ಖುಗಾ ಅಣೆಕಟ್ಟು ಚುರಾಚಂದ್ಪೂರ್ ನ ಪ್ರಮುಖ ಆಕರ್ಷಣೆ ಮಾತ್ರವಲ್ಲದೇ ನಗರದ ಜೀವನಾಡಿಯೂ ಆಗಿದೆ. ನಗರದಿಂದ ಸುಮಾರು ಹತ್ತು ಕಿ.ಮೀ ದೂರದಲ್ಲಿರುವ ಮಾತಾ ಎಂಬ ಗ್ರಾಮದಲ್ಲಿರುವ ಈ ಅಣೆಕಟ್ಟು ಒಂದು ಕೃತಕ ಸರೋವರಕ್ಕೆ ಅಡ್ಡಲಾಗಿ ಕಟ್ಟಲಾದ ತಡೆಗೋಡಿಯಾಗಿದೆ. ಕೃಷಿ, ವಿದ್ಯುತ್ ಉತ್ಪಾದನೆ ಹಾಗೂ ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮೊದಲಾದ ಉದ್ದೇಶದಿಂದ ನಿರ್ಮಿಸಲಾಗಿದ್ದು ಪರ್ಯಾಯವಾಗಿ ಪ್ರಮುಖ ವಿಹಾರತಾಣವೂ ಆಗಿದೆ. 1983ರಲ್ಲಿಯೇ ಈ ಅಣೆಕಟ್ಟಿನ ಕಾಮಗಾರಿ ಪ್ರಾರಂಭವಾದರೂ ಯಾವುದೋ ಕಾರಣಗಳಿಂದ ಸುಮಾರು ಇಪ್ಪತ್ತು ವರ್ಷಗಳ ಕಾಲ ಕೆಲಸ ಸ್ಥಗಿತಗೊಂಡಿತ್ತು. 2002ರಲ್ಲಿ ಮತ್ತೆ ಪ್ರಾರಂಭವಾದ ಕಾಮಗಾರಿ 2010ರಲ್ಲಿ ಕೊನೆಗೊಂಡು ಕಡೆಗೆ ಸೋನಿಯಾ ಗಾಂಧಿಯವರಿಂದ ಉದ್ಘಾಟನೆ ಕಂಡಿತು. ಸುಮಾರು 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಅಣೆಕಟ್ಟು 230 ಮೀಟರ್ ಅಗಲ ಮತ್ತು 38 ಮೀಟರ್ ಎತ್ತರವಿದೆ. ದಿನದಲ್ಲಿ ಅಣೆಕಟ್ಟಿನ ಸುತ್ತಮುತ್ತಲ, ಹಿನ್ನೀರಿನ ದೃಶ್ಯಗಳು ಮನಸೂರೆಗೊಂಡರೆ ರಾತ್ರಿ ಹೊತ್ತು ಅಣೆಕಟ್ಟನ್ನು ಬೆಳಗುವ ವರ್ಣಮಯ ವಿದ್ಯುತ್ ದೀಪಗಳು ವಿಭಿನ್ನ ಅನುಭವ ನೀಡುತ್ತದೆ.