ಪೆಂಚ್ : ಸಸ್ಯ ಮತ್ತು ಪ್ರಾಣಿಗಳ ಅದ್ಭುತ ನೆಲೆ

ಪೆಂಚ್ ಪ್ರವಾಸೋದ್ಯಮವು, ಪೆಂಚ್ ರಾಷ್ಟ್ರೀಯ ಉದ್ಯಾನ ಅಥವಾ ಪೆಂಚ್ ಹುಲಿ ಅಭಯಾರಣ್ಯದಿಂದಾಗಿ ಹೆಚ್ಚು ಪ್ರಸಿದ್ಧವಾಗಿದೆ. ಇದು ಮಧ್ಯ ಪ್ರದೇಶ ರಾಜ್ಯದ ದಕ್ಷಿಣದ ಗಡಿಯಲ್ಲಿ ನೆಲೆಸಿದೆ. ಈ ರಾಷ್ಟ್ರೀಯ ಉದ್ಯಾನವು ಸಸ್ಯ ಹಾಗು ಪ್ರಾಣಿ ಸಂಪತ್ತಿನಿಂದಾಗಿ ಪ್ರಖ್ಯಾತಿ ಪಡೆದ ತಾಣ. ಜಾಮುನ್, ಟೀಕ್, ಲೆಂಡಿಯಾ, ಪಲಸ್, ಬಿಜಾ, ಮಹುವಾ, ಕುಸುಮ್, ಸೆಮಲ್, ಬಾಂಬೂ ಇಲ್ಲಿ ಕಂಡುಬರುವ ಅನೇಕ ಸಸ್ಯರಾಶಿಗಳಲ್ಲಿ ಕೆಲವು. ಇನ್ನು ಇಲ್ಲಿ ಕಾಣಸಿಗುವ ಕೆಲ ಪ್ರಾಣಿ ಪ್ರಭೇದಗಳೆಂದರೆ, ಲಂಗೂರ್, ಸಿವೆಟ್ಸ್, ಕರಡಿಗಳು, ಚಿರತೆಗಳು, ಹುಲಿಗಳು, ಸಾಂಬಾರಗಳು, ಕಾಡು ನಾಯಿಗಳು, ಕಾಡು ಹಂದಿಗಳು ಮತ್ತು ಜಿಂಕೆಗಳು.

ಪೆಂಚ್ ಕುರಿತು ಕಿರು ಇತಿಹಾಸ

ಈ ರಾಷ್ಟ್ರೀಯ ಉದ್ಯಾನವು ಅದ್ಭುತವಾದ ಇತಿಹಾಸವನ್ನು ಹೊಂದಿದೆ. ಈ ಸ್ಥಳದ ನೈಸರ್ಗಿಕ ಶ್ರೀಮಂತಿಕೆಯನ್ನು ಐನ್-ಐ-ಅಕ್ಬರಿ ಎನ್ನುವ ಪುಸ್ತಕದಲ್ಲಿ ಸುಂದರವಾಗಿ ವಿವರಿಸಲಾಗಿದೆ. ಇಷ್ಟೆ ಅಲ್ಲ, ರುಡ್ಯಾರ್ಡ್ ಕಿಪ್ಲಿಂಗ್‍ರವರ ಪ್ರಸಿದ್ಧ "ದಿ ಜಂಗಲ್ ಬುಕ್" ನ ಹಿನ್ನಿಲೆಯು ಈ ಉದ್ಯಾನದ ವಾತಾವರಣದಿಂದ ಪ್ರೇರಿತವಾಗಿದೆ.

ಪೆಂಚ್ ಸುತ್ತಮುತ್ತ

ಪೆಂಚ್ ಸುತ್ತಮುತ್ತಲೂ ಕೆಲವು ಸುಂದರ ಆಕರ್ಷಣೀಯ ತಾಣಗಳನ್ನು ಕಾಣಬಹುದು. ಪಚಧರ್ ಹಳ್ಳಿ, ನಾವೆಗಾಂವ್ ರಾಷ್ಟ್ರೀಯ ಉದ್ಯಾನ, ಕಾನ್ಹಾ ರಾಷ್ಟ್ರೀಯ ಉದ್ಯಾನ, ನಾಗ್ಪುರ್ ಮತ್ತು ನಾಗ್ಜ಼ಿರಾ ಧಾಮಗಳು, ಪೆಂಚ್‍ಗೆ ಹತ್ತಿರದಲ್ಲಿರುವ ಪ್ರವಾಸಿ ಆಕರ್ಷಣೆಗಳು.

ಪೆಂಚ್ ತುರಿಯಾ ಗೇಟ್‍ನಿಂದ 18 ಕಿ.ಮೀ ದೂರದಲ್ಲಿ ನೆಲೆಸಿದೆ ಪಚಧರ್ ಎಂಬ ಪುಟ್ಟ ಹಳ್ಳಿ. ಈ ಹಳ್ಳಿಯು ಸುಂದರವಾದ ಗಡಿಗೆಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಈ ಗಡಿಗೆಗಳನ್ನು ತಯಾರಿಸುವುದೆ ಒಂದು ಚೆಂದದ ಕಲೆ. ಇಷ್ಟವಿದ್ದಲ್ಲಿ ಇಲ್ಲಿ ಕೆಲಕಾಲ ತಂಗಿ, ಈ ಸುಂದರ ಕಲೆಯ ಅನುಭೂತಿಯನ್ನು ಪಡೆಯಬಹುದು.  

