ಸ್ವರ್ಣಬುಗ್ಗೆ ಎಂದೂ ಕರೆಯಲ್ಪಡುವ ಸ್ವರನ್ ಬಾವ್ಲಿ ಭದೇರ್ವಾ ನಗರದ ಆಶಾಪತಿ ಗಿರಿಯ ತಳದಲ್ಲಿದೆ. ಈ ಬುಗ್ಗೆ ಧಾರ್ಮಿಕ ಮಹತ್ವ ಹೊಂದಿದ್ದು, ಈ ನೀರಿನಲ್ಲಿ ಒಮ್ಮೆ ಮುಳುಗಿದರೆ ಪಾಪಗಳೆಲ್ಲಾ ಪರಿಹಾರವಾಗುತ್ತದೆ ಎಂಬುದು ಹಿಂದೂಗಳ ನಂಬಿಕೆ. ನವರಾತ್ರಿ ವೇಳೆ, ದೃಷ್ಟ ಶಕ್ತಿಯ ಮೆಲೆ ಶಿಷ್ಟ ಶಕ್ತಿಯು ಜಯಗಳಿಸಿದ್ದರ ಸಂಕೇತವಾಗಿ ಪ್ರತಿವರ್ಷ ಅಕ್ಟೋಬರ್/ನವೆಂಬರ್ ತಿಂಗಳಲ್ಲಿ ದಟ್ಟ ಮಂಜಿನಿಂದ ಕೂಡಿದ ಈ ಬುಗ್ಗೆಯಲ್ಲಿ ಮಿಂದೇಳಲು ಪ್ರವಾಸಿಗರ ದಂಡೇ ಹರಿದುಬರುತ್ತದೆ.
ಇದಕ್ಕೊಂದು ಸ್ವಾರಸ್ಯಕರವಾದ ಕಥೆಯ ಹಿನ್ನಿಲೆಯಿದೆ. ಅದೆನೆಂದರೆ ಒಂದಾನೊಂದು ಕಾಲದಲ್ಲಿ, ಈ ಸ್ವರ್ಣ ಬುಗ್ಗೆಯಿಂದ ವೃದ್ಧೆಯೊಬ್ಬಳು ಯಾವಾಗಲು ನೀರು ತರುತ್ತಿದ್ದಳು. ಒಂದು ದಿನ ಆ ವೃದ್ಧೆ ಅನಾರೋಗ್ಯಕ್ಕೊಳಗಾಗಿ ನೀರು ತರಲಾಗಲಿಲ್ಲ. ಬದಲಿಗೆ ಆಕೆಯ ಸೊಸೆಯು ಸ್ವರ್ಣ ಬುಗ್ಗೆಯಿಂದ ನೀರು ತರಲು ಹೋದಳು. ಸೋಜಿಗವೆಂಬಂತೆ, ಆಕೆಗೆ ಸ್ವರ್ಣಬುಗ್ಗೆಯಲ್ಲಿ ಚಿನ್ನದ ಇಟ್ಟಿಗೆಗಳು ಕಾಣುತ್ತವೆ. ತನ್ನ ಬಿಳಿ ವಸ್ತ್ರದಿಂದ ಇಟ್ಟಿಗೆಗಳನ್ನು ಮುಚ್ಚಿಟ್ಟ ಆಕೆ, ಸಹೋದರರನ್ನು ಕರೆತರಲು ಹೋಗುತ್ತಾಳೆ. ಆದರೆ, ಸಹೋದರರೊಂದಿಗೆ ತಿರುಗಿಬಂದು ಸ್ವರ್ಣಬುಗ್ಗೆಯನ್ನು ನೋಡಿದಾಗ ಆಕೆಯ ಬಿಳಿವಸ್ತ್ರ ಮಂಜುಗಡ್ಡೆಯಾಗಿ ಪರಿವರ್ತನೆಯಾಗಿರುತ್ತದೆ. ಕೊನೆಗೆ ಈ ಮಂಜುಗಡ್ಡೆಯನ್ನು ಕೊರೆಯುವ ಅವರ ಎಲ್ಲ ಪ್ರಯತ್ನಗಳು ವಿಫಲಗೊಂಡು, ಚಿನ್ನದ ಇಟ್ಟಿಗೆಗಳು ಎಂದಿಗೂ ಕೈ ಸೇರಲಿಲ್ಲ. ಅಂದಿನಿಂದ, ಈ ಬುಗ್ಗೆ ಶಾಶ್ವತವಾಗಿ ಮಂಜಿನಿಂದ ಆವೃತವಾಗಿದೆ ಎಂಬುದು ಪ್ರತೀತಿ. ಈ ಐತಿಹ್ಯಕ್ಕೆ ಇಂಬು ನೀಡುವಂತೆ ಸ್ವರ್ಣಬುಗ್ಗೆ ಸುತ್ತಲಿನ ಪ್ರದೇಶ ಸುಡು ಬೇಸಿಗೆಯಲ್ಲೂ ಮಂಜಿನಿಂದ ಸುತ್ತುವರಿದಿರುತ್ತದೆ.


Click it and Unblock the Notifications