ಗ್ವಾಲಿಯರ್ ಕೋಟೆಯ ಪೂರ್ವದ ಭಾಗದಲ್ಲಿ ಈ ಸಾಸ್ ಬಹು ದೇವಸ್ಥಾನವನ್ನು ಕಾಣಬಹುದು. ಈ ಹೆಸರೇ ಒಂದು ವಿನೋದಮಯವಾಗಿದೆಯಲ್ಲವೇ? ಸತ್ಯ ಏನೆಂದರೆ ಇಲ್ಲಿರುವ ಸಾಸ್ ಎಂದರೆ ಅತ್ತೆ ಎಂದು ಅರ್ಥವಲ್ಲ. ಜೊತೆಗೆ ಬಹು ಎಂದರೆ ಸೊಸೆ ಎಂದೂ ಅರ್ಥವಲ್ಲ. ಇದು ವಿಷ್ಣು ದೇವರ ದೇವಸ್ಥಾನವಾಗಿದೆ. “ಸಾಸ್ತ್ರಬಹು” ಇದು ಭಗವಾನ್ ವಿಷ್ಣುವಿನ ಇನ್ನೊಂದು ಹೆಸರಾಗಿದೆ. ಸಾಸ್ತ್ರಬಹು ದೇವಸ್ಥಾನವು ಕಾಲ ಕಳೆದಂತೆ ಸಾಸ್ ಬಹು ದೇವಸ್ಥಾನ ಎಂದು ಪ್ರಸಿದ್ಧಿಯನ್ನು ಪಡೆದಿದೆ.
ಈ ಸಾಸ್ಬಹು ದೇವಸ್ಥಾನವು ವಿಷ್ಣುವಿನ ಒಂದು ಅವತಾರದ ನೆನೆಪಿಗಾಗಿ ಸಮರ್ಪಿತವಾಗಿದೆ. ಈ ದೇವಸ್ಥಾನದ ದ್ವಾರದ ಮೇಲೆ ಬ್ರಹ್ಮ, ವಿಷ್ಣು, ಮತ್ತು ಸರಸ್ವತಿ ದೇವತೆಯರ ಕೆತ್ತನೆಗಳು ಇವೆ. ಇಲ್ಲಿ ಎರಡು ದೇವಸ್ಥಾನದ ರಚನೆಗಳನ್ನು ಕಾಣಬಹುದು. ಒಂದು ದೊಡ್ದದಾಗಿದ್ದರೆ ಮತ್ತೊಂದು ಸಣ್ಣದು. ಕೆಂಪು ಮರಳಿನ ಕಲ್ಲು ಮತ್ತು ಕಮಲದ ಸುಂದರ ಕೆತ್ತನೆಗಳಿಂದ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದು ಯಾವುದೇ ಕಮಾನುಗಳು ಇಲ್ಲದೇ ಒಂದು ಪಿರಮಿಡ್ ರಚನೆಯನ್ನು ಹೊಂದಿದೆ. ಇದು 11 ನೇ ಶತಮಾನದಲ್ಲಿ ಕಛ್ವಾಹ ವಂಶದ ರಾಜ ಮಹಿಪಾಲನಿಂದ ನಿರ್ಮಿತಗೊಂಡಿದೆ.