ಜುಬ್ಬಲ್

ಪಬ್ಬಾರ್ ನದಿ ದಂಡೆಯಲ್ಲಿರುವ ಜುಬ್ಬಲ್ ಪ್ರವಾಸ ಪ್ರಿಯರನ್ನು ಕೈ ಬಿಸಿ ಕರೆಯುತ್ತದೆ. ಇದು ಸಮುದ್ರ ಮಟ್ಟದಿಂದ 1901 ಮೀಟರ್ ಎತ್ತರದಲ್ಲಿದೆ. 288 ಚದರ್ ಮೈಲು ವಿಸ್ತೀರ್ಣ ಹೊಂದಿರುವ ಈ ಪ್ರದೇಶ ಅಪರೂಪದ ಭೂದೃಶ್ಯಗಳಿಂದಾಗಿ ಅನನ್ಯ ನೋಟದ ಅನುಭವವನ್ನು ನೀಡುತ್ತದೆ. 1814 ರಿಂದ 1816 ರ ವರೆಗೆ ನಡೆದ ಗುರ್ಖಾ ಯುದ್ಧದ ಬಳಿಕ ಜುಬ್ಬಾಲ್ ಸ್ವಾತಂತ್ರ್ಯ ಪಡೆಯಿತು. ಲಭ್ಯವಿರುವ ದಾಖಲೆಗಳ ಪ್ರಕಾರ, ರಾಜಾ ಕರಮ್ಚಂದ್ ಈ ಪಟ್ಟಣವನ್ನು ಸ್ಥಾಪಿಸಿದ. 1948 ರ ಎಪ್ರಿಲ್ 15 ರಂದು ರಾಜಾ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಈ ಪ್ರದೇಶ ಭಾರತದ ಆಡಳಿತಕ್ಕೊಳಪಟ್ಟಿತು.

ಇಳಿಜಾರು, ಕಣಿವೆ, ಸಮೃದ್ಧ ಹಸಿರು ಸೇಬು ಹಣ್ಣಿನ ತೋಟಗಳು ಮತ್ತು ದಟ್ಟವಾದ ದೇವದಾರು ಕಾಡುಗಳಿಂದ ಜುಬ್ಬಲ್ ಆವೃತವಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ತಾಣಗಳ ಪೈಕಿ ಇಲ್ಲಿನ ಚಂದ್ರನಹಾನ್ ಸರೋವರ ಮತ್ತು ಜುಬ್ಬಲ್ ಅರಮನೆಗಳು ಪ್ರಮುಖವಾಗಿವೆ. ಚಂದ್ರನಹಾನ್ ಸರೋವರ ಪಬ್ಬಾರ್ ನದಿಯ ಉಗಮ ಸ್ಥಾನವೂ ಆಗಿದ್ದು, ಇಲ್ಲಿ ಮೀನುಗಾರಿಕೆ ನಡೆಸುವುದಕ್ಕಾಗಿಯೇ ಹೆಚ್ಚಿನ ಪ್ರವಾಸಿಗರು ಬರುತ್ತಾರೆ.

ಹಿಂದಿನ ಕಾಲದ ಆಡಳಿತಗಾರರ ಕಾರ್ಯವೈಖರಿ ಹಾಗೂ ಸಾಧನೆಗಳನ್ನು ತಿಳಿಯಲು ಇಲ್ಲಿ ವಿಫುಲವಾದ ಅವಕಾಶಗಳುಂಟು. ಆ ಕಾಲದ ಪರಂಪರೆಯ ಉಳಿದ ಭಾಗಗಳನ್ನು ಇಲ್ಲಿ ವೀಕ್ಷಿಸಬಹುದಾಗಿದ್ದಲ್ಲದೇ ಚೀನೀ ವಾಸ್ತುಶಿಲ್ಪದ ಮಾದರಿಗಳೂ ಇಲ್ಲಿವೆ. ರಾಣಾನ ನೆಲೆ ಎಂದು ಹೆಸರಾಗಿರುವ ಈ ಪ್ರದೇಶಕ್ಕೆ ನೀವೊಮ್ಮೆ ಭೇಟಿ ನೀಡಬೇಕೆಂಬುದು ನಮ್ಮ ಸಲಹೆ.

