ಶೌಚಾಲಯದ ವಸ್ತು ಸಂಗ್ರಹಾಲಯದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಹಾಗಾದರೆ, ಶೌಚಾಲಯದ ವಿಕಸನದ ಹಂತಗಳನ್ನು ಹೊಂದಿರುವ ಅಪರೂಪದ ವಸ್ತುಸಂಗ್ರಹಾಲಯವೊಂದು ದೆಹಲಿಯಲ್ಲಿದೆ ನೋಡಿ. ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಯು ಈ ವಸ್ತುಸಂಗ್ರಹಾಲಯವನ್ನು ಹೊಂದಿದೆ. ಶೌಚಾಲಯದ ಇತಿಹಾಸ ಹಾಗೂ ಪರಿಸರ ಪ್ರಜ್ಞೆಯನ್ನು ಸಾರ್ವಜನಿಕರಲ್ಲಿ ಮೂಡಿಸುವುದೇ ಸಂಸ್ಥೆಯ ಉದ್ದೇಶವಾಗಿದೆ.
ಈ ವಸ್ತುಸಂಗ್ರಹಾಲಯದಲ್ಲಿ ಕಾಲಘಟ್ಟದಲ್ಲಿ ಮರೆಯಾಗಿಹೋದ ಅನೇಕ ಶೌಚಾಲಯದ ಮಾದರಿಗಳು, ವಸ್ತುಗಳು, ಚಿತ್ರಗಳು ಹಾಗೂ ಅನೇಕ ಸತ್ಯಾಂಶಗಳ ಅನಾವರಣ ಮಾಡಲಾಗಿದೆ. ಕ್ರಿ.ಪೂ.2500 ರಿಂದ ಇಂದಿನ ಆಧುನಿಕ ಯುಗದವರೆಗೂ ಇರುವ ಟಾಯ್ಲೆಟ್ ಮಾದರಿಗಳು, ಚೇಂಬರ್ ಫಿಟ್ಸ್ ಹಾಗೂ ಏಕಾಂತವಾದ ಸ್ಥಳಗಳ ಬಗ್ಗೆ ಇಲ್ಲಿ ವಿವಿರವಾದ ವಿಚಾರಗಳ ಸಂಗ್ರಹವಿದೆ.
ಈ ವಸ್ತುಸಂಗ್ರಹಾಲಯದ ಸಂಸ್ಥಾಪಕ ಡಾ.ಬಿದೇಶ್ವರ್ ಪಾಠಕ್ ಅವರು, ಶೌಚಾಲಯದ ವಿನ್ಯಾಸ, ಅಭಿವೃದ್ಧಿ, ಒಳಚರಂಡಿ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳು ಹಾಗೂ ಗ್ರಾಮೀಣರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇದನ್ನು ರೂಪಿಸಿದ್ದಾರೆ.
ಬೆಳಗ್ಗೆ 10:30 ರಿಂದ ಸಂಜೆ 5:30 ರ ವರೆಗೆ ತೆರೆದಿರುವ ಈ ವಸ್ತುಸಂಗ್ರಹಾಲಯಕ್ಕೆ ಪ್ರವೇಶ ಶುಲ್ಕ ಇಲ್ಲ. ಆದರೆ ಭಾನುವಾರದಂದು ವಸ್ತುಸಂಗ್ರಹಾಲಯಕ್ಕೆ ರಜೆಯಿರುತ್ತದೆ.