ಗ್ರೀನ್ ಪಾರ್ಕ್ ಅನ್ನು ಗ್ರೀನ್ ಪಾರ್ಕ್ ಸ್ಟೇಡಿಯಂ ಅಂತಲೂ ಕರೆಯುತ್ತಾರೆ. ಇದು ಗಂಗಾನದಿಯ ತಟದ ಸಮೀಪದಲ್ಲಿ ಉಪಸ್ಥಿತವಿದೆ. ಸ್ವಾತಂತ್ರ್ಯಪೂರ್ವದಲ್ಲಿ ಮ್ಯಾಡಮ್ ಗ್ರೀನ್ ಎಂಬ ಒಬ್ಬ ಆಂಗ್ಲ ಮಹಿಳೆ ಈ ಪಾರ್ಕಿನಲ್ಲಿ ಕುದುರೆ ಸವಾರಿ ಅಭ್ಯಾಸ ಮಾಡುತ್ತಿದ್ದಳಂತೆ. ಹೀಗಾಗಿ ಈ ಪಾರ್ಕಿಗೆ ಆಕೆಯ ಹೆಸರನ್ನೇ ಇರಿಸಲಾಗಿದೆ.
ಉತ್ತರಪ್ರದೇಶದ ಕ್ರಿಕೆಟ್ ತಂಡ ಈ ಸ್ಟೇಡಿಯಂನಲ್ಲಿ ಅಭ್ಯಾಸ ಮಾಡುತ್ತಿರುತ್ತದೆ. ಈ ಬಹುಪಯೋಗಿ ಸ್ಟೇಡಿಯಂ ಸುಮಾರು 60 ಸಾವಿರ ವೀಕ್ಷಕರನ್ನು ಕೂರಿಸಬಲ್ಲಷ್ಟು ದೊಡ್ಡದಾಗಿದೆ. ಇದು ಫ್ಲಡ್ ಲೈಟಿಂಗ್ ಸೌಲಭ್ಯವನ್ನು ಕೂಡ ಹೊಂದಿದೆ. ಈ ಪಾರ್ಕ್ ಅನೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಸಾಕ್ಷಿಯಾಗಿದೆ. ಸ್ಟೇಡಿಯಂನ ಇನ್ನೊಂದು ಮುಖ್ಯವಾದ ಸೌಲಭ್ಯವೆಂದರೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಆಸನಗಳನ್ನು ಹೊಂದಿರುವ ಸ್ಟುಡೆಂಟ್ ಗ್ಯಾಲರಿ. ಇದು ವಿಡಿಯೋ ಸ್ಕ್ರೀನ್ ಮತ್ತು ವಿಶ್ವದ ಅತಿ ದೊಡ್ಡ ಕರನಿರ್ವಹಣಾ ಸ್ಕೋರ್ ಬೋರ್ಡ್ ಹೊಂದಿದೆ.
ಇದೇ ಸ್ಟೇಡಿಯಂನಲ್ಲಿ 1959ನೇ ಇಸ್ವಿ ಡಿಸೆಂಬರ್ ತಿಂಗಳಲ್ಲಿ ಅಜೇಯವೆನಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಭಾರತ ತಂಡದವರು ಸದೆಬಡಿಸಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಸಿದ್ಧ ಆಟಗಾರರಾದ ಸುಭಾಷ್ ಗುಪ್ತಾ, ಜಸುಭಾಯ್ ಪಟೇಲ್, ಮಾಲ್ಕಂ ಮಾರ್ಷಲ್, ಸುನೀಲ್ ಗಾವಸ್ಕರ್, ಗುಂಡಪ್ಪ ವಿಶ್ವನಾಥ್, ಕಪಿಲ್ ದೇವ್, ಅನಿಲ್ ಕುಂಬ್ಳೆ ಮತ್ತು ಮೊಹಮ್ಮದ್ ಅಜರುದ್ದಿನ್ ಇಲ್ಲಿ ಅಪೂರ್ವ ಪ್ರದರ್ಶನಗಳನ್ನು ನೀಡಿ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದಾರೆ.


Click it and Unblock the Notifications