ಈ ಹವಾ ಬೀಚ್ ಅನ್ನು ‘ಈವ್ಸ್ ಬೀಚ್’ ಎಂದು ಕೂಡ ಕರೆಯುತ್ತಾರೆ. ಏಕೆಂದರೆ ಈ ಹಿಂದಿನ ಕಾಲದಲ್ಲಿ ಯೂರೋಪಿಯನ್ ಮಹಿಳೆಯರು ಟಾಪ್ ಲೆಸ್ ಆಗಿ ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಬೀಚ್ ನಲ್ಲಿ ಮಲಗುವುದು ಹಾಗೂ ಕಡಲ ನೀರಿನಲ್ಲಿ ಜಳಕ ಮಾಡುವುದು ಚಾಲ್ತಿಯಲ್ಲಿತ್ತು. ಆದರೆ ಈ ಪದ್ಧತಿ ಈಗಂತೂ ಜಾರಿಯಲ್ಲಿಲ್ಲ. ಈ ಬೀಚ್ ನ ದೃಶ್ಯಗಳನ್ನು ನೋಡುವುದಕ್ಕೆ ಬಹಳ ಹಿತವೆನಿಸುತ್ತದೆ. ಅಲ್ಲಿನ ಹಚ್ಚ ಹಸಿರಿನಿಂದ ಕೂಡಿದ, ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಕಾಣಿಸುವ ತೆಂಗಿನ ಗರಿಗಳು ಹಾಗೂ ಸ್ಪಟಿಕದಂತೆ ಹೊಳೆಯುವ ಸ್ವಚ್ಚವಾದ ನೀಲ ನೀರು ನೋಡುಗರ ಮೈ ತಣಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಈ ಬೀಚ್ ನ ರಾತ್ರೆಯ ನೋಟ ಇನ್ನೂ ಸುಂದರ. ಚಂದ್ರನ ಪ್ರತಿಬಿಂಬ ನೀರಿನಲ್ಲಿ ಮಾಯದಂತೆ ಗೋಚರಿಸುತ್ತದೆ. ಈಡೀ ಕಡಲ ತೀರವೇ ರಾತ್ರಿಯ ಚಂದ್ರನ ಕಿರಣದಿಂದಾಗಿ ಹೊಸ ರೂಪದಲ್ಲಿಯೇ ಕಾಣಿಸುತ್ತದೆ. ಇಂತಹ ಅಂದವನ್ನೂ ನಿಮಗೂ ಕಣ್ತುಂಬಿಸಿಕೊಳ್ಳಬೇಕೆನಿಸುತ್ತದೆಯಲ್ಲವೇ?
ನಗರಗಳಲ್ಲಿಯಂತೂ ಶಬ್ದ ಗೌಜು ಗದ್ದಲಗಳು ಇದ್ದದ್ದೆ. ಇದರಿಂದ ಹೊರಬರುವುದಕ್ಕಾಗಿ ತುಸು ಸಮಯ ಸಿಕ್ಕರೂ ಸಾಕು ಮನಸ್ಸಿಗೆ ಹಿತ ಎನಿಸುವ ಪ್ರದೇಶಗಳಿಗೆ ಹೋಗೋಣ ಎನಿಸುತ್ತದೆ. ಅಂತಹ ನಿಮ್ಮ ಬಯಕೆಗೆ ಪುಷ್ಠಿಯನ್ನು ಕೊಡುವ ಜಾಗವೇ ಕೊವಲಂ ಬೀಚ್ ಗಳು. ಆದರೆ ಇದರಲ್ಲೂ ಇಂದುಲೋಪವಿದೆ. ಲೈಟ್ ಹೌಸ್ ನಂತಹ ಬೀಚ್ ಗೆ ಬಂದರೆ ನಿಮಗೆ ಅಲ್ಲಿನ ಅಚ್ಚರಿಗಳನ್ನು ನೋಡಬಹುದೇ ಹೊರತು ಮನಸ್ಸಿಗೆ ಹಾಯ್ ಎನ್ನಿಸುವುದಿಲ್ಲ. ಆದ್ದರಿಂದ ನಿಶಬ್ದ ಬೇಕು ಎನ್ನುವವರು ನೀವಾಗಿದ್ದರೆ ನಿಮ್ಮ ಆಯ್ಕೆ ಹವಾ ಬೀಚ್ ಆಗಿರಲಿ. ಏಕೆಂದರೆ ನೀವು ಬಯಸುವ ಪ್ರಶಾಂತತೆ ನಿಮಗಿಲ್ಲಿ ಸಿಗುವುದು. ಕೊಂಚ ಸಮಯ ಹೊರಗಿನ ಪ್ರಪಂಚವನ್ನೇ ಮರೆತು ನಿಮ್ಮ ಇಷ್ಟದವರೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ಈ ಸ್ಥಳ ಯೋಗ್ಯವಾದುದು.
ಹವಾ ತೀರವು ಲೈಟ್ ಹೌಸ್ ತೀರದ ಎದುರು ಭಾಗದಲ್ಲಿದೆ. ನೀರಿನಲ್ಲಿ ಈಜುವುದು ಅಷ್ಟು ಇಷ್ಟವಿಲ್ಲವೂ ಅಂತಹವರಿಗೆ ಹವಾ ತೀರ ಪ್ರಿಯವೆನಿಸುವುದು. ಅದರಲ್ಲೂ ಇಲ್ಲಿನ ಅಲೆಗಳ ಅಬ್ಬರ ಅಧಿಕವಾಗಿದ್ದು, ಕೆಲವೆಡೆ ಆಳವಾಗಿಯೂ ಇರುತ್ತದೆ. ಈ ಬೀಚ್ ಗೆ ಭೇಟಿಯಿತ್ತರೆ ನಿಮಗೆ ಪ್ರಕೃತಿ ಸೌಂದರ್ಯವನ್ನು ಸವಿಯುವುದರ ಜೊತೆಗೆ ಇಲ್ಲಿಯೇ ಒದಗಿಸಲಾಗುವ ನೈಸರ್ಗಿಕ / ಆಯುರ್ವೇದಿಕ ಮಸಾಜ್ ಗಳನ್ನು ಮಾಡಿಸಿಕೊಳ್ಳಬಹುದು.


Click it and Unblock the Notifications