ಮಾಧವ ನ್ಯಾಷನಲ್ ಪಾರ್ಕ್ ಒಂದು ದಟ್ಟ ಅರಣ್ಯ ಪ್ರದೇಶ. ಈ ರಾಷ್ಟ್ರೀಯ ವನವು ಅಂದಿನ ಕಾಲದಲ್ಲಿ ಅಕ್ಬರ್ ಮುಂತಾದ ದೊರೆಗಳು ಬೇಟೆಗಾಗಿ ಬರುತ್ತಿದ್ದ ಅರಣ್ಯಪ್ರದೇಶ. ಒಂದು ಬಾರಿ ಅಕ್ಬರ್ ದೊರೆ ಇಡೀ ಆನೆಗಳ ಹಿಂಡನ್ನೇ ತನ್ನ ಸೈನ್ಯಕ್ಕಾಗಿ ಮುತ್ತಿಗೆ ಹಾಕಿದ್ದನಂತೆ. ಸುಮಾರು 354 ಚದರ ಕಿ.ಮೀ. ವಿಸ್ತಾರ ಹೊಂದಿದ ಈ ನ್ಯಾಷನಲ್ ಪಾರ್ಕ್ ಸಾಲುಬೆಟ್ಟಗಳನ್ನು, ಸಮತಟ್ಟಾದ ಹುಲ್ಲುಗಾವಲುಗಳನ್ನು, ವಿವಿಧಬಗೆಯ ವನ್ಯಜೀವಿಗಳನ್ನು, ಸುಂದರವಾದ ಕೆರೆಗಳನ್ನು ಹೊಂದಿದೆ.
ಇಲ್ಲಿ ಬರುವ ವನ್ಯಜೀವಿ ಪ್ರೇಮಿಗಳಿಗೆ ಇಲ್ಲಿನ ವಾತಾವರಣ ಸ್ವರ್ಗಸದೃಶವಾಗಿದೆ. ಸ್ವಾರ್ಥ ಮಾನವನ ಹಸ್ತಕ್ಷೇಪವಿಲ್ಲದಿರುವುದರಿಂದ ಈ ವನ್ಯಸಿರಿಯು ನಿಷ್ಕಳಂಕಿತಳಾಗಿ ಕಂಗೊಳಿಸುತ್ತಾಳೆ. ಇದೇ ಜಾಗದಲ್ಲಿ ಸಿಂಧಿಯಾ ದೊರೆ ಜೀವಾಜಿರಾವ್ ಸಿಂಧಿಯಾ 'ಜಾರ್ಜ್ ಕ್ಯಾಸಲ್'ಅನ್ನು ಕಟ್ಟಿಸಿದ್ದಾನೆ. ಸ್ವಾತಂತ್ರ್ಯಪೂರ್ವದಲ್ಲಿ ಕಟ್ಟಿಸಿದ ಕಟ್ಟಡವು ಪಾಶ್ಚಾತ್ಯ ಕಲೆಯನ್ನು ಹೊಂದಿದೆ. ಇದೇ ಸ್ಥಳದಿಂದ ಸೂರ್ಯಾಸ್ತದ ಸುಂದರ ನೋಟವನ್ನು ನೋಡಲೇಬೇಕು. ಅತ್ಯಂತ ಸಾಹಸಿ ಪ್ರವಾಸಿಗರಿಗೆ ಇಲ್ಲಿನ ಸಖ್ಯಸಾಗರ ಬೋಟ್ ಕ್ಲಬ್ ಮೊಸಳೆಗಳನ್ನು ತುಂಬಾ ಹತ್ತಿರದಿಂದ ವೀಕ್ಷಿಸಲು ಅಣಿಮಾಡಿಕೊಡುತ್ತದೆ.