ಕೌತುಕಗಳ ತಾಣ ಮದನಪಲ್ಲಿ

ಆಂಧ್ರದ ಚಿತ್ತೂರು ಜಿಲ್ಲೆಯ ಸಣ್ಣ ಪುರಸಭಾ ಪಟ್ಟಣವಾದ ಮದನಪಲ್ಲಿ ಹೆಸರಿನ ಹುಟ್ಟಿಗೆ ಅದೆಷ್ಟೋ ಕಥೆಗಳಿವೆ. ಆದರೆ, ಪ್ರಾಚೀನ ಕಾಲದಲ್ಲಿ ಈ ಪ್ರದೇಶ ಮರ್ಯಾದಾ ರಾಮಣ್ಣ ಪಟ್ಟಣಮ್ ಎಂದು ಕರೆಯಲ್ಪಡುತ್ತಿತ್ತು ಎಂಬ ಕಥೆಗೆ ಪುಷ್ಠಿ ನೀಡುವ ಅಂಶಗಳೇ ಹೆಚ್ಚಿವೆ. 19 ನೇ ಶತಮಾನದ ಅಂತ್ಯದ ವೇಳೆಗೆ ಈ ಪ್ರದೇಶವನ್ನು ಮದನಪಲ್ಲಿ ಎಂದು ಮರುನಾಮಕರಣ ಮಾಡಲಾಗಿದೆ.

ದೇಶದ ಅತಿ ದೊಡ್ಡ ಆದಾಯ ವಿಭಾಗ ಪ್ರದೇಶವೆಂಬ ಹೆಗ್ಗಳಿಕೆ ಹೊಂದಿದೆ. ಚಿತ್ತೂರು ಜಿಲ್ಲೆಯ ಅರ್ಧದಷ್ಟು ವ್ಯಾಪ್ತಿ ವಿಸ್ತಾರವನ್ನು ಮದನಪಲ್ಲಿ ಹೊಂದಿದೆ. ಅಲ್ಲದೇ, ಮದನಪಲ್ಲಿ ಪ್ರಮುಖ ಕೃಷಿ ಚಟುವಟಿಕೆಗಳ ತಾಣವಾಗಿ ಅತಿ ವೇಗವಾಗಿ ಅಭಿವೃದ್ಧಿಯಾಗುತ್ತಿರುವುದು ಬಹಳಷ್ಟು ಮಂದಿಗೆ ತಿಳಿದಿಲ್ಲ. ಉತ್ತಮ ಗುಣಮಟ್ಟದ ತರಕಾರಿ, ಹಣ್ಣುಗಳನ್ನು ಬೆಳೆಯಲು ಮದನಪಲ್ಲಿಯ ಭೂಪ್ರದೇಶ ಸಮೃದ್ಧವಾಗಿದೆ. ಅದರಲ್ಲೂ, ಇಲ್ಲಿ ಬೆಳೆಯುವ ಟೋಮ್ಯಾಟೋಗಳ ರುಚಿಯೇ ಬೇರೆ.

ರೈಲು ನಿಲ್ದಾಣವನ್ನು ಹೊಂದಿರುವ ಮದನಪಲ್ಲಿ ಪಟ್ಟಣದಲ್ಲಿ ಹಾರ್ಸ್‌ಲಿ ಬೆಟ್ಟ ಪ್ರವಾಸಿಗರ ಪ್ರಮುಖ ಆಕರ್ಷಣೆ. ಆಂಧ್ರದ ಸುಡು ಬಿಸಿಲಿನಲ್ಲೂ ಹಿತಕರ ವಾತಾವರಣ ನೀಡುವುದೇ ಈ ಬೆಟ್ಟಗಳ ವೈಶಿಷ್ಟ್ಯ. ಹೀಗಾಗಿ, ಸ್ಥಳೀಯರಲ್ಲಿ ಹಾರ್ಸ್‌ಲಿ ಬೆಟ್ಟಗಳು ಬೇಸಿಗೆಯ ರೆಸಾರ್ಟ್ ಎಂದೇ ಚಿರಪರಿಚಿತ. ಆನಿ ಬೆಸೆಂಟ್ ನಂತರ ಬೇಸಂಟ್ ಥಿಯೋಸೊಫಿಕಲ್ ಕಾಲೇಜು ಮದನಪಲ್ಲಿಯ ಮತ್ತೊಂದು ವೈಶಿಷ್ಟ್ಯ.

ಜಿದ್ದು ಕೃಷ್ಣಮೂರ್ತಿಯ ಹುಟ್ಟೂರು

ಪ್ರಸಿದ್ಧ ತತ್ವಜ್ಞಾನಿ ಹಾಗೂ ರಿಷಿ ವ್ಯಾಲಿ ಶಾಲೆಯ ಸ್ಥಾಪಕ ಜಿದ್ದು ಕೃಷ್ಣಮೂರ್ತಿಯ ಹುಟ್ಟೂರು ಮದನಪಲ್ಲಿ. ಪ್ರದೇಶದಲ್ಲಿನ ಕೃಷ್ಣಮೂರ್ತಿ ಅವರ ನಿವಾಸ  ಸ್ಥಳೀಯರಿಗೆ ಒಂದು ರೀತಿ ಪವಿತ್ರ ಸ್ಥಳವಾಗಿ ಮಾರ್ಪಟ್ಟಿದೆ.

ರಾಷ್ಟ್ರೀಯ ಪ್ರಾಮುಖ್ಯತೆಯ ತಾಣ:

ಮೂಲಗಳ ಪ್ರಕಾರ, ನಮ್ಮ ರಾಷ್ಟ್ರಗೀತೆಯನ್ನು ರವೀಂದ್ರನಾಥ ಟಾಗೂರರು ಬಂಗಾಲಿ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದವಾದ ಮಾಡಿದ್ದು, ರಾಗ ಸಂಯೋಜಿಸಿದ್ದು ಇದೇ ಮದನಪಲ್ಲಿಯಲ್ಲಿ ಅಂತೆ.   

ಹವಾಮಾನ

ಚಳಿಗಾಲ ಹೊರತುಪಡಿಸಿದರೆ, ವರ್ಷದ ಬಹುತೇಕ ತಿಂಗಳುಗಳಲ್ಲಿ ಈ ಪ್ರದೇಶದ ವಾತಾವರಣ ಬಿಸಿಲು, ತಾಪಮಾನದಿಂದಲೇ ಕೂಡಿರುತ್ತದೆ. ಹೀಗಾಗಿ, ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತ. ಪಟ್ಟಣಕ್ಕೆ ಉತ್ತಮ ಸಂಪರ್ಕ ವ್ಯವಸ್ಥೆ ಇದ್ದು, ರಸ್ತೆ ಅಥವಾ ರೈಲುಮಾರ್ಗವಾಗಿ ತಲುಪಬಹುದು. ಮದನಪಲ್ಲಿಯಿಂದ ತಿರುಪತಿಗೆ 115 ಕಿ.ಮೀ, ಬೆಂಗಳೂರಿಗೆ 157 ಕಿ.ಮೀ, ಚಿತ್ತೂರಿಗೆ 93 ಕಿ.ಮೀ, ಪುಟ್ಟಪರ್ತಿಗೆ 125 ಕಿ.ಮೀ.ನಷ್ಟು ದೂರ ಪ್ರಯಾಣಿಸಬೇಕಾಗುತ್ತದೆ.

Please Wait while comments are loading...