ ಕಾಲದ ಜನರ ಪ್ರಮುಖ ವೃತ್ತಿಯು ಕೃಷಿಯಾಗಿತ್ತು ಎಂಬುದಾಗಿಯೂ ಕೂಡ ತೀರ್ಮಾನಿಸಿದ್ದಾರೆ. ಆಗಿನ ಜನರು ಬಾರ್ಲಿ, ಸಾಸಿವೆ, ಮತ್ತು ಎಳ್ಳು ಮೊದಲಾದ ಬೆಳೆಗಳನ್ನು ಬೆಳೆಸುತ್ತಿದ್ದರು. ಅವರ ಪ್ರಮುಖ ಕೃಷಿಯ ಸಲಕರಣೆಯು ಮರದ ನೇಗಿಲು ಆಗಿತ್ತು.
ಸಂಶೋಧನೆಗಳು ಹಲವಾರು ವಸ್ತುಗಳನ್ನು ಒಳಗೊಂಡಿದ್ದು, ಅವು ಅಂದಿನ ಕಾಲದ ಜನರ ಅಭ್ಯುದಯದ ಮಟ್ಟದತ್ತ ಬೆಳಕು ಚೆಲ್ಲುತ್ತದೆ. ಜನರು ಮಣ್ಣಿನ ಇಟ್ಟಿಗೆಗಳಿಂದ ಕಟ್ಟಲಾಗಿದ್ದ ಯೋಜನಾಬದ್ಧ ಮನೆಗಳಲ್ಲಿ ವಾಸಿಸುತ್ತಿದ್ದರು. ಈ ಮನೆಗಳಲ್ಲಿ ವಾಸಯೋಗ್ಯ ಕೊಠಡಿಗಳು, ಅಡುಗೆಮನೆಗಳು, ಸಂಗ್ರಹ ಕೊಠಡಿಗಳು (Store rooms), ಪಿಂಗಾಣಿ ಮಡಕೆಗಳು, ಕೈಬಚ್ಚಲುಗಳಿದ್ದ ಸುಸಜ್ಜಿತ ಶೌಚಾಲಯಗಳು, ಮತ್ತು ಒಳಚರಂಡಿ ವ್ಯವಸ್ಥೆಗಳೂ ಇದ್ದವು. ಪಟ್ಟಣಗಳು ಉತ್ತಮವಾಗಿ ನಿರ್ಮಾಣಗೊಂಡಿದ್ದ ಸುಸಜ್ಜಿತ ರಸ್ತೆಗಳು ಮತ್ತು ಕಾಲುದಾರಿಗಳನ್ನು ಹೊಂದಿದ್ದವು.
ಸಂಶೋಧನೆಗಳ ಪ್ರತಿಫಲವಾಗಿ ದೊರೆತ ವಸ್ತುಗಳ ಪೈಕಿ ದೇವ ದೇವತೆಗಳ ಚಿನ್ನದ, ಕಂಚಿನ, ತಾಮ್ರದ, ಮತ್ತು ಬೆಳ್ಳಿಯ ಆಭರಣಗಳು ಮತ್ತು ಮೂರ್ತಿಗಳೂ ಸೇರಿವೆ. ಸಲಕರಣೆಗಳು ಮತ್ತು ಆಯುಧಗಳ ತಯಾರಿಕೆಯಲ್ಲಿ, ಕುಶಲಕರ್ಮಿಗಳು ತಾಮ್ರ ಮತ್ತು ಕಂಚನ್ನು ಉಪಯೋಗಿಸುತ್ತಿದ್ದರು. ಹಕ್ಕಿಗಳು, ಹೂಗಳು, ಮತ್ತು ಮರಗಳನ್ನು ತೋರಿಸುವ ಹಲವಾರು ಮೂರ್ತಿಗಳು ಮತ್ತು ವರ್ಣ ಚಿತ್ರಗಳೂ ಕೂಡ ಲಭಿಸಿವೆ.


Click it and Unblock the Notifications