ಜುಬ್ಬಲ್ ನಲ್ಲಿ ಭೇಟಿ ನೀಡಬಹುದಾದ ಪ್ರಮುಖ ಆಕರ್ಷಣೆಗಳು1) ಚಂದರ್ ನಹಾನ್ ಸರೋವರ 2) ಜುಬ್ಬಲ್ ಅರಮನೆ 3) ಖಾರಾ ಪತ್ಥರ್ 4) ಹತ್ಕೇಶ್ವರಿ ದೇವಸ್ಥಾನ 5) ಸೀಮಾ

ಜುಬ್ಬಲ್ ನ ಹೆಸರಾಂತ ಪ್ರವಾಸಿ ತಾಣಗಳ ಪೈಕಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದು ಇಲ್ಲಿನ ಹತ್ಕೇಶ್ವರಿ ದೇವಸ್ಥಾನ. ವನವಾಸದಲ್ಲಿದ್ದ ಪಾಂಡವರು ಈ ದೇವಸ್ಥಾನವನ್ನು ಕಟ್ಟಿದರು ಎಂಬ ದಂತಕಥೆ ಚಾಲ್ತಿಯಲ್ಲಿದೆ. ಆದರೆ ಇತಿಹಾಸ ತಜ್ಞರು ಈ ನಂಬಿಕೆಯನ್ನು ನಿರಾಕರಿಸಿದ್ದು ಕ್ರಿ.ಶ 800 ಮತ್ತು 1000 ನೇ ಇಸ್ವಿಯ ನಡುವಿನ ಅವಧಿಯಲ್ಲಿ ಈ ದೇವಾಲಯ ನಿರ್ಮಾಣವಾಯಿತು ಎಂದು ನಂಬಿದ್ದಾರೆ. 19 ನೇ ಶತಮಾನದಲ್ಲಿ ಜುಬ್ಬಲ್ ನಲ್ಲಿ ಆಳ್ವಿಕೆ ನಡೆಸುತ್ತಿದ್ದ ರಾಜರು ಈ ದೇವಾಲಯದ ಜೀರ್ಣೊದ್ಧಾರ ಕಾರ್ಯ ಕೈಗೊಂಡಿದ್ದಾಗಿಯೂ ದಾಖಲೆಗಳಿವೆ. ಪ್ರತಿ ವರ್ಷದ ಜುಲೈ ತಿಂಗಳಲ್ಲಿ ನಡೆಯುವ 'ರಾಂಪುರ ಜಾತ್ರೆ' ಮತ್ತು 'ಹೇಮಿಸ್' ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಹೇಮಿಸ್ ಹಬ್ಬವನ್ನು ಬೌದ್ಧ ಗುರು ಪದ್ಮಸಂಭವನ ಸ್ಮರಣಾರ್ಥ ಆಚರಿಸಲಾಗುತ್ತದೆ.

ಈ ಪ್ರದೇಶಕ್ಕೆ ತೆರಳಲು ಉತ್ತಮ ಸಾರಿಗೆ ಸಂಪರ್ಕವಿದೆ. ರೈಲು, ರಸ್ತೆ ಹಾಗೂ ವಾಯು ಮಾರ್ಗಗಳ ಮೂಲಕ ಜುಬ್ಬಲ್ ಅನ್ನು ತಲುಪಬಹುದಾಗಿದೆ. ಚಳಿಗಾಲ ಮತ್ತು ವಸಂತಕಾಲ ಆರಾಮದಾಯಕ ಹವಾಮಾನ ಹೊಂದಿದ್ದು ಜುಬ್ಬಲ್ ನಲ್ಲಿ ಸುತ್ತಾಡಲು ಅತ್ಯುತ್ತಮ ಅವಧಿಯಾಗಿದೆ.

Please Wait while comments are loading...