ಅಸ್ಸಾಂ ಪ್ರವಾಸೋದ್ಯಮ - ನಿರ್ಜನ ಪ್ರಕೃತಿಯಲ್ಲಿಣುಕಲು ಸುವರ್ಣಾವಕಾಶ

ಮುಖಪುಟ » ಸ್ಥಳಗಳು » » ಮುನ್ನೋಟ

ಅಸ್ಸಾಂ ಎಂದೊಡನೆ ನೆನಪಾಗುವುದು ಟೀ. ಆದರೆ ನಿಜವಾಗಿ ಭಾರತದ ಈಶಾನ್ಯ ಭಾಗದಲ್ಲಿರುವ ಈ ಪುಟ್ಟರಾಜ್ಯದಲ್ಲಿ ಟೀ ಎಸ್ಟೇಟುಗಳಿಗಿಂತ ಹೆಚ್ಚಾಗಿ ನಿರ್ಜನವಾದ ಹಾಗೂ ರಕ್ಷಿತ ಅರಣ್ಯಪ್ರದೇಶವಿದೆ. ಆಧುನೀಕತೆಯ ಸೋಂಕಿಲ್ಲದೆ ಬದುಕುತ್ತಿರುವ ವಿಭಿನ್ನ ಬುಡಕಟ್ಟು ಜನಾಂಗಗಳಿವೆ. ಉತ್ತಮ ಮಳೆ ಹಾಗೂ ತಂಪಾದ ಹವಾಗುಣದಿಂದಾಗಿ ನಿತ್ಯಹರಿದ್ವರ್ಣದ ಕಾನನವಿದೆ. ಈ ಕಾರಣದಿಂದಾಗಿ ಸರ್ಕಾರದ ದೇಣಿಗೆಯ ಅಗತ್ಯವಿಲ್ಲದೇ ಪ್ರಕೃತಿಯೊಡನೆ ಬೆರೆತಿರುವ ವನ್ಯಜೀವಜಾಲವಿದೆ. ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ಒಲವುಳ್ಳವರಿಗೆ ಅಸ್ಸಾಂ ಹೇಳಿ ಮಾಡಿಸಿದಂತಹ ಪ್ರದೇಶವಾಗಿದೆ. ಉತರದಲ್ಲಿ ಭೂತಾನ್ ದೇಶ ಮತ್ತು ಭಾರತದ ರಾಜ್ಯವಾದ ಅರುಣಾಚಲ ಪ್ರದೇಶ, ಪೂರ್ವದಲ್ಲಿ ನಾಗಾಲ್ಯಾಂಡ್ ಮತ್ತು ಮಣಿಪುರ ಹಾಗೂ ದಕ್ಷಿಣದಲ್ಲಿ ಮಿಜೋರಾಂ ರಾಜ್ಯಗಳೊಂದಿಗೆ ಅಸ್ಸಾಮ್ ಗಡಿ ಹಂಚಿಕೊಂಡಿದೆ.

ಅಸ್ಸಾಂ ನ ವನ್ಯಜೀವಿ ಪ್ರವಾಸೋದ್ಯಮ:

ಭಾರತದಲ್ಲಿರುವ ಪ್ರಮುಖ ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಒಂದಾದ ಕಾಝಿರಂಗ ಅಭಯಾರಣ್ಯ ಅಸ್ಸಾಂನಲ್ಲಿದೆ. ಇದರ ಹೊರತಾಗಿ ಇನ್ನೂ ಹಲವಾರು ಪಕ್ಷಿಧಾಮಗಳೂ ರಾಷ್ಟ್ರೀಯ ಉದ್ಯಾನಗಳೂ ಅಸ್ಸಾಂ ನಲ್ಲಿ ಹಲವಾರಿವೆ. ಈ ಸ್ಥಳಗಳಲ್ಲಿ ನೂರಾರು ಅಪರೂಪದ ವನ್ಯಜೀವಿಗಳು ಆಶ್ರಯ ಪಡೆದಿದ್ದು ಚಾರಣಪ್ರಿಯ ಪ್ರವಾಸಿಗರ ಪಾಲಿಗೆ ಸ್ವರ್ಗಸಮಾನವಾಗಿದೆ.

