ಚೈಲ್ : ಪಟಿಯಾಲಾ ರಾಜನ ಬೇಸಿಗೆ ಆಶ್ರಯಧಾಮ

ಮುಖಪುಟ » ಸ್ಥಳಗಳು » ಚೈಲ್ » ಮುನ್ನೋಟ

ಹಿಮಾಚಲ ಪ್ರದೇಶವು ಪ್ರವಾಸಿ ತಾಣ ಎಂದೇ ಹೆಸರಾಗಿದೆ. ಇಲ್ಲಿನ ಸ್ಥಳೀಯ ಅಭಯಾರಣ್ಯವು ವೈವಿಧ್ಯಮಯ ಪ್ರಾಣಿ ಪಕ್ಷಿಗಳ ಸಂಕುಲವನ್ನು ಹೊಂದಿದ್ದು, ಅದನ್ನು ನೋಡಲೆಂದೆ ದೇಶದಾದ್ಯಂತ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಸಮುದ್ರ ಮಟ್ಟದಿಂದ ಸಾಕಷ್ಟು ಎತ್ತರದಲ್ಲಿರುವ ಈ ಸುತ್ತಲಿನ ಪ್ರದೇಶವನ್ನು ನೋಡಿ ಪುಳಕಿತರಾಗದವರೇ ಇಲ್ಲ.

ಹಿಮಾಚಲ ಪ್ರದೇಶದ ಚೈಲ್ ಪ್ರದೇಶವು ಅತ್ಯಂತ ಆಕರ್ಷಣೀಯ ತಾಣ. ರಾಜ ಪರಂಪರೆಯನ್ನು ಹೊತ್ತು ನಿಂತ ಈ ಸ್ಥಳಕ್ಕೆ ಒಮ್ಮೆಯಾದರೂ ಭೇಟಿ ನೀಡಲೇ ಬೇಕು. ಇಲ್ಲಿನ ಸೌಂದರ್ಯವನ್ನು ಇಲ್ಲಿಗೆ ಬಂದವರು ಮಾತ್ರ ಸವಿಯಬಲ್ಲರು!

ಚೈಲ್, ಸಮುದ್ರ ಮಟ್ಟದಿಂದ 2226 ಮೀಟರ್ ಎತ್ತರದಲ್ಲಿದೆ. ಚೈಲ್, ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯ ಸದ್ ಟಿಬಾ ಬೆಟ್ಟದಲ್ಲಿರುವ ಒಂದು ಸುಂದರ ಗಿರಿಧಾಮ. ಐತಿಹಾಸಿಕವಾಗಿ ಹೇಳುವುದಾದರೆ, ಚೈಲ್, ಹಿಂದೆ ಪಾಟಿಯಾಲಾದ ರಾಜನಾದ, ಮಹಾರಾಜ ಆದಿರಾಜ್ ಭುಪಿಂದರ್ ಸಿಂಗ್ ನಿಂದ ಪಾಲಿಸಲ್ಪಡುತ್ತಿತ್ತು. ಲಾರ್ಡ್ ಕಿಚನರ್ ಆದೇಶದ ಮೇರೆಗೆ ಶಿಮ್ಲಾದಿಂದ ಗಡಿಪಾರಾದ ನಂತರ, ಪ್ರತೀಕಾರವಾಗಿ, ರಾಜ ಆದಿರಾಜ್ ಭುಪಿಂದರ್ ಸಿಂಗನು ಚೈಲ್ ಅನ್ನು ಬೇಸಿಗೆಯ ರಜಾತಾಣವನ್ನಾಗಿ ಮಾಡಿಕೊಂಡ ಹಾಗು ಇಲ್ಲಿ ಚೈಲ್ ಅರಮನೆ ನಿರ್ಮಿಸಿ ಇದನ್ನು ತನ್ನ ಬೇಸಿಗೆ ರಾಜಧಾನಿಯನ್ನಾಗಿ ಆಯ್ಕೆ ಮಾಡಿಕೊಂಡನು.

