ಕಳೆದ ಕೆಲವು ವರ್ಷಗಳಲ್ಲಿ ಪ್ರವಾಸೋದ್ಯಮದ ಕ್ರೇಜ್ ವೇಗವಾಗಿ ಹೆಚ್ಚುತ್ತಿದೆ. ಬಹುತೇಕರು ತಮ್ಮ ಮನೆಯಲ್ಲಿ ಕುಳಿತುಕೊಳ್ಳಲು ಇಷ್ಟಪಡುತ್ತಿಲ್ಲ. ಬದಲಿಗೆ ಹೊರಗೆ ಹೋಗಿ ಜಗತ್ತನ್ನು ಕಣ್ತುಂಬಿಕೊಳ್ಳಲು ಇಷ್ಟಪಡುತ್ತಿದ್ದಾರೆ. ಅಷ್ಟೇ ಏಕೆ, ಇಂದು ಪ್ರವಾಸ ಮಾಡುತ್ತಾ ತಮ್ಮ ಜೀವನೋಪಾಯ ಮಾಡುತ್ತಿರುವ ಅನೇಕ ಜನರನ್ನು ಕಾಣಬಹುದು. ಆದರೆ ಪ್ರಯಾಣ ಅಥವಾ ಪ್ರವಾಸ ನೀವು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ನಾವು ಓಡಾಡುವ ಎಲ್ಲಾ ಜಾಗಗಳು ಸುರಕ್ಷಿತವಾಗಿರುವುದಿಲ್ಲ. ಹಾಗಾಗಿ ಇಂದು ಈ ಲೇಖನದಲ್ಲಿ, ಪ್ರವಾಸಿಗರಿಗೆ ಸುರಕ್ಷಿತವಲ್ಲದ ಆ 10 ನಗರಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
ಜೊತೆಗೆ ನೀವು ಯಾವುದೇ ಭಯವಿಲ್ಲದೆ ಮುಕ್ತವಾಗಿ ತಿರುಗಾಡಬಹುದಾದ ಆ 10 ನಗರಗಳ ಬಗ್ಗೆಯೂ ಹೇಳುತ್ತೇವೆ. ಎರಡು ದಿನಗಳ ಹಿಂದೆಯಷ್ಟೇ ಈ ಸಂಬಂಧ ಫೋರ್ಬ್ಸ್ ಸಲಹೆಗಾರರು ವರದಿಯೊಂದನ್ನು ಹೊರತಂದಿದ್ದಾರೆ. ಈ ವರದಿಯ ಆಧಾರದ ಮೇಲೆ, ಇಂದು ನಾವು ನಿಮಗೆ ಭೇಟಿ ನೀಡಬೇಕಾದ 10 ಸುರಕ್ಷಿತ ಮತ್ತು 10 ಅತ್ಯಂತ ಅಸುರಕ್ಷಿತ ನಗರಗಳ ಬಗ್ಗೆ ಹೇಳುತ್ತೇವೆ. ನಾವು ಮೊದಲು ನಿಮಗೆ 10 ಅತ್ಯಂತ ಅಸುರಕ್ಷಿತ ನಗರಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಮೊದಲ ಅಪಾಯಕಾರಿ ನಗರ
ವೆನೆಜುವೆಲಾದ ಕ್ಯಾರಕಾಸ್ ವಿಶ್ವದ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಸೇರಿದೆ. ಈ ನಗರವು 2017 ರಲ್ಲಿ ಮೊದಲ ಬಾರಿಗೆ ಅಪಾಯಕಾರಿ ರಾಜಧಾನಿ ಎಂಬ ಹೆಸರನ್ನು ಪಡೆದುಕೊಂಡಿದೆ. ಇಂದು ಕೂಡ ಕ್ಯಾರಕಾಸ್ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿನ ಹಿಂಸಾಚಾರಕ್ಕೆ ಬಡತನ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವುದೇ ಕಾರಣ ಎಂದು ನಂಬಲಾಗಿದೆ. ಇದನ್ನು ದರೋಡೆಕೋರರ ನಗರ ಎಂದೂ ಕರೆಯುತ್ತಾರೆ. ಇಲ್ಲಿ ಪ್ರತಿದಿನ ಅಪರಾಧಗಳು ನಡೆಯುತ್ತಿವೆ. ವಿಶೇಷವಾಗಿ ನೀವು ಪ್ರವಾಸಿಗರಾಗಿದ್ದರೆ, ನಿಮ್ಮನ್ನು ಸುಲಭವಾಗಿ ಇಲ್ಲಿ ದರೋಡೆ ಮಾಡಬಹುದು.
ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನದ ಕರಾಚಿ ನಗರವು ವಿಶ್ವದ ಅತ್ಯಂತ ಅಸುರಕ್ಷಿತ ಸ್ಥಳಗಳಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲೂ ಅಪರಾಧ ಉತ್ತುಂಗದಲ್ಲಿದೆ. ನೀವು ಪಾಕಿಸ್ತಾನಕ್ಕೆ ಭೇಟಿ ನೀಡಲು ಬಯಸಿದರೆ ಈ ನಗರದಿಂದ ದೂರವಿರಿ. ಬರ್ಮಾದ ಯಾಂಗೊನ್ ನಗರ ಮೂರನೇ ಸ್ಥಾನದಲ್ಲಿದೆ. ಇಲ್ಲಿಯೂ ಕಳೆದ ಕೆಲವು ವರ್ಷಗಳಿಂದ ಪ್ರವಾಸಿಗರ ಮೇಲಿನ ಅಪರಾಧ ಪ್ರಕರಣಗಳು ಹೆಚ್ಚಿವೆ. ನೈಜೀರಿಯಾದ ಲಾಗೋಸ್ ನಗರವೂ ಈ ಪಟ್ಟಿಯಲ್ಲಿ ಬರುತ್ತದೆ.

ಈ ನಗರದಲ್ಲಿ ಲೂಟಿ, ಸುಲಿಗೆ ಮತ್ತು ವಂಚನೆ ಸಾಮಾನ್ಯವಾಗಿದೆ. ಇದು ಕೂಡ ಪ್ರವಾಸಿಗರಿಗೆ ಸುರಕ್ಷಿತವಲ್ಲ. ವಿಶೇಷವಾಗಿ ನೀವು ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಈ ನಗರಗಳಿಂದ ಸಂಪೂರ್ಣವಾಗಿ ದೂರವಿರಿ. ಇದರ ನಂತರ ಮನಿಲಾ, ಢಾಕಾ, ಬೊಗೋಟಾ, ಕೈರೋ, ಮೆಕ್ಸಿಕೋ ಸಿಟಿ ಮತ್ತು ಈಕ್ವೆಡಾರ್‌ನ ಕ್ವಿಟೊ ನಗರ ಬರುತ್ತದೆ. ನೀವು ಈ ನಗರಗಳಿಗೆ ಭೇಟಿ ನೀಡಲು ಹೋದರೆ 24 ಗಂಟೆಗಳ ಕಾಲ ಎಚ್ಚರವಾಗಿರಬೇಕು. ಮೇಲ್ಕಂಡ ನಗರಗಳು ಪ್ರವಾಸಿಗರಿಗೆ ಅಷ್ಟು ಸುರಕ್ಷಿತವಲ್ಲ.
ಸುರಕ್ಷಿತ ನಗರಗಳು ಯಾವುವು?
ಹಾಗಾದರೆ ನಾವು ಪ್ರವಾಸಿಗರಿಗೆ ಸುರಕ್ಷಿತವಾದ ನಗರಗಳು ಯಾವುವು ಎಂದು ನೋಡೋಣ... ಈ ಪಟ್ಟಿಯಲ್ಲಿ ಬರುವ ಮೊದಲ ಹೆಸರು ಸಿಂಗಾಪುರ. ಇನ್ನೊಂದು ಹೆಸರು ಜಪಾನ್‌ನ ಟೋಕಿಯೋ. ಹಾಗೆಯೇ ಮೂರನೇ ಹೆಸರು ಕೆನಡಾದ ಟೊರೊಂಟೊ. ಇದರ ನಂತರ ಆಸ್ಟ್ರೇಲಿಯಾದ ಸಿಡ್ನಿ, ನಂತರ ಸ್ವಿಟ್ಜರ್ಲೆಂಡ್‌ನ ಜ್ಯೂರಿಚ್ ಬರುತ್ತದೆ. ಇದರ ನಂತರ, ಡೆನ್ಮಾರ್ಕ್‌ನ ಕೋಪನ್‌ಹೇಗನ್, ದಕ್ಷಿಣ ಕೊರಿಯಾದ ಸಿಯೋಲ್, ಜಪಾನ್‌ನ ಒಸಾಕಾ, ಆಸ್ಟ್ರೇಲಿಯಾದ ಮೆಲ್ಬೋರ್ನ್ ಮತ್ತು ನೆದರ್‌ಲ್ಯಾಂಡ್‌ನ ಆಮ್ಸ್ಟರ್‌ಡ್ಯಾಮ್. ಈ ನಗರಗಳು ಎಲ್ಲಾ ರೀತಿಯ ಪ್ರಯಾಣಿಕರಿಗೆ ಸುರಕ್ಷಿತವಾಗಿದೆ. ಇಲ್ಲಿ ನೀವು ಸುಲಭವಾಗಿ ಸುತ್ತಾಡಬಹುದು. ಅಷ್ಟೇ ಅಲ್ಲ, ನೀವು ಬಯಸಿದರೆ, ಏಕಾಂಗಿಯಾಗಿ ಪ್ರಯಾಣಿಸಬಹುದು.


Click it and Unblock the Notifications















