ಶ್ರೀ ಕೃಷ್ಣನ ಸುತ್ತಲು ಮಹಾಭಾರತ ಯುದ್ಧವು ಸುತ್ತುತ್ತದೆ. ಈತನು ಮಹಾಭಾರತದ ಸೂತ್ರಧಾರಿ. ಎಲ್ಲಾ ಪಾತ್ರಗಳನ್ನು ತನ್ನಿಷ್ಟಕ್ಕೆ ತಕ್ಕಂತೆ ಕುಣಿಸುವ ಈ ಕಪಟ ನಾಟಕ ಸೂತ್ರಧಾರಿಗಾಗಿ ನಿರ್ಮಾಣಗೊಂಡಿದೆ ಈ ವಸ್ತು ಸಂಗ್ರಹಾಲಯ. ಮಹಾಯೋಧರು ಮತ್ತು ತಾಪಸಿಗಳಾದ ಕರ್ಣ, ದ್ರೋಣಾಚಾರ್ಯ ಮತ್ತು ಭೀಷ್ಮ ಪಿತಾಮಹರಿಗೆ ಶ್ರೀಕೃಷ್ಣನ ಶಕ್ತಿಯ ಪರಿಚಯವಿತ್ತು. ಅವರು ಇದನ್ನು ಅರಿತು ಸಹ ತಮ್ಮ ಸದ್ಗತಿಗಾಗಿ ಕೃಷ್ಣ ಕುಣಿಸಿದಂತೆ ಕುಣಿದರು.
ಈ ವಸ್ತುಸಂಗ್ರಹಾಲಯವನ್ನು 1987ರಲ್ಲಿ ಕುರುಕ್ಷೇತ್ರ ಅಭಿವೃದ್ಧಿ ನಿಗಮವು ಸ್ಥಾಪಿಸಿತು. ನಂತರ ಇದನ್ನು ಇಲ್ಲಿಯ ಮೊದಲನೆ ಬ್ಲಾಕಿಗೆ ಸ್ಥಳಾಂತರಿಸಲಾಯಿತು. ಆಗ ಇದನ್ನು ಅಂದಿನ ರಾಷ್ಟ್ರಪತಿ ಆರ್. ವೆಂಕಟರಾಮನ್ ಉದ್ಘಾಟನೆ ಮಾಡಿದರು. ನಂತರ ಇನ್ನಿತರ ಎರಡು ಬ್ಲಾಕ್‍ಗಳು ಮತ್ತು ಮಲ್ಟಿಮೀಡಿಯಾ ಮಹಾಭಾರತ ಹಾಗು ಗೀತಾ ಗ್ಯಾಲರಿಯನ್ನು 2012 ಫೆಬ್ರವರಿಯಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‍ರವರು ಉದ್ಘಾಟನೆ ಮಾಡಿದರು.
ಈ ವಸ್ತು ಸಂಗ್ರಹಾಲಯವು ಶ್ರೀಕೃಷ್ಣನಲ್ಲಿದ್ದ, ರಾಜಕೀಯ ಮುತ್ಸದಿ, ತತ್ವಙ್ಞಾನಿ, ಧಾರ್ಮಿಕ ಗುರು, ಪ್ರೇಮಿ ಮುಂತಾದ ಮುಖಗಳನ್ನು ಸಮರ್ಥವಾಗಿ ಜನರಿಗೆ ತಿಳಿಸಿಕೊಡುತ್ತದೆ. ಇಲ್ಲಿ ಶ್ರೀ ಕೃಷ್ಣನಿಗೆ ಸಂಬಂಧಿಸಿದ ಕಲಾವಸ್ತುಗಳು, ಶಿಲ್ಪಗಳು, ವರ್ಣಚಿತ್ರಗಳು, ಹಸ್ತ ಪ್ರತಿಗಳು, ಸ್ಮರಣಿಕೆಗಳು ಮತ್ತು ಇನ್ನಿತರ ವಸ್ತುಗಳನ್ನು ಪ್ರದರ್ಶಿಸುತ್ತಿದೆ.


Click it and Unblock the Notifications