ಪೆಂಚ್ ರಾಷ್ಟ್ರೀಯ ಉದ್ಯಾನದ ಸುತ್ತಲೂ, ಗೋಂಡ್ ಬುಡಕಟ್ಟಿನ ಸಂಸ್ಕೃತಿ-ಸಂಪ್ರದಾಯವನ್ನು ಅನಾವರಣಗೊಳಿಸುವ ಕೆಲವು ಹಳ್ಳಿಗಳನ್ನು ಕಾಣಬಹುದು.

ಮಹಾರಾಷ್ಟ್ರದ ನಾವೆಗಾಂವ್ ರಾಷ್ಟ್ರೀಯ ಉದ್ಯಾನ ಮತ್ತು ನಾಗ್ಜ಼ಿರಾ ಧಾಮಗಳೂ ಕೂಡ ಪೆಂಚ್ ಉದ್ಯಾನಕ್ಕೆ ಹತ್ತಿರದಲ್ಲಿವೆ. ಇನ್ನೊಂದು ರಾಷ್ಟ್ರೀಯ ಉದ್ಯಾನವಾದ ಕಾನ್ಹಾ ಉದ್ಯಾನವು ಕೂಡ ಪೆಂಚ್‍ನಿಂದ 198 ಕಿ.ಮೀ ದೂರದಲ್ಲಿದೆ.  

ಪೆಂಚ್ ರಾಷ್ಟ್ರೀಯ ಉದ್ಯಾನ ತಲುಪಲು ಸೂಕ್ತ ಸಮಯ

ಈ ರಾಷ್ಟ್ರೀಯ ಅಭಯಾರಣ್ಯಕ್ಕೆ ಅಕ್ಟೋಬರ್ 16 ರಿಂದ ಜೂನ್ 30 ರ ವರೆಗಿನ ಸಮಯದಲ್ಲಿ ಯಾವಾಗ ಬೇಕಾದರೂ ಭೇಟಿ ನೀಡಬಹುದು. ಮಳೆಗಾಲದ ಅವಧಿಯಾದ ಜುಲೈನಿಂದ ಸೆಪ್ಟಂಬರ್, ಈ ಉದ್ಯಾನವು ಮುಚ್ಚಲ್ಪಟ್ಟಿರುತ್ತದೆ. ಆದರೆ ಇದಕ್ಕೆ ಭೇಟಿ ನೀಡಲು ಪ್ರಶಸ್ತ ಸಮಯವೆಂದರೆ ಫೆಬ್ರುವರಿಯಿಂದ ಏಪ್ರಿಲ್ ಮಧ್ಯದ ಅವಧಿ. ಇದರೊಳಗೆ ಪ್ರವೇಶಿಸಲು ಸಮಯವನ್ನು ನಿಗದಿಪಡಿಸಲಾಗಿದ್ದು, ಆ ಸಮಯ ಈ ಕೆಳಗಿನಂತಿದೆ.

ಬೆಳಿಗ್ಗೆ: 6 ಘಂಟೆಯಿಂದ 10.30 ರ ವರೆಗೆ.

ಮಧ್ಯಾಹ್ನ: 3 ಘಂಟೆಯಿಂದ  ಸಂಜೆ 6 ರ ವರೆಗೆ.

ತಲುಪುವ ಬಗೆ

ಪ್ರವಾಸಿಗರು ಪೆಂಚ್ ರಾಷ್ಟ್ರೀಯ ಉದ್ಯಾನವನ್ನು ವಾಯುಮಾರ್ಗ, ರೈಲುಮಾರ್ಗ ಮತ್ತು ರಸ್ತೆಮಾರ್ಗಗಳ ಮೂಲಕ ಸರಳವಾಗಿ ತಲುಪಬಹುದು. ಮಧ್ಯಪ್ರದೇಶ ರಾಜ್ಯದಲ್ಲಿರುವ ಸಿಯೋನಿ ಎಂಬ ರೈಲು ನಿಲ್ದಾಣವು ಈ ರಾಷ್ಟ್ರೀಯ ಉದ್ಯಾನವನ್ನು ತಲುಪಲು ಇರುವ ಹತ್ತಿರದ ರೈಲು ನಿಲ್ದಾಣ. ನಾಗ್ಪೂರಿನ ಸೋನೆಗಾಂವ್ ವಾಯುನೆಲೆ ಇದಕ್ಕೆ ಹತ್ತಿರದ ವಿಮಾನ ನಿಲ್ದಾಣ. ಇನ್ನು ರಸ್ತೆ ಮೂಲಕ ಪ್ರಯಾಣಿಸುವ ಇಚ್ಛೆ ನಿಮ್ಮದಾಗಿದ್ದರೆ ಮಧ್ಯಪ್ರದೇಶದ ಸಿಯೋನಿ ನಗರದಿಂದ ಇಲ್ಲಿಗೆ ಬಸ್ಸಿನ ಮೂಲಕ ಇಲ್ಲವೆ ಖಾಸಗಿ ಟ್ಯಾಕ್ಸಿಗಳ ಮೂಲಕ ಇಲ್ಲಿಗೆ ತಲುಪಬಹುದು.

Please Wait while comments are loading...