ಡಿಯೋರಿಯಾ ತಾಲ್ ರುದ್ರಪ್ರಯಾಗದಿಂದ 49 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಇದು ಸಮೃದ್ಧ ಹಸಿರು ಕಾಡುಗಳಿಂದ ಆವೃತವಾಗಿರುವ ಮೋಡಿಮಾಡುವಂತಹ ಕೆರೆ. ಈ ಸರೋವರವು ಗಂಗೋತ್ರಿ, ಬದರಿನಾಥ್, ಕೇದಾರ್ನಾಥ್, ಯಮುನೋತ್ರಿ ಮತ್ತು ನೀಲಕಂಠ ಶಿಖರಗಳನ್ನು ಒಳಗೊಂಡಿರುವ ಚೌಖಂಬಾ ಶ್ರೇಣಿಯ ಸ್ಪಷ್ಟ ಪ್ರತಿಬಿಂಬವನ್ನು ಒದಗಿಸುತ್ತದೆ. ಸಮುದ್ರ ಮಟ್ಟದಿಂದ 2438 ಮೀಟರ್ ಎತ್ತರದಲ್ಲಿರುವ ಈ ಸರೋವರ ಚುಪ್ತಾ-ಉಖಿಮಠ್ ರಸ್ತೆಯಿಂದ 2 ಕಿ.ಮಿ ದೂರದಲ್ಲಿದೆ. ಈ ಸರೋವರದಲ್ಲಿ ಪಕ್ಷಿ ವೀಕ್ಷಣೆ, ದೋಣಿ ವಿಹಾರ ಮತ್ತು ಆಂಗ್ಲಿಂಗ್ ಚಟುವಟಿಕೆಗಳಿಗೆ ಅವಕಾಶ ಒದಗಿಸಲಾಗುತ್ತದೆ.
ರಾತ್ರಿಯ ಕ್ಯಾಂಪಿಂಗ್ ಮತ್ತು ಚಾರಣಗಳು ಇಲ್ಲಿ ಪ್ರವಾಸಿಗರ ವಲಯದಲ್ಲಿ ಜನಪ್ರಿಯತೆಯನ್ನು ಪಡೆದಿರುವ ಚಟುವಟಿಕೆಗಳು. ಚಾರಣಿಗರು ಸಾಮಾನ್ಯವಾಗಿ ಚೊಪ್ತಾದಿಂದ ಎತ್ತರ ಪ್ರದೇಶವಾದ ಡಿಯೋರಿಯಾ ತಾಲ್ ಮೂಲಕ ಹತ್ತಿರದ ತುಂಗಾನಾಥ್ ಮತ್ತು ಚಂದ್ರಶೀಲಾ ಶಿಖರಗಳ ಮೂಲಕ ಚಾರಣ ಮಾಡಬಹುದು. ದಂತಕಥೆಗಳ ಪ್ರಕಾರ, ಹಿಂದೂ ದೇವತೆಗಳು ಈ ಸರೋವರದಲ್ಲಿ ಸ್ನಾನ ಮಾಡುತ್ತಿದ್ದರು ಹಾಗು ಇದೇ ಸ್ಥಳದಲ್ಲಿ ಯಕ್ಷನು ಅಜ್ಞಾತವಾಸದಲ್ಲಿದ್ದ ಪಾಂಡವರಿಗೆ ನಾಲ್ಕು ಪ್ರಶ್ಣೆಗಳನ್ನು ಕೇಳಿದ್ದನು. ಹಿಂದೂ ಪುರಾಣಗಳ ಪ್ರಕಾರ 'ಇಂದ್ರ ಸರೋವರ' ಎಂದು ಈ ಸರೋವರಕ್ಕೆ ಹೆಸರು.


Click it and Unblock the Notifications