ಯುನೆಸ್ಕೋ ಸಂಸ್ಥೆಯಿಂದ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಕಾಝಿರಂಗ ಅಭಯಾರಣ್ಯದಲ್ಲಿ ಪ್ರವಾಸಿಗರಿಗೆ ಅನುರೂಪವಾದ ಬಹಳಷ್ಟು ವನ್ಯಜೀವಿಗಳನ್ನು ಸಂದರ್ಶಿಸುವ ಅವಕಾಶವಿದೆ. ಅತಿ ಅಪರೂಪವಾದ ಭಾರತೀಯ ಖಡ್ಗಮೃಗ, ಗೋಲ್ಡನ್ ಲಂಗೂರ್ ಮಂಗ, ತಲೆಯ ಮೇಲೆ ಜುಟ್ಟಿರುವ, ನವಿಲನ್ನು ಹೋಲುವ ಬೆಂಗಾಲ್ ಫ಼್ಲೋರಿಕನ್ ಹಕ್ಕಿ, ಕುಳ್ಳಗಿರುವ ಪಿಗ್ಮಿ ಹಂದಿ, ಮರವೇರುವ ಬಿಳಿರೆಕ್ಕೆಯ ಬಾತು (White-winged Wood Duck) ಇಲ್ಲಿ ಕಾಣಬರುವ ಪ್ರಜಾತಿಗಳು.  ಅಲ್ಲದೇ ವಿಶ್ವದಲ್ಲಿಯೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿಯಾದ ಹುಲಿ ನೈಸರ್ಗಿಕ ಪರಿಸರದಲ್ಲಿ ಕಂಡುಬರುತ್ತದೆ. ಇವಲ್ಲದೇ ವಲಸೆಹೋಗುವ ಹಲವು ಪಕ್ಷಿಗಳು ವರ್ಷದ ಕೆಲಕಾಲ ಇಲ್ಲಿ ಆಶ್ರಯ ಪಡೆಯುತ್ತವೆ. ಇದರೊಂದಿಗೆ ಮಾಂಸಾಹಾರಿ ಹಕ್ಕಿಗಳು, ಕಸ ಕೆದಕುವ ಹಕ್ಕಿಗಳು, ನೀರಿನಲ್ಲಿರುವ ಹಕ್ಕಿಗಳು ಹಾಗೂ ಪಾರಿವಾಳವನ್ನು ಹೋಲುವ ವರ್ಣಭರಿತ ಹಕ್ಕಿಗಳೂ (game birds) ಇಲ್ಲಿ ಕಂಡುಬರುತ್ತವೆ.  

ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಂದು ಅಭಯಾರಣ್ಯವಾದ ಮಾನಸ್ ನ್ಯಾಶನಲ್ ಪಾರ್ಕ್ ಸಹಾ ಅಸ್ಸಾಂನಲ್ಲಿದೆ. ಭಾರತದ ಪ್ರಥಮ ಹುಲಿಧಾಮ ಎಂಬ ಹೆಗ್ಗಳಿಕೆ ಪಡೆದಿರುವ ಈ ಅಭಯಾರಣ್ಯದಲ್ಲಿ ಹಲವು ಅಪರೂಪದ ಪಕ್ಷಿ ಪ್ರಾಣಿ ಸಂಕುಲಗಳಿವೆ. ಅಪ್ರತಿಮ ಪ್ರಕೃತಿ ಸೌಂದರ್ಯ ಹೊಂದಿರುವ ಈ ತಾಣಕ್ಕೆ ಭೇಟಿ ನೀಡಿದ ಪ್ರತಿಯೊಬ್ಬರೂ ತಮ್ಮ ಭೇಟಿಯ ಅವಧಿಯನ್ನು ಹೆಚ್ಚಿಸುವ ಬಗ್ಗೆ ಖಂಡಿತಾ ಯೋಚಿಸುತ್ತಾರೆ ಎಂದರೆ ಉತ್ಪ್ರೇಕ್ಷೆಯಲ್ಲ.