1891 ರಲ್ಲಿ ನಿರ್ಮಿಸಲಾದ ಚೈಲ್ ಅರಮನೆ, ಚೈಲ್ ರಾಜ ಪರಂಪರೆಯ ಕಾಲಕ್ಕೆ ಒಂದು ಸಾಕ್ಷಿಯಾಗಿದೆ. ಇಲ್ಲಿನ ಮತ್ತೊಂದು ಜನಪ್ರಿಯ ಪ್ರವಾಸಿಗರ ಆಕರ್ಷಣೀಯ ತಾಣ, ಚೈಲ್ ವನ್ಯಮೃಗ ಅಭಯಾರಣ್ಯ. ಇದು ಈ ಪ್ರದೇಶದ ಸ್ಥಳೀಯ ಸಸ್ಯಗಳು ಮತ್ತು ಪ್ರಾಣಿಗಳನ್ನು ವೀಕ್ಷಿಸಲು ಒಂದು ಅಪರೂಪದ ಅವಕಾಶ ಪ್ರವಾಸಿಗರಿಗೆ ನೀಡುತ್ತದೆ. ಈ ಅಭಯಾರಣ್ಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳೆಂದರೆ ಭಾರತೀಯ ಚಿರತೆ, ಕ್ರೆಸ್ಟೆಡ್ ಮುಳ್ಳುಹಂದಿ, ಚಿರತೆ, ಕಾಡು ಹಂದಿ, ಮೇಕೆ, ಸಾಂಬಾರ್ ಮತ್ತು ಯುರೋಪಿಯನ್ ಕೆಂಪು ಜಿಂಕೆ ಮೊದಲಾದವುಗಳು. ಚೈಲ್ ಕ್ರಿಕೆಟ್ ಮತ್ತು ಪೊಲೊ ಮೈದಾನವು ಸಮುದ್ರ ಮಟ್ಟದಿಂದ 2444 ಮೀಟರುಗಳ ಎತ್ತರದಲ್ಲಿದೆ. ಇದು ವಿಶ್ವದಲ್ಲೇ ಅತಿ ಎತ್ತರದ ಕ್ರಿಕೆಟ್ ಸ್ಥಳಗಳಲ್ಲಿ ಒಂದಾಗಿದೆ. ಪ್ರಸ್ತುತ ಚೈಲ್ ಪ್ರದೇಶವು ಸೇನಾಪಡೆಯ ಶಾಲೆಯ ಆಡಳಿತಕ್ಕೆ ಒಳಪಟ್ಟಿರುತ್ತವೆ.

ಗುರುದ್ವಾರ ಸಾಹಿಬ್, ಕಾಳಿ-ಕಾ-ಟಿಬ್ಬಾ ಮತ್ತು ಮಹಾರಾಜ ಅರಮನೆ, ಚೈಲ್ ನ ಇತರೆ ಪ್ರಮುಖ ಪ್ರವಾಸಿ ಆಕರ್ಷಣೆಗಳು. ಚೈಲ್ ಪ್ರದೇಶವನ್ನು ಪಾದಯಾತ್ರಿಕರ ಸ್ವರ್ಗ ಎಂದೇ ಪರಿಗಣಿಸಲಾಗುತ್ತದೆ. ಈ ಸ್ಥಳವು ಚಾರಣಕ್ಕೆ ಮತ್ತು ಮೀನುಗಾರಿಕೆಗೆ ಸೂಕ್ತವಾಗಿದೆ.

ಚೈಲ್ ಗೆ ವಿಮಾನ, ರೈಲು ಅಥವಾ ರಸ್ತೆಯ ಮೂಲಕ ತಲುಪಬಹುದು. ಈ ಸುಂದರ ಗಿರಿಧಾಮಕ್ಕೆ ಭೇಟಿ ನೀಡಲು ಅತ್ಯುತ್ತಮ ಸಮಯವೆಂದರೆ, ಮಾರ್ಚ್ ತಿಂಗಳಲ್ಲಿ ಆರಂಭವಾಗಿ ಮತ್ತು ಮೇ ತಿಂಗಳಿನ ವರೆಗೆ ಮುಂದುವರಿಯುವ ಬೇಸಿಗೆ ಕಾಲ. ಪ್ರವಾಸಿಗರು  ಅನುಕೂಲಕರ ಹವಾಮಾನವಿರುವ ಚಳಿಗಾಲವನ್ನು ಕೂಡಾ ಚೈಲ್ ಭೇಟಿಗೆ ಆಯ್ದುಕೊಳ್ಳಬಹುದು.

Please Wait while comments are loading...