ಹಡಿಂಬಾ ದೇಗುಲವು ಮನಾಲಿಯ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ದೇವಾಲಯಗಳಲ್ಲಿ ಒಂದೆನಿಸಿದೆ. ಇದು ಗುಹೆಯಲ್ಲಿ ನಿರ್ಮಾಣಗೊಂಡ ದೇವಾಲಯ. 1533 ರಲ್ಲಿ ನಿರ್ಮಿಸಿರುವ ಈ ದೇಗುಲ, ಹಿಂದೂ ದೈವ ಹಡಿಂಬನ ಸಹೋದರಿ ಹಡಿಂಬಾ ದೇವಿಗೆ ಮೀಸಲಾಗಿದೆ. ಇದು ಹಿಮಾಲಯದ ಪರ್ವತಗಳ ಬುಡದಲ್ಲಿದೆ ಎನ್ನುವುದು ಇನ್ನೊಂದು ವಿಶೇಷ. ದಟ್ಟವಾದ ಅರಣ್ಯದಿಂದ ದೇಗುಲ ಸುತ್ತುವರಿಯಲ್ಪಟ್ಟಿದೆ. ಬೃಹತ್ ಕಲ್ಲುಬಂಡೆಯನ್ನು ಕೆತ್ತಿ ಈ ದೇಗುಲ ನಿರ್ಮಿಸಲಾಗಿದೆ. ಭಕ್ತರು ಇದರೊಳಗೆ ತೆರಳಿ ಪೂಜೆ ಸಲ್ಲಿಸಿ ಬರುತ್ತಾರೆ. ಸ್ಥಳೀಯ ನಂಬಿಕೆ ಪ್ರಕಾರ, ಈ ದೇವಾಲಯವನ್ನು ನಿರ್ಮಿಸಿದ ಅರಸು ಇದರ ಶಿಲ್ಪಿಯ ಬಲಗೈನ್ನು ಕಡಿದಿದ್ದ ಎಂದು ಹೇಳುತ್ತಾರೆ. ಇದೇ ಮಾದರಿಯ ಇನ್ನಷ್ಟು ದೇವಾಲಯ ನಿರ್ಮಾಣ ಆಗದಿರಲಿ ಎಂಬ ಉದ್ದೇಶದಿಂದ ಹೀಗೆ ಕೈ ಕತ್ತರಿಸಿದ್ದ ಎಂದು ಹೇಳುತ್ತಾರೆ. ಗುರುಪೂಜೆ ಹೆಸರಿನ ಉತ್ಸವ ಇಲ್ಲಿ ಅದ್ದೂರಿಯಾಗಿ ನಡೆಯುತ್ತದೆ. ದೇವಿಯ ಆಶೀರ್ವಾದ ಪಡೆಯಲು ದೇವಿಯನ್ನು ದೇಗುಲದ ಉತ್ಸವ ಕುದುರೆ ಮೇಲೆ ಕೂರಿಸಿ ಮೆರವಣಿಗೆ ನಡೆಸಲಾಗುತ್ತದೆ. ಈ ಭಕ್ತರ ಉತ್ಸವ ಪ್ರತಿ ವರ್ಷ ಮೇ 14 ರಂದು ನಡೆಯುತ್ತದೆ. ದೇವತೆಯ ಹುಟ್ಟಿದ ದಿನ ಅದು ಎಂದು ಭಕ್ತರು ನಂಬಿದ್ದಾರೆ.


Click it and Unblock the Notifications