ಅಸ್ಸಾಂನಲ್ಲಿರುವ ಇನ್ನಿತರ ಅಭಯಾರಣ್ಯಗಳಾದ ಪೋಬಿತೋರಾ ಅಭಯಾರಣ್ಯ, ಒರಂಗ್ ನ್ಯಾಶನಲ್ ಪಾರ್ಕ್ ಹಾಗೂ ನಮೇರಿ ನ್ಯಾಶನಲ್ ಪಾರ್ಕ್ ಗಳಲ್ಲೂ ಪ್ರವಾಸಿಗರಿಗೆ ನೋಡಲು ಬಹಳಷ್ಟಿದೆ.

ಅಸ್ಸಾಂನಲ್ಲಿರುವ ಇನ್ನಿತರ ಆಕರ್ಷಣೆಗಳು

ವನ್ಯಜೀವಿಗಳ (ಮತ್ತು ಟೀ ಎಸ್ಟೇಟುಗಳ) ಹೊರತಾಗಿ ಅಸ್ಸಾಂ ನಲ್ಲಿ ಹಲವು ದೇವಾಲಯಗಳೂ ಸ್ಮಾರಕಗಳೂ ಇವೆ. ದೇಶದ ವಿವಿಧ ಭಾಗಗಳಿಂದ ಉತ್ತಮ ಜೀವನನ್ನರಸಿ ಬಂದ ಜನರಿಂದ ಹಲವು ಸಂಸ್ಕೃತಿಗಳು ಇಲ್ಲಿ ಜೀವತಳೆದಿವೆ. ಧಾರ್ಮಿಕ ಸ್ಥಳಗಳಲ್ಲಿ ಪ್ರಮುಖವಾಗಿ ಕಮಾಖ್ಯ ದೇವಾಲಯ, ಉಮಾನಂದ ದೇವಾಲಯ, ನವಗ್ರಹ ದೇವಾಲಯ ಹಾಗೂ ಸತ್ರಾಸ್ ದೇವಾಲಯಗಳು ಭಕ್ತರನ್ನು ಸೆಳೆಯುತ್ತವೆ.

ಚಾರಣಪ್ರಿಯರಿಗಾಗಿ ಅಸ್ಸಾಂ.....

ಒಂದು ವೇಳೆ ಚಾರಣ ನಿಮ್ಮ ಹವ್ಯಾಸವಾಗಿದ್ದರೆ ಅಸ್ಸಾಂ ನಿಮಗೆ ಹೇಳಿ ಮಾಡಿಸಿದಂತಹ ರಾಜ್ಯವಾಗಿದೆ. ಅಸ್ಸಾಂ ರಾಜ್ಯ ಪ್ರವಾಸೋದ್ಯಮ ಇಲಾಖೆ ಹಲವು ಸಾಹಸ ಕ್ರೀಡೆಗಳನ್ನು ಆಯೋಜಿಸಿದೆ. ವೇಗವಾಗಿ ಹರಿಯುತ್ತಿರುವ ನದಿಯ ಸೆಳವಿನಲ್ಲಿ ದೋಣಿ ಸಾಗುವ (ರಿವರ್ ಕ್ರೂಸ್), ತೆಪ್ಪ (ರಿವರ್ ರಾಫ್ಟಿಂಗ್), ಗಾಳ ಹಾಕುವುದು (ಆಂಗ್ಲಿಂಗ್), ಪರ್ವತಾರೋಹಣ, ಪರ್ವತ ಪ್ರದೇಶದಲ್ಲಿ ಸೈಕಲ್ ಸವಾರಿ, ಆಗಸದಲ್ಲಿ ಹಾರಾಡಲು ಅವಕಾಶ ನೀಡುವ ಪ್ಯಾರಾ ಸೈಲಿಂಗ್ ಮತ್ತು ಹ್ಯಾಂಗ್ ಗ್ಲೈಡಿಂಗ್ ಮೊದಲಾದ ಸಾಹಸಕ್ರೀಡೆಗಳಿಗೆ ವಿಪುಲ ಅವಕಾಶವಿದೆ. ಈ ಕ್ರೀಡೆಗಳಲ್ಲಿ ಮೈ ಕೈ ನೋಯಿಸಿಕೊಳ್ಳಲಿಚ್ಛಿಸದವರಿಗಾಗಿ ಹಚ್ಚಹಸುರಿನ ಹುಲ್ಲುಗಾವಲಿರುವ ಸುಂದರ ಗಾಲ್ಫ್ ಕ್ಲಬ್ ಗಳಿವೆ. ಗಾಲ್ಫ್ ಗೊತ್ತಿಲ್ಲದಿದ್ದರೆ ಇದನ್ನು ಕಲಿಸಿಕೊಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಅಸ್ಸಾಂ ನಲ್ಲಿ ಕಂಡುಬರುವ ಸಾಂಸ್ಕೃತಿಕ ವೈಭವ ಹಾಗೂ ಉತ್ಸವಗಳು:

