ಅಮೃತಸರದಲ್ಲಿನ ಅನೇಕ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಭಟಿಂಡಾ ಕೋಟೆಯೂ ಒಂದು. 1800 ವರ್ಷಗಳ ಹಿಂದೆ ಇದನ್ನು ಕಟ್ಟಿಸಿದ್ದು ಭಟ್ಟಿರಾವ್ ಎಂಬ ಭಟಿಂಡಾ ನಗರದ ಸ್ಥಾಪಕ. ಕ್ರಿ.ಶ. 1745ರಲ್ಲಿ ಹಡಗಿನಾಕಾರದ ಕೋಟೆಯನ್ನು ಪಟಿಯಾಲಾದ ಮಹಾರಾಜ ಆಲಾ ಸಿಂಗ್ ವಶಪಡಿಸಿಕೊಂಡ. ದಾಖಲೆಗಳ ಪ್ರಕಾರ, ಸಿಖ್ ಸಮುದಾಯದ 10ನೇ ಗುರುವಾದ ಗುರು ಗೋಬಿಂದ್ ಸಿಂಗ್ ಜಿ ಈ ಭಂಟಿಡಾ ಕೋಟೆಯನ್ನು ನೂರಾರು ವರ್ಷಗಳ ಹಿಂದೆ ಭೇಟಿ ಮಾಡಿದ್ದರಂತೆ. ಭೇಟಿಯ ಕುರುಹಾಗಿ ಒಂದು ಗುರುದ್ವಾರವನ್ನು ಕಟ್ಟಿಸಲಾಯಿತು. ಸುತ್ತಲೂ ಮರಳುಗಾಡು ಪ್ರದೇಶವಿರುವುದರಿಂದ ಈ ಕೋಟೆಯನ್ನು ನೋಡಿದರೆ ಒಂದು ಹಡಗು ನೋಡಿದಂತೆ ಭಾಸವಾಗುತ್ತದೆ.