ಅಸ್ಸಾಂನಲ್ಲಿ ವರ್ಷವಿಡೀ ಒಂದಲ್ಲಾ ಒಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ. ಈ ಕಾರ್ಯಕ್ರಮಗಳ ಮೂಲಕ ಭಾರತದ ವಿಭಿನ್ನ ಸಂಸ್ಕೃತಿಗಳ ಹಾಗೂ ಸಂಪ್ರದಾಯಗಳ ಪರಿಚಯವಾಗುತ್ತದೆ. ರಾಜ್ಯದಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಬಿಹು, ರೋಂಗ್ಕರ್, ಬೈಶಾಗು, ಜೋನ್ಬಿಲ್ ಮೇಳ ಮತ್ತು ಬಾಯ್ಖೋ ಪ್ರಮುಖವಾಗಿವೆ.

ಅಸ್ಸಾಂ ತಲುಪುವ ಬಗೆ:

ಭಾರತದ ಎಲ್ಲಾ ಕಡೆಗಳಿಂದ ಅಸ್ಸಾಂ ತಲುಪಲು ವಿಮಾನ, ರೈಲು ಹಾಗೂ ರಸ್ತೆಮಾರ್ಗವಾಗಿ ಆಗಮಿಸಲು ಉತ್ತಮ ವ್ಯವಸ್ಥೆ ಇದೆ. ವಿಮಾನದಲ್ಲಿ ಆಗಮಿಸುವವರಿಗೆ ಗುವಾಹಟಿಯಲ್ಲಿರುವ ಲೋಕಪ್ರಿಯ ಗೋಪಿನಾಥ್ ಬೋರ್ಡೋಲಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿ ಹತ್ತಿರದ್ದಾಗಿದೆ. ಇಲ್ಲಿಂದ ಭಾರತದ ಎಲ್ಲಾ ಪ್ರಮುಖ ನಗರಗಳಿಗೆ ವಿಮಾನಸಂಪರ್ಕವಿದೆ. ಗುವಾಹಟಿ ನಗರದ ಕೇಂದ್ರಭಾಗದಲ್ಲಿರುವ ಗುವಾಹಟಿ ಜಂಕ್ಷನ್ ರೇಲ್ವೇ ನಿಲ್ದಾಣದಿಂದ ದೇಶದ ಎಲ್ಲಾ ಪ್ರಮುಖ ನಗರಗಳಿಗೆ ರೈಲು ಸಂಪರ್ಕವಿದೆ. ರಾಜ್ಯದ ಮಧ್ಯಭಾಗದಲ್ಲಿರುವ ಗುವಾಹಟಿಯಿಂದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲು ಸರ್ಕಾರಿ ಹಾಗೂ ಖಾಸಗಿ ಪ್ರವಾಸಿ ಸಂಸ್ಥೆಗಳು ಅಗತ್ಯ ಸೇವೆಗಳನ್ನು ಒದಗಿಸುತ್ತವೆ.

Please Wait while comments are loading...